ಈ ದಿನ ವಿಶೇಷ | ಭಾರತೀಯ ಸಮಾಜವು ಮೂಢನಂಬಿಕೆಯತ್ತ, ಬಾಬಾಗಳತ್ತ ವಾಲುತ್ತಿರುವುದೇಕೆ?

Date:

ಹಾಥರಸ್‌ನಲ್ಲಿ ಸಾವನ್ನಪ್ಪಿದ ತಾಯಂದಿರು ತಮ್ಮ ಪತಿ ಮತ್ತು ಮಕ್ಕಳಿಗಾಗಿ ಸ್ವರ್ಗವನ್ನು ಹುಡುಕುತ್ತಿರಲಿಲ್ಲ. ತಮ್ಮ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸಂಜೆಯ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ಅಗತ್ಯವಾದ ಬದುಕಿಗಾಗಿ ಬೇಡುತ್ತಿದ್ದರು. ಆ ತಾಯಂದಿರು ಬಯಸಿದ ಬದುಕನ್ನು ಕೊಡಬೇಕಾಗಿದ್ದದ್ದು ಸರ್ಕಾರಗಳು. ಆದರೆ, ಸರ್ಕಾರಗಳು ಜನರ ಬದುಕನ್ನ ಮರೆತಿವೆ. ಜನ ಬಾಬಾಗಳ ಕಡೆಗೆ ವಾಲುತ್ತಿದ್ದಾರೆ… ಸಾಯುತ್ತಿದ್ದಾರೆ.

ಹಾಥರಸ್‌ನಲ್ಲಿ 15 ದಿನಗಳ ಹಿಂದೆ ಭೋಲೆ ಬಾಬಾ ಅಧ್ಯಕ್ಷತೆಯಲ್ಲಿ ನಡೆದ ‘ಸತ್ಸಂಗ’ದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 121 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ, ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಆ ದುರಂತ ಘಟನೆಗಳನ್ನು, ದಯನೀಯ ನೋವಿನ ಸಾವುಗಳನ್ನು ತಡೆಯಲು ಅಲ್ಲಿಂದ ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾನಿಗಾಗಲೀ ಅಥವಾ ದೇವರುಗಳಾಗಲೀ ಸಾಧ್ಯವಾಗಲಿಲ್ಲ. ಭಾರತದಲ್ಲಿ ಯುದ್ಧಗಳು ಮತ್ತು ರೈಲು ಅಘಘಾತ/ಅವಘಡಗಳ ಹೊರತಾಗಿ ಹೆಚ್ಚು ಜನರು ಬಲಿಯಾಗುತ್ತಿರುವುದು ಬಹುಶಃ ಈ ಮೂಢನಂಬಿಕೆಗೆ.

‘ನನ್ನ ಪಾದದ ಧೂಳನ್ನು ತೆಗೆದುಕೊಳ್ಳಿ, ನಿಮಗೆ ಒಳ್ಳೆಯದಾಗುತ್ತದೆ’ ಎಂದು ಭೋಲೆ ಬಾಬಾ ಕೊಟ್ಟ ಕರೆ, ಅಂದು ದುರಂತ ಘಟನೆಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಆತ ತುಳಿದ ಮಣ್ಣನ್ನು ಜನರು ತೆಗೆದುಕೊಳ್ಳಲು, ತಮ್ಮ ಹಣೆಗಳಿಗೆ ಹಚ್ಚಿಕೊಳ್ಳಲು ಮುಂದಾಗಿದ್ದು, ಹಲವರ ಸಾವಿಗೆ ಕಾರಣವಾಯಿತು. ಭೋಲೆ ಬಾಬಾನ ಪಾದದ ಧೂಳು ಜನರ ಪಾಲಿಗೆ ಪಾಪದ ಧೂಳಾಯಿತು. ಪ್ರಾಣ ತೆಗೆಯುವ ಧೂಳಾಯಿತು. ಇದೆಲ್ಲಕ್ಕೂ ಮೂಲ ಕಾರಣ ಮೂಢನಂಬಿಕೆ. ಅಂದಹಾಗೆ, ಈ ಪಾಪ ಎಂಬುದು ಕೂಡ ಮೂಢನಂಬಿಕೆಯೇ.

ಭೋಲೆ ಬಾಬಾ ಅಲಿಯಾಸ್‌ ಸೂರಜ್ ಪಾಲ್ ಸಿಂಗ್ ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದರು. ಆತ ದಲಿತ ಸಮುದಾಯಕ್ಕೆ ಸೇರಿದವರು. ಅವರು 30 ವರ್ಷಗಳ ಹಿಂದೆ ತನ್ನ ಹೆಸರನ್ನು ನಾರಾಯಣ್ ಸಕರ್ ಹರಿ ಎಂದು ಬದಲಾಯಿಸಿಕೊಂಡರು. ಜೊತೆಗೆ, ತಾನು ನಿರ್ಮಲ ಮನಸ್ಸಿನ ದೇವಮಾನವನೆಂದು ಬಿಂಬಿಸಿಕೊಳ್ಳಲು ಬಿಳಿ ಬಟ್ಟೆಯನ್ನು ಧರಿಸಿದರು. ಅಲ್ಲಲ್ಲಿ, ಆಶೀರ್ವಚನಗಳನ್ನು ನೀಡುತ್ತಿದ್ದ ಆತ, ಭೋಲೆ ಬಾಬಾ ಎಂದು ಖ್ಯಾತಿ ಪಡೆದುಕೊಂಡರು. ಆತನ ಮಾತುಗಳು ಆತನ ಅನುಯಾಯಿಗಳಿಗೆ ಅದೃಷ್ಟದಂತೆ ಕಾಣಲಾರಂಭಿಸಿತು. ಪ್ರತಿಯಾಗಿ ಕಾಣಿಕೆಗಳನ್ನು ನೀಡಲಾರಂಭಿಸಿದರು. ಭೋಲೆ ಬಾಬಾ ಸಾಕಷ್ಟು ಸಂಪತ್ತನ್ನು ಸಂಗ್ರಹಿಸಿದರು. ನಿಜಕ್ಕೂ ಜನರ ಮೂಢನಂಬಿಕೆ ಬಾಬಾ ಪಾಲಿಗೆ ಪವಾಡವಾಯಿತು. ಆತ ಶ್ರೀಮಂತನಾಗುವ ಜೊತೆಗೆ, ಜನರಿಗೆ ದೇವರಾಗಿ ಕಾಣತೊಡಗಿದರು. ಆತ ನೀಡುವ ಪ್ರವಚನಗಳ ‘ಸತ್ಸಂಗ’ಗಳಿಗೆ ಜನರು ಎಗ್ಗಿಲ್ಲದೆ ನುಗ್ಗತೊಡಗಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

15 ದಿನಗಳ ಹಿಂದೆ, ಹಾಥರಸ್‌ನಲ್ಲಿ ನಡೆದ ‘ಸತ್ಸಂಗ’ವು 2 ಲಕ್ಷ ಜನರನ್ನು ಆಕರ್ಷಿಸಿತು. ಆ ಕಾರ್ಯಕ್ರಮವನ್ನು ಬಾಬಾನ ಖಾಸಗಿ ಭದ್ರತಾ ತಂಡವು ನಿರ್ವಹಿಸುತ್ತಿತ್ತು. ಆ ತಂಡದಲ್ಲಿದ್ದವರಲ್ಲಿ ಹೆಚ್ಚಿನವರು 20ಕ್ಕಿಂತ ಕಡಿಮೆ ವಯಸ್ಸಿನವರು ಎಂದು ಮಾಧ್ಯಮಗಳು ವರದಿ ಮಾಡಿವೆ. ಅವರು ಕಾಲ್ತುಳಿತವನ್ನು ನಿಭಾಯಿಸುವ ಕೆಲಸವನ್ನು ಮಾಡಲಿಲ್ಲ. ಬದಲಾಗಿ, ಬಾಬಾ ಹೋಗುತ್ತಿದ್ದ ಹಾದಿಯನ್ನು ಸುಗಮ ಮಾಡಲು ಜನರನ್ನು ದೂಡಲಾರಂಭಿಸಿದರು. ಸಾಮಾನ್ಯವಾಗಿ, ಭಾರಿ ಜನ ಸೇರುವ ಕಾರ್ಯಕ್ರಮಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರದ ಸಹಾಯ ಬೇಕಾಗುತ್ತದೆ. ಆದರೆ, ಅಲ್ಲಿ ಸರ್ಕಾರದ ಯಾವುದೇ ನೆರವು ಇರಲಿಲ್ಲ. ಕೇವಲ 70 ಮಂದಿ ಪೊಲೀಸರನ್ನಷ್ಟೇ ಅಲ್ಲಿ ನಿಯೋಜಿಸಲಾಗಿತ್ತು. ಆದ್ದರಿಂದ ಬಾಬಾ ಮತ್ತು ಅವರ ಸಹಾಯಕರ ವಿರುದ್ಧ ಕ್ರಿಮಿನಲ್‌ ನಿರ್ಲಕ್ಷ್ಯ ಆರೋಪದಲ್ಲಿ ರಾಜ್ಯ ಸರ್ಕಾರವೂ ಪಾಲನ್ನು ಹಂಚಿಕೊಳ್ಳಬೇಕಾಗುತ್ತದೆ.

ಯಾವುದೇ ಸಂದರ್ಭದಲ್ಲಿ, ಜನಸಂದಣಿ ನಿಯಂತ್ರಣವು ಕೇವಲ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗಳ ಸಂಖ್ಯೆಗೆ ಸಂಬಂಧಿಸಿಲ್ಲ. ಸರತಿ ಸಾಲುಗಳು, ಆಗಮನಗಳು ಮತ್ತು ನಿರ್ಗಮನಗಳು, ಆಸನ ವ್ಯವಸ್ಥೆಗಳು ಮತ್ತು ತುರ್ತು ಕ್ರಮಗಳನ್ನು ಸ್ಥಳದಲ್ಲಿ ನಿಯೋಜಿಸುವ ಮೂಲಕ ಶಿಸ್ತನ್ನು ಹೇಗೆ ಜಾರಿಗೊಳಿಸಬೇಕು. ಇದೆಲ್ಲವೂ, ಒಂದು ಸಮರ್ಪಕ ನಿರ್ವಹಣೆಯ ಭಾಗವಾಗಿರುತ್ತದೆ. ಆದರೆ, ಹಾಥರಸ್‌ ‘ಸತ್ಸಂಗ’ದಲ್ಲಿ ಇದಾವುದೂ ಇರಲಿಲ್ಲ.

ಹಾಥರಸ್ ದುರಂತದ ನಂತರ, ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಬೃಹತ್ ಸಾರ್ವಜನಿಕ ಸ್ವಾಗತವು ಮುಂಬೈನಲ್ಲಿ ಜರುಗಿತು. ಅಲ್ಲಿ, ಸುಮಾರು 3 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರಿದ್ದರು. ಅದೃಷ್ಟವಶಾತ್, ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಆಚರಣೆಯು ದುರಂತವಾಗಿ ರೂಪಾಂತರಗೊಳ್ಳಲಿಲ್ಲ. ಭದ್ರತೆ, ನಿರ್ವಹಣೆ, ನಿಯಂತ್ರಣ ಎಲ್ಲವೂ ಒಂದು ಹಂತಕ್ಕಾದರೂ ಸುಗಮವಾಗಿತ್ತು.

ಆದರೆ, ಹಾಥರಸ್‌ನಲ್ಲಿ ಬಾಬಾ ವೇದಿಕೆಯಿಂದ ಹೊರಬಂದಾಗ ಜನರ ಗುಂಪು ನಿಯಂತ್ರಣ ತಪ್ಪಿತು. ಬಾಬಾ ತುಳಿದ ಧೂಳನ್ನು ಸಂಗ್ರಹಿಸಲು ಜನರು ಧಾವಿಸಿ ಬಂದರು. ಕೆಲವರು ಮಣ್ಣು ತೆಗೆದುಕೊಳ್ಳಲು ಬಗ್ಗಿದರೆ, ಇನ್ನು ಕೆಲವರು ನುಗ್ಗುತ್ತಿದ್ದರು. ಜೊತೆಗೆ, ಬಾಬಾನ ಖಾಸಗಿ ರಕ್ಷಣಾ ಪಡೆ ಜನರನ್ನು ದೂಡುತ್ತಿತ್ತು. ಪರಿಣಾಮ ಹಲವರು ಬಿದ್ದು, ಕಾಲ್ತುಳಿತಕ್ಕೆ ಬಲಿಯಾದರು.

ದೇವಾಲಯ ಮತ್ತು ಆಶ್ರಮ ಸಂಬಂಧಿತ ಕಾಲ್ತುಳಿತಗಳಿಗೆ ದೊಡ್ಡ ಇತಿಹಾಸವೇ ಇದೆ. ಇತ್ತೀಚಿನ ಕೆಲವು ನಿದರ್ಶನಗಳನ್ನು ನೋಡುವುದಾದರೆ: ಮಂಧರದೇವಿ ದೇವಸ್ಥಾನ- 291 ಸಾವು (2005); ನೈನಾ ದೇವಿ ದೇವಸ್ಥಾನ- 146 (2008); ಕುಂಭಮೇಳ- 7 (2010); ಕೃಪಾಲು ಮಹಾರಾಜ ಆಶ್ರಮ- 63 (2010); ಶಬರಿಮಲೆ- 102 (2011); ಕುಂಭಮೇಳ- 36 (2013); ರತಂಗರ್ ದೇವಸ್ಥಾನ- 115 (2013); ಪುಟ್ಟಿಂಗಲ್ ದೇವಿ ದೇವಸ್ಥಾನ- 106 (2016) ಸಾವುಗಳು ಸಂಭವಿಸಿವೆ.

ಈ ಸಾವುಗಳಿಗೆ ಕಾರಣ ನಂಬಿಕೆಯ ಮುಸುಕು ಹಾಕಿಕೊಂಡಿರುವ ಮೂಢನಂಬಿಕೆ. ಈ ಮೂಢನಂಬಿಕೆಯನ್ನು ಸಾಮೂಹಿಕ ಕೊಲೆಗಾರನೆಂದರೂ ತಪ್ಪಾಗಲಾರದು. ಕಲ್ಲಿನ ಪ್ರತಿಮೆ ಅಥವಾ ಬಿಳಿ – ಕೇಸರಿ ಬಟ್ಟೆ ಧರಿಸಿದವರು ನಮ್ಮ ಕಷ್ಟಗಳನ್ನು ಹೋಗಲಾಡಿಸಿ, ಸಮೃದ್ಧಿ-ಸಂಪತ್ತನ್ನು ನೀಡುತ್ತದೆ ಎಂದು ನಂಬಲಾಗುತ್ತದೆ. ಬಿಳಿ ಬಟ್ಟೆ ಧರಿಸಿದ ಮಾಜಿ ಕಾನ್‌ಸ್ಟೆಬಲ್ ನಮ್ಮ ಜೀವನದಲ್ಲಿ ಮ್ಯಾಜಿಕ್ ಮಾಡುತ್ತಾನೆ ಮತ್ತು ನಮ್ಮನ್ನು ಸಮಸ್ಯೆಗಳ ಸಮುದ್ರದಿಂದ ಹೊರತರುತ್ತಾನೆ ಎಂದು ನಂಬುವುದು ಕೇವಲ ಮೂಢನಂಬಿಕೆ ಅಲ್ಲ, ನಮ್ಮ ಹತಾಶಸ್ಥಿತಿ. ನಾವು ನಮ್ಮ ದೇವರುಗಳ ಮುಂದೆ, ಅವರ ಪಾದಗಳ ಮುಂದೆ ಸಾಯುತ್ತೇವೆ. ಆದರೂ, ಅವರು ನಮಗೆ ಸಹಾಯ ಮಾಡಲು, ನಮ್ಮನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ.

ಭಾರತದಲ್ಲಿ ಬದುಕುವುದೆಂದರೆ, ನಮ್ಮ ಸರದಿ ಬರುವ ಮೊದಲೇ ಬಾಗಿಲು ಮುಚ್ಚುವ ಎಲ್ಲ ನಿಜ ಸಾಧ್ಯತೆಯೊಂದಿಗೆ ಬದುಕುವುದು. ನಾವು ಹತ್ತುವ ಮೊದಲೇ ಬಸ್ಸು ಹೊರಡುತ್ತದೆ. ನಾವು ಚೀಲಗಳನ್ನು ತೆರೆಯುವ ಮೊದಲೇ ಪಡಿತರ ಅಂಗಡಿಯಲ್ಲಿ ಅಕ್ಕಿ ಖಾಲಿಯಾಗುತ್ತದೆ. ವಾಸ್ತವವಾಗಿ, ಅಗತ್ಯತೆ ಭಾರತೀಯನನ್ನು ಆತಂಕದ ಸ್ಥಿತಿಯೊಂದಿಗೆ ವ್ಯಾಖ್ಯಾನಿಸುತ್ತದೆ.

ಈ ಸಂದಿಗ್ಧತೆ, ಸಂಕಷ್ಟಗಳು ಪವಾಡಗಳನ್ನು ನಂಬುವಂತೆ ಮಾಡುತ್ತದೆ. ದೇವರುಗಳು ಮತ್ತು ದೇವಮಾನವರಿಂದ ನಮ್ಮ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಮೂಢನಂಬಿಕೆಯನ್ನು ಗಟ್ಟಿಗೊಳಿಸುತ್ತದೆ. ಇಂತಹ ನಕಲಿ ದೈವವನ್ನು ಎಷ್ಟೇ ನಂಬಿದರೂ ದುಃಖದಿಂದ ದೂರ ಮಾಡುವುದಿಲ್ಲ.

ಆದರೆ, ನಮ್ಮ ರಾಜಕೀಯವನ್ನು ಅವಲೋಕಿಸಿ, ಇದು ಮೂಲಭೂತವಾಗಿ ನಮ್ಮ ದೇವರುಗಳ ಸುತ್ತ ಸುತ್ತುತ್ತದೆ. ಬಿಜೆಪಿಯು ತನ್ನ ರಾಜಕೀಯ ಪ್ರಾಮುಖ್ಯತೆಯನ್ನು ದೇವರುಗಳ ಬೆನ್ನಿನ ಮೇಲೆ ಹೇರಲು ಪ್ರಯತ್ನಿಸುತ್ತದೆ. ಬಿಜೆಪಿ ಹಿಂದುತ್ವ ಮತ್ತು ರಾಮ-ಕೃಷ್ಣನ ಹೆಸರನಲ್ಲಿ ಜನರನ್ನು ಮರಳು ಮಾಡಲು ನಿರಂತರವಾಗಿ ಯತ್ನಸುತ್ತದೆ. ವಿರೋಧ ಪಕ್ಷಗಳು ಅದೇ ದೇವರುಗಳ ಚಿತ್ರಗಳನ್ನು ಹಿಡಿದು, ತಾವು ಅಹಿಂಸವಾದಿಗಳು ಎಂದು ಹೇಳಿಕೊಳ್ಳುತ್ತವೆ.

ಈ ರೀತಿಯ ರಾಜಕೀಯವು ಭಾರತದ ಜಾತ್ಯತೀತತೆಯ ಮೇಲೆ ಸವಾರಿ ಮಾಡುತ್ತದೆ ಎಂಬುದನ್ನು ಬಿಟ್ಟರೆ, ಬೇರೇನೂ ಆಗಲಾರದು. ಯಾವುದೇ ದೇಶವು ದೇವಾಲಯಗಳು, ಸತ್ತ ಮೊಘಲ್ ರಾಜರು ಮತ್ತು ಸಹಸ್ರಮಾನದ ಹಿಂದೆ ತಮ್ಮ ದೇವರುಗಳ ಹೆಸರಿನಲ್ಲಿ ಮಾಡಿದ ಭಯಾನಕ ಘಟನೆಗಳ ಬಗ್ಗೆ ಚರ್ಚಿಸಲು ಹೆಚ್ಚು ಸಮಯವನ್ನು ಕಳೆಯುವುದಿಲ್ಲ. ಆದರೆ, ಭಾರತದಲ್ಲಿ ಇದೇ ಹೆಚ್ಚಾಗಿ ನಡೆಯುತ್ತಿದೆ. ಭಾರತೀಯ ರಾಜಕೀಯವು ಅಲೌಕಿಕತೆಯ ಗುಣಲಕ್ಷಣಗಳ ಸುತ್ತ ಧ್ರುವೀಕರಣಗೊಳ್ಳುತ್ತಲೇ ಇದೆ.

ಸ್ವಾಭಾವಿಕವಾಗಿ, ಜನರು ಪವಾಡಗಳನ್ನು ನಂಬುತ್ತಾರೆ. ದೇವಾಲಯಗಳು ಮತ್ತು ಆಶ್ರಮ/ಮಠಗಳು ಕೂಡ ಕಿಕ್ಕಿರಿದು ತುಂಬಿರುತ್ತವೆ. ಆಡಳಿತದ ದಕ್ಷತೆ ಕಡಿಮೆಯಾದಷ್ಟೂ ಹಾಥರಸ್‌ ನಂತಹ ಕಾಲ್ತುಳಿತಗಳು ಹೆಚ್ಚುತ್ತವೆ.

ಈ ವರದಿ ಓದಿದ್ದೀರಾ?: ‘ತನ್ನ ಪಾದದ ಧೂಳು ತೆಗೆದುಕೊಳ್ಳಲು ಭೋಲೆ ಬಾಬಾ ಕರೆ ಕೊಟ್ಟಿದ್ದೇ ಕಾಲ್ತುಳಿತಕ್ಕೆ ಕಾರಣ’

ಹಾಥರಸ್‌ನಲ್ಲಿ ಸಾವನ್ನಪ್ಪಿದ ತಾಯಂದಿರು ತಮ್ಮ ಪತಿ ಮತ್ತು ಮಕ್ಕಳಿಗಾಗಿ ಸ್ವರ್ಗವನ್ನು ಹುಡುಕುತ್ತಿರಲಿಲ್ಲ. ಅವರು ತಮ್ಮ ದೈನಂದಿನ ಜೀವನದ ಸಂಕಷ್ಟಗಳಿಂದ ಹೊರಬರಲು ಪ್ರಾರ್ಥಿಸುತ್ತಿದ್ದರು. ಬೆಳಗಾದರೆ ತಮ್ಮ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸಂಜೆಯ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ಅಗತ್ಯವಾದ ಬದುಕಿಗಾಗಿ ಬೇಡುತ್ತಿದ್ದರು.

ಆ ತಾಯಂದಿರು ಬಯಸಿದ ಬದುಕನ್ನು ಕೊಡಬೇಕಾಗಿದ್ದದ್ದು ಸರ್ಕಾರಗಳು. ಆದರೆ, ಸರ್ಕಾರಗಳು ಜನರ ಬದುಕನ್ನ ಮರೆತಿವೆ. ಅವರ ಅಗತ್ಯತೆಗಳನ್ನು ಕಡೆಗಣಿಸಿವೆ. ರಾಜಕೀಯ ಲಾಲಸೆಯ ಜೊತೆಗೆ, ಉಳ್ಳವರಿಗಾಗಿ ದುಡಿಯುತ್ತಿವೆ. ಭಾರತೀಯ ಜನಸಾಮಾನ್ಯರ ಜೀವನದಲ್ಲಿ ಅನಿಶ್ಚಿತತೆಯನ್ನು ತಂದೊಡ್ಡಿವೆ. ಈ ಅನಿಶ್ಚಿತತೆಯು ಸಮಾಜವನ್ನು ಬಾಬಾಗಳು ಮತ್ತು ಗುರುಗಳ ಕಡೆಗೆ, ಮೂಢನಂಬಿಕೆ ಮತ್ತು ಪವಾಡಗಳೆಡೆಗೆ ದೂಡುತ್ತಿದೆ. ಅದೇ ಅನಿಶ್ಚಿತತೆಯು ಪೊಲೀಸ್ ಪೇದೆಯನ್ನು ಬಿಳಿ ಸೂಟು, ಬೂಟುಗಳ ದೇವಮಾನವನನ್ನಾಗಿಸಿದೆ. ಸಮಾಜದಲ್ಲಿ ಸಾಮಾಜಿಕ ನ್ಯಾಯ ಕಾಣೆಯಾದಾಗ, ಮತ, ಪಂಥಗಳು ಹೆಚ್ಚುತ್ತವೆ. ಜನರನ್ನು ಮೌಢ್ಯರನ್ನಾಗಿಸುತ್ತವೆ. ಕೊನೆಗೆ, ಸಾವಿನ ದವಡೆಗೆ ದೂಡುತ್ತವೆ.

ಮಾಹಿತಿ ಮೂಲ: ಟಿಎನ್‌ಐಇ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ವಿಶೇಷ | ಭಾರತೀಯ ಚಿತ್ರರಂಗ ತನ್ನ ‘ಜಾತ್ಯತೀತ’ ಐಡೆಂಟಿಟಿಯನ್ನೇ ಮರೆಯುತ್ತಿದೆಯೇ?

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕೋಮು ವಿಭಜನೆಯ ಆತಂಕಕಾರಿ ಬೆಳವಣಿಗೆಗಳು ಹೆಚ್ಚಾಗುತ್ತಿವೆ....

1950ರ ಕೇಂದ್ರ ಬಜೆಟ್ ಸೋರಿಕೆ: ನಡೆದಿದ್ದೇನು, ಪರಿಣಾಮವೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸತತ ಏಳನೇ...

ಅಯೋಧ್ಯೆ ಸುತ್ತಮುತ್ತ ರಿಯಲ್ ಎಸ್ಟೇಟ್ ದಂಧೆ- ʼಇಂಡಿಯನ್ ಎಕ್ಸ್‌ಪ್ರೆಸ್‌ʼ ಆಸ್ಫೋಟಕ ವರದಿ!

ಸುಪ್ರೀಮ್ ಕೋರ್ಟ್ ತೀರ್ಪು 2019ರಲ್ಲಿ ಹೊರಬಿದ್ದಿತ್ತು. ಅಂದಿನಿಂದ 2024ರ ಮಾರ್ಚ್ ತಿಂಗಳವರೆಗೆ...

ಕೇದಾರನಾಥ ದೇಗುಲದಿಂದ 228 ಕೆಜಿ ಚಿನ್ನ ನಾಪತ್ತೆ: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

"ಕೇದಾರನಾಥ ದೇವಸ್ಥಾನದಲ್ಲಿದ್ದ ಚಿನ್ನ ನಾಪತ್ತೆಯಾಗಿದೆ, 228 ಕೆಜಿ ಚಿನ್ನದ ಹಗರಣ ನಡೆದಿದೆ. ಆದರೆ...