ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರನ್ನು ಕೆಲಸದ ಅವಧಿಯಲ್ಲಿ ಫೋನ್‌ನಲ್ಲಿ ಕ್ಯಾಂಡಿ ಕ್ರಷ್ ಆಡುತ್ತಿದ್ದ ಮತ್ತು ಕರೆಯಲ್ಲಿ ಮಾತನಾಡುತ್ತಿದ್ದ ಕಾರಣದಿಂದಾಗಿ ಅಮಾನತುಗೊಳಿಸಲಾಗಿದೆ.
ಜಿಲ್ಲಾಧಿಕಾರಿ ರಾಜೇಂದ್ರ ಪನ್ಸಿಯಾ ಅವರು ಪರಿಶೀಲನೆಗಾಗಿ ಶಾಲೆಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳ ಕಾಪಿ ಪುಸ್ತಕಗಳಲ್ಲಿ ಮೊದಲ ಪುಟದಿಂದ ಹಿಡಿದು ಕೊನೆಯ ಪುಟದವರೆಗೂ ಹಲವಾರು ತಪ್ಪುಗಳು ಕಂಡು ಬಂದಿದೆ. ಇದಾದ ಬಳಿಕ ಘಟನೆಯು ಬೆಳಕಿಗೆ ಬಂದಿದೆ.
ನಂತರ ಶಿಕ್ಷಕನ ಫೋನ್‌ನಲ್ಲಿ ನಿರ್ದಿಷ್ಟ ಅಪ್ಲಿಕೇಷನ್ ಬಳಕೆಯ ಅವಧಿಯನ್ನು ಪರಿಶೀಲಿಸಲಾಗಿದ್ದು, ಈ ವೇಳೆ ಶಿಕ್ಷಕ ಶಾಲಾ ಅವಧಿಯಲ್ಲಿ ಸುಮಾರು ಎರಡು ಗಂಟೆಗೂ ಅಧಿಕ ಕಾಲ ಕ್ಯಾಂಡಿ ಕ್ರಷ್ ಆಟ ಆಡಿರುವುದು ಬಹಿರಂಗವಾಗಿದೆ.
“ಶಿಕ್ಷಕರು ವಿದ್ಯಾರ್ಥಿಗಳ ಹೋಮ್‌ವರ್ಕ್‌ಗಳನ್ನು ಪರಿಶೀಲಿಸುವತ್ತ ಗಮನಹರಿಸಬೇಕು. ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಬೇಕು” ಎಂದು ರಾಜೇಂದ್ರ ಪನ್ಸಿಯಾ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ | ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ ಭಾರೀ ಬೆಂಕಿ ಅವಘಡ; 20 ಮಂದಿ ಮೃತ್ಯು
“ಮೊಬೈಲ್ ಫೋನ್‌ಗಳನ್ನು ಬಳಸುವುದು ಸಮಸ್ಯೆಯಲ್ಲ. ಆದರೆ ಶಾಲಾ ಸಮಯದಲ್ಲಿ ವೈಯಕ್ತಿಕ ಕಾರಣಗಳಿಗಾಗಿ ಅವುಗಳನ್ನು ಬಳಸುವುದು ಸರಿಯಲ್ಲ” ಎಂದೂ ಕೂಡಾ ರಾಜೇಂದ್ರ ಪನ್ಸಿಯಾ ಹೇಳಿದ್ದಾರೆ.
ಜಿಲ್ಲಾಧಿಕಾರಿ ರಾಜೇಂದ್ರ ಪನ್ಸಿಯಾ ಅವರು ಆರು ವಿದ್ಯಾರ್ಥಿಗಳ ಕಾಪಿ ಪುಸ್ತಕವನ್ನು ಪರಿಶೀಲಿಸಿದ್ದಾರೆ. ಇದರಲ್ಲಿ 95 ತಪ್ಪುಗಳು ಕಂಡುಬಂದಿದೆ. ಅದರಲ್ಲಿಯೂ ಒಂಬತ್ತು ತಪ್ಪುಗಳು ಮೊದಲ ಪುಟದಲ್ಲಿಯೇ ಕಂಡುಬಂದಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಸಹಾಯಕ ಶಿಕ್ಷಕ ಪ್ರಿಯಾಂ ಗೋಯಲ್ ಅವರ ಫೋನ್ ಪರಿಶೀಲಿಸಿದರು.
ಈ ವೇಳೆ ಶಿಕ್ಷಕ ಪ್ರತಿದಿನ ಸರಾಸರಿ ಒಂದೂವರೆ ಗಂಟೆ ಕಾಲ ಕ್ಯಾಂಡಿ ಕ್ರಷ್ ಅನ್ನು ಆಡಿರುವುದು ಬಹಿರಂಗವಾಗಿದೆ. ಶಾಲೆಯ ಐದೂವರೆ ಗಂಟೆಗಳಲ್ಲಿ, ಪ್ರಿಯಮ್ ಗೋಯಲ್ ಕ್ಯಾಂಡಿ ಕ್ರಷ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕಳೆದಿದ್ದು, 26 ನಿಮಿಷಗಳ ಕಾಲ ಫೋನ್‌ನಲ್ಲಿ ಮಾತನಾಡಿದ್ದು, ಸುಮಾರು 30 ನಿಮಿಷಗಳ ಕಾಲ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ.
ಇದಾದ ಬಳಿಕ ಜಿಲ್ಲಾಧಿಕಾರಿ ರಾಜ್ಯ ಶಿಕ್ಷಣ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದ, ಶಿಕ್ಷಣ ಇಲಾಖೆಯು ಸಹಾಯಕ ಶಿಕ್ಷಕ ಪ್ರಿಯಮ್ ಗೋಯಲ್ ಅವರನ್ನು ಅಮಾನತುಗೊಳಿಸಿದೆ.