ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್’ ಪ್ರಶಸ್ತಿಯನ್ನು ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೀಡಿದ್ದಾರೆ.
“ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಹಾಗೂ ರಷ್ಯಾ ಮತ್ತು ಭಾರತೀಯ ಜನರ ನಡುವಿನ ಸೌಹಾರ್ದ ಸಂಬಂಧಗಳನ್ನು ಉತ್ತೇಜಿಸುವಲ್ಲಿ ಮೋದಿ ಅವರ ಅಸಾಧಾರಣ ಸೇವೆಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ” ಎಂದು 2019ರಲ್ಲಿ ಘೋಷಿಸಲಾಗಿತ್ತು. ಇದೀಗ, ಆ ಪ್ರಶಸ್ತಿಯನ್ನು ಪ್ರದಾನ ಮಾಡಿ, ಗೌರವಿಸಲಾಗಿದೆ.
ಈ ಪ್ರಶಸ್ತಿ ಯಾವುದು? ಅದನ್ನು ಯಾರು ಪಡೆಯುತ್ತಾರೆ?
ರಷ್ಯಾಕ್ಕಾಗಿ ಅಸಾಧಾರಣ ಸೇವೆಗಳಲ್ಲಿ ಸಲ್ಲಿಸಿದ ಪ್ರಮುಖ ಸರ್ಕಾರಿ ಅಧಿಕಾರಿ, ಸಾರ್ವಜನಿಕ ವ್ಯಕ್ತಿಗಳು, ಮಿಲಿಟರಿ ನಾಯಕರು ಹಾಗೂ ವಿಜ್ಞಾನ, ಸಂಸ್ಕೃತಿ, ಕಲೆ ಮತ್ತು ಆರ್ಥಿಕತೆಯ ವಿವಿಧ ಕ್ಷೇತ್ರಗಳ ಅತ್ಯುತ್ತಮ ಪ್ರತಿನಿಧಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಷ್ಯಾದ ಒಕ್ಕೂಟಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದ ಅನ್ಯ ರಾಷ್ಟ್ರಗಳ ಮುಖ್ಯಸ್ಥರಿಗೂ ಸಹ ಈ ಪ್ರಶಸ್ತಿ ನೀಡಲು ಅವಕಾಶವಿದೆ.
ಈ ಪ್ರಶಸ್ತಿಗೆ ಹೆಸರು ‘ಸೇಂಟ್ ಆಂಡ್ರ್ಯೂ’ ಅವರಿಂದ ಬಂದಿದೆ. ಆಂಡ್ರ್ಯೂ ಅವರು ಯೇಸುವಿನ 12 ಮೂಲ ಅನುಯಾಯಿಗಳಾದ ‘ಅಪೊಸ್ತಲ್’ರಲ್ಲಿ ಒಬ್ಬರು ಎಂದು ನಂಬಲಾಗಿದೆ. ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ನಂತರ, ಯೇಸುವಿನ ಸಂದೇಶಗಳನ್ನು ಅಪೊಸ್ತಲರು ಜಗತ್ತಿನಾದ್ಯಂತ ಹರಡಲು ಬಹಳ ದೂರ ಪ್ರಯಾಣಿಸಿದ್ದರು ಎಂದು ಹೇಳಲಾಗುತ್ತದೆ. ಸೇಂಟ್ ಆಂಡ್ರ್ಯೂ ಅವರು ರಷ್ಯಾ, ಗ್ರೀಸ್, ಯುರೋಪ್ ಮತ್ತು ಏಷ್ಯಾದ ಇತರ ಸ್ಥಳಗಳಿಗೆ ಪ್ರಯಾಣಿಸಿದ್ದರು. ಅವರು ಕಾನ್ಸ್ಟಾಂಟಿನೋಪಲ್ ಚರ್ಚ್ ಅನ್ನು ಸ್ಥಾಪಿಸಿದ್ದರು. ಬಳಿಕ ಆ ಚರ್ಚ್ ರಷ್ಯನ್ ಆರ್ಥೊಡಾಕ್ಸ್ ಚರ್ಚ್‌ನ ಸ್ಥಾಪನೆಗೆ ಕಾರಣವಾಯಿತು. ರಷ್ಯಾದ ಸುಮಾರು 1.40 ಕೋಟಿ ಜನಸಂಖ್ಯೆಯಲ್ಲಿ 9 ಕೋಟಿಗಿಂತಲೂ ಹೆಚ್ಚು ಜನರು ರಷ್ಯನ್ ಆರ್ಥೊಡಾಕ್ಸ್ ಚರ್ಚ್‌ಅನ್ನು ಅನುಸರಿಸುತ್ತಿದ್ದಾರೆ.
ಸೇಂಟ್ ಆಂಡ್ರ್ಯೂ ಅವರನ್ನು ರಷ್ಯಾ ಮತ್ತು ಸ್ಕಾಟ್ಲೆಂಡ್‌ನ ಸಂತ ಎಂದು ಪರಿಗಣಿಸಲಾಗಿದೆ. ಸ್ಕಾಟ್ಲೆಂಡ್‌ನ ಧ್ವಜದ ಮೇಲಿನ ‘X’ ಚಿಹ್ನೆಯು ‘ಸಾಲ್ಟೈರ್’ ಎಂದು ಕರೆಯಲ್ಪಡುವ ಸಂತನನ್ನ ಪ್ರತಿನಿಧಿಸುತ್ತದೆ. ಇದೇ ಆಕಾರದ ಶಿಲುಬೆಯ ಮೇಲೆ ಅವನನ್ನು ಶಿಲುಬೆಗೇರಿಸಲಾಯಿತು ಎಂದು ನಂಬಲಾಗಿದೆ.
ತ್ಸಾರ್ ಪೀಟರ್ ದಿ ಗ್ರೇಟ್ ಅವರು 1698ರಲ್ಲಿ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ’ ಪ್ರಶಸ್ತಿಯನ್ನು ಆರಂಭಿಸಿದರು. ಈ ಪ್ರಶಸ್ತಿ ಮಾಲೆಯು 17 ಲಿಂಕ್‌ಗಳನ್ನು ಒಳಗೊಂಡಿದೆ. ಜೊತೆಗೆ, ರಷ್ಯಾ ಒಕ್ಕೂಟದ ರಾಜ್ಯ ಲಾಂಛನದ ಒಂದು ಗಿಲ್ಡೆಡ್ ಚಿತ್ರಣವನ್ನು ಒಳಗೊಂಡಿದೆ. ಈ ಲಾಂಛನವು ಎರಡು ತಲೆಯ ಹದ್ದು, ಬ್ಯಾಡ್ಜ್, ನಕ್ಷತ್ರ ಮತ್ತು ತಿಳಿ ನೀಲಿ ರೇಷ್ಮೆ ರಿಬ್ಬನ್ ಅನ್ನು ಸಹ ಒಳಗೊಂಡಿದೆ. ಯುದ್ಧದಲ್ಲಿ ಸಾಹಸಗೈದವರಿಗೆ ಬ್ಯಾಡ್ಜ್ ಮತ್ತು ನಕ್ಷತ್ರ ಹೊಂದಿರುವ ಕತ್ತಿಯನ್ನು ಶೌರ್ಯಕ್ಕಾಗಿ ನೀಡಲಾಗುತ್ತದೆ.
ತ್ಸಾರಿಸ್ಟ್ ಆಡಳಿತವನ್ನು ಉರುಳಿಸಿದ ರಷ್ಯಾದ ಕ್ರಾಂತಿಯ ನಂತರ ಈ ಪ್ರಶಸ್ತಿಯನ್ನು 1918ರಲ್ಲಿ ರದ್ದುಗೊಳಿಸಲಾಗಿತ್ತು. ಆದರೆ, 1998ರಲ್ಲಿ ರಷ್ಯಾದ ಅಧ್ಯಕ್ಷ ಬೋರಿಸ್ ಯಲ್ಸಿನ್ ಅವರು ಪ್ರಶಸ್ತಿಯನ್ನು ಮತ್ತೆ ಆರಂಭಿಸಿದರು.
ಪ್ರಶಸ್ತಿಯನ್ನು ಈ ಹಿಂದೆ ಪಡೆದವರು ಯಾರು?
1998ರಲ್ಲಿ ಪ್ರಶಸ್ತಿಯನ್ನು ಮತ್ತೆ ಆರಂಭಿಸಿದ ಬಳಿಕ, ಮಿಲಿಟರಿ ಇಂಜಿನಿಯರ್ ಮತ್ತು ಗನ್ ಡಿಸೈನರ್ ಮಿಖಾಯಿಲ್ ಕಲಾಶ್ನಿಕೋವ್, ಲೇಖಕ ಸೆರ್ಗೆಯ್ ಮಿಖಾಲ್ಕೊವ್, ಸೋವಿಯತ್ ಒಕ್ಕೂಟದ ಕೊನೆಯ ನಾಯಕ ಮಿಖಾಯಿಲ್ ಗೋರ್ಬಚೇವ್, ರಷ್ಯಾದ ಆರ್ಥೊಡಾಕ್ಸ್ ಚರ್ಚ್ ಮುಖ್ಯಸ್ಥ ಪ್ಯಾಟ್ರಿಯಾರ್ಕ್ ಅಲೆಕ್ಸಿ II ಹಾಗೂ ರಷ್ಯಾದ ಆರ್ಥೊಡಾಕ್ಸ್ ಚರ್ಚ್‌ನ ಪ್ರಸ್ತುತ ಮುಖ್ಯಸ್ಥ ಪೇಟ್ರಿಯಾರ್ಕ್ ಕ್ರಿಲ್ ಪಡೆದುಕೊಂಡಿದ್ದಾರೆ.
2017ರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಕಝಾಕಿಸ್ತಾನ್‌ನ ಮಾಜಿ ಅಧ್ಯಕ್ಷ ನರ್ಸುಲ್ತಾನ್ ನಜರ್ಬಯೇವ್ ಅವರಿಗೂ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಈಗ, ಪ್ರಧಾನಿ ಮೋದಿ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ರಷ್ಯಾ-ಉಕ್ರೇನ್ ಗಡಿಯಲ್ಲಿ ಏಳು ಭಾರತೀಯರು: ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾ ಒತ್ತಾಯ- ಆರೋಪ
ಅಂದಹಾಗೆ, ಕಳೆದ ಒಂದೂವರೆ ವರ್ಷದಿಂದ ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಯುದ್ಧದ ವೇಳೆ ಭಾರತವು ತಟಸ್ಥ ನಿಲುವು ತಳೆದಿತ್ತು. ಆದರೆ, ಹಿಂದಿನಿಂದಲೂ ಯಾವುದೇ ದೇಶ ಮತ್ತೊಂದು ದೇಶದ ಮೇಲೆ ದಾಳಿ ನಡೆಸಿದಾಗ, ನ್ಯಾಯದ ಪರವಾಗಿ ತನ್ನ ನಿಲುವನ್ನ ಸ್ಪಷ್ಟವಾಗಿ ಹೇಳುತ್ತಾ ಬಂದಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದು ರಷ್ಯಾ ಎಸಗಿದ ದೌರ್ಜನ್ಯ. ಆ ಕಾರಣಕ್ಕಾಗಿಯೇ ಅಮೆರಿಕ, ಯುರೋಪ್ ರಾಷ್ಟ್ರಗಳು ಉಕ್ರೇನ್ ಪರವಾಗಿ ನಿಂತವು. ಆದರೆ, ತನ್ನ ಸ್ವಂತ ಲಾಭಕ್ಕಾಗಿ ಭಾರತ ರಷ್ಯಾಗೆ ಪರೋಕ್ಷವಾಗಿ ಬೆಂಬಲ ನೀಡಿತು. ರಷ್ಯಾದಿಂದ ಪೆಟ್ರೋಲಿಯಂಅನ್ನು ಖರೀದಿ ಮಾಡಿ, ರಷ್ಯಾಕ್ಕೆ ಎದುರಾಗಬಹುದಾಗಿದ್ದ, ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಅನುಕೂಲವಾಗುವಂತೆ ಮಾಡಿತು. ಪೆಟ್ರೋಲಿಯಂಅನ್ನು ಕಡಿಮೆ ಬೆಲೆಗೆ ಖರೀದಿಸಿದರೂ, ಭಾರತೀಯ ಜನರಿಗೆ ಆ ಕಡಿಮೆ ಬೆಲೆಯ ಲಾಭವನ್ನು ಮೋದಿ ಸರ್ಕಾರ ನೀಡಲಿಲ್ಲ. ಭಾರತದಲ್ಲಿ ಪೆಟ್ರೋಲ್ ಬೆಲೆ ಅಧಿಕವಾಗಿಯೇ ಇದೆ.
ಮಾತ್ರವಲ್ಲದೆ, ರಷ್ಯಾಕ್ಕೆ ಪ್ರವಾಸ, ಉದ್ಯೋಗಕ್ಕಾಗಿ ತೆರಳಿದ್ದ ಹಲವರನ್ನು ರಷ್ಯಾ ಸೇನೆ ವಶಕ್ಕೆ ಪಡೆದುಕೊಂಡಿತ್ತು. ಜೊತೆಗೆ, ಕೆಲವು ಏಜೆಂಟ್‌ಗಳು ರಷ್ಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವಾರು ಭಾರತೀಯರನ್ನು ರಷ್ಯಾಕ್ಕೆ ಸಾಗಣೆ ಮಾಡಿದ್ದರು. ಅವರೆಲ್ಲರನ್ನೂ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧದಲ್ಲಿ ಹೋರಾಟ ನಡೆಸುವಂತೆ ಒತ್ತಾಯಿಸಿತ್ತು. ಹಲವರನ್ನು ಯುದ್ಧ ಪೀಡಿತ ಪ್ರದೇಶಕ್ಕೆ ಎಳೆದೊಯ್ದಿತ್ತು. ಈ ಬಗ್ಗೆ, ರಷ್ಯಾ ಸೇನೆಯೊಳಗೆ ಸಿಕ್ಕಿಕೊಂಡಿದ್ದ ಭಾರತೀಯರೇ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಲವು ಭಾರತೀಯರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವನ್ನಪ್ಪಿದರು. ಆದರೂ, ಅವರ ರಕ್ಷಣೆಗಾಗಿ ಮೋದಿ ಸರ್ಕಾರ ರಷ್ಯಾ ವಿರುದ್ಧ ಮಾತನಾಡಲಿಲ್ಲ. ರಷ್ಯಾದ ನಡೆಯನ್ನು ಖಂಡಿಸಲಿಲ್ಲ.
ಯುದ್ಧದ ಸಮಯದಲ್ಲಿ ತನಗೆ ಮೋದಿ ಸರ್ಕಾರ ಕೊಟ್ಟ ಪರೋಕ್ಷ ಬೆಂಬಲ ಮತ್ತು ಭಾರತೀಯರನ್ನೇ ಸೇನೆಯಲ್ಲಿ ದುರುಪಯೋಗ ಮಾಡಿಕೊಂಡರೂ ಖಂಡಿಸದ ಕಾರಣಕ್ಕಾಗಿ ಮೋದಿ ಅವರಿಗೆ ಪ್ರಶಸ್ತಿ ನೀಡಿ ರಷ್ಯಾ ಧನ್ಯವಾದ ನೀಡಿದೆ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿವೆ.