ಸಾರ್ವಜನಿಕ ಭಾಷಣಗಳಲ್ಲಿ ರೂಪಕಗಳನ್ನು ಬಳಸುವ ಕಲೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಮಾತಿನ ಚಕಮಕಿಯಲ್ಲಿ ನಾವು ಇದನ್ನು ನೋಡಿದ್ದೇವೆ.
ರೂಪಕಗಳು ಬಿಡಿಸಿಡುವ ಚಿತ್ರಣಗಳು ತಟಸ್ಥವಾಗಿರುವುದಿಲ್ಲ. ಅವು ಅಂತರ್ಗತ ಸಾಮಾಜಿಕ-ರಾಜಕೀಯ ಅರ್ಥಗಳನ್ನು ಮತ್ತು ಹಾನಿಯ ಸಂಭಾವ್ಯತೆಗಳನ್ನು ಹೇಳುತ್ತಿರುತ್ತವೆ. ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಲು ಮೋದಿಯವರು ‘ಬಾಲಕ ಬುದ್ಧಿ’ (ಚೈಲ್ಡ್ ಬುದ್ಧಿ) ಎಂಬ ಪದ ಬಳಸುವುದು ಇದಕ್ಕೊಂದು ಸ್ಪಷ್ಟ ಉದಾಹರಣೆ. ಇದು ಒಬ್ಬ ವ್ಯಕ್ತಿಯ (ರಾಹುಲ್) ಸಾಮರ್ಥ್ಯದ ಬಗ್ಗೆ ಶಾಶ್ವತವಾಗಿ ಒಂದು ಚಿತ್ರಣವನ್ನು ಕಟ್ಟಿಬಿಡುತ್ತದೆ. ಅದೇ ರೀತಿ, ರಾಜಕೀಯ ವಿಶ್ಲೇಷಕ ಆಶಿಸ್ ನಂದಿ ಹೇಳಿದಂತೆ ದಬ್ಬಾಳಿಕೆಯ ‘ಪ್ರೌಢಾವಸ್ಥೆ ಸಿದ್ಧಾಂತ’ವನ್ನು ಬಲವಾಗಿ ಹೇರುತ್ತದೆ.
ಲೋಕಸಭೆಯಲ್ಲಿ ಪ್ರಧಾನಿ ಮೋದಿಯ ಹೇಳಿಕೆಗಳನ್ನು ಅನುಸರಿಸಿ, ಬಹಳಷ್ಟು ಮಂದಿ ನಾನಾ ರೀತಿಯಲ್ಲಿ ಬರೆದಿದ್ದಾರೆ. ಆದರೆ, ಕೆಲವರು ಮಾತ್ರ ಅವರ ಭಾಷಣದಲ್ಲಿನ ಒಳಾರ್ಥಗಳನ್ನು ಕಂಡುಕೊಂಡಿದ್ದಾರೆ. ಹಿರಿಯ ಪತ್ರಕರ್ತ ರವೀಶ್ ಕುಮಾರ್ ಮತ್ತು ರೋಹಿತ್ ಕುಮಾರ್ ಅವರು ‘ಮಗು’ವನ್ನು ಒಂದು ವರ್ಗವಾಗಿ, ಕೀಳಾಗಿ ಮತ್ತು ರಾಕ್ಷಸೀಕರಿಸಿದ ಮೋದಿಯ ಧೋರಣೆಯನ್ನು ಎತ್ತಿ ತೋರಿಸಿದ್ದಾರೆ. ಆದಾಗ್ಯೂ, ನಮ್ಮ ಅಸಮಾನ ಸಮಾಜದಲ್ಲಿ ಇಂತಹ ರೂಪಕಗಳನ್ನು ಬಳಸುವಾಗ ಅಧಿಕಾರದ ಸ್ಥಾನಗಳನ್ನು ಹೊಂದಿರುವ ಯಾರೇ ಆದರೂ ಎಚ್ಚರಿಕೆಯಿಂದಿರಬೇಕು. ಅವರು ಬಳಸುವ ರೂಪಕಗಳಲ್ಲಿ ಮಕ್ಕಳು, ಅಂಗವಿಕಲರು, ವಿಲಕ್ಷಣ ಜನರು, ಅಲ್ಪಸಂಖ್ಯಾತರು ಅಥವಾ ಮಹಿಳೆಯರು ಸೇರಿದಂತೆ ಯಾರನ್ನು ಚಿತ್ರಿಸುತ್ತಿವೆ ಎಂಬುದರ ಅರಿವಿರಬೇಕು.
ನಂದಿಯವರು ‘ರಿಕನ್ಸ್‌ಟ್ರಕ್ಟಿಂಗ್ ಚೈಲ್ಡ್‌ಹುಡ್: ಎ ಕ್ರಿಟಿಕ್ ಆಫ್ ದಿ ಐಡಿಯಾಲಜಿ ಆಫ್ ಅಡಲ್ಟ್‌ಹುಲ್’ ಲೇಖನದಲ್ಲಿ ಹೇಳುವಂತೆ, ನಿರ್ದಿಷ್ಟ ಸಮಾಜಗಳು, ಜೀವನ ವಿಧಾನಗಳು ಮತ್ತು ರಾಜಕೀಯ ದೃಷ್ಟಿಕೋನಗಳನ್ನು ಅಂಚಿಗೆ ದೂಡಲು ಮತ್ತು ಅರೆಬುದ್ದಿಯವರೆಂದು ಮೂಲೆಗುಂಪು ಮಾಡಲು ‘ಚೈಲ್ಡ್’ ಎಂಬ ಪರಿಕಲ್ಪನೆಯನ್ನು ವಸಾಹತುಶಾಹಿ ಮತ್ತು ಅಭಿವೃದ್ಧಿವಾದದಂತಹ ಪ್ರಾಬಲ್ಯವಾದಿ ಸಿದ್ಧಾಂತಗಳು ತನ್ನ ಕಾರ್ಯತಂತ್ರವಾಗಿ ಬಳಸಿಕೊಂಡಿವೆ ಎಂದು ಇತಿಹಾಸವು ಬಹಿರಂಗಪಡಿಸುತ್ತದೆ. ಈ ಸಿದ್ಧಾಂತಗಳು ‘ಚೈಲ್ಡ್’ ಎಂದರೆ ಅಪೂರ್ಣ ಜೀವಿ ಎಂಬ ಕಲ್ಪನೆಯನ್ನು ಸಮಾಜದಲ್ಲಿ ಶಾಶ್ವತಗೊಳಿಸುತ್ತವೆ. ಪ್ರೌಢಾವಸ್ಥೆಯ ಉನ್ನತ ಸಂಸ್ಕೃತಿಗಳಿಂದ ಮೋಕ್ಷ ಮತ್ತು ಮಾರ್ಗದರ್ಶನದ ಅಗತ್ಯವಿದೆ ಎಂದು ಹೇಳುವ ಮೂಲಕ ಪ್ರಬಲವಾದ ವಯಸ್ಕ-ಕೇಂದ್ರಿತ ದೃಷ್ಟಿಕೋನವನ್ನು ಹೇರುತ್ತವೆ ಮತ್ತು ಬಲಪಡಿಸುತ್ತವೆ.
ಜೇಮ್ಸ್ ಮಿಲ್ಸ್, ಸೆಸಿಲ್ ರೋಡ್ಸ್ ಮತ್ತು ರುಡ್ಯಾರ್ಡ್ ಕಿಪ್ಲಿಂಗ್‌ರಂತಹ ವಸಾಹತುಶಾಹಿಗಳು ವಸಾಹತುಶಾಹಿ ಆಡಳಿತಕ್ಕೆ ತುತ್ತಾಗಿದ್ದ ಸಮಾಜವನ್ನು ‘ಆಫ್ ಚೈಲ್ಡ್’ ಎಂದು ಬಿಂಬಿಸಿದ್ದಾರೆ. ತಮ್ಮ ಕ್ರೂರ ವಸಾಹತುಶಾಹಿ ವ್ಯವಸ್ಥೆಯನ್ನು ಸಮರ್ಥಿಸಿದ್ದಾರೆ. ಗಮನಾರ್ಹವಾಗಿ, ‘ಚೈಲ್ಡ್’ ಎಂಬ ಪದವನ್ನು ‘ಇತರರನ್ನು’ ಕೀಳೆಂದು ಬಿಂಬಿಸುವುದಕ್ಕಾಗಿ ಒಂದು ರೂಪಕವಾಗಿ ರಾಜಕೀಯಗೊಳಿಸಲಾಗಿದೆ. ಅದರ ಬಳಕೆಯು ಇಂದಿಗೂ ಮುಂದುವರೆದಿದೆ. ಪ್ರೌಢಾವಸ್ಥೆ ಮತ್ತು ಸಾಮರ್ಥ್ಯದ ಸಿದ್ಧಾಂತಗಳು ವಿಭಿನ್ನ ರೀತಿಯಲ್ಲಿ ಹೇರಲಾಗುತ್ತಿದೆ.
ಇಂದಿನ ಜಗತ್ತಿನಲ್ಲಿ, ಕೆಲವು ರಾಜಕೀಯ ಸಿದ್ಧಾಂತಗಳು ವೈವಿಧ್ಯತೆಯನ್ನು ನಿಗ್ರಹಿಸುವ ‘ಏಕೈಕ’ ಎಂಬ ನಿರೂಪಣೆಯನ್ನು ಶಾಶ್ವತಗೊಳಿಸುತ್ತವೆ. ಕ್ರೋನಿ ಕ್ಯಾಪಿಟಲಿಸಂ ಮತ್ತು ಹಿಂದುತ್ವವು ಈ ‘ಒಂದು ಅಥವಾ ಏಕೈಕ’ ಎಂಬ ನಿರೂಪಣೆಯ ನಿರ್ಣಾಯಕ ಸಿದ್ಧಾಂತವಾಗಿವೆ.
ಈ ಹಿನ್ನೆಲೆಯಲ್ಲಿ, ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ‘ಬಾಲಕ ಬುದ್ಧಿ’ ಮತ್ತು ಕಾಂಗ್ರೆಸ್‌ಗೆ ‘ಪರಾವಲಂಬಿ’ ಎಂಬ ಪದವನ್ನು ಪ್ರಧಾನ ಮಂತ್ರಿಗಳು ಬಳಸಿರುವುದು ಗಮನ ಸೆಳೆಯುತ್ತದೆ. ಶಾಲೆಯಲ್ಲಿ ಕಿರುಕುಳಕ್ಕೆ ಒಳಗಾಗುವ ಮತ್ತು ಅದರ ಬಗ್ಗೆ ದೂರು ನೀಡುವ ಮಗುವನ್ನು ಅಣಕಿಸುವ ಕಥೆಯನ್ನು ಅವರು ಹೇಳಿದರು. ದೂರು ನೀಡುವ ಮಗುವನ್ನು ಬೆದರಿಸುವ ಮತ್ತು ಆ ಮಗು ಮೇಲೆ ದೈಹಿಕ ಶಿಕ್ಷೆಯನ್ನು ಸಾಮಾನ್ಯೀಕರಿಸುವ ಅವರ ರೂಪಕವು ಸಮಾಜಕ್ಕೆ ಬೇರೆಯದ್ದೇ ಸಂದೇಶ ರವಾನಿಸುತ್ತದೆ. ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
ಮೋದಿ ಇಂತಹ ರೂಪಕ ಬಳಸಿದ್ದು ಇದೇ ಮೊದಲ ಸಲವಲ್ಲ. 2019ರಲ್ಲಿ, ಖರಗ್‌ಪುರದ ಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದ ಮೋದಿ, ವಿದ್ಯಾರ್ಥಿಗಳಲ್ಲಿ ಕಂಡುಬರುವ ‘ಡಿಸ್ಲೆಕ್ಸಿಯಾ’ ಕಾಯಿಲೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಅಂದಹಾಗೆ, ಸಾವರ್ಕರ್ ಅವರನ್ನು ಟೀಕಿಸಿದ್ದಕ್ಕಾಗಿ ಮೋದಿ ಅವರು ರಾಹುಲ್ ವಿರುದ್ಧ ಅಸಮಾಧಾನ ಹೊಂದಿದ್ದರು. ಹೀಗಾಗಿ, ಕಳೆದ ಸಂಸತ್‌ನಲ್ಲಿ, ಅವರು ರಾಹುಲ್ ಗಾಂಧಿಯನ್ನು ’40-50 ವರ್ಷ ವಯಸ್ಸಿನ ಮಗು’ ಎಂದು ಟೀಕಿಸಿದರು. ಇತ್ತೀಚಿನ ವರ್ಷಗಳಲ್ಲಿ ರಾಹುಲ್ ವಿರುದ್ಧ ನಾನಾ ರೀತಿಯಲ್ಲಿ ಕಾನೂನಾತ್ಮಕವಾಗಿ ನೀಡಲಾದ ತೊಂದರೆಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ, ಅವರು ತಮ್ಮ ಸಮರ್ಥನೆಗಾಗಿ, ಮಗುವೊಂದು ಅವರ ಶಿಕ್ಷಕರಿಂದ ಹೊಡೆಸಿಕೊಳ್ಳುವ ಚಿತ್ರಣವನ್ನು ಬಳಸಿಕೊಂಡರು. ಈ ಪ್ರಕ್ರಿಯೆಯೊಳಗೆ, ಅವರು ತಮ್ಮನ್ನು ತಾವು ‘ವಯಸ್ಕ’ ಎಂದು ಬಿಂಬಿಸಿಕೊಂಡರು. ಮಾತ್ರವಲ್ಲದೆ, ಬಿಜೆಪಿ/ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ‘ವಯಸ್ಕ’ ಮತ್ತು ‘ಪ್ರಬುದ್ಧ’ ಎಂದು ತೋರಿಸಿಕೊಂಡರು.
543ರಲ್ಲಿ 99 ಅಂಕ ಪಡೆದು ಸಂತೋಷವಾಗಿರುವ ವಿದ್ಯಾರ್ಥಿಗಳು ಎಂದು ಕಾಂಗ್ರೆಸ್ ಜರಿದ ಮೋದಿಯವರ ರೂಪಕವು ವಿವಾದಾತ್ಮಕವೂ, ಸಮಸ್ಯಾತ್ಮಕವೂ ಆಗಿದೆ. ಅಸಮಾನತೆಯ ಸಮಾಜದಲ್ಲಿ ಮೆರಿಟ್ ಸಾಮಾನ್ಯವಾಗಿ ಸಾಮಾಜಿಕ ಮತ್ತು ಆರ್ಥಿಕ ಸವಲತ್ತುಗಳ ಜೊತಗೆ ಸಂಬಂಧ ಹೊಂದಿದೆ. ಅವರು ಕಾಂಗ್ರೆಸ್‌ಅನ್ನು ಟೀಕಿಸುವ ಭರದಲ್ಲಿ ಹಿಂದುಳಿದ ಇಡೀ ಸಮಾಜವನ್ನೇ ಅಲ್ಲಗಳೆದಿದ್ದಾರೆ.
ಈ ವರದಿ ಓದಿದ್ದೀರಾ?: ಈ ದಿನ ವಿಶೇಷ | ಭಾರತೀಯ ಸಮಾಜವು ಮೂಢನಂಬಿಕೆಯತ್ತ, ಬಾಬಾಗಳತ್ತ ವಾಲುತ್ತಿರುವುದೇಕೆ?
ಸಮಕಾಲೀನ ಸಂದರ್ಭದಲ್ಲಿ ಇಂತಹ ರಾಜಕೀಯ ಭಾಷಣಗಳು ನಮ್ಮ ರಾಜಕೀಯ ಶಬ್ದಕೋಶದಿಂದ ‘ಸೆಕ್ಯುಲರಿಸಂ’ ಅನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿವೆ. ಇದು ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಮರ ಸ್ಥಾನವನ್ನು ಅತ್ಯಂತ ಅಸ್ಥಿರಗೊಳಿಸಿದೆ. ಹೀಗಾಗಿಯೇ, ನಾಗರಿಕ ಸಮಾಜ, ಶಿಕ್ಷಣ ತಜ್ಞರು ಅಲ್ಪಸಂಖ್ಯಾತ ಮತ್ತು ದಲಿತರ ಮೇಲಿನ ದಮನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮೋದಿಯವರ ಇಂತಹ ರೂಪಕಗಳು ನಾಗರಿಕ ಸಮಾಜ ಮತ್ತು ರಾಜಕೀಯ ವಿರೋಧದ ಧ್ವನಿಗಳನ್ನು ಕೀಳಾಗಿ ಚಿತ್ರಿಸುತ್ತವೆ. ಜೊತೆಗೆ, ವಿರೋಧಿಗಳಿಗೆ ಜೈಲು ಶಿಕ್ಷೆ, ಎಫ್‌ಐಆರ್ ದಾಖಲು, ಸದನದಲ್ಲಿ ವ್ಯಂಗ್ಯವಾಡುವುದನ್ನು ಸಮರ್ಥ ಮತ್ತು ವಯಸ್ಕ ಪ್ರವೃತ್ತಿ ಎಂಬಂತೆ ಬಿಂಬಿಸಲಾಗುತ್ತಿದೆ. ಈ ಸರ್ವಾಧಿಕಾರಿ ಆಳ್ವಿಕೆಯ ಮನೋಭಾವವು ಯಾವುದೇ ವಿರೋಧವನ್ನು ವಿಕೃತ, ಪಕ್ಷಪಾತ ಅಥವಾ ಚೈಲ್ಡಿಶ್ ಎಂದು ತಳ್ಳಿಹಾಕುತ್ತದೆ.
ಇಂತಹ ಪರಿಸ್ಥಿತಿಯೊಳಗೆ, ಮಕ್ಕಳ ಮನೋವಿಜ್ಞಾನಿಗಳು ಮಕ್ಕಳ ಮನಸ್ಸಿನ ಮೇಲೆ ಪ್ರಧಾನಿ ಭಾಷಣದ ಪ್ರಭಾವವನ್ನು ಅಧ್ಯಯನ ಮಾಡಬೇಕು. ವಿರೋಧಿ ಧ್ವನಿಗಳನ್ನು ಕಾನೂನುಬಾಹಿರಗೊಳಿಸುತ್ತಿರುವ ‘ಚೈಲ್ಡ್’ ಅಥವಾ ‘ಮಕ್ಕಳ ಮನಸ್ಥಿತಿ’ ಎಂಬ ರೂಪಕಗಳ ರಾಜಕೀಯ ಬಳಕೆಯನ್ನು ಬಹಿರಂಗಪಡಿಸಬೇಕು. ವಿಷಕಾರಿ ಪ್ರೌಢಾವಸ್ಥೆಯು ನಮ್ಮೆಲ್ಲರನ್ನು ಉಸಿರುಗಟ್ಟಿಸುತ್ತಿದೆ. ಮಾತ್ರವಲ್ಲ, ಪ್ರಜಾಪ್ರಭುತ್ವವನ್ನೂ ಉಸಿರುಗಟ್ಟಿಸುತ್ತದೆ ಎಂಬುದನ್ನು ಸಮಾಜದಲ್ಲಿ ಸಾರಿ ಹೇಳಬೇಕು.