ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸತತ ಏಳನೇ ಕೇಂದ್ರ ಬಜೆಟ್ ಅನ್ನು ಜುಲೈ 23ರಂದು ಮಂಡಿಸಲಿದ್ದಾರೆ. ಇದು ಪೂರ್ಣ ಬಜೆಟ್ ಆಗಿರಲಿದೆ. ಹಿಂದಿನ ಸರ್ಕಾರದಲ್ಲಿಯೂ ಕೇಂದ್ರ ವಿತ್ತ ಸಚಿವೆಯಾಗಿದ್ದ ನಿರ್ಮಲಾ ಈ ವರ್ಷದ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ಅನ್ನು ಮಂಡಿಸಿದ್ದರು.
ಕೇಂದ್ರ ಹಣಕಾಸು ಸಚಿವಾಲಯವು ಈಗಾಗಲೇ ಬಜೆಟ್ ತಯಾರಿಯನ್ನು ಪ್ರಾರಂಭಿಸಿದೆ. ಸಭೆಗಳನ್ನು ನಡೆಸುತ್ತಿದೆ. ಆದರೆ, ಇವೆಲ್ಲವೂ ಕೂಡಾ ಅತೀ ರಹಸ್ಯವಾಗಿ ನಡೆಯುವಂತಹ ಪ್ರಕ್ರಿಯೆಗಳಾಗಿದೆ. ಸದ್ಯಕ್ಕೆ, ಆಯ್ದ ಕೆಲವು ಜನರಿಗೆ ಮಾತ್ರ ಈ ಬಜೆಟ್ ಸಂಬಂಧಿತ ಮಾಹಿತಿ ಇರುತ್ತದೆ.
ಆದರೆ, ಕೇಂದ್ರ ಬಜೆಟ್ ಮುದ್ರಣ ಪ್ರಕ್ರಿಯೆಯಲ್ಲಿ ಇಷ್ಟೊಂದು ರಹಸ್ಯ ಯಾಕೆ ಎಂದು ನಿಮಗನಿಸಬಹುದು. ಇದಕ್ಕೆ ಮುಖ್ಯ ಕಾರಣವೂ ಇದೆ. ಆ ಕಾರಣವೇ ಹಲವು ವರ್ಷಗಳ ಹಿಂದೆ ಕೇಂದ್ರ ಬಜೆಟ್ ಸೋರಿಕೆಯಾಗಿರುವುದಾಗಿದೆ.
ಸ್ವತಂತ್ರ ಭಾರತದ ಮೊದಲ ಬಜೆಟ್ (1947-1948) ಅನ್ನು ಕೇಂದ್ರ ಹಣಕಾಸು ಸಚಿವ ಸರ್ ಆರ್ ಕೆ ಷಣ್ಮುಖಂ ಚೆಟ್ಟಿ ಮಂಡಿಸಿದರು. ಅದನ್ನು ಪ್ರಸ್ತುತಪಡಿಸುವ ಮೊದಲು, ಯುಕೆ ಚಾನ್ಸೆಲರ್ ಆಫ್ ಎಕ್ಸೆಕರ್ ಹಗ್ ಡಾಲ್ಟನ್ ಅವರು ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ತೆರಿಗೆಗಳಲ್ಲಿನ ಬದಲಾವಣೆಗಳ ಬಗ್ಗೆ ಪತ್ರಕರ್ತರಿಗೆ ತಿಳಿಸಿದ್ದರು.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ 2024 | ಗ್ರಾಮೀಣ ಭಾರತ, ಉದ್ಯೋಗದ ಮೇಲೆ ಕೇಂದ್ರೀಕರಿಸುವ ಸಾಧ್ಯತೆ: ಗೋಲ್ಡ್‌ಮನ್ ಸ್ಯಾಕ್ಸ್
ಸಂಸತ್ತಿನಲ್ಲಿ ಬಜೆಟ್ ಮಂಡನೆಗೂ ಮುನ್ನ ಈ ಮಾಹಿತಿಯನ್ನು ಪ್ರಕಟಿಸಲಾಗಿತ್ತು. ಇದು ರಾಜಕೀಯವಾಗಿ ಕೋಲಾಹಲ ಸೃಷ್ಟಿಸಿತ್ತು. ಕೊನೆಗೆ, ಡಾಲ್ಟನ್ ರಾಜೀನಾಮೆ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ, ಬಜೆಟ್ ಸೋರಿಕೆಯಾಗಿರುವುದು ಅದೊಂದೇ ಬಾರಿ ಅಲ್ಲ. 1950ರಲ್ಲಿಯೂ ಕೇಂದ್ರ ಬಜೆಟ್‌ನ ಒಂದು ಭಾಗ ಸೋರಿಕೆಯಾಗಿತ್ತು. ಬಜೆಟ್ ಕಾಗದಗಳ ಮುದ್ರಣದ ಸಮಯದಲ್ಲಿ ಬಜೆಟ್‌ನ ಅಂಶಗಳು ಸೋರಿಕೆಯಾಗಿದ್ದವು. ಪರಿಣಾಮ, ಪ್ರತಿಭಟನೆಗಳು ಹೆಚ್ಚಾಗುತ್ತಿದ್ದಂತೆ ಆಗಿನ ಹಣಕಾಸು ಸಚಿವ ಜಾನ್ ಮಥಾಯ್ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.
ಆಗ ಬಜೆಟ್ ಕಾಗದಗಳ ಮುದ್ರಣವನ್ನು ರಾಷ್ಟ್ರಪತಿ ಭವನದಲ್ಲಿ ಮಾಡಲಾಗುತ್ತಿತ್ತು. ಬಜೆಟ್ ಸೋರಿಕೆಯಾದ ನಂತರ ಮುದ್ರಣ ಸ್ಥಳವನ್ನು ಮಿಂಟೋ ರಸ್ತೆಯಲ್ಲಿರುವ ಸರ್ಕಾರಿ ಮುದ್ರಣಾಲಯಕ್ಕೆ ಸ್ಥಳಾಂತರಿಸಲಾಯಿತು. ದೆಹಲಿಯ ನಾರ್ತ್ ಬ್ಲಾಕ್ ನೆಲಮಾಳಿಗೆಯಲ್ಲಿರುವ ಸೆಕ್ರೆಟರಿಯೇಟ್ ಕಟ್ಟಡವು 1980ರಿಂದ ಬಜೆಟ್ ಮುದ್ರಣಕ್ಕೆ ಶಾಶ್ವತ ಸ್ಥಳವಾಗಿದೆ.
347.5 ಕೋಟಿ ರೂಪಾಯಿ ಆದಾಯ ಮತ್ತು 337.88 ಕೋಟಿ ರೂಪಾಯಿ ವೆಚ್ಚವನ್ನು ಹೊಂದಿದ್ದ 1950ರ ಬಜೆಟ್ – ಆದಾಯ ಮತ್ತು ವೆಚ್ಚದ ನಡುವೆ ಆದಾಯ ಉಳಿತಾಯವಾಗಿದ್ದ (surplus) ಮೊದಲ ಬಜೆಟ್ ಆಗಿದೆ.