‘ಹುತಾತ್ಮರ ದಿನಾಚರಣೆ’ ಆಚರಿಸಲು ಶ್ರೀನಗರದ ಡೌನ್‌ಟೌನ್‌ಲ್ಲಿರುವ ಹುತಾತ್ಮರ ಸ್ಮಶಾಕಕ್ಕೆ ತೆರಳಲು ನಮಗೆ ಅವಕಾಶ ನೀಡಲಾಗಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ತಮ್ಮನ್ನು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಡಳಿತವು ಶನಿವಾರ ಗೃಹಬಂಧನದಲ್ಲಿಟ್ಟಿದೆ ಎಂದು ದೂರಿದ್ದಾರೆ.
1931ರಲ್ಲಿ ಜುಲೈ 13ರಂದು ಡೋಗ್ರಾ ಪಡೆಗಳ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದವರ ಸ್ಮರಣಾರ್ಥ ‘ಹುತಾತ್ಮ ದಿನಾಚರಣೆ’ ಆಚರಿಸಲು ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಸೇರಿದಂತೆ ಹಲವಾರು ರಾಜಕೀಯ ನಾಯಕರು ಡೌನ್‌ಟೌನ್ ಸ್ಮಶಾನಕ್ಕೆ ಹೊರಟ್ಟಿದ್ದರು. ಆದರೆ, ತಮ್ಮನ್ನು ತಡೆದ ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಮನೆಯ ಗೇಟ್‌ಗಳಿಗೆ ಬೀಗ ಹಾಕಿರುವುದನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಪಿಡಿಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, “ಮಝರ್-ಎ-ಶುಹಾದಾಗೆ ಭೇಟಿ ನೀಡುವುದನ್ನು ತಡೆಯಲು ನನ್ನ ಮನೆಯ ಗೇಟ್‌ಗಳನ್ನು ಮತ್ತೊಮ್ಮೆ ಲಾಕ್ ಮಾಡಲಾಗಿದೆ. ಇದು ನಿರಂಕುಶವಾದ, ದಬ್ಬಾಳಿಕೆಯಾಗಿದೆ. ಅನ್ಯಾಯದ ವಿರುದ್ಧ ಕಾಶ್ಮೀರದ ಪ್ರತಿರೋಧವನ್ನು ನಿರಂತರವಾಗಿ ಹತ್ತಿಕ್ಕಲಾಗುತ್ತಿದೆ. ಆದರೆ, ಕಾಶ್ಮೀರಿಗಳ ಆತ್ಮವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದಕ್ಕೆ ನಮ್ಮ ಹುತಾತ್ಮರ ತ್ಯಾಗವೇ ಸಾಕ್ಷಿ. ಈ ದಿನ ‘ಹುತಾತ್ಮರ ದಿನ’ ಆಚರಿಸುವುದನ್ನು ಅಪರಾಧೀಕರಿಸಲಾಗಿದೆ” ಎಂದು ಆರೋಪಿಸಿದ್ದಾರೆ.
“2019ರ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರವನ್ನು ಛಿದ್ರಗೊಳಿಸಲಾಯಿತು. ಅಸಮರ್ಥಗೊಳಿಸಲಾಯಿತು. ನಮಗೆ ಅಗತ್ಯವಾಗಿದ್ದ ಎಲ್ಲವನ್ನೂ ಕಿತ್ತುಕೊಳ್ಳಲಾಯಿತು. ಅವರು (ಕೇಂದ್ರ ಸರ್ಕಾರ) ನಮ್ಮ ಪ್ರತಿಯೊಂದು ಸಾಮಾಜಿಕ ನೆನಪುಗಳನ್ನು ಅಳಿಸಿ ಹಾಕಲು ಉದ್ದೇಶಿಸಿದ್ದಾರೆ. ಆದರೆ, ಇಂತಹ ದಾಳಿಗಳು ನಮ್ಮ ಹಕ್ಕುಗಳು ಮತ್ತು ಘನತೆಗಾಗಿ ಹೋರಾಟವನ್ನು ಮುಂದುವರೆಸುವ ನಮ್ಮ ದೃಢತೆಯನ್ನು ಮತ್ತಷ್ಟು ಬಲಪಡಿಸುತ್ತವೆ” ಎಂದು ಅವರು ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ತಮ್ಮನ್ನು ಗೃಹಬಂಧನದಲ್ಲಿ ಇಡಲಾಗಿದೆ ಎಂದು ಆರೋಪಿಸಿದ್ದಾರೆ. ‘ಎಕ್ಸ್’ನಲ್ಲಿ ಟ್ವೀಟ್ ಮಾಡಿರುವ ಅವರು, “ಜುಲೈ 13, ಹುತಾತ್ಮರ ದಿನ ಆಚರಿಸುತ್ತಿದ್ದೇವೆ. ಅದರೆ, ನಮ್ಮ ಮನೆಯ ಗೇಟ್‌ಗಳಿಗೆ ಮತ್ತೊಂದು ಸುತ್ತಿನ ಬೀಗ ಹಾಕಲಾಗಿದೆ. ನ್ಯಾಯಯುತ ಮತ್ತು ಪ್ರಜಾಪ್ರಭುತ್ವ ಸ್ಥಾಪನೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸುವುದನ್ನು ಪೊಲೀಸರು ತಡೆದಿದ್ದಾರೆ” ಎಂದು ಆರೋಪಿಸಿದ್ದಾರೆ.
“ದೇಶದ ಬೇರೆಡೆಗಳಲ್ಲಿ ಹುತಾತ್ಮರನ್ನು ಸ್ಮರಿಸಲಾಗುತ್ತದೆ. ಅದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಗೌವರ್ನರ್ ಆಡಳಿತವು ಹುತಾತ್ಮರ ತ್ಯಾಗಗಳನ್ನು ನಿರ್ಲಕ್ಷಿಸಲು ಬಯಸುತ್ತದೆ. ಇಂತಹ ಧೋರಣೆಗಳನ್ನು ಮಾಡುವ ಅವರ ಪ್ರಯತ್ನಗಳಿಗೆ ಇದು ಕಡೆಯ ವರ್ಷವಾಗಿದೆ. ಮುಂದಿನ ವರ್ಷ ನಾವು ಜುಲೈ 13ಅನ್ನು ಉತ್ತಮ ಗೌರವದೊಂದಿಗೆ ಆಚರಿಸುತ್ತೇವೆ” ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರ ಅಪ್ನಿ ಪಕ್ಷದ ನಾಯಕ ಅಲ್ತಾಫ್ ಬುಖಾರಿ, “ಶ್ರೀನಗರದ ಅಪ್‌ಟೌನ್‌ನಲ್ಲಿರುವ ತಮ್ಮ ನಿವಾಸದಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ‘ಹುತಾತ್ಮರ ಸ್ಮಶಾನ’ದೆಡೆಗೆ ಹೊರಟ್ಟಿದ್ದೆವು. ಆದರೆ, ಶ್ರೀನಗರದ ಡೌನ್‌ಟೌನ್‌ನ ನೌಹಟ್ಟಾದಲ್ಲಿನ ನಕಾಶಬಂದ್ ಸಾಹಿಬ್ ಪ್ರದೇಶದಲ್ಲಿ ಪೊಲೀಸರು ತಮ್ಮನ್ನು ತಡೆದಿದ್ದಾರೆ” ಎಂದು ಆರೋಪಿಸಿದ್ದಾರೆ.
ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಮಾಜಿ ಸಚಿವ ಸಜಾದ್ ಗನಿ ಲೋನ್ ಅವರೂ ಕೂಡ ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ. “ಯಾವ ಕಾರಣಕ್ಕಾಗಿ ಗೃಹಬಂಧನದಲ್ಲಿ ಇಟ್ಟಿದ್ದಾರೆ ಎಂಬ ಬಗ್ಗೆ ತಿಳಿಸಿಲ್ಲ. ಜನರು ಹುತಾತ್ಮರ ಸ್ಮಶಾನಕ್ಕೆ ಹೋಗುವುದನ್ನು ತಡೆದು ಆಡಳಿತವು ಏನು ಪಡೆಯುತ್ತದೆ ಎಂಬುದನ್ನು ಅರಿಯಲು ನನ್ನಿಂದ ಸಾಧ್ಯವಾಗುತ್ತಿಲ್ಲ” ಎಂದು ಸಜಾದಿ ಲೋನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ ಆರ್ಟಿಕಲ್ 370 ರದ್ದಾಗುವ ಮೊದಲು, ಪ್ರತಿ ವರ್ಷ ಜುಲೈ 13ಅನ್ನು ‘ಹುತಾತ್ಮರ ದಿನ’ವನ್ನಾಗಿ ಅಲ್ಲಿನ ಜನರು ಆಚರಿಸುತ್ತಿದ್ದರು. 1931ರ ಜುಲೈ 13ರಂದು ಜಮ್ಮು ಕಾಶ್ಮೀರದ ಅಂದಿನ ಮಹಾರಾಜ ಹರಿ ಸಿಂಗ್ ನೇತೃತ್ವದ ಡೋಗ್ರಾ ಪಡೆಗಳು 22 ಕಾಶ್ಮೀರಿ ನಾಗರಿಕರನ್ನು ಕೊಂದದ್ದನ್ನು ಸ್ಮರಿಸಲು ‘ಹುತಾತ್ಮರ ದಿನ’ ಎಂದು ಆಚರಿಸಲಾಗುತ್ತಿತ್ತು.
ಪ್ರತಿ ವರ್ಷ, ಈ ದಿನದಂದು ಶ್ರೀನಗರದ ಹುತಾತ್ಮರ ಸ್ಮಶಾನದಲ್ಲಿ ಸರ್ಕಾರದ ಮುಖ್ಯಸ್ಥರಿಂದ ಸಾಂಪ್ರದಾಯಿಕ ಪುಷ್ಪಾರ್ಚನೆ ಸಮಾರಂಭ ನಡೆಸಲಾಗುತ್ತಿತ್ತು. ಬಿಜೆಪಿ ತನ್ನ ಮಿತ್ರಪಕ್ಷವಾಗಿದ್ದ ಪಿಡಿಪಿಯೊಂದಿಗೆ ಅಧಿಕಾರದಲ್ಲಿದ್ದಾಗಲೂ ಈ ಪುಷ್ಪಾರ್ಚನೆ ಸಮಾರಂಭ ನಡೆದಿತ್ತು.
ಆದರೆ, 2019ರಲ್ಲಿ ಆರ್ಟಿಕಲ್ 370ಯನ್ನು ರದ್ದುಗೊಳಿಸಿದ ಬಳಿಕ, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಜನರ ಮೇಲೆ ನಿರಂತರ ನಿರ್ಬಂಧಗಳನ್ನು ಹೇರುತ್ತಲೇ ಇದೆ. ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಸ್ಥಳೀಯ ನಾಯಕರು ಆರೋಪಿಸಿದ್ದಾರೆ.