ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125ರ ಅಡಿಯಲ್ಲಿ ಜೀವನಾಂಶವನ್ನು ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶವನ್ನು ನೀಡಿದೆ.
ಸಿಆರ್‌ಪಿಸಿ ಅಡಿಯಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ಪಾವತಿಸುವ ಆದೇಶವನ್ನು ಪ್ರಶ್ನಿಸಿಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ವಜಾಗೊಳಿಸಿದೆ.
“ನಾವು ಈ ಮೇಲ್ಮನವಿಯನ್ನು ವಜಾಗೊಳಿಸುತ್ತಿದ್ದೇವೆ. ಸೆಕ್ಷನ್ 125 ವಿವಾಹಿತ ಮಹಿಳೆಯರಿಗೆ ಮಾತ್ರವಲ್ಲ ಎಲ್ಲಾ ಮಹಿಳೆಯರಿಗೆ ಅನ್ವಯಿಸುತ್ತದೆ” ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು. ನ್ಯಾಯಮೂರ್ತಿ ನಾಗರತ್ನ ಮತ್ತು ನ್ಯಾಯಮೂರ್ತಿ ಮಾಸಿಹ್ ಅವರು ಪ್ರತ್ಯೇಕ, ಆದರೆ ಏಕಕಾಲೀನ ತೀರ್ಪುಗಳನ್ನು ನೀಡಿದರು.
ಜೀವನಾಂಶವನ್ನು ಪಡೆಯುವ ಕಾನೂನು ಎಲ್ಲಾ ವಿವಾಹಿತ ಮಹಿಳೆಯರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಅನ್ವಯಿಸುತ್ತದೆ. ಜೀವನಾಂಶವು ದಾನವಲ್ಲ, ಅದು ವಿವಾಹಿತ ಮಹಿಳೆಯರ ಹಕ್ಕು ಎಂದು ಪೀಠವು ಸ್ಪಷ್ಟಪಡಿಸಿದೆ.
“ಗೃಹಿಣಿಯಾಗಿರುವ ತನ್ನ ಪತ್ನಿಯು ಭಾವನಾತ್ಮಕವಾಗಿ ಮತ್ತು ಇತರ ರೀತಿಯಲ್ಲಿ ಅವಲಂಬಿತಳಾಗಿದ್ದಾಳೆ ಎಂಬುವುದರ ಪ್ರಜ್ಞೆ ಕೆಲವು ಗಂಡಂದಿರಿಗೆ ಇರುವುದಿಲ್ಲ. ಭಾರತದ ಪುರುಷರು ಗೃಹಿಣಿಯ ಪಾತ್ರ ಮತ್ತು ತ್ಯಾಗವನ್ನು ಗುರುತಿಸಬೇಕಾದ ಸಮಯ ಬಂದಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮತಗಟ್ಟೆಗೆ ಬಂದಿದ್ದ ಮುಸ್ಲಿಂ ಮಹಿಳೆಯರಿಗೆ ಮುಖ ತೋರಿಸಲು ಆಗ್ರಹಿಸಿದ ಮಾಧವಿ ಲತಾ
ವಿಚ್ಛೇದಿತ ಪತ್ನಿಗೆ ಮಾಸಿಕ ಭತ್ಯೆ ನೀಡುವಂತೆ ಕೌಟುಂಬಿಕ ನ್ಯಾಯಾಲಯವು ಮೊಹಮ್ಮದ್ ಅಬ್ದುಲ್ ಸಮದ್‌ಗೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಬ್ದುಲ್ ಸಮದ್ ಅರ್ಜಿ ಸಲ್ಲಿಸಿದ್ದರು. ಆದರೆ ತೆಲಂಗಾಣ ಹೈಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿತ್ತು.
ಅದಾದ ಬಳಿಕ ಮೊಹಮ್ಮದ್ ಅಬ್ದುಲ್ ಸಮದ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
1985ರಲ್ಲಿ ಶಾ ಬಾನೋ ಪ್ರಕರಣದಲ್ಲಿ ಮಹತ್ವದ ತೀರ್ಪನ್ನು ನೀಡಿದ್ದ ಸುಪ್ರೀಂ ಕೋರ್ಟ್ ಸೆಕ್ಷನ್ 125 ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿತ್ತು. ಆದರೆ ಮುಸ್ಲಿಂ ಮಹಿಳೆಯರ (ವಿಚ್ಛೇದನದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 1986 ಜಾರಿಗೆ ಬಂದ ಬಳಿಕ ಈ ಆದೇಶ ಅನ್ವಯವಾಗಿಲ್ಲ. ಈ ಕಾನೂನು ಪ್ರಕಾರ ಮುಸ್ಲಿಂ ಮಹಿಳೆ ಇದ್ದತ್ ಸಮಯದಲ್ಲಿ ಅಂದರೆ ವಿಚ್ಛೇದನದ 90 ದಿನಗಳ ನಂತರ ಮಾತ್ರ ಜೀವನಾಂಶವನ್ನು ಪಡೆಯಬಹುದು.
ಇದನ್ನು ಓದಿದ್ದೀರಾ? ವಿವಾದಾತ್ಮಕ ಸಿನಿಮಾ ‘ಹಮಾರೆ ಬಾರಹ್’ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ
2001ರಲ್ಲಿ, ಸುಪ್ರೀಂ ಕೋರ್ಟ್ 1986ರ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಿತು. ಆದರೆ ವಿಚ್ಛೇದಿತ ಮಹಿಳೆಯು ಮರುಮದುವೆಯಾಗುವವರೆಗೆ ಅಥವಾ ತನ್ನ ಖರ್ಚು ತಾನು ನೋಡಿಕೊಳ್ಳುವಷ್ಟು ಸಬಲರಾಗುವವರೆಗೆ ಮಾತ್ರ ಜೀವನಾಂಶವನ್ನು ಪಡೆಯಬಹುದು ಎಂದು ಹೇಳಿದೆ.
ಇಂದಿನ ಆದೇಶದಲ್ಲಿ ವಿಚ್ಛೇದಿತ ಮಹಿಳೆ ತನ್ನ ಧರ್ಮವನ್ನು ಲೆಕ್ಕಿಸದೆ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125ರ ಅಡಿಯಲ್ಲಿ ಜೀವನಾಂಶವನ್ನು ಪಡೆಯಬಹುದು ಎಂಬ ಆದೇಶವನ್ನು ಮತ್ತಷ್ಟು ಬಲಪಡಿಸಿದೆ.