ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪರಿಣಿತ ತಜ್ಞರ ನಿಯೋಗವು ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಅವರ ನಿವಾಸದಲ್ಲಿ ಭೇಟಿಯಾಗಿ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ವಿಷಯಗಳ ಕುರಿತು ಚರ್ಚಿಸಿ ಮನವರಿಕೆ ಮಾಡಿತು.
ನೂತನ ಸಂಸದರಿಗೆ ಅಭಿನಂದನೆ ಸಲ್ಲಿಸಿದ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ʼಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೇಂದ್ರ ಸರಕಾರ ಘೋಷಣೆ ಮಾಡಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಕಲಬುರಗಿಯ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ, ಜವಳಿ ಪಾರ್ಕ್ ಅನುಷ್ಠಾನ, ಕಲಬುರಗಿ ಎರಡನೇ ವರ್ತುಲ ರಸ್ತೆ, ಕಲ್ಯಾಣ ಪಥ ಹೆದ್ದಾರಿ ರಸ್ತೆಗಳು, ಏಮ್ಸ್ ಸ್ಥಾಪನೆ ಸೇರಿದಂತೆ ಹಲವು ವಿಷಯಗಳ ಮನವರಿಕೆ ಮಾಡಿದರು.
ಚಿಂತಕ ಪ್ರೊ.ಆರ್.ಕೆ.ಹುಡಗಿ ಮಾತನಾಡಿ, ʼ371ನೇ(ಜೆ) ಕಲಂ ಕುರಿತು ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರವಾದ ಕಲಬುರಗಿಯಲ್ಲಿ ಒಂದು ದಿನದ ಬೃಹತ್ ಕಾರ್ಯಾಗಾರ ಸಮಿತಿ ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಕಾರ್ಯಾಗಾರದ ಉದ್ಘಾಟನೆ ಎಐಸಿಸಿ ಅಧ್ಯಕ್ಷರಿಂದ ಉದ್ಘಾಟಿಸಬೇಕು. ಕಲ್ಯಾಣ ಕರ್ನಾಟಕದ ಸಚಿವರು, ಸಂಸದರು, ಶಾಸಕರು ಸೇರಿದಂತೆ ಸಂಘ-ಸಂಸ್ಥೆಗಳ ಅಧ್ಯಕ್ಷರು, ವಿಶೇಷವಾಗಿ ಏಳು ಜಿಲ್ಲೆಯ ಪರಿಣಿತ ವ್ಯಕ್ತಿಗಳನ್ನು ಆಹ್ವಾನಿಸಿ 371ನೇ(ಜೆ) ಕಲಂ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಬೇಕಿದೆ. ಇದರ ಪರಿಣಾಮಕಾರಿ ಅನುಷ್ಠಾನದ ಕ್ರಮಗಳು ಹಾಗೂ ಕಲ್ಯಾಣ ಕರ್ನಾಟಕದ ರಚನಾತ್ಮಕ ಅಭಿವೃದ್ಧಿ ವಿಚಾರಗಳನ್ನು ಚರ್ಚಿಸುವ ಫಲಪ್ರದ ಐತಿಹಾಸಿಕ ವೇದಿಕೆಯಾಗಬೇಕು. ಇದಕ್ಕೆ ನೂತನ ಸಂಸದರು ಸ್ಪಂದಿಸಬೇಕುʼ ಎಂದು ಕೋರಿದರು.
ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ʼಕಲಬುರಗಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಗಂಭೀರವಾಗಿ ಪರಿಗಣಿಸಿ ಸರಕಾರದ ಮಟ್ಟದಲ್ಲಿ ಒತ್ತಾಯ ತರಲಾಗುವುದು. ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಕಲ್ಯಾಣ ಕರ್ನಾಟಕದ ಐದೂ ಲೋಕಸಭಾ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಸಂಘಟಿತ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸಲಾಗುವುದುʼ ಎಂದು ತಿಳಿಸಿದರು.
ʼಕಲ್ಯಾಣ ಕಲ್ಯಾಣ ಹೋರಾಟ ಸಮಿತಿ ಆಯೋಜಿಸುವ ಒಂದು ದಿನದ ಬೃಹತ್ ಕಾರ್ಯಾಗಾರದಲ್ಲಿ ತಾವು ಸೇರಿದಂತೆ ಎಲ್ಲರನ್ನೂ ಸೇರಿಸುವ ಕಾರ್ಯಕ್ಕೆ ತಾವು ಸಂಪೂರ್ಣವಾಗಿ ಸಹಕಾರ ಸ್ಪಂದನೆ ನೀಡುವುದಾಗಿ ಸಂಸದರು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಈ ಬಾರಿಯ ಅಧಿವೇಶನದಲ್ಲಾದರೂ ಜನಪರ ಚರ್ಚೆ-ವಾಗ್ವಾದ ನಡೆಯಬಹುದೇ?
ನಿಯೋಗದಲ್ಲಿ ಪ್ರಮುಖರಾದ ಪ್ರೊ. ಬಸವರಾಜ ಕುಮನೂರ, ಪ್ರೊ. ಶಂಕ್ರೆಪ ಹತ್ತಿ, ಡಾ. ಬಸವರಾಜ ಕಳಸಾ, ಡಾ. ಮಾಜಿದ್ ದಾಗಿ, ವಿನಾಯಕ ಪತ್ರಗಾರ, ಜಾನ್ ವಿಲ್ಸನ್, ರೌಫ್ ಖಾದರಿ, ಅಸ್ಲಂ ಚೌಂಗೆ, ಶಿವಾನಂದ ಕಾಂದೆ, ಮಂಜೂರ ಡೆಕ್ಕನಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.