ಇನ್ನು ತಲೆ ಬುಡ ಇಲ್ಲದ ಆರೋಪ ಮಾಡುವುದು, ಎಲ್ಲಾ ಹಗರಣಗಳಿಗೂ ಸಿಎಂ ರಾಜೀನಾಮೆ ಕೇಳುವ ಬಿಜೆಪಿಯವರು ತಮ್ಮ ಅವಧಿಯಲ್ಲಿ ಹಗರಣಗಳ ಆರೋಪ ಬಂದಾಗ ತನಿಖೆಯನ್ನೂ ಮಾಡಿಲ್ಲ ಯಾಕೆ? ಧೈರ್ಯ ಇರಲಿಲ್ಲವಾ, ಅಥವಾ ತಾವು ಸಾಚಾ ಎಂದು ಸಮಾಜಕ್ಕೆ ತೋರಿಸುವ ಪ್ರಯತ್ನವಾ?
ಆಡಳಿತ ಪಕ್ಷದ ತಪ್ಪುಗಳನ್ನು ಗುರುತಿಸುವುದು, ಪ್ರಶ್ನಿಸುವುದು ಪ್ರತಿಪಕ್ಷ ಕೆಲಸ. ಪ್ರಜಾಪ್ರಭುತ್ವದಲ್ಲಿ ಅದು ಇರಬೇಕಾದ್ದೆ. ಆದರೆ ಪ್ರತಿಪಕ್ಷ ಪ್ರಬುದ್ಧತೆಯಿಂದ ವರ್ತಿಸುವ ಪಕ್ವತೆಯನ್ನು ಬೆಳೆಸಿಕೊಳ್ಳಬೇಕು.
ಅನೇಕ ಪ್ರಕರಣದಲ್ಲಿ ಬಿಜೆಪಿ ಮಾಡಿದ ನಿರ್ಧಾರಗಳೇ ಈಗ ಜಾರಿಗೆ ಬಂದಾಗಲೂ ಏಕಾಏಕಿ ವಿರೋಧಿಸಿ ನಗೆಪಾಟಲಿಗೆ ಈ ಪ್ರತಿಪಕ್ಷ ಒಳಗಾಗಿದೆ.
ಮಾಡುವ ಆರೋಪಗಳ ಬಗ್ಗೆ ಗಟ್ಟಿಯಾದ ದಾಖಲೆಗಳೂ ಇರಬೇಕು. ಸರ್ಕಾರದಿಂದ ತಪ್ಪು ಆಗಿದೆ ಅನ್ನುವ ಪ್ರಕರಣದಲ್ಲಿ, ಸರ್ಕಾರವೇ ಕಾನೂನು ಕ್ರಮ ಜರುಗಿಸದ ನಂತರವೂ ಬೊಬ್ಬೆ ಹೊಡೆಯುವುದು ಬಿಜೆಪಿಗರ ಚಟವಾಗಿದೆ. ಹತ್ಯೆ ಪ್ರಕರಣವೊಂದರಲ್ಲಿ ಆರೋಪಿಯನ್ನು ಹಿಡಿದು ಜೈಲಿಗಟ್ಟಿ, ಸಂತ್ರಸ್ತನಿಗೆ ಪರಿಹಾರ ನೀಡಿ, ಶೀಘ್ರವಾಗಿ ತನಿಖೆ ಮಾಡಲು ವಿಶೇಷ ನ್ಯಾಯಾಲಯ ಸ್ಥಾಪಿಸದ ಮೇಲೂ ಇವರು ಪ್ಲಕಾರ್ಡ್ ಹಿಡಿದು ಬೀದಿಗೆ ಇಳಿಯುತ್ತಾರೆ.
ಇನ್ನು ತಲೆ ಬುಡ ಇಲ್ಲದ ಆರೋಪ ಮಾಡುವುದು, ಎಲ್ಲಾ ಹಗರಣಗಳಿಗೂ ಸಿಎಂ ರಾಜೀನಾಮೆ ಕೇಳುವ ಬಿಜೆಪಿಯವರು ತಮ್ಮ ಅವಧಿಯಲ್ಲಿ ಹಗರಣಗಳ ಆರೋಪ ಬಂದಾಗ ತನಿಖೆಯನ್ನೂ ಮಾಡಿಲ್ಲ ಯಾಕೆ? ಧೈರ್ಯ ಇರಲಿಲ್ಲವಾ, ಅಥವಾ ತಾವು ಸಾಚಾ ಎಂದು ಸಮಾಜಕ್ಕೆ ತೋರಿಸುವ ಪ್ರಯತ್ನವಾ?
ಕೇಂದ್ರ ಬಿಜೆಪಿ ಕಳ್ಳರಿಂದ, ಸುಲಿಗೆಕೋರರಿಂದ ಎಲೆಕ್ಟೋರಲ್ ಬಾಂಡ್ ಹೆಸರಿನಲ್ಲಿ ದೇಣಿಗೆ ಪಡೆದ ಲೆಕ್ಕ ಪಡೆಯಲು ಸುಪ್ರೀಂ ಆದೇಶ ಬೇಕಾಯಿತು. ನೀಟ್ ಪ್ರಶ್ನೆಪತ್ರಿಕೆ ತನಿಖೆಗೆ ಸುಪ್ರೀಂ ಪ್ರವೇಶಿಸಬೇಕಾಯಿತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ಡಾ. ಸುಧಾಕರ್ ಮೇಲೆ ಕೊರೋನ ವೈದ್ಯಕೀಯ ಪರಿಕರ ಖರೀದಿ ಆರೋಪ ಬಂದರೂ ಯಾಕೆ ರಾಜೀನಾಮೆ ಪಡೆದಿಲ್ಲ?
ಬಿಟ್ ಕಾಯಿನ್ ಹಗರಣ ನಡೆದಾಗ ಬೊಮ್ಮಾಯಿ ಗೃಹಮಂತ್ರಿ, ಅಷ್ಟೇ ಅಲ್ಲ ಹಗರಣ ಸಂಬಂಧ ದೂರು ದಾಖಲಾಗಿ ತನಿಖೆ ನಡೆಯುತ್ತಿರುವಾಗ ಅವರೇ ಸಿಎಂ. ಡಿಜಿಟಲ್ ದಾಖಲೆ ತಿರುಚಿದ ಆರೋಪ ಇದೆ. ಅವರು ರಾಜೀನಾಮೆ ಕೊಡಲಿಲ್ಲ ಯಾಕೆ? ಈ ಹಗರಣದಲ್ಲಿ ಬೊಮ್ಮಾಯಿ ಮತ್ತು ಆಗಿನ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಸಹೋದರನ ಹೆಸರೂ ಕೇಳಿ ಬಂದಿತ್ತು. ಪ್ರಧಾನಿ ಮೋದಿ ವಿದೇಶಕ್ಕೆ ಹೋಗಿದ್ದಾಗ ಅಲ್ಲಿನ ಅಧಿಕಾರಿಗಳು ಈ ಬಗ್ಗೆ ಪ್ರಧಾನಿಗೆ ತಿಳಿಸಿದ ನಂತರ ಕೇಂದ್ರದಿಂದ ತನಿಖೆ ನಡೆಸುವಂತೆ ಆದೇಶ ಬಂದಿತ್ತು.
ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಡಾ ಅಶ್ವತ್ಥನಾರಾಯಣ ಹೆಸರು ಕೇಳಿ ಬಂದಿತ್ತು. ಆತನ ಸಂಬಂಧಿಗೆ ಹೆಚ್ಚು ಅಂಕ ನೀಡಲಾಗಿತ್ತು. ಆಗ ಬಿಜೆಪಿ ಅವರ ರಾಜೀನಾಮೆ ಪಡೆದಿತ್ತಾ?
ಬಿಜೆಪಿ ಅವಧಿಯಲ್ಲಿ ಹಲವು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆಗ ಗೃಹ ಮಂತ್ರಿ ರಾಜೀನಾಮೆ ಕೊಟ್ಟದ್ದುಂಟಾ? ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಎಂದು ಜನ ಟೀಕಿಸುತ್ತಾರೆ. ಇಲ್ಲಿ ಯಾವುದೇ ಪ್ರಕರಣ ಆದಾಗ ಸರ್ಕಾರದ ವರ್ತನೆ ಹೇಗೆ ಅನ್ನುವುದು ಮುಖ್ಯ. ಸರ್ಕಾರ ತನಿಖೆಯನ್ನೇ ಮಾಡದಿದ್ದಾಗ ಹೋರಾಟ ಸರಿ. ಬಿಜೆಪಿ ಅವರ ಆಡಳಿತದಲ್ಲಿ ಬೆಳಕಿಗೆ ಬಂದ ಹಲವು ಪ್ರಕರಣಗಳಲ್ಲಿ ತನಿಖೆಯನ್ನೂ ಮಾಡಿಲ್ಲ ಅನ್ನುವುದು ನಮ್ಮ ಪ್ರಮುಖ ಆರೋಪ.
ಕಾಂಗ್ರೆಸ್ ನಾಯಕರು ಹಿಂದೂ ನಾಯಕರು ಶಾಸಕರ ಮೇಲೆ ಕೇಸ್ ಹಾಕುತ್ತಿದೆ ಅನ್ನುತ್ತಾರೆ. ಹಿಂದೂ ಕಾರ್ಯಕರ್ತರ ಮೇಲೆ ಅತೀ ಹೆಚ್ಚು ಕೇಸ್ ಆದದ್ದು ಯಡಿಯೂರಪ್ಪ ಕಾಲದಲ್ಲಿ. ಆರ್ ಅಶೋಕ ಗೃಹ ಮಂತ್ರಿಯಾದಾಗ ಹಿಂದೂ ನಾಯಕರ ಮೇಲೇ ಕೇಸ್ ಆಗಿದೆ. ಬಿಜೆಪಿ ಸರ್ಕಾರವೇ ಮುತಾಲಿಕ್ ರಿಗೆ ಕೆಲವು ಜಿಲ್ಲೆಗೆ ಬಾರದಂತೆ ತಡೆ ಹೇರಿದ್ದು. ಬೇಕಾದಷ್ಟು ಹಿಂದೂ ಯುವಕರ ಮೇಲೆ ಗೂಂಡಾ ಕಾಯಿದೆ ಹಾಕಿದ್ದು.
ಬಿಜೆಪಿ ಶಾಸಕರು ಮತ್ತು ಪ್ರತಿಪಕ್ಷದ ನಾಯಕರು ಪ್ರಬುದ್ಧವಾಗಿ ವರ್ತಿಸಿದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ನಿಮ್ಮನ್ನು ಮೂಲೆಗೆ ಎಸೆಯುತ್ತಾರೆ. ಮೋದಿ ಹೆಸರಿನಲ್ಲಿ ಗೆಲ್ಲುತ್ತೇವೆ ಎಂಬುವ ಭ್ರಮೆಯಿದ್ದರೆ ಅದಕ್ಕೆ ಈಗಾಗಲೇ ಮೋದಿಯವರನ್ನೂ ತಿರಸ್ಕರಿಸಿದ್ದಾರೆ. ಪ್ರತಿಪಕ್ಷ ಪ್ರಬುದ್ಧವಾಗಲಿ.