ಅಂದು ಅಯೋಧ್ಯೆ, ಇಂದು ಬದರಿನಾಥ- ಎರಡೂ ಕ್ಷೇತಗಳಲ್ಲಿ ಬಿಜೆಪಿಗೆ ಜನ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ಹಿಂದೂಗಳ ಅಧಿಕೃತ ಪಕ್ಷವೇನೂ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನಾದರೂ ಸಂಘ ಪರಿವಾರ ಮತ್ತು ಬಿಜೆಪಿ ದೇವರು-ಧರ್ಮದ ರಾಜಕಾರಣ ಮಾಡುವುದನ್ನು ಬಿಟ್ಟು, ಹಿಂಸೆ, ದ್ವೇಷ, ಸುಳ್ಳುಗಳನ್ನು ಪಕ್ಕಕ್ಕಿಟ್ಟು ಪ್ರಜಾಪ್ರಭುತ್ವದ ಹಾದಿಯಲ್ಲಿ ನಡೆಯಬೇಕಿದೆ.
ಲೋಕಸಭೆ ಚುನಾವಣೆ ಬಳಿಕ ನಡೆದ ಏಳು ರಾಜ್ಯಗಳಲ್ಲಿನ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಹಣಾಹಣಿಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದೆ. ವಿರೋಧ ಪಕ್ಷಗಳ ಇಂಡಿ ಬಣ ಮೇಲುಗೈ ಸಾಧಿಸಿದೆ. 13 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಇಂಡಿ ಒಕ್ಕೂಟ ಗೆದ್ದುಕೊಂಡಿದೆ. ಭಾರತೀಯ ಜನತಾ ಪಕ್ಷವು ಕೇವಲ ಎರಡು ಸ್ಥಾನಗಳಲ್ಲಿ ಹಾಗೂ ಪಕ್ಷೇತರ ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾದ ಕಾರಣಕ್ಕೆ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿತ್ತು. ಆದರೂ ಎನ್‌ಡಿಎ ಮಿತ್ರ ಪಕ್ಷಗಳಿಂದ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. ಮೋದಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ವಿರಾಜಮಾನರಾಗಿದ್ದರು. ಈ ರಾಜಕೀಯ ಬೆಳವಣಿಗೆಗಳ ಬಳಿಕ, ಮೋದಿಯವರ ಮೊದಲ ತಿಂಗಳ ಆಡಳಿತದ ನಂತರ ನಡೆದ ಮೊದಲ ಉಪ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಅದರಲ್ಲೂ ಹಿಂದೂಗಳ ಪವಿತ್ರ ಕ್ಷೇತ್ರ ಬದರಿನಾಥದಲ್ಲಿ ಬಿಜೆಪಿ ಸೋತಿರುವುದು, ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗುರಿಯಾಗಿದೆ. ಬಿಜೆಪಿ ಹಿಂದೂಪರ ಪಕ್ಷವಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಹಾಗೆಯೇ ಸಂಘ ಪರಿವಾರ, ಬಿಜೆಪಿ ಮತ್ತು ಮೋದಿಯ ವರ್ಚಸ್ಸು ಕಳೆಗುಂದುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಪಶ್ಚಿಮ ಬಂಗಾಳ, ಉತ್ತರಾಖಂಡ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ತಮಿಳುನಾಡು, ಪಂಜಾಬ್ ಮತ್ತು ಬಿಹಾರ ರಾಜ್ಯಗಳ 13 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ, ಉತ್ತರಾಖಂಡ್‌ನ ಬದರಿನಾಥ್ ಕ್ಷೇತ್ರದ ಬಗ್ಗೆ ಎಲ್ಲರ ಕಣ್ಣಿತ್ತು. ಹಿಂದೂಗಳ ನಂಬಿಕೆಗಳ ಪ್ರಕಾರ, ಬದರಿನಾಥವನ್ನು ಬ್ರಹ್ಮಾಂಡದ ಎಂಟನೇ ವೈಕುಂಠ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮ ಪಾಲಿಸುವ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಬದರಿನಾಥಕ್ಕೆ ಭೇಟಿ ನೀಡಬೇಕೆಂಬ ಆಸೆ ಇದ್ದೇ ಇರುತ್ತದೆ.
ಇಂತಹ ಪವಿತ್ರ ಹಿಂದೂ ಕ್ಷೇತ್ರವಾದ ಬದರಿನಾಥಕ್ಕೆ ಸ್ವತಃ ಪ್ರಧಾನಿ ಮೋದಿಯವರೇ ಖುದ್ದಾಗಿ ತೆರಳಿ, ವಿಚಿತ್ರ ವೇಷಭೂಷಣ ಧರಿಸಿ, ಭಕ್ತಿ-ಭಾವದಿಂದ ಪೂಜೆ-ಪುನಸ್ಕಾರಗಳಲ್ಲಿ ಭಾಗಿಯಾಗಿ ಭಾರಿ ಪ್ರಚಾರ ಪಡೆದಿದ್ದರು. ಆ ಮೂಲಕ ಬಿಜೆಪಿ ಎಂದರೆ ಹಿಂದೂ ಪರ ಪಕ್ಷವೆಂದು ಬಿಂಬಿಸಲು, ಹಿಂದೂಗಳ ಮತಬ್ಯಾಂಕ್ ಗಟ್ಟಿಗೊಳಿಸಲು ಯತ್ನಿಸಿದ್ದರು. ಆದರೆ, ಇದೇ ಬದರಿನಾಥ್ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ಕೊಟ್ಟಾಗ, ಕ್ಯಾಮರ ನಿಷೇಧಿಸಿದ್ದರು. ದೇವಸ್ಥಾನದೊಳಕ್ಕೆ ಪ್ರವೇಶ ನೀಡದೆ ಹೊರಗೆ ನಿಲ್ಲಿಸಿ ಅವಮಾನಿಸಿದ್ದರು.
ಜಾರ್ಖಂಡ್ ರಾಜ್ಯ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿದೆ. ಜಾರ್ಖಂಡ್ ರಾಜ್ಯದ ಬದರಿನಾಥದಲ್ಲಿ ನಡೆದ ಮೊನ್ನಿನ ಉಪಚುನಾವಣೆಯಲ್ಲಿ ಅಲ್ಲಿಯ ಜನ, ಹಿಂದುತ್ವದ ವಾರಸುದಾರ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಬಿಜೆಪಿಯನ್ನು ತಿರಸ್ಕರಿಸಿ, ಕಾಂಗ್ರೆಸ್‌ನ ಲಖಪತ್ ಸಿಂಗ್ ಬುಟೋಲಾರನ್ನು ಗೆಲ್ಲಿಸಿಕೊಂಡಿದ್ದಾರೆ. ಹಾಗೆಯೇ ಮಂಗಳೌರ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಖಾಜಿ ಮೊಹಮ್ಮದ್ ನಿಜಾಮುದ್ದೀನ್‌ರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಅಚ್ಚರಿಯ ಫಲಿತಾಂಶ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿಯವರು, ‘ಬಿಜೆಪಿ ಹೆಣೆದಿದ್ದ ಭಯ ಮತ್ತು ಗೊಂದಲಕ್ಕೆ ತೆರೆ ಬಿದ್ದಿದೆ. ರೈತರು, ಯುವಕರು, ಕಾರ್ಮಿಕರು, ಉದ್ಯಮಿಗಳು ಮತ್ತು ಉದ್ಯೋಗಿಗಳು ಸೇರಿದಂತೆ ಪ್ರತಿಯೊಂದು ವರ್ಗವು ಸರ್ವಾಧಿಕಾರವನ್ನು ಸಂಪೂರ್ಣವಾಗಿ ನಾಶಮಾಡಿ ನ್ಯಾಯದ ಆಡಳಿತವನ್ನು ಸ್ಥಾಪಿಸಲು ಬಯಸುತ್ತಿದೆ. 7 ರಾಜ್ಯಗಳ ಉಪಚುನಾವಣೆಯ ಫಲಿತಾಂಶಗಳು ಅದನ್ನು ಸಾರುತ್ತಿವೆ’ ಎಂದಿದ್ದಾರೆ.
1990ರಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯನ್ನು ಕೆಡವಿ, ಅಲ್ಲಿ ರಾಮ ಮಂದಿರ ಕಟ್ಟಲು, ಸುಮಾರು 34 ವರ್ಷಗಳ ಕಾಲ ರಾಮಜ್ಯೋತಿ, ರಥಯಾತ್ರೆ, ಇಟ್ಟಿಗೆ ಮತ್ತು ದೇಣಿಗೆ ಸಂಗ್ರಹಣೆಯಲ್ಲಿ ಸಂಘಪರಿವಾರ ಮತ್ತು ಬಿಜೆಪಿ ನಿರತವಾಗಿತ್ತು. ಆ ಮೂಲಕ ದೇಶದಾದ್ಯಂತ ಹಿಂದೂ-ಮುಸ್ಲಿಮರ ನಡುವೆ ದ್ವೇಷಾಸೂಯೆ ಬಿತ್ತಿ, ಗಲಭೆ ಸೃಷ್ಟಿಸಿ, ನೆತ್ತರು ಹರಿಸಿ ಅಧಿಕಾರಕ್ಕೇರಿತ್ತು. ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ಸಂಘೀ ಅಜೆಂಡಾವನ್ನು ದೇಶದಾದ್ಯಂತ ವಿಸ್ತರಿಸಲು ಹವಣಿಸಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಈ ಬಾರಿಯ ಅಧಿವೇಶನದಲ್ಲಾದರೂ ಜನಪರ ಚರ್ಚೆ-ವಾಗ್ವಾದ ನಡೆಯಬಹುದೇ?
ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರ ಎಂದು ಮೂವತ್ತು ವರ್ಷಗಳಿಂದ ಹೇಳುತ್ತಲೇ ಇದ್ದ ಸಂಘ ಪರಿವಾರ ಮತ್ತು ಬಿಜೆಪಿ, ರಾಮಮಂದಿರ ಕಟ್ಟಲು ಎಂಟು ಸಾವಿರ ಕೋಟಿ ಖರ್ಚು ಮಾಡಿ ಮಂದಿರ ನಿರ್ಮಾಣ ಮಾಡಿತ್ತು. ದೇಶದಾದ್ಯಂತ ಬಡವರು, ದಲಿತರು ಮತ್ತು ಕೆಳವರ್ಗದವರು ಶಕ್ತ್ಯಾನುಸಾರ ದೇಣಿಗೆ ನೀಡಿದ್ದರು. ಅವರ ದೇಣಿಗೆಯಿಂದ ನಿರ್ಮಾಣವಾದ ರಾಮಮಂದಿರದ ಉದ್ಘಾಟನೆಗೆ, ಶ್ರೀರಾಮ ಪ್ರತಿಷ್ಠಾಪನೆಗೆ, ಅವರಾರಿಗೂ ಪ್ರವೇಶವೇ ಇರಲಿಲ್ಲ. ಅಷ್ಟೇಕೆ, ಅಯೋಧ್ಯೆಯ ಸ್ಥಳೀಯರು ಹತ್ತಿರ ಸುಳಿಯಲೂ ಸಾಧ್ಯವಾಗಿರಲಿಲ್ಲ.
ಇದಷ್ಟೇ ಅಲ್ಲ, ಅಯೋಧ್ಯೆಯನ್ನು ಹಿಂದೂಗಳ ಪುಣ್ಯಕ್ಷೇತ್ರವನ್ನಾಗಿಸುವ ಬದಲು, ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿಸುವ ದೆಸೆಯಲ್ಲಿ, ಸ್ಥಳೀಯರನ್ನು ಒಕ್ಕಲೆಬ್ಬಿಸಿತ್ತು. ಅವರ ಜಾಗವನ್ನು ರಿಯಲ್ ಎಸ್ಟೇಟ್ ದಂಧೆಕೋರರು ಆಕ್ರಮಿಸಿಕೊಳ್ಳಲು ಉತ್ತರ ಪ್ರದೇಶದ ಬಿಜೆಪಿ ಸರ್ಕಾರವೇ ಮುಂದೆ ನಿಂತು ಸಹಕರಿಸಿತ್ತು. ನಗರೀಕರಣದ ನೆಪದಲ್ಲಿ ಸ್ಥಳೀಯರ ಬದುಕಿಗೆ ಆಸರೆಯಾದ ಮನೆ, ಅಂಗಡಿಗಳನ್ನು ಬುಲ್ಡೋಜರ್ ಬಳಸಿ ಕೆಡವಲಾಗಿತ್ತು. ಅವರನ್ನು ಬೀದಿ ಪಾಲು ಮಾಡಲಾಗಿತ್ತು. ಇಷ್ಟೆಲ್ಲ ಮಾಡಿದ ಬಿಜೆಪಿಗೆ, ಲೋಕಸಭಾ ಚುನಾವಣೆಯಲ್ಲಿ ಅಲ್ಲಿಯ ಜನ, ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಕ್ಕ ಉತ್ತರ ನೀಡಿದ್ದರು. ಇಡೀ ದೇಶಕ್ಕೇ ಸಂದೇಶ ರವಾನಿಸಿದ್ದರು.
ಇದರಿಂದ ಭಾರಿ ಆಘಾತಕ್ಕೊಳಗಾದ ಸಂಘ ಪರಿವಾರ, ಬಿಜೆಪಿ ಮತ್ತು ಮೋದಿಯವರು ಚೇತರಿಸಿಕೊಳ್ಳುವ ಮೊದಲೇ, ಹಿಂದೂಗಳ ಮತ್ತೊಂದು ಪುಣ್ಯ ಕ್ಷೇತ್ರ ಬದರಿನಾಥದಲ್ಲೂ ಬಿಜೆಪಿಗೆ ಸೋಲುಂಟಾಗಿದೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ನಡೆದ ಲೋಕಸಭಾ ಅಧಿವೇಶನದಲ್ಲಿ, ಶಿವನ ಚಿತ್ರವನ್ನು ಪ್ರದರ್ಶಿಸಿ, ‘ಹಿಂದೂ ಧರ್ಮ, ಜೈನ ಧರ್ಮ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳು ಅಹಿಂಸೆಯನ್ನು ಪ್ರಚಾರ ಮಾಡುತ್ತವೆ ಮತ್ತು ಭಯಪಡಬೇಡ ಇತರರಲ್ಲಿ ಭಯ ಹುಟ್ಟಿಸಬೇಡ ಎಂಬ ಆದರ್ಶವನ್ನು ಪ್ರತಿಪಾದಿಸುತ್ತವೆ. ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳುವವರು ಏನು ಮಾಡುತ್ತಾರೆ? ದ್ವೇಷ ಬಿತ್ತುತ್ತಾರೆ, ಹಿಂಸೆಗೆ ಪ್ರಚೋದಿಸುತ್ತಾರೆ, ಸುಳ್ಳು ಹೇಳುತ್ತಾರೆ’ ಎಂದು ಬಿಜೆಪಿಯ ಹುಸಿ ಹಿಂದುತ್ವವನ್ನು ಬಿಡಿಸಿಟ್ಟಿದ್ದರು.
ರಾಹುಲ್ ಹೇಳಿದ ಸತ್ಯ ಅಯೋಧ್ಯೆ ಮತ್ತು ಬದರಿನಾಥ ಚುನಾವಣಾ ಫಲಿತಾಂಶದಲ್ಲಿ ಕಾಣುತ್ತಿದೆ. ಇನ್ನಾದರೂ ಸಂಘ ಪರಿವಾರ ಮತ್ತು ಬಿಜೆಪಿ ದೇವರು-ಧರ್ಮದ ರಾಜಕಾರಣ ಮಾಡುವುದನ್ನು ಬಿಟ್ಟು, ಪ್ರಜಾಪ್ರಭುತ್ವದ ಹಾದಿಯಲ್ಲಿ ನಡೆಯಬೇಕಿದೆ.
