ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಜುಲೈ 18ರವರೆಗೆ ಇಡಿ ಕಸ್ಟಡಿಗೆ ಪಡೆದುಕೊಂಡಿದೆ. ಈ ಹಿಂದೆ, ಪರಿಶಿಷ್ಟ ಪಂಗಡ ಇಲಾಖೆಯ ಸಚಿವರಾಗಿದ್ದ ಬಿ ನಾಗೇಂದ್ರರನ್ನು ಇಡಿ ಕಸ್ಟಡಿಗೆ ನೀಡಿ ನ್ಯಾ. ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.
ಬುಧವಾರ ಬೆಳಗ್ಗೆ ಇಡಿ ಅದಿಕಾರಿಗಳು ನಾಗೇಂದ್ರ, ಬಸನಗೌಡ ದದ್ದಲ್ ಸೇರಿ ಹಲವರ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಗುರುವಾರ ರಾತ್ರಿ ನಾಗೇಂದ್ರ ಅವರನ್ನು ವಶಕ್ಕೆ ಪಡೆದಿದ್ದರು. ಬಳಿಕ, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಶನಿವಾರ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ಇರುವ ನ್ಯಾಯಾಧೀಶರ ನಿವಾಸದಲ್ಲಿ ಜಡ್ಜ್ ಎದುರು ಹಾಜರುಪಡಿಸಲಾಗಿತ್ತು. ಇಡಿ ಅವರ ಮನವಿಯನ್ನು ಆಲಿಸಿದ ನ್ಯಾ. ಸಂತೋಷ್ ಗಜಾನನ ಭಟ್ ಅವರು ನಾಗೇಂದ್ರ ಅವರನ್ನು ಜುಲೈ 18ರವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ಹಗರಣ ಸಂಬಂಧ ಇಡಿ ಹಲವರನ್ನು ವಿಚಾರಣೆ ನಡೆಸಿದ್ದು, ನಾಗೇಂದ್ರ ಅವರ ಸೂಚನೆಯ ಮೇಲೆ ಕೆಲವು ಬ್ಯಾಂಕ್ ಖಾತೆ ತೆರೆಯಲಾಗಿದೆ ಎಂದು ನಿಗಮದ ಮಾಜಿ ಎಂಡಿ ಪದ್ಮನಾಭ್ ಹೇಳಿಕೆ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ನಲ್ಲಿ ನಡೆದ ಸಭೆಗೆ ನಾಗೇಂದ್ರ ಹಾಜರಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ ಅಧಿಕಾರಿ ಚಂದ್ರಶೇಖರ್ ಅವರ ಡೆತ್ ನೋಟ್ನಲ್ಲಿ ಸಚಿವ ಎಂದು ಉಲ್ಲೇಖವಾಗಿದೆ. ನಾಗೇಂದ್ರ ಆಪ್ತ ಹರೀಶ್ಗೆ ಪದ್ಮನಾಭ್ 25 ಲಕ್ಷ ರೂ. ನೀಡಿರುವ ಬಗ್ಗೆಯೇ ಇಡಿ ತನಿಖೆ ನಡೆಸಿದೆ. ಹಗರಣದಲ್ಲಿ ನಾಗೇಂದ್ರ ಪ್ರಮುಖ ಆರೋಪಿ ಎಂಬುದಕ್ಕೆ ಹಲವು ಸಾಕ್ಷ್ಯಗಳಿವೆ ಎಂದು ಇಡಿ ಹೇಳಿರುವುದಾಗಿ ವರದಿಯಾಗಿದೆ.
ಶಾಸಕ ಬಸನಗೌಡ ದದ್ದಲ್ ಅಜ್ಞಾತ ಸ್ಥಳಕ್ಕೆ
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಶುಕ್ರವಾರ ವಿಚಾರಣೆ ಸಂಬಂಧ ಎಸ್ಐಟಿ ಮುಂದೆ ಹಾಜರಾಗಿದ್ದ ದದ್ದಲ್ ನಂತರ ಬೆಂಗಳೂರಿನ ನಿವಾಸಕ್ಕೆ ಬಂದೇ ಇಲ್ಲ. ಕುಟುಂಬಸ್ಥರ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಯಲಹಂಕದ ಕೋಗಿಲು ಬಳಿ ಇರುವ ಬಸನಗೌಡ ದದ್ದಲ್ ವಿಲ್ಲಾದಲ್ಲಿ ಸದ್ಯ ಇಬ್ಬರು ಮನೆ ಕೆಲಸದವರು ಮಾತ್ರ ಇದ್ದಾರೆ.