ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಗೆ ದಂಡ ವಿಧಿಸಿರುವ ಎನ್ಎಂಸಿಯ ಏಕಪಕ್ಷೀಯ ನಡೆಯನ್ನು ಖಂಡಿಸಿ ಎಐಡಿಎಸ್‌ಒ ಮೈಸೂರು ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿದೆ.
ಎಐಡಿಎಸ್‌ಒ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ, “ರಾಜ್ಯದ ಹಲವು ವೈದ್ಯಕೀಯ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿರುವ ಎನ್ಎಂಸಿಯು, ಕಾಲೇಜು ನಡೆಸಲು ಅಪೇಕ್ಷಿತ ಗುಣಮಟ್ಟವನ್ನು ಹೊಂದದಿರುವುದಕ್ಕೆ ದಂಡವಿಧಿಸಿದೆ. ರಾಜ್ಯದ 13 ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ 11 ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ದಂಡ ವಿಧಿಸಿದೆ” ಎಂದರು.
“2 ಲಕ್ಷ ರೂಪಾಯಿಯಿಂದ 15 ಲಕ್ಷದವರೆಗೂ ದಂಡದ ಮೊತ್ತವಿದೆ. ವೈದ್ಯಕೀಯ ಕಾಲೇಜುಗಳು ಅಪೇಕ್ಷಿತ ಗುಣವಟ್ಟವನ್ನು ಕಾಪಾಡಲೇಬೇಕು. ಆದರೆ ಈ ರೀತಿ ದಂಡ ವಿಧಿಸುವುದು ಅತ್ಯಂತ ಅಪ್ರಜಾತಾಂತ್ರಿಕವಾಗಿದೆ. ಎನ್‌ಎಂಸಿಯ ಈ ನಡೆಯು ಗುಣಮಟ್ಟ ಶಿಕ್ಷಣದ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ” ಎಂದು ಆರೋಪಿಸಿದರು.
“ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯು ಕಡಿಮೆ ಇದ್ದು, ಮೂಲ ಸೌಕರ್ಯಗಳು ಅವಶ್ಯಕ ಮಟ್ಟದಲ್ಲಿ ಇರದಿದ್ದರೆ, ಇದರ ಜವಾಬ್ದಾರಿ ಹೊತ್ತು ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವ ಮತ್ತು ಸಮರ್ಪಕ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಆಡಳಿತ ವರ್ಗವೇ ವಹಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮರ್ಪಕ ಅನುದಾನ ಒದಗಿಸಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳ ಅವ್ಯವಸ್ಥೆಯ ಕುರಿತು ಹಲವಾರು ವರದಿಗಳು ವಿವರಿಸಿವೆ. ರಾಜ್ಯ ಸರ್ಕಾರ ಅಥವಾ ಎನ್‌ಎಂಸಿ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಣಕಾಸು ಸಹಾಯ ಒದಗಿಸುವುದರ ಬದಲಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟ ತೆರೆದು ದುಡ್ಡು ಮಾಡಲು ಯತ್ನಿಸುತ್ತಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ಕೃಷಿ ಕ್ಷೇತ್ರವನ್ನೇ ಸರ್ಕಾರ ಕಡೆಗಣಿಸುತ್ತಿವೆ: ಚಾಮರಸ ಮಾಲಿ ಪಾಟೀಲ
“ವೈದ್ಯಕೀಯ ಶಿಕ್ಷಣವನ್ನು ಉತ್ತಮಪಡಿಸುವ ತನ್ನ ಜವಾಬ್ದಾರಿಯಿಂದ ಕೈ-ತೊಳೆದುಕೊಳ್ಳುವ ಧೋರಣೆಯನ್ನು ಎನ್ಎಂಸಿಯ ಈ ನಡೆಯು ಎತ್ತಿ ತೋರಿಸುತ್ತಿದೆ. ಎಐಡಿಎಸ್ ಕರ್ನಾಟಕ ರಾಜ್ಯ ಸಮಿತಿಯು ಎನ್ಎಂಸಿಯ ಈ ಧೋರಣೆ ಖಂಡನೀಯ. ವೈದ್ಯಕೀಯ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸಮರ್ಪಕ ಹಣಕಾಸನ್ನು ಒದಗಿಸಬೇಕು. ತನ್ನದಲ್ಲದ, ಬದಲಿಗೆ ಆಳ್ವಿಕರ ಪ್ರಮಾದಕ್ಕೆ ಶಿಕ್ಷಣ ಸಂಸ್ಥೆಯ ಮೇಲೆ ದಂಡವನ್ನು ಹೇರುವುದು ಶಿಕ್ಷಣದ ಸತ್ವಕ್ಕೆ ಧಕ್ಕೆ ಉಂಟುಮಾಡುವುದರಿಂದ ಎಂದಿಗೂ ಅದು ರೂಢಿಯಾಗಬಾರದು” ಎಂದರು.
ವರದಿ : ಸ್ವಾತಿ, ಎಐಡಿಎಸ್‌ಒ ಮೈಸೂರು