ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕೆಂದು ಡಿಎಂಕೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.
ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಪುರಾವೆ ಕಾಯ್ದೆಗಳ ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, ಭಾರತೀಯ ನ್ಯಾಯ ಸಂಹಿತಾ ಹಾಗೂ ಭಾರತೀಯ ಸಾಕ್ಷಿ ಅಧಿನಿಯಮಗಳನ್ನು ಜುಲೈ 1ರಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದೆ.
ಕಾನೂನುಗಳ ವಿರುದ್ಧ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್ ಭಾರತಿ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್.ಎಸ್ ಸುಂದರ್ ಮತ್ತು ಎನ್ ಸೆಂಥಿಲ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ನೋಟಿಸ್ ನೀಡಿದೆ.
“ಸರ್ಕಾರವು ಮೂರು ಮಸೂದೆಗಳನ್ನು ಯಾವುದೇ ಅರ್ಥಪೂರ್ಣ ಚರ್ಚೆಯಿಲ್ಲದೆ ಸಂಸತ್ತಿನಲ್ಲಿ ಅಂಗೀಕರಿಸಿದೆ” ಎಂದು ಅರ್ಜಿದಾರರು ವಾದಿಸಿದ್ದಾರೆ.
“ಯಾವುದೇ ಮಹತ್ವದ ಬದಲಾವಣೆಗಳಿಲ್ಲದೆ, ಕೇವಲ ವಿಭಾಗಗಳನ್ನು ಜಾರಿಗೆ ತರಲಾಗಿದೆ. ಹೊಸ ನಿಬಂಧನೆಗಳ ವ್ಯಾಖ್ಯಾನದಲ್ಲಿ ಬಹಳಷ್ಟು ಗೊಂದಲಗಳಿವೆ” ಎಂದು ಅವರು ಹೇಳಿದ್ದಾರೆ.
“ಸೆಕ್ಷನ್‌ಗಳನ್ನು ಬದಲಾಯಿಸುವುದರಿಂದ ನ್ಯಾಯಾಧೀಶರು, ವಕೀಲರು, ಕಾನೂನು ಜಾರಿಗೊಳಿಸುವ ಅಧಿಕಾರಿಗಳು ಮತ್ತು ಸಾರ್ವಜನಿಕರು ಪೂರ್ವನಿದರ್ಶನಗಳನ್ನು ಹುಡುಕಲು ಹಳೆಯ ಪ್ರಕರಣಗಳೊಂದಿಗೆ ಹೊಸ ನಿಬಂಧನೆಗಳನ್ನು ಹೋಲಿಕೆ ಮಾಡಲು ತುಂಬಾ ಕಷ್ಟವಾಗುತ್ತದೆ” ಎಂದು ಅವರು ಹೇಳಿದ್ದಾರೆ.
“ಕಾನೂನುಗಳನ್ನು ಮರುಪರಿಶೀಲಿಸುವ ಯಾವುದೇ ಉದ್ದೇಶವಿಲ್ಲದೆ, ಕಾಯಿದೆಗಳ ಶೀರ್ಷಿಕೆಗಳನ್ನು ‘ಸಂಸ್ಕೃತೀಕರಣ’ಗೊಳಿಸಲು ಮಾತ್ರವೇ ಈ ಕಸರತ್ತು ಮಾಡಲಾಗುತ್ತಿದೆ” ಎಂದು ಭಾರತಿ ಪ್ರತಿಪಾದಿಸಿದ್ದಾರೆ.
“ಸಂಸತ್ತಿನಲ್ಲಿ ಆಡಳಿತ ಪಕ್ಷವು ತನ್ನ ಮಿತ್ರಪಕ್ಷಗಳು ಹಾಗೂ ವಿರೋಧ ಪಕ್ಷಗಳನ್ನು ದೂರವಿಟ್ಟು ಈ ಕಾಯ್ದೆಗಳನ್ನು ಅಂಗೀಕರಿಸಿ, ಜಾರಿಗೊಳಿಸಿದೆ” ಎಂದು ಅವರು ಆರೋಪಿಸಿದ್ದಾರೆ.
“ಕಾಯಿದೆಗಳನ್ನು ಹಿಂದಿ/ಸಂಸ್ಕೃತದಲ್ಲಿ ಹೆಸರಿಸುವುದು ಸಂವಿಧಾನದ 348ನೇ ವಿಧಿಯ ಉಲ್ಲಂಘನೆಯಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಪರಿಚಯಿಸುವ ಎಲ್ಲ ಮಸೂದೆಗಳ ಅಧಿಕೃತ ಪಠ್ಯಗಳು ಇಂಗ್ಲಿಷ್‌ನಲ್ಲಿರಬೇಕು ಎಂದು ವಿಧಿಯು ಸೂಚಿಸಿದೆ” ಎಂದು ಭಾರತಿ ವಾದಿಸಿದ್ದಾರೆ.