ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಬಸಪ್ಪ ಗೌಡಪ್ಪನವರ (15) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಹೊಸ ಬೆಳವಣಿಗೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಂಡಿರುವ ಹಿರೇಕೆರೂರು ಠಾಣೆಯ ಪೊಲೀಸರು, ಹೂತಿದ್ದ ಬಾಲಕಿಯ ಮೃತದೇಹವನ್ನು ಶುಕ್ರವಾರ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಹಿರೇಕೆರೂರು ತಾಲೂಕಿನ ಆಲದಕಟ್ಟಿ ಗ್ರಾಮದ ಅರ್ಚನಾ, ಜುಲೈ 2ರಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಳು. ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರಿಗೆ ಮಾಹಿತಿ ನೀಡದೆಯೇ ಮೃತದೇಹವನ್ನು ಗ್ರಾಮದ ಸ್ಮಶಾನದಲ್ಲಿ ಸಂಬಂಧಿಕರು ಶವಸಂಸ್ಕಾರ ಮಾಡಿದ್ದರು.
ಸಾವಿಗೆ ಶರಣಾಗುವುದಕ್ಕೂ ಮುನ್ನ ವಿದ್ಯಾರ್ಥಿನಿ ಅರ್ಚನಾ ಬರೆದಿದ್ದಳು ಎನ್ನಲಾದ ಡೆತ್‌ನೋಟ್ ಮನೆಯಲ್ಲಿ ಇತ್ತೀಚೆಗೆ ಸಿಕ್ಕಿದೆ. ಆ ಬಳಿಕ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅರ್ಚನಾ ತಂದೆ ಬಸವರಾಜ ಅವರು ಠಾಣೆಗೆ ದೂರು ನೀಡಿದ್ದಾರೆ. ಇದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಹಿರೇಕೆರೂರು ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹಾವೇರಿ ಉಪ ವಿಭಾಗಾಧಿಕಾರಿ ಚನ್ನಪ್ಪ ನೇತೃತ್ವದಲ್ಲಿ ಪೊಲೀಸರು ವಿದ್ಯಾರ್ಥಿನಿ ಮೃತದೇಹವನ್ನು ಶುಕ್ರವಾರ ಹೊರತೆಗೆದಿದ್ದಾರೆ.
“ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ, ಅವರ ಪತ್ನಿ ಹಾಗೂ ಮಗಳ ಕಿರುಕುಳದಿಂದ ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದೆ. ಹೂತಿದ್ದ ಮೃತದೇಹವನ್ನು ಉಪ ವಿಭಾಗಾಧಿಕಾರಿ ಸಮ್ಮುಖದಲ್ಲಿ ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹಾವೇರಿ | ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಆತ್ಮಹತ್ಯೆ ಪ್ರಕರಣ; ತನಿಖೆಗೆ ಎಸ್‌ಎಫ್‌ಐ ಆಗ್ರಹ
ಮೊರಾರ್ಜಿ ವಸತಿ ಶಾಲಾ ಶಿಕ್ಷಕನೊರ್ವನ ಕುಟುಂಬದಿಂದ ಕಿರುಕುಳ ಆರೋಪ:
ಮೊರಾರ್ಜಿ ಶಾಲೆಯ ಹಿಂದಿ ಶಿಕ್ಷಕನ ಮಗಳು ಹಾಗೂ ಮೃತ ಅರ್ಚನಾ ಇಬ್ಬರೂ ಸಹಪಾಠಿಗಳು. ಓದಿನಲ್ಲಿ ಅರ್ಚನಾ ಶಿಕ್ಷಕನ ಮಗಳಿಗಿಂತ ಮುಂದಿದ್ದಳು. ಇದೇ ಕಾರಣದಿಂದ ಹಿಂದಿ ಶಿಕ್ಷಕನ ಪತ್ನಿ, ಅರ್ಚನಾಳಿಗೆ ನನ್ನ ಮಗಳಿಗಿಂತ ನೀನೇಕೆ ಓದಿನಲ್ಲಿ ಮುಂದೆ ಇದ್ದೀಯಾ ಎಂದು ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ಅರ್ಚನಾ ಮಾಡಿದ್ದಾಳೆ. ಇದರ ಜೊತೆಗೆ ವೈಯಕ್ತಿಕ ಕಾರಣಗಳನ್ನು ಡೆತ್ನೋಟ್ನಲ್ಲಿ ಉಲ್ಲೇಖ ಮಾಡಿದ್ದಾಳೆ.

ಪೋಷಕರನ್ನು ಭೇಟಿ ಮಾಡಿದ ಎಸ್ಎಫ್ಐ ಮುಖಂಡರು
ಘಟನೆಗ ಸಂಬಂಧಿಸಿ ವಿದ್ಯಾರ್ಥಿ ಸಂಘಟನೆಯಾದ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಅವರಿಗೆ ನಿನ್ನೆ ಮನವಿ ಪತ್ರ ಸಲ್ಲಿಸಿ, ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಒದಗಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದರು.
ಇಂದು ಕುಟುಂಬವನ್ನು ಭೇಟಿ ಮಾಡಿದ ಎಸ್ಎಫ್ಐ ಮುಖಂಡರು, ವಿದ್ಯಾರ್ಥಿನಿಯ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಸತ್ಯಾಂಶ ಹೊರಬಂದು, ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಭರವಸೆ ನೀಡಿದ್ದಾರೆ.