ಇಸ್ರೇಲ್-ಹಮಾಸ್ ನಡುವೆ ಯುದ್ಧ ಆರಂಭವಾಗಿ 9 ತಿಂಗಳುಗಳಾಗಿವೆ. ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಈವರೆಗೆ ಗಾಜಾದ 5% ಜನರು ಅಂದರೆ, 37,396 ಮಂದಿ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ. ಸಾವಿರಾರು ಜನರು ಅಂಗವಿಕಲರಾಗಿದ್ದಾರೆ. ಗಾಯಗೊಂಡಿದ್ದಾರೆ. ಇಡೀ ಜಗತ್ತು ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಶಾಂತಿ ನೆಲೆಸಬೇಕೆಂದು ಆಶಿಸುತ್ತಿದೆ. ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸುತ್ತಿದೆ. ಆದರೆ, ದುರದೃಷ್ಟವೂ, ದುರಂತವು ಎಂಬಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಇಸ್ರೇಲ್‌ಗೆ ಬೆಂಬಲ ಸೂಚಿಸಿದೆ.
ಇದೀಗ ಹಮಾಸ್ ಹೋರಾಟಗಾರರ ಮೇಲೆ ದಾಳಿ ನಡೆಸಲು ಮುಂದಾಗಿರುವ ಇಸ್ರೇಲ್, ಪ್ಯಾಲೆಸ್ತೀನಿಯರಿಗೆ ಗಾಜಾ ತೊರೆಯುವಂತೆ ಬೆದರಿಕೆಯೊಡ್ಡಿದೆ. ಆ ಮೂಲಕ ಪ್ಯಾಲೆಸ್ತೀನಿಯರನ್ನು ಗಾಜಾದಿಂದ ಖಾಲಿ ಮಾಡಿಸಿ, ಅದನ್ನೂ ಆಕ್ರಮಿಸಿಕೊಳ್ಳುವ ತಂತ್ರವನ್ನ ಯಹೂದಿಗಳ ರಾಷ್ಟ್ರ ಇಸ್ರೇಲ್ ಹೆಣೆದಿದೆ.
ಇಡೀ ಜಗತ್ತಿಗೆ ಗೊತ್ತಿರುವ ಸತ್ಯ ಏನೆಂದರೆ, ಇಸ್ರೇಲ್ ಹುಟ್ಟಿದ್ದು ಪ್ಯಾಲೆಸ್ತೀನಿಯರಿಂದ ಪ್ಯಾಲೆಸ್ತೀನ್‌ನ ಬಹುಭಾಗವನ್ನು ಯಹೂದಿಗಳು ಕಸಿದುಕೊಳ್ಳುವ ಮೂಲಕ. ಸಾವಿರಾರು ವರ್ಷಗಳ ಹಿಂದೆ ಪ್ಯಾಲೆಸ್ತೀನ್‌ನಲ್ಲಿ ಯಹೂದಿಗಳಿದ್ದರು ಎಂಬ ವಾದವನ್ನು ಮುಂದಿಟ್ಟು, ಪ್ಯಾಲೆಸ್ತೀನ್ ಅನ್ನು ಯಹೂದಿಗಳು ಆಕ್ರಮಿಸಿಕೊಳ್ಳಲಾರಂಭಿಸಿದರು. ಪ್ಯಾಲೆಸ್ತೀನ್ ಅನ್ನು ಹೊರಗಟ್ಟಿ, ಪ್ಯಾಲೆಸ್ತೀನ್‌ನ ಒಂದು ಮೂಲೆಗೆ ದೂಡಲಾರಂಭಿಸಿದರು.
1819ರಲ್ಲಿ ಇಡೀ ಇಸ್ರೇಲ್ ಒಳಗೊಂಡ ಅವಿಭಜಿತ ಪ್ಯಾಲೆಸ್ತೀನ್‌ನಲ್ಲಿ 95% ಪ್ಯಾಲೆಸ್ತೀನಿಯರು ಅಂದರೆ, ಮುಸ್ಲಿಮರಿದ್ದರು. ಕೇವಲ 5% ಮಾತ್ರವೇ ಯಹೂದಿಗಳಿದ್ದರು. ಕಾಲಕ್ರಮೇಣ ಪ್ಯಾಲೆಸ್ತೀನ್ ಅನ್ನು ಆಕ್ರಮಿಸಿಕೊಳ್ಳಲು ಯಹೂದಿಗಳನ್ನು ಜಗತ್ತಿನ ಎಲ್ಲ ಭಾಗಗಳಿಂದ ಕಳಿಸಲಾರಂಭಿಸಿದರು. ಇದೇ ವೇಳೆ, ಜರ್ಮನಿಯಲ್ಲಿ ಹಿಟ್ಲರ್ ಯಹೂದಿಗಳ ಮೇಲೆ ದೌರ್ಜನ್ಯ ನಡೆಸಲಾರಂಭಿಸಿದಾಗ, ಜರ್ಮನಿಯ ಯಹೂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಲೆಸ್ತೀನ್‌ಗೆ ಬಂದರು. 1940ರ ದಶಕದ ವೇಳೆ ಪ್ಯಾಲೆಸ್ತೀನ್‌ನಲ್ಲಿ ಯಹೂದಿಗಳ ಸಂಖ್ಯೆ 40%ಗೂ ಹೆಚ್ಚಾಯಿತು.
ಈ ನಡುವೆ, 1890ರ ದಶಕದಲ್ಲಿ ಯಹೂದಿಗಳ ಜಿಯೋನಿಸ್ಟ್ ಚಳುವಳಿಯೂ ಆರಂಭವಾಯಿತು. ಇದು, ಯಹೂದಿಗಳಿಗೆ ಪ್ರತ್ಯೇಕ ದೇಶ ಬೇಕೆಂಬ ವಾದವನ್ನು ಮುಂದಿಟ್ಟಿತು. ಇದನ್ನು, ಯಹೂದಿ ಧರ್ಮ ಸುಧಾರಕರೇ ಒಪ್ಪಲಿಲ್ಲ. ಅದಾಗ್ಯೂ, ಯಹೂದಿಗಳ ಕುಲೀನ್ ಮನೆತನದ ಥಿಯೋಡರ್ ಹರ್ಜೆಲ್ ಎಂಬಾತ ತನ್ನ ‘ದೇರ್ ಜುಡೆನಸ್ಟಾಟ್’ ಪುಸ್ತಕದಲ್ಲಿ ಯಹೂದಿಗಳ ರಾಜ್ಯ ಎಂಬ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದರು.
ಮಾತ್ರವಲ್ಲದೆ, ಇಂಗ್ಲೆಂಡ್‌ನ ಬೆಂಬಲವನ್ನೂ ಹೊಂದಿದ್ದ ಯಹೂದಿಗಳು ತಮ್ಮದೇ ಸೈನ್ಯಗಳನ್ನು ಕಟ್ಟಿಕೊಂಡು ಪ್ಯಾಲೆಸ್ತೀನಿಯರ ಹಳ್ಳಿಗಳ ಮೇಲೆ ದಾಳಿ ಮಾಡಿ, ಪ್ಯಾಲೆಸ್ತೀನ್ ಮುಸ್ಲಿಮರನ್ನು ಓಡಿಸಿ, ಆಕ್ರಮಿಸಿಕೊಳ್ಳಲಾರಂಭಿಸಿದರು. ಅದೇ ಸಮಯದಲ್ಲಿ ಭಾರತದಂತೆಯೇ ಪ್ಯಾಲೆಸ್ತೀನ್‌ನಲ್ಲಿಯೂ ಆಡಳಿತ ನಡೆಸುತ್ತಿದ್ದ ಬ್ರಿಟಿಷರು, 1918ರಲ್ಲಿ ಯಹೂದಿಗಳಿಗೆ ಪ್ರತ್ಯೇಕ ರಾಷ್ಟ್ರ ಕಟ್ಟಿಕೊಡುತ್ತೇವೆಂದು ಘೋಷಿಸಿದರು.
ಇದು, ಯಹೂದಿಗಳ ಆಕ್ರಮಣಕ್ಕೆ ಮತ್ತಷ್ಟು ಪುಷ್ಟಿ ನೀಡಿತು. ಪ್ಯಾಲೆಸ್ತೀನಿಯರ ಮೇಲೆ ದಾಳಿಗಳು ಹೆಚ್ಚಾದವು. ದಾಳಿಗಳಿಂದ ಕಂಗೆಟ್ಟ ಪ್ಯಾಲೆಸ್ತೀನಿಯರು ತಮ್ಮ ರಕ್ಷಣೆಗಾಗಿ ಹೋರಾಟ, ಶಾಂತಿ ಸಭೆ, ಪ್ರತಿ ದಾಳಿಗಳನ್ನು ನಡೆಸಿದರು. ಭಾರೀ ಹೋರಾಟಗಳನ್ನು ನಡೆಸಿದರು. ಅದಾಗ್ಯೂ, ವಿಶ್ವಸಂಸ್ಥೆ ಪ್ಯಾಲೆಸ್ತೀನ್ ಅನ್ನು ವಿಭಜಿಸಿತು. ಇಸ್ರೇಲ್ ರಾಷ್ಟ್ರವನ್ನು ಹುಟ್ಟುಹಾಕಿತು. 55% ಪ್ಯಾಲೆಸ್ತೀನ್ ಮತ್ತು 45% ಇಸ್ರೇಲ್ ಎಂದು ವಿಭಜಿಸಲಾಯಿತು. ಆದರೆ, ಇದಕ್ಕೂ ಒಪ್ಪದ ಯಹೂದಿಗಳು ನಿರಂತರವಾಗಿ ದಾಳಿ ನಡೆಸುತ್ತಾ, ಪ್ಯಾಲೆಸ್ತೀನ್‌ನ ಬಹುಪಾಲು ಭೂಪ್ರವೇಶವನ್ನು ವಶಪಡಿಸಿಕೊಂಡಿದೆ.
1948ರಲ್ಲಿ ನಡೆದ ಅರಬ್ – ಇಸ್ರೇಲ್ ಯುದ್ಧದ ಪರಿಣಾಮವಾಗಿ ಪ್ಯಾಲೆಸ್ತೀನ್‌ನ 70%ರಷ್ಟು ಭೂಭಾಗವನ್ನು ಇಸ್ರೇಲ್ ಆಕ್ರಮಿಸಿಕೊಂಡಿದೆ. ಈಗ, ಪ್ಯಾಲೆಸ್ತೀನಿಯರು ಕೇವಲ ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪ್ರದೇಶಗಳಲ್ಲಿ ಮಾತ್ರವೇ ನೆಲೆಸಿದ್ದಾರೆ. ಹಲವಾರು ಪ್ಯಾಲೆಸ್ತೀನಿಯರು ಅರಬ್ ರಾಷ್ಟ್ರಗಳಲ್ಲಿ ನಿರಾಶ್ರಿತರಾಗಿ ನೆಲೆಸಿದ್ದಾರೆ.
ಪ್ಯಾಲೆಸ್ತೀನಿಯರು ತಮ್ಮದೇ ರಾಷ್ಟ್ರದಲ್ಲಿ ದೌರ್ಜನ್ಯ, ಹಲ್ಲೆಗಳಿಗೆ ಒಳಗಾಗಿ, ಪರಕೀಯರಂತೆ ಬದುಕುವಂತಾಗಿದೆ. ಇಸ್ತೇಲ್‌ನ ನಿರಂತರ ದಾಳಿಯಿಂದ ಕಂಗಟ್ಟಿದ್ದ ಪ್ಯಾಲೆಸ್ತೀನಿನ ಹಮಾಸ್ ಹೋರಾಟಗಾರರು ಕಳೆದ ವರ್ಷ ಇಸ್ರೇಲ್ ವಿರುದ್ಧ ಪ್ರತಿದಾಳಿ ನಡೆಸಿದರು. ಆದರೆ, ಸಂತ್ರಸ್ತ ಪ್ಯಾಲೆಸ್ತೀನಿಯರನ್ನೇ ವಿಲನ್‌ಗಳನ್ನಾಗಿ ಬಿಂಬಿಸಿ, ಇಸ್ರೇಲ್‌ಅನ್ನು ಸಂತ್ರಸ್ತ ರಾಷ್ಟ್ರವೆಂಬ ವಾದವನ್ನು ಎಲ್ಲೆಡೆ ಹರಡಿತು. ನಮ್ಮ ಭಾರತದ ಪ್ರಧಾನಿ ಮೋದಿ ಅವರೂ ಇಸ್ರೇಲ್‌ಗೆ ಬೆಂಬಲ ಘೋಷಿಸಿದರು. ಆದರೆ, ಇಸ್ರೆಲ್ ನಿರಂತರವಾಗಿ ಗಾಜಾದಲ್ಲಿ ನೆಲೆಸಿರುವ ಪ್ಯಾಲೆಸ್ತೀನಿಯರ ಮೇಲೆ ದಾಳಿ ನಡೆಸುತ್ತಲೇ ಇದೆ. ಗಾಜಾದ ಆಸ್ಪತ್ರೆಗಳು, ವಸತಿ ಪ್ರದೇಶಗಳು, ಶಾಲೆಗಳ ಮೇಲೆ ರಾಕೆಟ್ ಬಾಂಬ್ ದಾಳಿ ನಡೆಸಿದೆ. 37,396 ಪ್ಯಾಲೆಸ್ತೀನಿಯರನ್ನು ಕೊಂದಿದೆ. ಹಲವರನ್ನು ಗಾಜಾದಿಂದ ಓಡಿಸಿದೆ.
ಪ್ಯಾಲೆಸ್ತೀನ್ ಮೇಲಿನ ಇಸ್ತೇಲ್‌ನ ನಿರಂತರ ದಾಳಿಯನ್ನು ಜಗತ್ತಿನ ಹಲವಾರು ದೇಶಗಳು ಖಂಡಿಸಿವೆ. ಪ್ಯಾಲೆಸ್ತೀನ್ ಪರವಾಗಿ ನಿಂತಿವೆ. ಕಳೆದ ವರ್ಷ ನವೆಂಬರ್ 29ರಂದು ವಿಶ್ವಸಂಸ್ಥೆಯು ಪ್ಯಾಲೆಸ್ತೀನ್ ಜನರೊಂದಿಗೆ ಎಲ್ಲ ದೇಶಗಳಿವೆ ಎಂದು ‘ಐಕಮತ್ಯದ ಅಂತಾರಾಷ್ಟ್ರೀಯ ದಿನ’ವನ್ನು ಘೋಷಿಸಿದೆ. ಅದಾಗ್ಯೂ, ಮೋದಿ ಸರ್ಕಾರ ಇಸ್ರೇಲ್ ಪರವಾದ ತನ್ನ ನಿಲುವನ್ನು ಬದಲಿಸಲಿಲ್ಲ. ಅಲ್ಲದೆ, ಪ್ಯಾಲೆಸ್ತೀನ್ ಮೇಲೆ ಇಸ್ರೇಲ್‌ನ ಧೋರಣೆಗಳನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯಗಳಿಗೆ ಭಾರತೀಯರು ಗೈರಾಗುವ ಮೂಲಕ, ತಮ್ಮ ಅಸಮ್ಮತಿಯನ್ನು ಸೂಚಿಸಿದರು. ಮಾತ್ರವಲ್ಲದೆ, ಪ್ಯಾಲೆಸ್ತೀನ್ ಮೇಲೆ ಇಸ್ರೇಲ್‌ನ ದಾಳಿ, ದೌರ್ಜನ್ಯ, ಕೃತ್ಯಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲು ದೇಶದ ಜನರಿಗೆ ಅವಕಾಶವನ್ನೂ ನೀಡಲಿಲ್ಲ.
ಅಂದಹಾಗೆ, ಪ್ಯಾಲೆಸ್ತೀನ್-ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಭಾರತವು ಹಿಂದಿನಿಂದಲೂ ಪ್ಯಾಲೆಸ್ತೀನ್ ಪರವಾಗಿ ನಿಂತಿದೆ. ಸೌಹಾರ್ದತೆ, ಪ್ರಜಾಸತ್ತಾತ್ಮಕತೆ, ಸಾರ್ವಭೌಮತೆಯನ್ನು ಒತ್ತಿ ಹೇಳಿದೆ. ಪ್ಯಾಲೆಸ್ತೀನ್ ಸ್ವತಂತ್ರ್ಯ ರಾಷ್ಟ್ರವಾಗಿ ಬದುಕಲು ಬಿಡಬೇಕೆಂದು ಭಾರತ ಒತ್ತಿ ಹೇಳುತ್ತಲೇ ಬಂದಿದೆ. 1940ರ ದಶಕದಲ್ಲಿ ಧರ್ಮದ ಆಧಾರದ ಮೇಲೆ ಎರಡು ರಾಷ್ಟ್ರಗಳ ಕಲ್ಪನೆಯನ್ನು ತಿರಸ್ಕರಿಸಿದ್ದ ಪ್ಯಾಲೆಸ್ತೀನ್ ನಿಲುವನ್ನು ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿ ಬೆಂಬಲಿಸಿದ್ದರು. 1975ರಲ್ಲಿ, ಭಾರತವು ಪ್ಯಾಲೆಸ್ತೀನ್ ಜೊತೆಗೆ ನಿಕಟ ಸ್ನೇಹ ಸಂಬಂಧವನ್ನು ವಿಸ್ತರಿಸಿತು. ದೆಹಲಿಯಲ್ಲಿ ರಾಜತಾಂತ್ರಿಕ ಕಚೇರಿ ತೆರೆಯಲು ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (PLO)ಗೆ ಅವಕಾಶ ನೀಡಿತು. ಪ್ಯಾಲೆಸ್ತೀನ್ ಜೊತೆಗಿನ ಬಾಂಧವ್ಯವು ಗಟ್ಟಿಗೊಂಡಿತ್ತು.
ಇದೆಲ್ಲದರ ನಡುವೆಯೂ, 1992ರಲ್ಲಿ ಭಾರತವು ಇಸ್ರೇಲ್ ಜೊತೆ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿತು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತಕ್ಕೆ ಇಸ್ರೇಲ್ ಶಸ್ತ್ರಾಸ್ತ್ರಗಳನ್ನು ರವಾನಿಸಿತು. 2000ರಲ್ಲಿ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದ ಎಲ್.ಕೆ ಅಡ್ವಾಣಿ ಇಸ್ರೇಲ್‌ಗೆ ಭೇಟಿ ನೀಡಿದರು. ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಮಂತ್ರಿ ಅಡ್ವಾಣಿ ಆಗಿದ್ದರು. 2003ರಲ್ಲಿ ಅದೇ ವಾಜಪೇಯಿ ಆಡಳಿತದಲ್ಲಿ ಮೊದಲ ಬಾರಿಗೆ ಇಸ್ರೇಲ್‌ನ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದರು.
ಅಂದಿನಿಂದ, ಇಸ್ರೇಲ್‌ನಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿರುವ ರಾಷ್ಟ್ರಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಅದಾಗ್ಯೂ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿಚಾರ ಬಂದಾಗ, ಭಾರತವು ಪ್ಯಾಲೆಸ್ತೀನ್ ಜೊತೆಗೆ ತನ್ನ ಸಾರ್ವಭೌಮತೆಯನ್ನು ಗುರುತಿಸಿದೆ. ಆದರೆ, ಮೋದಿ ಸರ್ಕಾರ ಇಸ್ರೇಲ್ ಪರವಾದ ನಿಲುವನ್ನೇ ಹೊಂದಿದೆ. ಗಮನಿಸಬೇಕಾದ ವಿಚಾರವೆಂದರೆ, ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಪ್ರಧಾನಿ ಕೂಡ ಮೋದಿಯವರೇ.
ಈ ಸುದ್ದಿ ಓದಿದ್ದೀರಾ? ಅಯೋಧ್ಯೆ ಬಳಿಕ ಬದ್ರಿನಾಥದಲ್ಲೂ ಬಿಜೆಪಿ ಸೋಲು
ಮೋದಿ ಸರ್ಕಾರವು ಇಸ್ರೇಲ್‌ನಿಂದ ಪೆಗಾಸಸ್ ಅನ್ನು ಖರೀದಿಸಿ, ತಮ್ಮ ವಿರೋಧಿಗಳ ವಿರುದ್ಧ ಅದನ್ನು ಬಳಕೆ ಮಾಡಿತ್ತು ಎಂಬ ಆರೋಪಗಳಿವೆ. ಇತ್ತೀಚೆಗೆ ಮೋದಿ ಸರ್ಕಾರ ಪೆಗಾಸಸ್ ದಾಳಿ ನಡೆಸಿದ ದೊಡ್ಡ ಪಟ್ಟಿಯೇ ಹೊರಬಂದಿತ್ತು. ಮೋದಿ ಸರ್ಕಾರವು ತನ್ನ ರಾಜಕೀಯ ಲಾಭಕ್ಕಾಗಿ ಪ್ಯಾಲೆಸ್ತೀನ್ ವಿರುದ್ಧ ಇಸ್ರೇಲ್‌ಗೆ ಬೆಂಬಲ ಘೋಷಿಸಿದೆ ಎಂಬ ಆರೋಪ, ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಮೋದಿ ಸರ್ಕಾರದ ಅವಧಿಯಲ್ಲಿ ಭಾರತವು ಮಾನವೀಯತೆಯನ್ನು ಕೆಳೆದುಕೊಂಡಿದೆ. ಭಾರತದ ಹೃದಯ ಕಲ್ಲಾಗಿದೆ ಎಂಬಂತೆ ಜಗತ್ತಿನೆದುರು ಭಾರತ ಕಾಣಿಸಿಕೊಳ್ಳುತ್ತಿದೆ. ಭಾರತೀಯರು ತಮ್ಮ ಮಾನವೀಯತೆಯನ್ನು ಜಗತ್ತಿಗೆ ಮತ್ತೊಮ್ಮೆ ಸಾರಬೇಕಿದೆ. ಪ್ಯಾಲೆಸ್ತೀನ್ ಪರವಾಗಿ ಭಾರತದ ಸರ್ಕಾರ ಇಲ್ಲದಿದ್ದರೂ, ಭಾರತದ ಪ್ರಜೆಗಳಿದ್ದಾರೆ ಎಂಬ ಸಂದೇಶವನ್ನು ರವಾನಿಸಬೇಕಿದೆ. ಭಾರತೀಯರು ಪ್ಯಾಲೆಸ್ತೀನ್‌ಗಾಗಿ ಮಿಡಿಯಬೇಕಿದೆ. ಪ್ರತಿಭಟನೆ ನಡೆಸಬೇಕಿದೆ. ಶಾಂತಿಗಾಗಿ ಪ್ರಾರ್ಥಿಸಬೇಕಿದೆ.