ನಿರಂತರ ಮಳೆಯ ಹಿನ್ನೆಲೆಯಲ್ಲಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಅವಳಿ ಮಕ್ಕಳ ಸಹಿತ ತಾಯಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಮನೆ ಸೋರುತ್ತಿದ್ದು, ಇಂದು ಬೆಳಗ್ಗೆ ಗೋಡೆ ಕುಸಿದಿದೆ. ಮೃತ ಚೆನ್ನಮ್ಮ ಹರಕುಣಿ (30), ಆಕೆಯ ಅವಳಿ ಹೆಣ್ಣು ಮಕ್ಕಳಾದ ಅಮೂಲ್ಯ ಮತ್ತು ಅನನ್ಯಾ (2) ಒಂದೇ ಕೋಣೆಯಲ್ಲಿ ಮಲಗಿದ್ದರು. ಚೆನ್ನಮ್ಮ ಅವರ ತಾಯಿ ಯಲ್ಲಮ್ಮ (70) ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡಿರುವ ಮುತ್ತಣ್ಣ ಹರಕುಣಿ (70) ಮತ್ತು ಸುನೀತಾ (35) ಅವರನ್ನು ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ಕೃಷಿ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬ ಮಾದಾಪುರ ಗ್ರಾಮದಲ್ಲಿ ಸಣ್ಣ ಹಿಡುವಳಿ ಭೂಮಿ ಹೊಂದಿದೆ.
ಗ್ರಾಮಕ್ಕೆ ಭೇಟಿ ನೀಡಿದ ಸಂಸದ ಬಸವರಾಜ ಬೊಮ್ಮಾಯಿ
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರದಲ್ಲಿ ಮನೆಬಿದ್ದು ಮೂವರು ಸಾವಿಗೀಡಾದ ಘಟನಾ ಸ್ಥಳಕ್ಕೆ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ನೆರವು ನೀಡಿದರು.
ಅತಿಯಾಗಿ ಸುರಿಯುತ್ತಿರುವ ಮಳೆಯಿಂದ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿರುವುದರಿಂದ ಮನೆಗೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದೆನು. ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿ, ಸರ್ಕಾರದಿಂದ ಹೆಚ್ಚಿನ ಪರಿಹಾರ… pic.twitter.com/AHlwxfc5x0
— Basavaraj S Bommai (@BSBommai) July 19, 2024
ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಸುಕಿನಜಾವ ಮಳೆಗೆ ಮನೆಯ ಗೋಡೆ ಕುಸಿದು ತಾಯಿ ಹಾಗೂ ಇಬ್ಬರು ಮಕ್ಕಳು ಸಾವಿಗೀಡಾಗಿದ್ದರು.
ಮನೆ ಬಿದ್ದಿದ್ದ ಸ್ಥಳವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಪರಿಶೀಲನೆ ನಡೆಸಿ, ದುರಂತಕ್ಕೆ ಏನು ಕಾರಣ ಎಂಬ ಮಾಹಿತಿ ಪಡೆದು ಕುಟುಂಬಸ್ಥರಿಗೆ ಧೈರ್ಯ ಹಾಗೂ ಸಾಂತ್ವನ ಹೇಳಿದರು.
ಮೃತರ ಕುಟುಂಬಸ್ಥರಿಗೆ ತಲಾ 50 ಸಾವಿರ ವೈಯಕ್ತಿಕ ಪರಿಹಾರ ಹಾಗೂ ಗಾಯಾಳುಗಳಿಗೆ ಒಟ್ಟು 50 ಸಾವಿರ ರೂ. ನೆರವು ನೀಡಿದರು. ಅಲ್ಲದೇ, ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದೊಂದು ದೊಡ್ಡ ದುರಂತ. ಈ ಸುದ್ದಿ ಕೇಳಿ ನನಗೆ ಬಹಳ ದುಃಖ ಆಗಿದೆ. ಮೃತರ ಆತ್ಮಕ್ಕೆ ಶಾಂತಿ ಲಭಿಸಿಲಿ ಹಾಗೂ ಕುಟುಂಬಸ್ಥರಿಗೆ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ” ಎಂದರು.
ಇದನ್ನು ಓದಿದ್ದೀರಾ? ತುಮಕೂರು | ಕೆಐಎಡಿಬಿ ಅಪರ ನಿರ್ದೇಶಕನ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ
“ಘಟನೆ ನಡೆದಾಗ ಆ್ಯಂಬುಲೆನ್ಸ್ ಬೇಗ ಬಂದಿದ್ದರೆ ಜೀವಗಳು ಉಳಿಯುತ್ತಿದ್ದವು. ಅವರು ತಡವಾಗಿ ಬಂದಿರುವುದು ಕೂಡಾ ಜೀವ ಹೋಗುವುದಕ್ಕೆ ಕಾರಣ ಎಂದು ಸ್ಥಳೀಯರು ಹಾಗೂ ಕುಟುಂಬಸ್ಥರು ನನಗೆ ಮಾಹಿತಿ ನೀಡಿದ್ದಾರೆ. ಹಾಗೆಯೇ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ತೆಗದುಕೊಂಡಿಲ್ಲ. ಸರ್ಕಾರ ನೆರೆ ಹಾಗೂ ಬರವನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ” ಎಂದು ಆರೋಪಿಸಿದರು.
ನಂತರ ಘಟನೆಯಲ್ಲಿ ಗಾಯಗೊಂಡವರು ಸವಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.