ಪೌರಕಾರ್ಮಿಕರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರು ಮತ್ತು ನೌಕರರ ಸಂಘದಿಂದ ಮೊದಲ ದಿನ ಕೈಗೆ ಕಪ್ಪುಬಟ್ಟೆ ಧರಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿ ಜುಲೈ 18ರಂದು ಮೊದಲ ದಿನ ಕೈಗೆ ಕಪ್ಪುಬಟ್ಟೆ ಧರಿಸಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ, ಅಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿರು.
“ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ 2017ರಲ್ಲಿ ಆದೇಶ ಹೊರಡಿಸಿದೆ. ಆದರೆ 8 ವರ್ಷಗಳು ಗತಿಸಿದರೂ 134 ಪೌರಕಾರ್ಮಿಕರ ಹುದ್ದೆಗಳನ್ನು ಖಾಯಂಗೊಳಿಸಿಲ್ಲ. ಪೌರಕಾರ್ಮಿಕ ಕೆಲಸ ಖಾಯಂಗೊಳ್ಳುವ ಕನಸು ಕಂಡು ಹೋರಾಟ ಮಾಡಿದ ಸುಮಾರು 200 ಮಂದಿ ಪೌರಕಾರ್ಮಿಕರು ಮೃತಪಟ್ಟಿದ್ದಾರೆ. 100ಕ್ಕೂ ಅಧಿಕ ಮಂದಿ ಪೌರಕಾರ್ಮಿಕರು 60 ವರ್ಷ ಮೇಲ್ಪಟ್ಟು ನಿವೃತ್ತಿ ಹೊಂದಿ ಪಾಲಿಕೆಯಿಂದ ಯಾವುದೇ ಸೌಲಭ್ಯ ಇಲ್ಲದೆ ಬೀದಿ ಪಾಲಾಗಿದ್ದಾರೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಪೌರಕಾರ್ಮಿಕರನ್ನು ನೇರನೇಮಕಾತಿ ಮಾಡಿಕೊಳ್ಳಬೇಕು. ಪಾಲಿಕೆ ಸಾಮಾನ್ಯಸಭೆಯ ಠರಾವಿನಂತೆ 799 ಮಂದಿ ಪೌರಕಾರ್ಮಿಕರಿಗೆ ನೇರವೇತನ ಪಾವತಿಸಬೇಕೆಂದು ಪಾಲಿಕೆ ಸಾಮಾನ್ಯ ಸಭೆಯ ಠರಾವು ಪಾಸ್ ಆಗಿದೆ. ಪಾಲಿಕೆ ಸಾಮಾನ್ಯಸಭೆ ಠರಾವುಗಳಿಗೆ ಮಾನ್ಯತೆ ಇಲ್ಲದಾಗಿದೆ. ಪಾಲಿಕೆ ಆವರಣದಲ್ಲಿ ಸಂಘಕ್ಕೆ ಕೊಠಡಿ ನೀಡಬೇಕೆಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿ ಎರಡು ವರ್ಷ ಗತಿಸಿದರೂ ಕೊಠಡಿ ನೀಡುತ್ತಿಲ್ಲ” ಎಂದು ಆರೋಪಿಸಿದರು.
“ಕನಿಷ್ಟ ವೇತನ ಬಾಕಿ ₹9 ಕೋಟಿ, 868 ಮಂದಿ ಮಹಿಳಾ ಪೌರಕಾರ್ಮಿಕರಿಗೆ ಮೆಡಿಕಲ್ ಬೋನಸ್ ₹21.70 ಲಕ್ಷ, ಸರ್ಕಾರದ ಆದೇಶದಂತೆ ಪ್ರತಿ ತಿಂಗಳು ₹2000 ಸಂಕಷ್ಟ ಭತ್ಯೆ, 60 ವರ್ಷ ಸೇವೆ ಸಲ್ಲಿಸಿ ನಿವೃತ್ತಿ/ಮೃತಪಟ್ಟ ಪೌರಕಾರ್ಮಿಕರಿಗೆ ₹10ಲಕ್ಷ ಪರಿಹಾರ ಹಾಗೂ ₹5000 ನಿವೃತ್ತಿ ವೇತನ, 2,165 ಮಂದಿ ಪೌರಕಾರ್ಮಿಕರಿಗೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಉಚಿತ ಮನೆಗಳನ್ನು ನಿರ್ಮಿಸಿಕೊಡಬೇಕು, ಸರ್ಕಾರದ ಆದೇಶದಂತೆ ವಾರದಲ್ಲಿ ಒಂದು ದಿನ ಪೂರ್ತಿ ರಜೆ, ಬಯೋಮೆಟ್ರಿಕ್ ಹಾಜರಾತಿ, ಸಫಾಯಿ ಕರ್ಮಚಾರಿಗಳ ಆಯೋಗದ ನಿರ್ದೇಶನಗಳ ಅನುಷ್ಠಾನ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು ಪ್ರವಾಹ : ತ್ವರಿತ ಪರಿಹಾರ ಕ್ರಮಕ್ಕೆ ಅಧಿಕಾರಿಗಳಿಗೆ ಸಚಿವ ಜಾರ್ಜ್ ನಿರ್ದೇಶನ
ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಾಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಸೋಮು ಮೊರಬದ, ಯಲವ್ವ ನಾರಾಯಣಪುರ, ಲಕ್ಷ್ಮೀ ಬೇತಾಪಲ್ಲಿ, ಶರಣಪ್ಪ ಅಮರಾವತಿ ದತಪ್ಪ, ಲಕ್ಷ್ಮೀ ವಾಲಿ, ಕನಕಪ್ಪ ಕೋಟಬಾಗಿ, ಪುಲಯ್ಯಾ ಚಿಂಚಗೋಳ, ಭಾಗ್ಯಲಕ್ಷ್ಮೀ ಮಾದರ, ಯಲ್ಲವ್ವ ದೇವರಗುಡಿಹಾಳ, ಪ್ರೇಮಾ ಕಣೆಕಲ್, ಅನಿತಾ ಇನಗೊಂಡ ಸೇರಿದಂತೆ ಬಹುತೇಕ ಮಂದಿ ಪೌರಕಾರ್ಮಿಕರು ಇದ್ದರು.