ಪ್ರಾಂಶುಪಾಲರ ನೇರ ನೇಮಕಾತಿ ರದ್ದತಿ ಅನಿವಾರ್ಯ

Date:

Advertisements
ಸರ್ಕಾರವು ಕೂಡಲೇ ಅಂತರ ಇಲಾಖಾ ʼಉನ್ನತ ಶಿಕ್ಷಣಾಡಳಿತ ಸೇವೆʼ ಎಂಬ ಎ ಗ್ರೂಪ್‌ ನೇಮಕಾತಿ ನೀತಿಯನ್ನು ಪ್ರಸ್ತಾವಿಸಿ ಅದರ ಸಾಧಕ ಬಾಧಕಗಳ ಕುರಿತು ಶಿಕ್ಷಣ ತಜ್ಞರ ಸಲಹೆಗಳನ್ನು ಆಹ್ವಾನಿಸಲಿ: ಈ ಬಗ್ಗೆ ಚರ್ಚೆಗೆ ಚಾಲನೆ ಕೊಡಲಿ

 

ಈಗ ಇರುವ ಹಾಲಿ ಕಾಲೇಜು ಶಿಕ್ಷಣದ ಪ್ರಾಂಶುಪಾಲರ ನೇಮಕಾತಿ ಜಾರಿಯಾದಲ್ಲಿ ಕನಿಷ್ಠ 25 ಮಂದಿ ಎಂಜಿನಿಯರಿಂಗ್‌ ಕಾಲೇಜಿನ ಅಧ್ಯಾಪಕರು ಸಾಮಾನ್ಯ ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗುವ ಸಾಧ್ಯತೆ ಇದೆ. ಹೀಗೊಂದು ವೇಳೆ ಅವರು ಇಲ್ಲಿ ಬಂದು ಪ್ರಾಂಶುಪಾಲರಾಗಲು ಅವಕಾಶ ಇದೆ ಎಂದಾದರೆ ಅಲ್ಲಿಗೆ ಇಲ್ಲಿನವರನ್ನು ನೇಮಿಸಲು ಅವಕಾಶ ನೀಡುತ್ತಾರೆಯೆ? ಹಾಗೆಯೇ ಎಲ್ಲ ಕಡೆಗೂ ಈ ನೀತಿ ವಿಸ್ತರಣೆ ಮಾಡಲು ಸಾಧ್ಯವೇ? ಇಲ್ಲವಾದಲ್ಲಿ ಸದರಿ ಪ್ರಾಂಶುಪಾಲರ ನೇಮಕಾತಿ ನೀತಿ ಮಲತಾಯಿ ಧೋರಣೆಯದ್ದೇ ಆಗುತ್ತದೆಯಲ್ಲವೇ?

ಕರ್ನಾಟಕ ಸರ್ಕಾರವು ನೇರ ನೇಮಕಾತಿ ಮೂಲಕ ರಾಜ್ಯಾದ್ಯಂತ ಇರುವ ಎಲ್ಲ ಬಗೆಯ ಉನ್ನತ ಶಿಕ್ಷಣ ಇಲಾಖೆಗಳಿಗು ಶಿಕ್ಷಣಾಡಳಿತಕ್ಕೆ ಸಮಾನ ನೇಮಕಾತಿ ನೀತಿ ಮಾಡುವುದಾದರೆ ಆಗ ಅದನ್ನು ಸಮಾನ ನೆಲೆಯಲ್ಲಿ ಚರ್ಚಿಸಬಹುದು. ವೈದ್ಯಕೀಯ ಪದವಿ, ತಾಂತ್ರಿಕ ಪದವಿ, ಕೃಷಿ ಪದವಿ, ಪಶುವೈದ್ಯಕೀಯ, ಕಾನೂನು, ಮೀನುಗಾರಿಕೆ, ಹೈನುಗಾರಿಕೆ, ತೋಟಗಾರಿಕೆ, ಪ್ಯಾರಾ ಮೆಡಿಕಲ್‌ ಹೀಗೆ ಎಲ್ಲ ಕಡೆಯೂ ಸಾಮಾನ್ಯ ಪದವಿ ಕಾಲೇಜಿನ ಪ್ರಾಧ್ಯಾಪಕ ಒಬ್ಬರು ಪ್ರಾಂಶುಪಾಲರಾಗಿ ಹೋಗುವ ಅವಕಾಶಗಳನ್ನು ನೀಡುವಂತೆ ಕಾನೂನು/ ನಿಯಮ ಮಾಡಲು ಸಾಧ್ಯವೇ? ಅಂತರ ಇಲಾಖಾ ನೇಮಕಾತಿ ನೀತಿ ಸಿದ್ಧಪಡಿಸಿ ಉನ್ನತ ಶಿಕ್ಷಣಾಡಳಿತ ಸೇವೆ ಎಂಬ ಎ ಗ್ರೂಪ್ ಸೇವೆಯನ್ನೇ ಸೃಷ್ಟಿಸಲು ಸಾಧ್ಯವೇ? ಅಂತಹ ಸಮಾನ ನೇಮಕಾತಿ ನಿಯಮ ಜಾರಿ ಆಗಬಹುದಾದರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಹೊರಗಿನವರನ್ನು ತಂದು ನೇಮಕಾತಿ ಮಾಡುವುದನ್ನು ನ್ಯಾಯವೆಂದು ಒಪ್ಪಬಹುದು.

ಸರ್ಕಾರವು ಕೂಡಲೆ ಅಂತರ ಇಲಾಖಾ ʼಉನ್ನತ ಶಿಕ್ಷಣಾಡಳಿತ ಸೇವೆʼ ಎಂಬ ಎ ಗ್ರೂಪ್‌ ನೇಮಕಾತಿ ನೀತಿಯನ್ನು ಪ್ರಸ್ತಾವಿಸಿ ಅದರ ಸಾಧಕಬಾಧಕಗಳ ಕುರಿತು ಶಿಕ್ಷಣ ತಜ್ಞರ ಸಲಹೆಗಳನ್ನು ಆಹ್ವಾನಿಸಲಿ: ಈ ಬಗ್ಗೆ ಚರ್ಚೆಗೆ ಚಾಲನೆ ಕೊಡಲಿ. ಆಗಲಾದರು ಸರ್ಕಾರಕ್ಕೆ ಅಂತರ ಇಲಾಖಾ ನೇಮಕಾತಿ ಎಷ್ಟು ಅವೈಜ್ಞಾನಿಕ ಮತ್ತು ಅಪಾಯಕಾರಿ ಎಂದು ಅರಿವಾದೀತು. ಕೆಲವರು ಇದನ್ನು ಹಸಿದವರ ಪ್ರಶ್ನೆಯಾಗಿ, ಅರೆಹೊಟ್ಟೆಯವರ ಪ್ರಶ್ನೆಯಾಗಿ ಬಿಂಬಿಸುತ್ತಿದ್ದಾರೆ. ಕೆಲವರು ಇದನ್ನು ಅವಕಾಶವಂಚಿತರ ಆಕ್ಷೇಪವನ್ನಾಗಿಯೂ ಬಿಂಬಿಸುತ್ತಿದ್ದಾರೆ. ಆದರೆ, ಇದು ಅಂತಹ ಪ್ರಶ್ನೆಯಲ್ಲ. ಇದು ಎಲ್ಲೋ ಸಲ್ಲಬೇಕಾದವರನ್ನು ಇನ್ನೆಲ್ಲೋ ತಂದು ಸರ್ಕಾರಿ ವ್ಯವಸ್ಥೆಯ ಒಳಗೆ ಕೂರಿಸುವ ಪ್ರಶ್ನೆಯಷ್ಟೇ.

Advertisements

ವಿಶ್ವವಿದ್ಯಾಲಯ ಆಡಳಿತದಲ್ಲಿ ಉಪಕುಲಪತಿಗಳನ್ನು ಸೀಮಿತ ಅವಧಿಗೆ ನೇಮಕ ಮಾಡುತ್ತಿಲ್ಲವೆ? ಅದೆ ರೀತಿ ಪ್ರಾಂಶುಪಾಲರನ್ನೂ ನೇಮಿಸಬಾರದೇಕೆ? ಎಂಬ ಪ್ರಶ್ನೆಯನ್ನೂ ಇತ್ತೀಚೆಗೆ ಎತ್ತಲಾಗಿದೆ. ಆದರೆ ವಿಸಿಗಳು ಯಾರೂ ಹಣಕಾಸು ಬಿಲ್ಲಿಗೆ ಸಹಿ ಮಾಡುವವರಲ್ಲ. ಅಲ್ಲದೆ ವಿವಿ ಆಡಳಿತ ಸ್ವರೂಪವೇ ಬೇರೆ; ಕಾಲೇಜು ಶಿಕ್ಷಣಾಡಳಿತದ ಸ್ವರೂಪವೇ ಬೇರೆ. ಹಾಗೆ ಒಂದನ್ನೊಂದು ಹೋಲಿಸಿ ಒಂದೇ ಮಾಡಲಾಗದು. ವಿಸಿ ಹುದ್ದೆಯನ್ನು ಪ್ರಾಂಶುಪಾಲರ ಹುದ್ದೆಗೆ ಸಮಾನವಾಗಿ ನೋಡಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯಗಳಲ್ಲಿ ವಿವಿಧ ಅಧ್ಯಯನ ಕೇಂದ್ರಗಳ ನಿರ್ದೇಶಕರನ್ನೂ ಸೀಮಿತ ಅವಧಿಗೆ ನೇಮಿಸುವ ಪದ್ಧತಿಯಿದೆ. ಆದರೆ ಇತಿಹಾಸ ವಿಭಾಗದ ನಿರ್ದೇಶಕರನ್ನು ಅರ್ಥಶಾಸ್ತ್ರದಿಂದಲೊ, ಭೌತಶಾಸ್ತ್ರದಿಂದಲೊ ತಂದು ನೇಮಿಸುವುದಿಲ್ಲ. ಅಲ್ಲಿನವರನ್ನೇ ಅಲ್ಲಲ್ಲೆ ನೇಮಿಸಲಾಗುತ್ತದೆ. ಇದನ್ನೂ ನಾವು ಗಮನಿಸಬೇಕು.

ಸರ್ಕಾರಿ ಮತ್ತು ಖಾಸಗಿ ಎನ್ನುವ ಪ್ರಶ್ನೆಯನ್ನು ಚರ್ಚೆಯಲ್ಲಿ ಕೆಲವರು ಮುಂದು ಮಾಡಿದ್ದಾರೆ. ಸದರಿ ನೇಮಕಾತಿಯಲ್ಲಿ ಖಾಸಗಿ ಮಾತ್ರವಲ್ಲ; ಅಂತರ ಇಲಾಖಾ ನೇಮಕಾತಿಯ ಪ್ರಶ್ನೆಯಿದೆ. ಸಿಎಎಸ್‌ ಅನುಸಾರ ಪ್ರಸ್ತಾವನೆ ಸಲ್ಲಿಸಿ, ಎಪಿಐ ಅಂಕಗಳ ಆಧಾರದ ಮೇಲೆ ಕಾರ್ಯಕ್ಷಮತೆಯ ಪರಿಶೀಲನೆಗೆ ಒಳಪಟ್ಟು, ಸಂಶೋಧನಾ ಲೇಖನ/ಪುಸ್ತಕಗಳನ್ನು ಪ್ರಕಟಿಸಿ, ಸಂದರ್ಶನ ಎದುರಿಸಿ ಬಡ್ತಿ ಪಡೆಯುವ ಮತ್ತು ಹೀಗೆ ಬಡ್ತಿ ಪಡೆಯದೇ ಆಡಳಿತ ಮಂಡಳಿಯ ಮರ್ಜಿಗೆ ಒಳಪಟ್ಟು ಬಡ್ತಿ ಪಡೆಯುವವರ ನಡುವಿನ ಅಸಮಾನ ಆಯ್ಕೆಯ ಪ್ರಶ್ನೆಯಿದೆ. ಸೀಮಿತ ಅವಧಿಗೆ ಸರ್ಕಾರಿ ಅಧ್ಯಾಪಕರು ನೇಮಕ ಆದಾಗ್ಯೂ ಅವರಿಗೆ ಮರಳಿ ಲೀನ್‌ ಹುದ್ದೆಗೆ ಹೋಗುವ ಅವಕಾಶ ಇರುತ್ತದೆ. ಆದರೆ, ಖಾಸಗಿಯವರಿಗೆ ಹಾಗೆ ಅವರವರ ಮಾತೃ ಹುದ್ದೆಗೆ ಮರಳುವ ಅವಕಾಶ ಇರುವುದಿಲ್ಲ. ಹೀಗಾಗಿ ಇಲ್ಲಿ ಈ ಸೇವಾ ಭದ್ರತೆಯ ಪ್ರಶ್ನೆಯೂ ಇದೆ. ಇದೆಲ್ಲವನ್ನೂ ಕಡೆಗಣಿಸಿ ಇದನ್ನು ಕೇವಲ ಖಾಸಗಿ ಮತ್ತು ಸರ್ಕಾರಿ ಪ್ರಶ್ನೆ ಮಾತ್ರವಾಗಿ ನೋಡಲಾಗದು.

ಯುಜಿಸಿ ನಿಯಮಗಳಿಗೆ ಅನುಸಾರವಾಗಿ ಸರ್ಕಾರವು ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿದೆ ಎಂದೂ ವಾದ ಹೂಡಲಾಗುತ್ತಿದೆ. ಇದೊಂದು ಹುರುಳಿಲ್ಲದ ಪೊಳ್ಳು ವಾದ. ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಂತರ ಇಲಾಖಾ ಮುಕ್ತತೆ ನೀಡಿ ಪ್ರಾಂಶುಪಾಲರನ್ನು ನೇಮಕ ಮಾಡಬೇಕು ಎಂದು ಎಲ್ಲಿಯೂ ಯುಜಿಸಿ ನಿಯಮಗಳಲ್ಲಿ ಹೇಳಿಲ್ಲ. ಹಾಗೊಂದು ವೇಳೆ ಮುಂದೆ ಹೇಳಿದರೂ ಅದು ಖಂಡನಾರ್ಹ ಮತ್ತು ತಿರಸ್ಕಾರಾರ್ಹ. ಹಾಗೊಂದು ವೇಳೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿಯೇ ಪ್ರಾಂಶುಪಾಲರ ನೇರ ನೇಮಕಾತಿ ಮಾಡಬೇಕು ಎಂದಿದ್ದಲ್ಲಿ; 2017ರ ಬ್ಯಾಚಿನಲ್ಲಿ ನಿಜಕ್ಕೂ ಹಲವರು (ಎಲ್ಲರು ಅಲ್ಲ) ಪ್ರತಿಭಾವಂತರು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾಗಿ ಕಾಲೇಜು ಶಿಕ್ಷಣ ಇಲಾಖೆಗೆ ಬಂದಿದ್ದಾರೆ. ಅಸೋಸಿಯೇಟ್ ಪ್ರೊಫೆಸರ್‌ಶಿಪ್ ಕೂಡ ಪ್ರಾಂಶುಪಾಲರ ನೇಮಕಾತಿ ಅರ್ಹತೆಯಿಂದ ತೆಗೆದುಬಿಡಲಿ. 5-10 ವರ್ಷ ಅನುಭವ ಆದವರೂ ಪ್ರಾಂಶುಪಾಲರಾಗಲಿ. ಅಡ್ಡಿಯಿಲ್ಲ. ಯಂಗ್ ಬ್ಲಡ್, ಟ್ಯಾಲೆಂಟೆಡ್ ಎಲ್ಲ ಕಡೆ ಪ್ರಾಂಶುಪಾಲರಾಗಲಿ. ಆದರೆ ಯಾವುದೇ ಇಲಾಖೆಯಲ್ಲಿ ಹೊರಗಿನವರಿಗೆ ಏತಕ್ಕೆ ಅವಕಾಶ ನೀಡಬೇಕು? ಒಳಗೆ ಪ್ರತಿಭಾವಂತರು ಇರುವುದಿಲ್ಲವೆ? ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿಯೆ ಅಸಿಸ್ಟೆಂಟ್‌ ಪ್ರೊಫೆಸರುಗಳನ್ನು ನೇಮಿಸುವುದಿಲ್ಲವೆ? ಹಾಗಾಗಿಯೂ ಹೇಗೋ ಸರ್ಕಾರಿ ವ್ಯವಸ್ಥೆಯ ಒಳನುಸುಳಿ ನಿಂತ ನೀರಾಗಬಹುದಾದ ಜಡತೆಯನ್ನು ದೂರ ಇಡಲು ಮತ್ತೊಮ್ಮೆ ಪರೀಕ್ಷೆ ಮಾಡಿ ಪ್ರಾಂಶುಪಾಲರನ್ನು ನೇಮಿಸುವುದಾದರೆ ಒಳಗಿನವರಿಗೇ ಪರೀಕ್ಷೆ ನಡೆಸಲಿ. ಸಿಎಎಸ್ ಅನ್ನೂ ನೇಮಕಾತಿಗೆ ಸಮಾನಾಂತರವಾಗಿ ಅನ್ವಯಿಸಲಿ.

ಇದು ಗ್ರೂಪ್‌ ಎ ನೇಮಕಾತಿ ಆಗಿರುವುದರಿಂದ ಇಲ್ಲಿರುವ ಎಲ್ಲ ಅಧ್ಯಾಪಕರೂ ಒಂದಲ್ಲ ಒಂದು ವಿಷಯ ತಜ್ಞರೇ ಆಗಿರುವುದರಿಂದ 2021ರ ಕರ್ನಾಟಕ ನೇರ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ಒಳಗಿನವರಿಗೆ ಮಾತ್ರವೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕಾದುದೇ ಸರಿಯಾದ ಕ್ರಮ. ಜೊತೆಗೆ ಸಮಿತಿಯ ಮೂಲಕ ಸಿಎಎಸ್‌ ಕೂಡ ಅನ್ವಯಿಸಿ ಸೀಮಿತ ಅವಧಿಗೆ ನೇಮಕಾತಿ ಮಾಡಲಿ. ಆಗ ಇಲ್ಲಿ ಸಲ್ಲಬೇಕಾದವರು ಮಾತ್ರ ಸಲ್ಲುತ್ತಾರೆ. ಎಲ್ಲಿನವರೋ ಇಲ್ಲಿ ಬಂದು ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವಷ್ಟರಲ್ಲೇ ನಿವೃತ್ತರಾಗಿ ಹೋಗುವ ಮತ್ತು ಆನಂತರ ಅತಂತ್ರರಾಗುವ ಸ್ಥಿತಿ ಅವರಿಗು ಬೇಡ. ಅವರೂ ಕರ್ನಾಟಕದವರೇ, ನಮ್ಮಂತೆ ಅನ್ನ ತಿನ್ನುವ ಮನುಷ್ಯರು. ಅವರಿಗೂ ಸಮಾಜದ ಸುಧಾರಣೆಯ ಜೊತೆಗೆ ಹೊಟ್ಟೆ ಬಟ್ಟೆ ಚಿಂತೆ ಇರುತ್ತದಲ್ಲವೇ? ಕೆಲವರನ್ನು ಅವಧಿ ತೀರಿದ ಬಳಿಕ ಸರ್ಕಾರಿ ವ್ಯವಸ್ಥೆಯಲ್ಲಿ ಅವರ ಲೀನ್‌ ಹುದ್ದೆಗಳಿಗೆ ವಾಪಸ್‌ ಕಳಿಸಿ ಸೇವಾ ಭದ್ರತೆ ನೀಡಿ ಮಿಕ್ಕ ಕೆಲವರನ್ನು (ಖಾಸಗಿಯವರನ್ನು) ಕಡೆಗೆ ಎಲ್ಲಿಯೂ ಸಲ್ಲದಂತೆ ತ್ರಿಶಂಕು ಮಾಡುವುದು ಯಾವ ನ್ಯಾಯ?

ಹಾಗೊಂದು ವೇಳೆ ಹೊಸಪರೀಕ್ಷೆ ಮಾಡುವುದೆ ಆದಲ್ಲಿ ಸರ್ಕಾರದಿಂದ ಅನುಮೋದನೆ ಪಡೆದಿರುವ 310 ಹುದ್ದೆಗಳನ್ನು ಹೊರತುಪಡಿಸಿ ಇನ್ನುಳಿದ ಖಾಲಿ ಹುದ್ದೆಗಳಿಗೆ ಪ್ರಾಧ್ಯಾಪಕರ ಜೇಷ್ಠತೆ ಆಧಾರದಲ್ಲಿ ಬಡ್ತಿ ಮೂಲಕ ಪರೀಕ್ಷಾಪೂರ್ವ ನೇಮಕಾತಿ ಮಾಡಲಿ. ಆನಂತರ ಹೊಸಪರೀಕ್ಷೆ ನಿಗದಿಪಡಿಸಲಿ. ಅಥವಾ ಎಲ್ಲ ಹುದ್ದೆಗಳಿಗು ಅನುಮೋದನೆ ಪಡೆದು ಒಮ್ಮೆಗೆ ನೇಮಕ ಮಾಡಲಿ. ಯುಜಿಸಿ ನಿಗದಿಸಿರುವಂತೆ ನೇಮಕಾತಿ ಮಾಡುವುದಾದರೆ ಮುವ್ವತ್ತೇ ದಿನಗಳಲ್ಲಿ ನೇಮಕಾತಿ ನಡೆಸಲು ಸಾಧ್ಯ. ಯುಜಿಸಿ ನಿಯಮಗಳನ್ನು ಸರಿಯಾಗಿ ಓದದೇ ಇರುವವರು ಅಥವಾ ಮಿಸ್‌ ರೀಡಿಂಗ್‌ ಮಾಡಿದವರು ಅಪಸ್ವರ ಎತ್ತುತ್ತಾರಷ್ಟೆ. ಸುಳ್ಳು ಸುಳ್ಳೇ ಆರೋಪ ಮಾಡುತ್ತಾರಷ್ಟೇ.

ಸದರಿ ಪ್ರಾಂಶುಪಾಲರ ನೇರ ನೇಮಕಾತಿಯಿಂದ ಶಿಕ್ಷಣಾಡಳಿತವನ್ನು ಖಂಡಿತಾ ಸುಧಾರಿಸಲು ಸಾಧ್ಯವಿಲ್ಲ. ಮೇಲ್ಕಂಡ ಪ್ರಸ್ತಾವಿತ ಕ್ರಮಗಳಿಂದ ಕಾಲೇಜು ಶಿಕ್ಷಣಾಡಳಿತವನ್ನು ಸುಧಾರಿಸಲು ಸಾಧ್ಯವಿದೆ. ಇಂಥಹ ಕ್ರಮಗಳಿಗಾಗಿ ಯುಜಿಸಿ ನಿಯಮಗಳನ್ನು ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಬದಲಿಸಿ, ಕರ್ನಾಟಕ ನೇಮಕಾತಿ, ಬಡ್ತಿ, ಶಿಕ್ಷಣ ಗುಣಮಟ್ಟ ಖಾತ್ರಿ ನೀತಿ ಮಾಡಲಿ. ಶಿಕ್ಷಣವನ್ನು ಸುಧಾರಿಸಿ. ಹೊರಗಿನವರನ್ನು ಅದರಲ್ಲೂ ಬೇರೆ ಬೇರೆ ಇಲಾಖೆಯ ಜನರನ್ನು ಇಲ್ಲಿ ಸಾಮಾನ್ಯ ಪದವಿ ಕಾಲೇಜುಗಳಿಗೆ ಪ್ರಾಂಶುಪಾಲರನ್ನಾಗಿ ನೇಮಿಸುವ ಅಪಕ್ರಮವನ್ನು ನಿಲ್ಲಿಸಲಿ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. “ಸದರಿ ಪ್ರಾಂಶುಪಾಲರ ನೇರ ನೇಮಕಾತಿಯಿಂದ ಶಿಕ್ಷಣಾಡಳಿತವನ್ನು ಖಂಡಿತಾ ಸುಧಾರಿಸಲು ಸಾಧ್ಯವಿಲ್ಲ” – ಇಷ್ಟು ವರ್ಷ ಏನು ಮಾಡ್ತಾ ಇದ್ರು ಈ ಮಹಾಶಯರು? ಇಷ್ಟು ಪ್ರಶ್ನೆಗಳನ್ನು ಸರ್ಕಾರ ಮತ್ತು ಪರೀಕ್ಷಾ ಪ್ರಾಧಿಕಾರ ಆಕ್ಷೇಪಣೆ ಆಹ್ವಾನಿಸಿದಾಗ ಎತ್ತಲಿಲ್ಲ ಏಕೆ?

    ಕೈಗೆಟಕದ ದ್ರಾಕ್ಷಿ ಹುಳಿ?
    ಖಾಸಗಿಯವರ ಕುರಿತು ಇಲ್ಲಿ ಪ್ರಸ್ತಾಪಿಸಿದ್ದಾರೆ. ಇವರು ಅವರಷ್ಟು ಕಟ್ಟುನಿಟ್ಟಾಗಿ ತರಗತಿಗಳಲ್ಲಿ ಪಾಠ ಮಾಡಿದ್ದಾರೆಯೇ? ಅವರಂತೆ ಸಂಶೋಧನೆಯಲ್ಲಿ ನಿರತರಾಗಿದ್ದಾರೆಯೇ? ಅವರಂತೆ ನಿಯತಕಾಲಿಕೆಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪರ್ಕಟಿಸಿದ್ದಾರೆಯೇ? ಎಷ್ಷು ಶೇಕಡಾವಾರು ಮಂದಿ ಈ ಅರ್ಹತೆಗಳನ್ನು ಹೊಂದಿದ್ದಾರೆ? Let the document verification happen, We will realise how many have applied wrongly to the posts.

  2. Dr. R. NAIK ಕೆಲವರು ಖಾಸಗಿ ಕಾಲೇಜು ಪ್ರಾಧ್ಯಾಪಕರನ್ನು ಪದವಿ ಕಾಲೇಜುಗಳ ಪ್ರಾಂಶುಪಾಲರಾಗಿ ನೇಮಕ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಖಾಸಗಿ ಕಾಲೇಜುಗಳ ಪ್ರಾಧ್ಯಾಪಕರಲ್ಲಿ ಹಲವು ಮಹತ್ವದ ಗುಣಗಳನ್ನು ಹೊಂದಿರುವುದನ್ನು ನಾವು ಗಮನದಲ್ಲಿ ಇಡಬೇಕು.
    ಖಾಸಗಿ ಕಾಲೇಜುಗಳು ನಿರಂತರವಾಗಿ ಆಧುನಿಕ ಶಿಕ್ಷಣ ವಿಧಾನಗಳನ್ನು ಅನುಸರಿಸುತ್ತವೆ. ಈ ಕಾಲೇಜುಗಳ ಪ್ರಾಧ್ಯಾಪಕರು ಶೈಕ್ಷಣಿಕ ವಿಷಯಗಳಲ್ಲಿ ತೀಕ್ಷ್ಣ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳನ್ನು ಸುಸಜ್ಜಿತ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಇಂತಹ ಪ್ರಾಧ್ಯಾಪಕರು ಹೊಸ ತಂತ್ರಜ್ಞಾನಗಳನ್ನು, ಸೃಜನಶೀಲ ಪರಿಕಲ್ಪನೆಗಳನ್ನು ಮತ್ತು ನೂತನ ಶಿಕ್ಷಣ ವಿಧಾನಗಳನ್ನು ಪರಿಚಯಿಸುತ್ತಾರೆ.
    ಇವರ ಅನುಭವವು ಕೇವಲ ಶಿಕ್ಷಣಕ್ಕೆ ಸೀಮಿತವಲ್ಲ. ಇವರಿಗೆ ವಿದ್ಯಾರ್ಥಿಗಳ ಸಂಘಟನೆ, ನಿರ್ವಹಣೆ, ಮತ್ತು ಶೈಕ್ಷಣಿಕ ಆಡಳಿತದ ಬಗ್ಗೆ ಉತ್ತಮ ಜ್ಞಾನವಿದೆ. ಖಾಸಗಿ ಕಾಲೇಜುಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಇವರಿಗೆ ಸಮ್ಮಾನಿತ ಮತ್ತು ಮೌಲ್ಯಯುತ ಶೈಕ್ಷಣಿಕ ಪ್ರಯೋಜನಗಳನ್ನು ನೀಡಲಾಗುತ್ತದೆ.
    ಅಲ್ಲದೆ, ಖಾಸಗಿ ಕಾಲೇಜುಗಳಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರಿಗೆ ಸವಾಲುಗಳ ಪರಿಸರದಲ್ಲಿ ದುಡಿಯುವಂತಹ ಅಭ್ಯಾಸವಿದೆ. ವಿದ್ಯಾರ್ಥಿಗಳ ಒಳಿತಿಗಾಗಿ ಹೆಚ್ಚಿನ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಹೊಂದಿರುವ ಇಂತಹ ಪ್ರಾಧ್ಯಾಪಕರು, ಸರಕಾರಿ ಪದವಿ ಕಾಲೇಜುಗಳಿಗೆ ಹೆಚ್ಚು ಪ್ರಯೋಜನಕಾರಿಯರಾಗಬಹುದು.
    ಇದರ ಮೂಲಕ ನಮ್ಮ ಶಿಕ್ಷಣ ವ್ಯವಸ್ಥೆಗೆ ಹೊಸ ತೇಜಸ್ಸು, ನವೀನತೆ ಮತ್ತು ಉತ್ತಮ ಆಡಳಿತದ ಆಶಾಕಿರಣವನ್ನು ನೀಡಬಹುದು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

Download Eedina App Android / iOS

X