ಡ್ರಾಪ್ ಕೇಳಿದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಕೃತ್ಯ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಸಮೀಪದ ಕಾಫಿ ತೋಟದಲ್ಲಿ ಜುಲೈ 9ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಡ್ರಾಪ್ ಕೇಳಿದ ಅಪ್ರಾಪ್ತ ಬಾಲಕಿ ಮೇಲೆ ತಮ್ಮ ಜೊತೆಯಲ್ಲಿ ಬಂದಿದ್ದ ಯುವಕರೇ ಅತ್ಯಾಚಾರ ನಡೆಸಿದ್ದಾರೆಂದು ತಿಳಿದುಬಂದಿದ್ದು, ಅತ್ಯಾಚಾರ ನಡೆಸಿದ ಐವರು ಆರೋಪಿಗಳನ್ನು ಕುಟ್ಟ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಾಥಂಗಾಲ ನಿವಾಸಿಗಳಾದ ನವೀಂದ್ರ (24), ಅಕ್ಷಯ್ (27), ಕೇರಳದ ತೋಳಪಟ್ಟಿಯ ನಾಡುಂಡನ ಕಾಲೋನಿಯ ರಾಹುಲ್ (21), ಮನು (25) ಮತ್ತು ಸಂದೀಪ್ (27) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನಲೆ
ಕುಟ್ಟದಿಂದ ನಾಗರಹೊಳೆ ಕಡೆಗೆ ಹೋಗುವ ಮಾರ್ಗದಲ್ಲಿ ಜುಲೈ 9ರಂದು ಇಬ್ಬರು ಅಪ್ರಾಪ್ತೆಯರು ಹಾಗೂ ಮೂರು ಮಂದಿ ಯುವಕರು ತೆರಳುತ್ತಿದ್ದರು. ಈ ವೇಳೆ ಕುಟ್ಟ ಕಡೆಯಿಂದ ಬರುತ್ತಿದ್ದ ಕಾರನ್ನು ತಡೆದು ಕಾರಿನಲ್ಲಿದ್ದ ಇಬ್ಬರು ಅಪರಿಚಿತರೊಂದಿಗೆ ತಮ್ಮನ್ನು ನಾಗರಹೊಳೆ ಕಡೆ ಬಿಡುವಂತೆ ಬಾಲಕಿಯರು ಕೇಳಿದ್ದರು. ಹೀಗಾಗಿ ಕಾರಿನಲ್ಲಿ ಇಬ್ಬರು ಅಪ್ರಾಪ್ತೆಯರು ಮತ್ತು ಮೂರು ಮಂದಿ ಯುವಕರು ಪ್ರಯಾಣಿಸಿದ್ದರು.
ಮಾರುತಿ 800 ಕಾರಿನಲ್ಲಿ ಬಾಲಕಿಯರು ನಾಗರಹೊಳೆ ಕಡೆ ತೆರಳಿದ್ದು, ದಾರಿ ಮಧ್ಯೆ ಕಾಫಿ ತೋಟದಲ್ಲಿ ಅಪರಿಚಿತರಾದ ನವೀಂದ್ರ, ಅಕ್ಷಯ್ ಎಂಬುವವರಿಂದ ಓರ್ವ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಅಪ್ರಾಪ್ತೆಯರ ಜತೆಯಲ್ಲೇ ಇದ್ದ ರಾಹುಲ್, ಮನು, ಸಂದೀಪ್ ಎಂಬುವವರು ಮತ್ತೋರ್ವ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಆನ್ವರಿ ಶಾಲೆಯ ಮೇಲ್ಛಾವಣಿ ಕುಸಿತ; ಪ್ರಕರಣ ದಾಖಲಿಸಲು ಎಸ್ಎಫ್ಐ ಒತ್ತಾಯ
ಸಂತ್ರಸ್ತ ಬಾಲಕಿಯರಿಂದ ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಡಗು ಎಸ್‌ಪಿ ರಾಮರಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.