ವಿಧಾನಸಭೆ ಅಧಿವೇಶನದಲ್ಲಿ ಮಹರ್ಷಿ ವಾಲ್ಮೀಕಿ ನಿಗಮದ ಹಣ ದುರುಪಯೋಗದ ಕುರಿತು ನಿಯಮ 69ರಡಿ ಚರ್ಚೆಗೆ ಸಂಬಂಧಿಸಿದಂತೆ ಶುಕ್ರವಾರ ಬಿಜೆಪಿಯ ಪ್ರತಿಭಟನೆ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ದೀರ್ಘ ಉತ್ತರವನ್ನು ಸದನದ ಮುಂದೆ ಮಂಡಿಸಿದರು.
“ಬಿಜೆಪಿಯವರ ಹುನ್ನಾರ ಇಷ್ಟೆ. ಒಂದು, ಮುಖ್ಯಮಂತ್ರಿಯ ಹೆಸರಿಗೆ ಮಸಿ ಬಳಿಯುವುದು. ಎರಡನೆಯದು, ಸರ್ಕಾರ ಪರಿಶಿಷ್ಟ ಜಾತಿ/ ಪಂಗಡಗಳ ವಿರುದ್ಧ ಎಂದು ಬಿಂಬಿಸುವುದು. ಈ ಎರಡೂ ಎಂದಾದರೂ ಸಾಧ್ಯವೆ? ಇಡೀ ಬಿಜೆಪಿ, ಬಿಜೆಪಿಯ ನಾಯಕತ್ವ ಸಂವಿಧಾನ ಜಾರಿಗೆ ಬಂದ ದಿನದಿಂದಲೂ ದಮನಿತ ಸಮುದಾಯಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ಧವಾಗಿದೆ. ಮಹಿಳೆಯರ ವಿರುದ್ಧವಾಗಿದೆ. ದಮನಿತರ ಪರವಾದ ಪ್ರತಿ ನಿಲುವು, ಪ್ರತಿ ಕಾಯ್ದೆ, ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರ” ಎಂದು ಸಿಎಂ ಹೇಳಿದರು.
“ನುಂಗುವುದರಲ್ಲಿ ಜಾಣರಾಗಿರುವ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಇದಕ್ಕಿಂತ ದುರಂತ ಬೇರೆ ಇಲ್ಲ. ವಿರೋಧ ಪಕ್ಷದವರು ತಮ್ಮ ಅಜೆಂಡಾ ಸಾಧಿಸಿಕೊಳ್ಳಲು ಯಾವ ಸುಳ್ಳನ್ನು ಬೇಕಾದರೂ ಹೇಳಬಲ್ಲರು ಎಂಬುದು ಇಲ್ಲಿ ಸಾಬೀತಾಗಿದೆ” ಎಂದು ಕುಟುಕಿದರು.
“ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಈ 89.63 ಕೋಟಿಗಳಷ್ಟು ಹಣ ಅಕ್ರಮವಾಗಿ ಹೈದರಾಬಾದಿನ ಆರ್ ಬಿ ಎಲ್ ಬ್ಯಾಂಕಿಗೆ ವರ್ಗಾವಣೆಯಾಗಿರುತ್ತದೆ. (ಈ 89.63 ಕೋಟಿಗಳಲ್ಲಿ 5 ಕೋಟಿ ರೂ ವಾಪಸ್ಸು ಬಂದಿರುತ್ತದೆ). 89.63 ಕೋಟಿ ರೂಪಾಯಿಗಳಲ್ಲಿ 45,02,98,000 ರೂಪಾಯಿಗಳು ಉಳಿತಾಯ ಖಾತೆಯಿಂದ ವರ್ಗಾವಣೆಯಾಗಿರುತ್ತವೆ. ಇನ್ನುಳಿದ 44.60 ಕೋಟಿ ರೂಪಾಯಿಗಳನ್ನು ನಿಗಮವು ಇಟ್ಟಿದ್ದ ಫಿಕ್ಸೆಡ್ ಡಿಪಾಸಿಟ್ ಮೇಲೆ ಓವರ್ ಡ್ರಾಫ್ಟ್ ತೆಗೆದಿದ್ದಾರೆ. ಓವರ್ ಡ್ರಾಫ್ಟ್ ಎಂದರೆ ಒಂದು ರೀತಿಯ ಸಾಲವೇ. ಇದು ಅತ್ಯಂತ ಪರಿಣತರಾದ, ಪಳಗಿದ ಖದೀಮರ ಕೆಲಸ. ಈಗ 50.00 ಕೋಟಿ ಫಿಕ್ಸೆಡ್ ಡಿಪಾಸಿಟ್ ನಮ್ಮ ವಶದಲ್ಲಿಯೆ ಇದೆ. ಯಾಕೆಂದರೆ ಅದು ಫಿಕ್ಸೆಡ್ ಡಿಪಾಸಿಟ್” ಎಂದರು.
“ವಿಜಯೇಂದ್ರ ಹೇಳಿದ ಎರಡನೆ ಸುಳ್ಳು ರಾಜ್ಯ ಸರ್ಕಾರವು ಸಿಬಿಐನವರು ಎಫ್‌ಐಆರ್ ದಾಖಲಿಸಿದ ಮೇಲೆ ಎಸ್.ಐ.ಟಿ. ರಚಿಸಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ನಮ್ಮಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಿನಾಂಕ 28-5-2024 ರಂದು ಎಫ್ ಐ ಆರ್ ದಾಖಲಾಗಿದೆ. ರಾಜ್ಯ ಸರ್ಕಾರವು 31-5-2024 ರಂದು ಆದೇಶ ಹೊರಡಿಸಿ ಎಸ್.ಐ.ಟಿ. ರಚಿಸಿದೆ. ಸಿಬಿಐ ದಿನಾಂಕ 3-6-2024 ರಂದು ಎಫ್‌ಐಆರ್ ದಾಖಲಿಸಿದ್ದಾರೆ” ಎಂದು ವಿವರಿಸಿದರು.
ಎಸ್.ಐ.ಟಿ.ಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡುತ್ತಿದೆ. ಎಸ್.ಐ.ಟಿ. ರಚನೆಯಾದ ಕೂಡಲೆ ಕಾರ್ಯಪ್ರವೃತ್ತವಾದ ಈ ತಂಡವು 12 ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ” ಎಂದು ಹೇಳಿದರು.
“ವಿರೋಧ ಪಕ್ಷದವರು ಉದ್ದೇಶಪೂರ್ವಕವಾಗಿಯೆ ಅನೇಕ ವಿಚಾರಗಳನ್ನು ಮರೆಮಾಚುತ್ತಿದ್ದಾರೆ. ವಿರೋಧ ಪಕ್ಷದವರಿಗೆ ನಾನು ಕೇಳಬಯಸುವುದೇನೆಂದರೆ, ಯೂನಿಯನ್ ಬ್ಯಾಂಕು ರಾಷ್ಟ್ರೀಕೃತ ಬ್ಯಾಂಕೋ ಅಥವಾ ಖಾಸಗಿ ಬ್ಯಾಂಕೋ? ರಾಷ್ಟ್ರೀಕೃತ ಬ್ಯಾಂಕು ಹೌದಾದರೆ ಕೇಂದ್ರದ ಯಾವ ಇಲಾಖೆಯ ಕೆಳಗೆ ಬರುತ್ತಾರೆ? ಹಣಕಾಸು ಇಲಾಖೆಯ ಕೆಳಗೆ ತಾನೆ? ಹಣಕಾಸು ಇಲಾಖೆ ಯಾರ ಅಧೀನದಲ್ಲಿದೆ? ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಗರಣದ ಜವಾಬ್ಧಾರಿಯನ್ನು ಹೊರುತ್ತಾರೆಯೆ” ಎಂದು ಪ್ರಶ್ನಿಸಿದರು.
“ಚುನಾವಣಾ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದ ವ್ಯವಹಾರಗಳು ನಡೆಯುವಾಗ ಆದಾಯ ತೆರಿಗೆ ಇಲಾಖೆಯವರು ಬ್ಯಾಂಕನ್ನು ಕೇಳಲಿಲ್ಲವೆ? ಬ್ಯಾಂಕಿನವರು ಚುನಾವಣಾ ಆಯೋಗದ ಗಮನಕ್ಕೆ ತರಬೇಕಾಗಿತ್ತಲ್ಲ, ಯಾಕೆ ತರಲಿಲ್ಲ? ಬ್ಯಾಂಕಿನ ಮ್ಯಾನೇಜರ್ ಆದಿಯಾಗಿ ಅನೇಕ ಅಧಿಕಾರಿ, ಸಿಬ್ಬಂದಿಗಳು ವಾಲ್ಮೀಕಿ ನಿಗಮದ ಅಧಿಕಾರಿ ಸಿಬ್ಬಂದಿ ಮತ್ತು ಹೊರಗಿನ ಖಾಸಗಿ ವ್ಯಕ್ತಿಗಳು ಸೇರಿ ಇದು ಮಾಡಿರುವ ಹುನ್ನಾರ ಎಂದು ವ್ಯಕ್ತವಾಗುತ್ತದೆ. ತನಿಖೆಯಿಂದ ಈ ಎಲ್ಲಾ ಅಂಶಗಳು ಬಯಲಾಗುತ್ತವೆ” ಎಂದು ಹೇಳಿದರು.
“ಆರ್ ಅಶೋಕ್ ಅವರು ನಿಗಮಕ್ಕೆ ಹಣ ಯಾಕೆ ಬಿಡುಗಡೆ ಮಾಡಿದ್ದು ಎಂದು ಕೇಳಿದ್ದಾರೆ. ಹಣ ವರ್ಷ ವರ್ಷವೂ ಬಿಡುಗಡೆಯಾಗಲೇಬೇಕು. ಇಲ್ಲದಿದ್ದರೆ ಲ್ಯಾಪ್ಸ್ ಆಗುತ್ತದೆ. ವಿಚಾರ ಇರುವುದು ಹಣ ಯಾಕೆ ಬಿಡುಗಡೆ ಮಾಡಿದ್ದು ಎಂಬುದಲ್ಲ. ಬಿಡುಗಡೆ ಮಾಡಿದ ಹಣವನ್ನು ಹೇಗೆ ಬಳಕೆ ಮಾಡಲಾಗುತ್ತದೆ ಎಂಬುದು ಮುಖ್ಯ. ಬಿಡುಗಡೆ ಮಾಡಿದ ಹಣಕ್ಕೆ ನಾನು ಟ್ರಸ್ಟಿ ಎಂಬ ನೈತಿಕತೆ ಪ್ರತಿಯೊಬ್ಬರಿಗೂ ಇರಬೇಕಾಗುತ್ತದೆ. ಕಳ್ಳತನ ಮಾಡಿ ಎಂದು ನಾವು ಹಣ ಬಿಡುಗಡೆ ಮಾಡುತ್ತೇವಾ? ಆದರೆ ಕಳ್ಳತನ ಮಾಡಿದ್ದಾರೆ. ಕಳ್ಳತನ ಮಾಡಿದವರು ಯಾರೇ ಆಗಿದ್ದರೂ ಕಳ್ಳರೆ, ಕಳ್ಳರನ್ನು ಈ ಸರ್ಕಾರವು ಸಹಿಸುವುದಿಲ್ಲ. ಬಿಜೆಪಿಯವರು ಇಮ್ಯುನಿಟಿ ಬೂಸ್ಟರ್ ನೀಡಿದ ಹಾಗೆ ನಾವು ನೀಡುವುದಿಲ್ಲ” ಎಂದರು.