ರಾಜ್ಯದಲ್ಲಿ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಇತ್ತೀಚೆಗೆ ಮಳೆಯಾಗುತ್ತಿದೆ. ಬತ್ತಿ ಹೋಗಿದ್ದ ಕೆರೆ, ಕಟ್ಟೆ, ನದಿ, ಜಲಾಶಯಗಳಿಗೆ ನೀರು ಬರುತ್ತಿದೆ. ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟೆಗೂ ನೀರು ಹರಿದು ಬರುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ. ಈ ನಡುವೆ, ಜುಲೈ 12ರಿಂದ 31ರವರೆಗೆ ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಆರ್‌ಸಿ) ಸೂಚನೆ ನೀಡಿದೆ.
ಗುರುವಾರ, ದೆಹಲಿಯಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ತಮಿಳುನಾಡು ಕಾವೇರಿ ನೀರಿಗಾಗಿ ಬೇಡಿಕೆ ಇಟ್ಟಿದೆ. ಕರ್ನಾಟಕವು ರಾಜ್ಯಕ್ಕೆ ನೀರಿನ ಕೊರತೆ ಇದ್ದು, ನೀರು ಹರಿಸಲಾಗದು ಎಂದು ವಾದಿಸಿದೆ.
ಕರ್ನಾಟಕದಿಂದ ತಮಿಳುನಾಡಿಗೆ ಜೂನ್ 1ರಿಂದ ಇಲ್ಲಿಯವರಗೆ 41 ಟಿಎಂಸಿ ನೀರು ಸೇರಿದೆ. ಮುಂಗಾರಿನಲ್ಲಿ ಸರಿಯಾಗಿ ಮಳೆಯಾಗಿಲ್ಲ. 28% ಮಳೆ ಕೊರತೆಯಾಗಿದೆ. ಕೆಆರ್‌ಎಸ್‌ನಲ್ಲಿ ಕೇವಲ ಒಟ್ಟು 58 ಟಿಎಂಸಿಯಷ್ಟು ಮಾತ್ರವೇ ನೀರಿದೆ. ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ನೀರಿದೆ. ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲೆಂದು ಕರ್ನಾಟಕದ ಅಧಿಕಾರಿಗಳು ವಾದಿಸಿದ್ದಾರೆ.
ಅದಾಗ್ಯೂ, ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯೂಆರ್‌ಸಿ ಆದೇಶ ನೀಡಿದೆ.