ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್‌

Date:

2004- 2014ರ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಈ ಕಾಯಿದೆಯಡಿ ರಾಜಕಾರಣಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ, 2014-2022ರ ನಡುವಣ ಬಿಜೆಪಿ ನೇತೃತ್ವದ ಸರ್ಕಾರ ದಾಖಲಿಸಿರುವ ಪ್ರಕರಣಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿದೆ.

 

ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ (Prevention of Money Laundering Act) 2002ರಲ್ಲಿ ಜಾರಿಯಾಗಿತ್ತು. ಅಕ್ರಮ ಮೂಲದ ಆದಾಯ-ಲಾಭವನ್ನು ಕಾನೂನುಬದ್ಧಗೊಳಿಸುವ ಕ್ರಿಮಿನಲ್ ಅಪರಾಧವನ್ನು ತಡೆಯುವುದು ಈ ಕಾಯಿದೆಯ ಉದ್ದೇಶ. ಅಕ್ರಮ ದಾರಿಗಳಿಂದ ಹಣ ಸಂಪಾದಿಸುವುದು ಮತ್ತು ಅದನ್ನು ಸಕ್ರಮ ಎಂದು ತೋರಿಸುವ ಕೃತ್ಯದಲ್ಲಿ ಪ್ರತ್ಯಕ್ಷ- ಪರೋಕ್ಷವಾಗಿ ಭಾಗಿಯಾಗುವುದು ಹಣದ ಅಕ್ರಮ ವರ್ಗಾವಣೆ ಎನಿಸಿಕೊಳ್ಳುತ್ತದೆ.

ಮೋದಿ ಸರ್ಕಾರ ತನ್ನ ರಾಜಕೀಯ ಸ್ಪರ್ಧಿಗಳನ್ನು ಬೆದರಿಸಿ, ಮಣಿಸಿ, ಸದೆಬಡಿಯಲು ಈ ಕಾಯಿದೆಯನ್ನು ಉಗ್ರ ಹತಾರನ್ನಾಗಿ ಬೀಸುತ್ತ ಬಂದಿದೆ. ಪ್ರತಿಪಕ್ಷಗಳ ಈ ಗಂಭೀರ ಆರೋಪದಲ್ಲಿ ಮೇಲ್ನೋಟಕ್ಕೆ ಸತ್ಯಾಂಶವೂ ಕಂಡು ಬಂದಿದೆ. ವ್ಯಕ್ತಿ ಸ್ವಾತಂತ್ರ್ಯದ ಬೀಡು ಬೀಸು ಉಲ್ಲಂಘನೆಯ ಮತ್ತು ಪ್ರತಿಪಕ್ಷಗಳ ಸರ್ಕಾರಗಳನ್ನು ಉರುಳಿಸಲು ದುರ್ಬಳಕೆ ಮಾಡಿರುವ ಆರೋಪಗಳನ್ನು ಕೇಂದ್ರ ಸರ್ಕಾರ ಎದುರಿಸಿದೆ.

2004- 2014ರ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಈ ಕಾಯಿದೆಯಡಿ ರಾಜಕಾರಣಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ, 2014-2022ರ ನಡುವಣ ಬಿಜೆಪಿ ನೇತೃತ್ವದ ಸರ್ಕಾರ ದಾಖಲಿಸಿರುವ ಪ್ರಕರಣಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ತನಿಖಾ ವರದಿಯ ಪ್ರಕಾರ ಬಿಜೆಪಿ ಅವಧಿಯಲ್ಲಿ (2014-2022 ಸೆಪ್ಟಂಬರ್) 121 ಪ್ರಮುಖ ರಾಜಕಾರಣಿಗಳನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಗುರಿಪಡಿಸಿತ್ತು. ಈ ಪೈಕಿ ಕನಿಷ್ಠ 115 ಮಂದಿ (ಶೇ.95) ರಾಜಕಾರಣಿಗಳು ಪ್ರತಿಪಕ್ಷಗಳಿಗೆ ಸೇರಿದವರು. ಇವರೆಲ್ಲ ಜಾರಿ ನಿರ್ದೇಶನಾಲಯದ ದಾಳಿಗಳು ವಿಚಾರಣೆಗಳು, ಬಂಧನಗಳಿಗೆ ಗುರಿಯಾದವರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜಾರಿ ನಿರ್ದೇಶನಾಲಯ ಮತ್ತಿತರೆ ಕೇಂದ್ರೀಯ ತನಿಖಾ ಏಜೆನ್ಸಿಗಳಿಂದ ಭ್ರಷ್ಟಾಚಾರದ ಆಪಾದನೆಗಳಿಗೆ ಗುರಿಯಾಗಿರುವ ಪ್ರತಿಪಕ್ಷಗಳ ಕನಿಷ್ಠ 23 ಮಂದಿ ಪ್ರಮುಖ ರಾಜಕಾರಣಿಗಳು ಬಿಜೆಪಿ ಸೇರಿ ಬಚಾವಾಗಿದ್ದಾರೆ. ಮೂವರ ವಿರುದ್ಧದ ಕೇಸುಗಳು ಬರ್ಖಾಸ್ತಾಗಿವೆ. ಉಳಿದ 20 ಮಂದಿಯ ವಿರುದ್ಧದ ಕೇಸುಗಳನ್ನು ಸ್ಥಗಿತಗೊಳಿಸಲಾಗಿದೆ ಇಲ್ಲವೇ ಶೈತ್ಯಾಗಾರಕ್ಕೆ ತಳ್ಳಲಾಗಿದೆ ಎಂದೂ ಈ ತನಿಖಾ ವರದಿ ಹೇಳಿದೆ.
2023ರ ಜನವರಿಯ ತನಕ ಜಾರಿ ನಿರ್ದೇಶನಾಲಯ ಪಿಎಂಎಲ್‌ಎ ಕಾಯಿದೆಯಡಿ ಹೂಡಿದ್ದ ಒಟ್ಟು ಕೇಸುಗಳು 5,906. ಈ ಪೈಕಿ ಕೇವಲ 25 ಕೇಸುಗಳನ್ನು ಇತ್ಯರ್ಥಗೊಳಿಸಿದೆ. ಅರ್ಥಾತ್ ಪ್ರಕ್ರಿಯೆಯನ್ನೇ ಶಿಕ್ಷೆ ಆಗಿಸಲಾಗಿದೆ.

ಕಾಯಿದೆ ಜಾರಿಯನ್ನು ಜಾರಿಗೊಳಿಸುವ ಸಂಬಂಧ ಇ.ಡಿ.ಗೆ ಅಪರಿಮಿತ ಅಧಿಕಾರಗಳನ್ನು ನೀಡಲಾಗಿದ್ದು. ಶೋಧ, ಬಂಧನ ಹಾಗೂ ಮುಟ್ಟುಗೋಲಿನ ಅಧಿಕಾರಗಳು ಸಂವಿಧಾನಬಾಹಿರ ಎಂಬ ಬಲವಾದ ವಾದಗಳಿವೆ. ಈ ಕಾಯಿದೆ ಜಾರಿಗೆ ಬಂದ ನಂತರ ಇತ್ತೀಚಿನ ತನಕ ಪಿಎಂಎಲ್‌ಎ ಅಡಿ ದಾಖಲಿಸಲಾದ ಪ್ರಕರಣಗಳು 5,422. ವಿಚಾರಣೆಯ ಹಂತದಲ್ಲಿರುವ ಪ್ರಕರಣಗಳು 992. ಇನ್ನೂ ತನಿಖೆಯ ಹಂತದಲ್ಲೇ ಉಳಿದಿರುವ ಪ್ರಕರಣಗಳು 2,961. ಈ ಕಾಯಿದೆಯಡಿ ಬಂಧಿಸಲಾಗಿರುವ ಆರೋಪಿಗಳ ಸಂಖ್ಯೆ 400ಕ್ಕೂ ಹೆಚ್ಚು. ಈವರೆಗೆ ಶಿಕ್ಷೆಗೆ ಗುರಿಯಾಗಿರುವವರು 25 ಮಂದಿ. ವಿಚಾರಣೆ ಇನ್ನೂ ನಡೆಯಬೇಕಿರುವ ಆರೋಪಿಗಳು 374 ಮಂದಿ. ಸುಮಾರು ಶೇ.50ರಷ್ಟು ಪ್ರಕರಣಗಳು ಇನ್ನೂ ವಿಚಾರಣೆಯ ಹಂತವನ್ನು ಈವರೆಗೆ ದಾಟಿಲ್ಲ.

ಪಿಎಂಎಲ್‌ಎ ಅಡಿಯಲ್ಲಿ ದಾಖಲಾಗುವ ಪ್ರಕರಣಗಳು ಜಾಮೀನುರಹಿತ ಮತ್ತು ವಿಚಾರಣಾ ಯೋಗ್ಯ ಎಂದು ಈ ಕಾಯಿದೆಯ 45ನೆಯ ಸೆಕ್ಷನ್‌ಗೆ ತಿದ್ದುಪಡಿ ತರಲಾಗಿದೆ. ಪರಿಣಾಮವಾಗಿ ಆರೋಪಿಯನ್ನು ಯಾವುದೇ ವಾರಂಟ್ ಇಲ್ಲದೆ ಬಂಧಿಸುವ ಅಧಿಕಾರವನ್ನು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನೀಡಲಾಗಿದೆ. ಈ ಕಾಯಿದೆಗೆಂದೇ ಪ್ರತ್ಯೇಕ ಜಾಮೀನು ನಿಯಮ ರೂಪಿಸಲಾಗಿದೆ. ಆರೋಪಿ ತಪ್ಪೆಸಗಿಲ್ಲ ಎಂದು ತಮಗೆ ಮನವರಿಕೆಯಾದರೆ ಮಾತ್ರ ಜಾಮೀನು ನೀಡಬಹುದು ಎಂದು ನ್ಯಾಯಾಧೀಶರ ಕೈಗಳನ್ನು ಕಟ್ಟಿ ಹಾಕಲಾಗಿದೆ.
ಈ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಇದರ ದುರ್ಬಳಕೆಯನ್ನು ತಡೆಯಬೇಕು ಎಂದು ಕೋರಿರುವ ಮುಖ್ಯ ಮರುವಿಮರ್ಶಾ ಅರ್ಜಿಗಳು ವರ್ಷಗಳಿಂದ ಬಾಕಿ ಉಳಿದಿವೆ.

ಈ ಕಾಯಿದೆಯ ಅಡಿ ಜಾಮೀನು ಬಹುತೇಕ ಅಸಾಧ್ಯ. ಆರೋಪಿಗಳಾದವರಿಗೆ ಸುದೀರ್ಘ ಜೈಲುವಾಸ ನಿಶ್ಚಿತ. ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರನ್ನೂ ಇದೇ ಕಾಯಿದೆಯಡಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಇದೇ ಜನವರಿ ಅಂತ್ಯದಲ್ಲಿ ಬಂಧನಕ್ಕೆ ಮುನ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಝಾರ್ಖಂಡ್ ಹೈಕೋರ್ಟು ಇತ್ತೀಚೆಗೆ ಅವರಿಗೆ ಜಾಮೀನು ನೀಡಿತು. ಅವರು ದೋಷಿಯೆಂದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಜಾಮೀನು ನೀಡಿದರೆ ಅವರು ಅಪರಾಧ ಎಸಗುವ ಸಾಧ್ಯತೆ ಇಲ್ಲ ಎಂದು ಹೈಕೋರ್ಟ್ ಸಾರಿತು. ಈ ತೀರ್ಪನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸುಪ್ರೀಮ್ ಕೋರ್ಟ್ ಮುಂದೆ ಮೇಲ್ಮನವಿ ಸಲ್ಲಿಸಿದೆ.

ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸಲು ಕೇಜ್ರೀವಾಲ್ ಅವರಿಗೆ 22 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಜೂನ್ ಎರಡರಂದು ಕೇಜ್ರೀವಾಲ್ ಪುನಃ ಬಂಧನಕ್ಕೆ ಮರಳಬೇಕೆಂದು ಷರತ್ತು ವಿಧಿಸಿತ್ತು. ಅನಾರೋಗ್ಯದ ಕಾರಣಗಳಿಗಾಗಿ ಜಾಮೀನು ವಿಸ್ತರಿಸಬೇಕೆಂಬ ಕೇಜ್ರೀವಾಲ್ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ತಿರಸ್ಕರಿಸಿತ್ತು.

ಜೂನ್ 20ರಂದು ದೆಹಲಿಯ ಅಧೀನ ನ್ಯಾಯಾಲಯವೊಂದು ಕೇಜ್ರೀವಾಲ್ ಅವರಿಗೆ ಜಾಮೀನು ನೀಡಿತ್ತು. ಆದರೆ, ಈ ಆದೇಶಕ್ಕೆ ದೆಹಲಿ ಹೈಕೋರ್ಟ್ ತಕ್ಷಣವೇ ತಡೆಯಾಜ್ಞೆ ನೀಡಿತು. ತಡೆಯಾಜ್ಞೆಯನ್ನು ಕೇಜ್ರೀವಾಲ್ ಅವರು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿದರು. ಜೂನ್ 26ರಂದು ಕೇಜ್ರೀವಾಲ್ ಮೇಲ್ಮನವಿಯ ವಿಚಾರಣೆ ಸುಪ್ರೀಮ್ ಕೋರ್ಟಿನಲ್ಲಿ ನಡೆಯುವುದು ನಿಗದಿಯಾಗಿತ್ತು. ಆದರೆ ವಿಚಾರಣೆಯ ಹಿಂದಿನ ದಿನದ ಮಧ್ಯರಾತ್ರಿಯಲ್ಲಿ ಅದೇ ಅಬಕಾರಿ ಹಗರಣಕ್ಕೆ ಸಂಬಂಧಿಸಿ ಕೇಜ್ರೀವಾಲ್ ಅವರನ್ನು ಸಿಬಿಐ ಪ್ರತ್ಯೇಕವಾಗಿ ಬಂಧಿಸಿತು. ಕೇಜ್ರೀವಾಲ್ ತಮ್ಮ ಮೇಲ್ಮನವಿಯನ್ನು ವಾಪಸು ಪಡೆದರು.

ಕೇಜ್ರೀವಾಲ್ ಎದುರಿಸಿರುವ ಕೇಸಿನಲ್ಲೇ ಬಂಧಿತರಾಗಿದ್ದ ಆಮ್ ಆದ್ಮಿ ಪಾರ್ಟಿಯ ಮತ್ತೊಬ್ಬ ನಾಯಕ ಸಂಜಯಸಿಂಗ್ ಅವರಿಗೆ ಸುಪ್ರೀಮ್ ಕೋರ್ಟ್ ಜಾಮೀನು ನೀಡಿತ್ತು. ಸಂಜಯ ಸಿಂಗ್ ಮೇಲ್ನೋಟಕ್ಕೆ ತಪ್ಪಿತಸ್ಥ ಅಲ್ಲವೆಂದು ನಮ್ಮ ಆದೇಶದಲ್ಲಿ ದಾಖಲಿಸಬೇಕಾಗುತ್ತದೆ ಎಂದು ಸುಪ್ರೀಮ್ ಕೋರ್ಟು ಹೇಳಿದ ನಂತರ ಜಾಮೀನು ನೀಡಿಕೆಗೆ ತನ್ನ ಅಭ್ಯಂತರ ಇಲ್ಲವೆಂದು ಜಾರಿ ನಿರ್ದೇಶನಾಲಯ ಅರಿಕೆ ಮಾಡಿಕೊಂಡಿತ್ತು. ತನ್ನ ಈ ಆದೇಶವನ್ನು ಬೇರೆ ಕೇಸುಗಳಲ್ಲಿ ಪೂರ್ವನಿದರ್ಶನವೆಂದು ಪರಿಗಣಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

ಈ ಕಾಯಿದೆಯಡಿ ಜಾರಿ ನಿರ್ದೇಶನಾಲಯಕ್ಕೆ ನೀಡಿರುವ ಶೋಧ, ಬಂಧನ, ಮುಟ್ಟುಗೋಲಿನ ಅಧಿಕಾರಗಳನ್ನು 2022ರ ಜುಲೈನಲ್ಲಿ ಸುಪ್ರೀಮ್ ಕೋರ್ಟಿನ ತ್ರಿಸದಸ್ಯ ಪೀಠ ಎತ್ತಿ ಹಿಡಿದಿತ್ತು. ತಾನು ಮೇಲ್ನೋಟಕ್ಕೆ ನಿರ್ದೋಷಿಯೆಂದೂ, ಜಾಮೀನು ನೀಡಿದರೆ ಮತ್ತೊಂದು ಅಪರಾಧ ಎಸಗುವುದಿಲ್ಲ ಎಂದೂ ಆರೋಪಿಯೇ ರುಜುವಾತು ಮಾಡಬೇಕೆಂಬ ಅವಳಿ ಷರತ್ತುಗಳನ್ನೂ ನ್ಯಾಯಪೀಠ ಮಾನ್ಯ ಮಾಡಿತ್ತು.
ಈ ಷರತ್ತುಗಳು ಸಂವಿಧಾನಬಾಹಿರ ಎಂದು 2017ರಲ್ಲಿ ಸುಪ್ರೀಮ್ ಕೋರ್ಟಿನ ದ್ವಿಸದಸ್ಯ ಪೀಠವೊಂದು ಸಾರಿತ್ತು. ಆದರೆ ಕೇಂದ್ರ ಸರ್ಕಾರ ಕಾಯಿದೆಗೆ ತಿದ್ದುಪಡಿ ತಂದು ಷರತ್ತುಗಳನ್ನು ಪುನಃ ಜಾರಿಗೊಳಿಸಿತು.

ರಾಜ್ಯಸಭೆಯಲ್ಲಿ ಈ ತಿದ್ದುಪಡಿಗೆ ಬಹುಮತ ಸಿಗುವುದಿಲ್ಲವೆಂದು ಗೊತ್ತಿದ್ದ ಸರ್ಕಾರ ಈ ತಿದ್ದುಪಡಿಯನ್ನು ವಿತ್ತ ವಿಧೇಯಕದ ರೂಪದಲ್ಲಿ ಮಂಡಿಸಿ ಪಾಸು ಮಾಡಿಸಿಕೊಂಡಿತ್ತು. ವಿತ್ತ ವಿಧೇಯಕಗಳನ್ನು ರಾಜ್ಯಸಭೆಯಲ್ಲಿ ಮತದಾನಕ್ಕೆ ಮಂಡಿಸುವ ಅಗತ್ಯ ಇಲ್ಲ. ವಿತ್ತವಿಧೇಯಕಗಳನ್ನು ತಿರಸ್ಕರಿಸುವ ಅಥವಾ ತಿದ್ದುಪಡಿಗಳನ್ನು ಮಾಡುವ ಅಧಿಕಾರ ರಾಜ್ಯಸಭೆಗೆ ಇಲ್ಲ. ಶಿಫಾರಸುಗಳನ್ನು ಮಾಡಬಹುದು ಅಷ್ಟೇ. ಮಂಡನೆಯ ನಂತರ 14 ದಿನಗಳಲ್ಲಿ ವಿಧೇಯಕ ತಂತಾನೇ ಅಂಗೀಕಾರವಾದಂತೆ ಲೆಕ್ಕ.

ತ್ರಿಸದಸ್ಯ ಪೀಠದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಲೇವಾರಿ ಇನ್ನೂ ಆಗಿಲ್ಲ. ವಿತ್ತವಿಧೇಯಕದ ರೂಪದಲ್ಲಿ ಈ ತಿದ್ದುಪಡಿಯನ್ನು ಮಂಡಿಸಿರುವ ವಿಚಾರವನ್ನು ತ್ರಿಸದಸ್ಯ ಪೀಠ ಏಳು ಮಂದಿಯ ಸಾಂವಿಧಾನಿಕ ಪೀಠದ ವಿಚಾರಣೆಗೆ ಒಪ್ಪಿಸಿತ್ತು.

ಪಿಎಂಎಲ್‌ಎ ಕಾಯಿದೆಗೆ ತರಲಾಗಿರುವ ತಿದ್ದುಪಡಿಗಳನ್ನು ವಿತ್ತ ವಿಧೇಯಕಗಳ ರೂಪದಲ್ಲಿ ತಂದು ಅಂಗೀಕಾರ ಪಡೆದಿರುವುದನ್ನೂ ಮೇಲ್ಮನವಿಗಳಲ್ಲಿ ಪ್ರಶ್ನಿಸಲಾಗಿದೆ. ನಾಗರಿಕ ಹಕ್ಕುಗಳು ಪರಮ ಎಂದು ಹಲವು ಸಂದರ್ಭಗಳಲ್ಲಿ ಸಾರಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನಿವೃತ್ತಿಗೆ ನಾಲ್ಕೇ ತಿಂಗಳುಗಳು ಉಳಿದಿವೆ. ಮರುವಿಮರ್ಶಾ ಅರ್ಜಿಗಳನ್ನು ವಿಲೇವಾರಿ ಮಾಡಿ ತಮ್ಮ ಮಾತುಗಳನ್ನು ನಡೆಸಿಕೊಡಬೇಕೆಂದು ಸ್ವಸ್ಥ ಸಮಾಜ ನಿರೀಕ್ಷಿಸುತ್ತದೆ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ...

ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ...

ಈ ದಿನ ಸಂಪಾದಕೀಯ | ವರ್ಷದಿಂದ ನಡೆಯುತ್ತಲೇ ಇರುವ ಅಂಬಾನಿ ಮದುವೆಯೂ, ಪೌಷ್ಟಿಕ ಆಹಾರ ಸಿಗದ 67 ಲಕ್ಷ ಶಿಶುಗಳೂ…

ಆಹಾರ ಕ್ಷೇತ್ರ ಕಾರ್ಪೊರೇಟ್‌ ಕುಳಗಳ ಕೈವಶವಾದ ನಂತರ ನಿರಂತರವಾಗಿ ಅಗತ್ಯ ವಸ್ತುಗಳ...

ಈ ದಿನ ಸಂಪಾದಕೀಯ | ಮತ್ತೆ ಮಳೆ ಹೊಯ್ಯುತಿದೆ, ಡೆಂಘೀ ಹರಡುತಿದೆ- ಆರೋಗ್ಯ ಇಲಾಖೆ ಏನು ಮಾಡುತ್ತಿದೆ?

ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆಯೇ ಡೆಂಘೀ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಅಧಿಕಾರಿಗಳು,...