ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಕುಸ್ತಿ ಫೆಡರೇಷನ್ (ಡಬ್ಲ್ಯೂಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಇತರ ಕೋಚ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿ ಪಟುಗಳಿಗೆ ಭಾರತೀಯ ಕಿಸಾನ್ ಯೂನಿಯನ್ ತನ್ನ ಬೆಂಬಲ ಘೋಷಿಸಿದೆ.
ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಮಾತನಾಡಿರುವ ರೈತ ನಾಯಕ ರಾಕೇಶ್ ಟಿಕಾಯತ್, “ನಮ್ಮ ಭಾರತೀಯ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಮಹಿಳಾ ಕುಸ್ತಿಪಟುಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು 3 ತಿಂಗಳ ಹಿಂದೆಯೇ ಆರೋಪಿಸಿದ್ದರು. ಈ ವಿಚಾರವನ್ನು ತನಿಖೆ ನಡೆಸಲು ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿತ್ತು. ಆದರೆ, ಆ ಸಮಿತಿ ಈವರೆಗೆ ಯಾವುದೇ ವರದಿ ನೀಡಿಲ್ಲ. ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ. ಹೀಗಾಗಿ ಕುಸ್ತಿಪಟುಗಳು ಮತ್ತೆ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ಕೂಡ ಪ್ರತಿಭಟನಾ ನಿರತರಿಗೆ ಬೆಂಬಲ ಸೂಚಿಸುತ್ತಿದೆ. ಏಪ್ರಿಲ್ 27ರಂದು ಸಂಘಟನೆಯ ಅಧ್ಯಕ್ಷರಾದ ನರೇಶ್ ಟಿಕಾಯಟ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ದೌರ್ಜನ್ಯಕ್ಕೊಳಗಾದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕೇಂದ್ರಕ್ಕೆ ಸರ್ಕಾರಕ್ಕೆ ಈ ಹಿಂದೆಯೂ ಪತ್ರ ಬರೆದಿದ್ದೆವು. ಈಗ ಮತ್ತೊಮ್ಮೆ ಪತ್ರ ಬರೆಯುತ್ತೇವೆ. ಕ್ರೀಡಾಳುಗಳಿಗೆ ನ್ಯಾಯ ದೊರೆಯುವ ವರೆಗೂ ಅವರ ಜೊತೆಗಿರುತ್ತೇವೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ 7 ಮಂದಿ ಮಹಿಳಾ ಕ್ರೀಡಾಪಟುಗಳು ಬ್ರಿಜ್ ಭೂಷಣ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ದೂರುದಾರರಲ್ಲಿ 16ನೇ ವಯಸ್ಸಿನ ಅಪ್ರಾಪ್ತ ಕುಸ್ತಿ ಪಟು ಕೂಡ ಇದ್ದಾರೆ. ಈ ಹಿನ್ನೆಲೆ ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆಯೂ ಆಗ್ರಹಗಳು ಕೇಳಿಬಂದಿವೆ. ಭಾರತದ ಜನಪ್ರಿಯ ಕುಸ್ತಿ ಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಹಲವು ಕುಸ್ತಿಪಟುಗಳು ಕಳೆದ 4 ದಿನಗಳಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.