ಈ ದಿನ ಸಂಪಾದಕೀಯ | ಈ ಬಾರಿಯ ಅಧಿವೇಶನದಲ್ಲಾದರೂ ಜನಪರ ಚರ್ಚೆ-ವಾಗ್ವಾದ ನಡೆಯಬಹುದೇ?

Date:

Advertisements
ಆಡಳಿತ ಪಕ್ಷ ಮತ್ತು ವಿಪಕ್ಷ- ಯಾರೇ ಆದರೂ, ಪ್ರಜಾಸತ್ತಾತ್ಮಕವಾದ ಅತ್ಯುನ್ನತ ಮಟ್ಟದ ವಾಗ್ವಾದಕ್ಕೆ ವೇದಿಕೆ ಸದನ ಎಂಬುದನ್ನು ಮೊದಲು ಅರಿಯಬೇಕಿದೆ. ವಿಪಕ್ಷಗಳು ಎಂದರೆ ಸರ್ಕಾರದ ಪ್ರತಿ ನಡೆಯನ್ನೂ ವಿರೋಧಿಸಬೇಕು ಎಂದಲ್ಲ. ಸರ್ಕಾರ ಎಡವಿದಾಗ, ಕರ್ತವ್ಯ ನಿರ್ವಹಣೆಯಲ್ಲಿ ಲೋಪವಾದಾಗ ಎಚ್ಚರಿಸುವ ಕೆಲಸ ಮಾಡಬೇಕೇ ಹೊರತು ಘೋಷಣೆ, ಗದ್ದಲ, ಸಭಾತ್ಯಾಗವಲ್ಲ.

ಜುಲೈ 15ರ ಸೋಮವಾರದಿಂದ ಮುಂಗಾರು ಅಧಿವೇಶನ ಆರಂಭವಾಗಲಿದೆ. 9 ದಿನಗಳ ಕಾಲ ಪ್ರಶ್ನೋತ್ತರ ಕಲಾಪದ ಜೊತೆಗೆ ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ಸಭಾಧ್ಯಕ್ಷರು ತಿಳಿಸಿದ್ದಾರೆ.

ಅಧಿವೇಶನಕ್ಕೆ ಪೂರ್ವತಯಾರಿಯಾಗಿ ಶುಕ್ರವಾರವೇ ವಿಪಕ್ಷಗಳು ಮುಡಾ ಹಗರಣದ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದವು. ಬೇಕಾದ ಹತಾರುಗಳನ್ನು ಸಿದ್ಧಮಾಡಿಕೊಂಡಿದ್ದವು. ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷ ಕಾಂಗ್ರೆಸ್, ರಾಜಧಾನಿಯಿಂದ ಮೈಸೂರಿಗೆ ತೆರಳುತ್ತಿದ್ದ ವಿಪಕ್ಷ ನಾಯಕರನ್ನು ಬಿಡದಿಯ ಬಳಿಯೇ ಪೊಲೀಸರಿಂದ ಬಂಧಿಸಿ, ಪ್ರತಿಭಟನೆಗೆ ಅಡ್ಡಿಪಡಿಸಿತು.

ಇದರಿಂದ ವಿಪಕ್ಷ ನಾಯಕರು ಆಕ್ರೋಶಗೊಂಡಿದ್ದಾರೆ, ಅಧಿವೇಶನ ಯಾವ ದಿಕ್ಕಿನಲ್ಲಿ ಸಾಗಬಹುದು ಎಂಬುದರ ಸುಳಿವು ನೀಡಿದ್ದಾರೆ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಹೋರಾಟ ಮಾಡಲು ಸಜ್ಜಾಗಿವೆ. ಅಂದರೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಕಳೆದ ಹದಿನಾಲ್ಕು ತಿಂಗಳ ಆಡಳಿತವನ್ನು, ಆ ಅವಧಿಯಲ್ಲಾದ ಹಗರಣಗಳನ್ನು ಮುನ್ನೆಲೆಗೆ ತರಲು ಸಕಲ ಸಿದ್ದತೆ ಮಾಡಿಕೊಂಡಿವೆ. ಅದು ಅವುಗಳ ನಡವಳಿಕೆಯಿಂದ ಸ್ಪಷ್ಟವಾಗುತ್ತಿದೆ.

Advertisements

ಇದರ ಜೊತೆಗೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಅಕ್ರಮ ಹಣ ವರ್ಗಾವಣೆ ಹಗರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭಾಗಿಯಾದ ಮುಡಾ ಹಗರಣದ ಬಗ್ಗೆ ಮಾತನಾಡಲು ಸದನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ ಮಂಡಿಸಲಾಗುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿರುವುದು, ಸದನದಲ್ಲಿ ಕದನವೇರ್ಪಡುವ ಸೂಚನೆ ನೀಡಿದೆ.

ಇದೇ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭಾರೀ ಪ್ರಮಾಣದ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಹಗರಣದ ಕುರಿತು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ದಿಢೀರನೆ ರಂಗ ಪ್ರವೇಶಿಸಿದೆ. ಮಾಜಿ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷ ದದ್ದಲ್, ಅಧಿಕಾರಿಗಳೂ ಸೇರಿದಂತೆ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳು, ಹಣವನ್ನು ವಶಪಡಿಸಿಕೊಂಡಿದೆ. ಮುಂದುವರೆದು ಮಾಜಿ ಸಚಿವ ನಾಗೇಂದ್ರರನ್ನು ವಶಕ್ಕೆ ಪಡೆದಿದೆ.

ಇದರ ಜೊತೆಗೆ ರಾಜ್ಯದಾದ್ಯಂತ ಮಳೆ ಆರ್ಭಟಿಸುತ್ತಿರುವುದು, ಝೀಕಾ ವೈರಸ್, ಡೆಂಘೀ ರೋಗಗಳು ಹರಡುತ್ತಿರುವುದು; ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ಆಗ್ರಹಿಸಿದ್ದರೂ, ಅದರ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳದಿರುವುದು; ಪೆಟ್ರೋಲ್, ಹಾಲಿನ ದರಗಳ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು; ರೈತರ ಆತ್ಮಹತ್ಯೆ, ಇಲಾಖೆಗಳ ಅನುದಾನ ಕಡಿತ, 700 ಕೋಟಿ ರೂ. ಹಾಲು ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿರುವುದು; ದಲಿತರಿಗೆ ಮೀಸಲಿಟ್ಟ ಎಸ್ಸಿಎಸ್ಸಿ/ಟಿಎಸ್ಪಿ ಹಣವನ್ನು ಗ್ಯಾರಂಟಿಗಳಿಗೆ ವರ್ಗಾಯಿಸಿರುವುದು; ಏಳನೇ ವೇತನ ಆಯೋಗ ಜಾರಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಮತ್ತೆ ನಿರಾಸೆಯಾಗಿರುವುದು- ಆಳುವ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಇದಕ್ಕಿಂತ ಉತ್ತಮ ಅವಕಾಶ ವಿಪಕ್ಷಗಳಿಗೆ ಸಿಗುವುದಿಲ್ಲವೆಂಬುದು ಸಾರ್ವಜನಿಕ ವಲಯದ ಅಭಿಪ್ರಾಯವಾಗಿದೆ.

ಇವುಗಳ ನಡುವೆಯೇ ಸರ್ಕಾರದಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹಣವೇ ಇಲ್ಲದಂತಾಗಿದೆ. ಗ್ಯಾರಂಟಿಗಳೇ ಎಲ್ಲವನ್ನು ಮುಚ್ಚಿ ಬಿಟ್ಟಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರೇ ಹೇಳಿರುವುದು, ವಿಪಕ್ಷಗಳಿಗೆ ಸರ್ಕಾರವನ್ನು ಹಣಿಯಲು ಸರಕು ಸಿಕ್ಕಂತಾಗಿದೆ.

ಇದೆಲ್ಲದಕ್ಕೂ ಉತ್ತರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿದ್ಧರಾಗಿದ್ದಾರೆಯೇ, ಅವರ ಸಹಾಯಕ್ಕೆ ಸಚಿವ ಸಂಪುಟ ನಿಲ್ಲಲಿದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಏಕೆಂದರೆ ಕಾಂಗ್ರೆಸ್ಸಿನ ಹೆಚ್ಚಿನಪಾಲು ನಾಯಕರು ಜಡತ್ವಕ್ಕೆ ಅಂಟಿಕೊಂಡವರು. ಸುಲಭದ ಗೆಲುವಿಗೆ, ಸುಗಮ ಹಾದಿಗೆ ಹಾತೊರೆಯುವವರು. ಸಮಸ್ಯೆ ಎದುರಾದಾಗ, ಸಿದ್ದರಾಮಯ್ಯನವರನ್ನು ಮುಂದೆ ಬಿಟ್ಟು ಹಿಂದೆ ನಿಲ್ಲುವವರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರ; ಕುರುಡಾಯಿತೇ ಸಮಾಜ?

ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರ ಬತ್ತಳಿಕೆಯಲ್ಲಿರುವ ಗುರಾಣಿ ಎಂದರೆ, ಇತ್ತೀಚಿನ ಸಂಸತ್ ಸದನ ನಡೆದ ರೀತಿ. ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಿಪಕ್ಷ ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಮುಖ್ಯ ಪ್ರಶ್ನೆಗಳನ್ನು ಎತ್ತಿದರು. ಅದನ್ನು ಇಡೀ ದೇಶವೇ ಮೆಚ್ಚಿ ಮಾತನಾಡಿತು. ಆದರೆ ಪ್ರಧಾನಿ ಮೋದಿಯವರು ಪ್ರಶ್ನೆಗಳಿಗೆ ಉತ್ತರಿಸುವ ಬದಲು ರಾಹುಲ್ ಅವರನ್ನು ಹೀಯಾಳಿಸಲು ಸದನದ ಮೌಲ್ಯಯುತ ಸಮಯವನ್ನು ಬಳಸಿಕೊಂಡರು. ಸದನದ ಘನತೆಗೆ ಅಪಚಾರವೆಸಗಿದರು.

ಆಡಳಿತಪಕ್ಷ ಮತ್ತು ವಿಪಕ್ಷ- ಯಾರೇ ಆದರೂ, ಪ್ರಜಾಸತ್ತಾತ್ಮಕವಾದ ಅತ್ಯುನ್ನತ ಮಟ್ಟದ ವಾಗ್ವಾದಕ್ಕೆ, ಹೇಳಿಕೆಗಳನ್ನು ದಾಖಲಿಸುವುದಕ್ಕೆ, ನಿಲುವುಗಳನ್ನು ವ್ಯಕ್ತಪಡಿಸುವುದಕ್ಕೆ, ನೀತಿಗಳ ಪರಿಶೀಲನೆಗೆ, ನಿರ್ದಿಷ್ಟ ವಿಚಾರಗಳ ಟೀಕೆಗೆ ಇರುವ ವೇದಿಕೆ ಸದನ ಎಂಬುದನ್ನು ಮೊದಲು ಅರಿಯಬೇಕಿದೆ. ಯಾವುದೇ ವಿಷಯದ ಬಗ್ಗೆ, ರಚನಾತ್ಮಕ ಮತ್ತು ಗುಣಾತ್ಮಕ ಚರ್ಚೆ ನಡೆಸಿದರೆ ಪರಿಹಾರದ ದಾರಿ ಸಿಕ್ಕೇ ಸಿಗುತ್ತದೆ. ಆಡಳಿತ ಪಕ್ಷ ಹಠಮಾರಿ ಧೋರಣೆ ತಳೆಯದೆ, ಪ್ರತಿಪಕ್ಷಗಳ ಮಾತನ್ನು ಸಂಯಮದಿಂದ ಆಲಿಸಬೇಕು ಮತ್ತು ಟೀಕೆ, ನ್ಯೂನತೆಗಳನ್ನು ರಚನಾತ್ಮಕವಾಗಿ ಸ್ವೀಕರಿಸಿ, ಸುಧಾರಣೆಗಳನ್ನು ಕಂಡುಕೊಳ್ಳಬೇಕು.

ಅಲ್ಲದೆ, ವಿಪಕ್ಷಗಳು ಎಂದರೆ ಸರ್ಕಾರದ ಪ್ರತಿ ನಡೆಯನ್ನೂ ವಿರೋಧಿಸಬೇಕು ಎಂದಲ್ಲ. ಸರ್ಕಾರ ಎಡವಿದಾಗ, ಕರ್ತವ್ಯ ನಿರ್ವಹಣೆಯಲ್ಲಿ ಲೋಪವಾದಾಗ ಎಚ್ಚರಿಸುವ ಕೆಲಸ ಮಾಡಬೇಕೇ ಹೊರತು ಘೋಷಣೆ, ಗದ್ದಲ, ಸಭಾತ್ಯಾಗವಲ್ಲ. ಆ ನಡವಳಿಕೆಯಿಂದ ಯಾವುದೇ ಪ್ರಯೋಜನವಿಲ್ಲ.

ಈ ಬಾರಿಯಾದರೂ ಅಧಿವೇಶನ ಜನರ ನಿಜ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಲಿ. ಕನ್ನಡಿಗರ ತೆರಿಗೆ ಹಣ ಪೋಲಾಗದಂತೆ, ಅಧಿವೇಶನವನ್ನು ಹೆಚ್ಚು ಫಲಪ್ರದಗೊಳಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಲಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X