ದೇಶದ ಉದ್ದಗಲಕ್ಕೂ ನಡೆದ ಎರಡು ಭಾರತ್ ಜೋಡೋ ಯಾತ್ರೆಗಳು ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸ್ಥಾನಗಳು ದ್ವಿಗುಣಗೊಂಡಿದ್ದು ರಾಹುಲ್ ಗಾಂಧಿಗೆ ಭಾರೀ ಮೈಲೇಜ್ ತಂದುಕೊಟ್ಟಿದೆ. ಈಗ ವಿಪಕ್ಷಗಳಲ್ಲಿ ರಾಹುಲ್ ಗಾಂಧಿ ಪ್ರಮುಖ ನಾಯಕರಾಗಿದ್ದಾರೆ. ಅದೇ ಕಾರಣಕ್ಕೆ ಅವರು ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದಾರೆ. ಈ ಹುದ್ದೆಯು ಅವರಿಗೆ ಮತ್ತಷ್ಟು ಬಲವನ್ನು ತಂದುಕೊಟ್ಟಿದೆ. ಅವರ ಭಾಷಣಗಳು ಬಿಜೆಪಿಯನ್ನು ಪಂಚರ್ ಮಾಡುತ್ತಿವೆ. ಮಾತ್ರವಲ್ಲದೆ, ತನ್ನನ್ನು ದೇವರೇ ಭೂಮಿಗೆ ತಂದಿಳಿಸಿದ್ದಾನೆ ಎಂದು ಬಡಾಯಿ ಕೊಚ್ಚಿಕೊಂಡು ಮೆರೆಯುತ್ತಿದ್ದ ಪ್ರಧಾನಿ ಮೋದಿ ವಿಪಕ್ಷಗಳ ಪ್ರಶ್ನೆಗೆ ಪ್ರತಿಕ್ರಿಯಿಸುವಂತೆ ಮಾಡಿವೆ.
ಹಲವಾರು ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ಸ್ವತಃ ಪ್ರಧಾನಿ ಮೋದಿಯವರಂತೆ ರಾಹುಲ್ ಕೂಡ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ವಿವಾಹ ಮಹೋತ್ಸವದಲ್ಲಿ ಭಾಗಿಯಾಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಅವರು ವಿವಾಹದಲ್ಲಿ ಭಾಗವಹಿಸಲು ನಿರಾಕರಿಸಿದರು. ಮಾತ್ರವಲ್ಲದೆ, ಅನಂತ್ ಅಂಬಾನಿಯ ‘ರಿಷಪ್ಶನ್’ (ಆರತಕ್ಷತೆ) ಕಾರ್ಯಕ್ರಮದ ಸಮಯದಲ್ಲಿ ರಾಹುಲ್ ಸಾಮಾನ್ಯ ವ್ಯಕ್ತಿಯಂತೆ ದೆಹಲಿಯ ಪಿಜ್ಜಾ ಅಂಗಡಿಗೆ ತೆರಳುವ ಮೂಲಕ ಅಂಬಾನಿ ಕಾರ್ಯಕ್ರಮದಿಂದ ತಾವು ದೂರ ಇರುವುದಾಗಿ ಜಗತ್ತಿಗೆ ಮೌನ ಸಂದೇಶ ಕಳಿಸಿದರು.
ಅದಕ್ಕೂ ಮುಂಚೆ ಅವರು ಮಣಿಪುರಕ್ಕೆ ಭೇಟಿ ನೀಡಿದ್ದರು. ಹಿಂಸಾಚಾರದಿಂದ ಬದುಕು ಕಳೆದುಕೊಂಡಿರುವ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಇತ್ತೀಚೆಗೆ ಮೃತಪಟ್ಟ ಅಗ್ನಿವೀರ್ ಅಂಶುಮಾನ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ್ದರು. ಅವರ, ಇಂತಹ ನಡೆಗಳು, ಜನ ಸಾಮಾನ್ಯರೊಂದಿಗೆ ಬೆರೆಯುತ್ತಿರುವ ರೀತಿ ಅವರಿಗೆ ಹೊಸ ಅಭಿಮಾನಿಗಳು ಹಾಗೂ ಅನುಯಾಯಿಗಳನ್ನು ಹುಟ್ಟುಹಾಕುತ್ತಿದೆ. ವಿಶೇಷವಾಗಿ ಯುವ ಭಾರತೀಯರ ಮನಸ್ಸನ್ನು ರಾಹುಲ್ ಗೆಲ್ಲುತ್ತಿದ್ದಾರೆ.

ಭಾರತವು ಯುವ ದೇಶವಾಗಿದೆ. ವಯಸ್ಸಾದ ಮೋದಿಯ ದಣಿದ ವಾಕ್ಚಾತುರ್ಯವು ನಿರಂತರವಾಗಿ ಗಾಂಧಿ ಕುಟುಂಬ ವಿರುದ್ಧದ ವಾಗ್ದಾಳಿ ಮತ್ತು ಹಿಂದುತ್ವ ಸಿದ್ದಾಂತಕ್ಕೆ ಅಂಟಿಕೊಂಡಿದ್ದು, ಯುವ ಜನರನ್ನು ನಿರುತ್ಸಾಹಗೊಳಿಸಿದೆ. ಜೊತೆಗೆ, ಉದ್ಯೋಗಗಳನ್ನು ಒದಗಿಸುವಲ್ಲಿ ಮೋದಿ ಸರ್ಕಾರದ ವೈಫಲ್ಯಗಳು ಮತ್ತು ಏರುತ್ತಿರುವ ಹಣದುಬ್ಬರವು ಯುವಜನರನ್ನು ರೊಚ್ಚಿಗೆಬ್ಬಿಸಿದೆ. ಬೆಲೆ ಏರಿಕೆ, ನಿರುದ್ಯೋಗ ತಾಂಡವವಾಡುತ್ತಿರುವ ಸಮಯದಲ್ಲಿ ಯುವಜನರನ್ನು ಸೆಳೆಯಲು ಮೋದಿ ಪಡೆಯ ಬಳಿ ಯಾವುದೇ ಪರಿಹಾರ ತಂತ್ರಗಳಿಲ್ಲ. ಹಾಗಾಗಿಯೇ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಬ್ಬರ, ಅಲೆ, ವಾಕ್ಚಾತುರ್ಯಗಳು ಬಿಜೆಪಿಗೆ ಸರಳ ಬಹುಮತವನ್ನೂ ತಂದುಕೊಡಲಿಲ್ಲ. ಪಕ್ಷವು ಗೆಲ್ಲಲು ಮೋದಿಯ ಬಳಿ ಮಂತ್ರದಂಡವೂ ಇರಲಿಲ್ಲ, ಮಂತ್ರವಾದಿಯೂ ಆಗಲಿಲ್ಲ.
ಮೋದಿ ಮತ್ತು ಬಿಜೆಪಿಯ ವೈಫಲ್ಯಗಳು ಸ್ಪಷ್ಟವಾಗಿ ರಾಹುಲ್ ಗಾಂಧಿ ಮತ್ತು ಅವರ ಪಕ್ಷಕ್ಕೆ ಉತ್ತಮ ಅವಕಾಶವಾಗಿದೆ. ಪಕ್ಷವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದಾರೆ. ಯುವಜನರು ಹೆಚ್ಚಾಗಿ ಕಾಲ ಕಳೆಯುವ ಸಾಮಾಜಿಕ ಮಾಧ್ಯಮಗಳ ಮೂಲಕ ಅವರನ್ನು ತಲುಪುತ್ತಿದ್ದಾರೆ. ಬದಲಾದ ಸನ್ನಿವೇಶಗಳ ಹೊರತಾಗಿಯೂ ಮುಖ್ಯವಾಹಿನಿಯ ಮಾಧ್ಯಮಗಳು, ವಿಶೇಷವಾಗಿ ಸುದ್ದಿ ವಾಹಿನಿಗಳು ಇನ್ನೂ ಮೋದಿಯವರ ಮಡಿಲಲ್ಲೇ ಮಲಗಿವೆ. ಚುನಾವಣೆಯ ಸಮಯದಲ್ಲಿ ಮೋದಿ ಸೋಲಬಹುದು ಎಂದು ಭಾವಿಸಿದ್ದ ಕೆಲ ಮಾಧ್ಯಮಗಳು ಕೊಂಚ ಮೋದಿಯನ್ನು ಪ್ರಶ್ನಿಸುವ ಧೈರ್ಯ ಮಾಡಿದ್ದವು. ಆದರೆ, ಮೋದಿ ಮತ್ತೆ ಪ್ರಧಾನಿಯಾಗುತ್ತಿದ್ದಂತೆ ಮತ್ತದೇ ಮೋದಿ ಭಜನೆಯಲ್ಲಿ ಮುಳುಗಿವೆ.
ಆದಾಗ್ಯೂ, ಈ ಮಾಧ್ಯಮಗಳು ಈಗ ಹೊಸದಾಗಿ ಹೊರಹೊಮ್ಮುತ್ತಿರುವ ಯುವ ಭಾರತೀಯರ ಆದ್ಯತೆಯ ಮಾಧ್ಯಮಗಳಾಗಿಲ್ಲ. ಯಾವ ಯುವಕ ತಾನೇ ಈಗ ಮನೆಗೆ ಬಂದು ಟಿವಿ ನೋಡುತ್ತಾನೆ? ಅದರಲ್ಲೂ ಸುದ್ದಿ ವಾಹಿನಿಗಳನ್ನು ಈಗಿನ ಯುವಜನರು ನೋಡುವುದುಂಟೇ? ಯುವಜನರಲ್ಲಿ ಹಲವರು ಟಿವಿ ವಾಹಿನಿಗಳ ಚಂದಾದಾರರಾಗುತ್ತಿಲ್ಲ. ಅವರೆಲ್ಲರೂ, ಟ್ವಿಟರ್, ಇನ್ಸ್‌ಟಾಗ್ರಾಂ, ವಾಟ್ಸಾಪ್, ಫೇಸ್‌ಬುಕ್ ಹಾಗೂ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿತುಕೊಳ್ಳುತ್ತಿದ್ದಾರೆ. ಉದಾಹರಣೆಗೆ, ರಾಹುಲ್ ಗಾಂಧಿ ಪಿಜ್ಜಾ ಅಂಗಡಿಗೆ ತೆರಳಿದ್ದು, ಸುದ್ದಿ ವಾಹಿನಿಗಳಲ್ಲಿ ಬರಲಿಲ್ಲ. ಬದಲಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಈಗ ರಾಹುಲ್ ಗಾಂಧಿಯ ವರ್ಚಸ್ಸು ಹೆಚ್ಚುತ್ತಿದೆ. ಮೋದಿ ಕೂಡ ಈಗ ರಾಹುಲ್ ಅವರನ್ನು ‘ಪಪ್ಪು’ ಎಂದು ಕರೆಯುವ ಧೈರ್ಯ ಮಾಡಲಾರರು. ಆದಾಗ್ಯೂ, ‘ಬಾಲ ಬುದ್ದಿ’ ಎಂಬ ಪದವನ್ನು ರಾಹುಲ್ ವಿರುದ್ಧ ಇತ್ತೀಚೆಗೆ ಮೋದಿ ಬಳಸಿದ್ದರು. ಆದರೆ, ಅದು ಮೋದಿಗೆ ತಿರುಗುಬಾಣದಂತಾಗಿದೆ. ಈಗ ರಾಹುಲ್ ಅವರನ್ನು ‘ಪಪ್ಪು’ ಎಂದಾಗಲೀ, ‘ಬಾಲ ಬುದ್ದಿ’ಯವರು ಎಂದಾಗಲೀ ಜರಿಯಲು ಬಿಜೆಪಿಗರಿಗೂ ಸಾಧ್ಯವಿಲ್ಲ. ರಾಹುಲ್ ಮುಖ್ಯವಾದ ವಿಷಯಗಳ ಕುರಿತು ಕ್ರಿಯಾತ್ಮಕವಾಗಿ ಯುವ ಪೀಳಿಗೆಯನ್ನು ನೇರವಾಗಿ ಸಂಪರ್ಕಿಸುತ್ತಿದ್ದಾರೆ. ಇಂತಹ ಸಂಪರ್ಕವನ್ನು ಹೆಚ್ಚಿಸಲು ಇದು ಉತ್ತಮ ಕ್ಷಣವೂ ಆಗಿದೆ.
ಯುವ ಪೀಳಿಗೆ ಹೊಸ ಆಲೋಚನೆಗಳನ್ನು ಬೆಳೆಸಿಕೊಳ್ಳುತ್ತಿದೆ. ಹೊಸ ಆಕಾಂಕ್ಷೆಗಳನ್ನು ಹೊಂದಿದೆ. ತಮ್ಮ ಕನಸುಗಳನ್ನು ಸುಗಮಗೊಳಿಸಲು ಅಗತ್ಯವಾದ ಹಾದಿಯನ್ನು ಕಂಡುಕೊಳ್ಳಲು ಬಯಸುತ್ತಿದೆ. ಈ ಯುವಜನರ ಭವಿಷ್ಯಕ್ಕೆ ರಾಹುಲ್ ಅವರ ದೃಷ್ಟಿಕೋನಗಳಲ್ಲಿ ಪರಿಹಾರಗಳು ಕಂಡುಬಂದರೆ, ರೈತರಿಗಾಗಿ ಕಾಂಗ್ರೆಸ್ ಸಹಾಯಾಸ್ತ ಚಾಚುವುದಾದರೆ, ಉತ್ತಮ ಶಿಕ್ಷಣ ನೀತಿಗಳನ್ನು ಮುಂದಿಡುವುದಾದರೆ, ಭವಿಷ್ಯದ ಭಾರತಕ್ಕೆ ಕಾಂಗ್ರೆಸ್ ಉತ್ತಮ ಮುನ್ನೋಟವನ್ನು ಮಂಡಿಸುವುದಾದರೆ, ರಾಹುಲ್ ಇನ್ನೂ ಜನಪ್ರಿಯವಾಗುತ್ತಾರೆ.
ಸದ್ಯ, ರಾಹುಲ್ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಆದರೆ ಅತಿದೊಡ್ಡ ವಿರೋಧ ಪಕ್ಷ ಮತ್ತು ರಾಷ್ಟ್ರೀಯ ಪಕ್ಷವಾಗಿ ಅವರು ದೊಡ್ಡದಾಗಿ ಯೋಚಿಸಬೇಕು. ನೀತಿಗಳು, ಯೋಜನೆಗಳು ಮತ್ತು ದೂರದೃಷ್ಟಿಯ ಬಗ್ಗೆ ಮಾತನಾಡಬೇಕು. ಅಧಿಕಾರದಲ್ಲಿರುವ ಸರ್ಕಾರದ ಕೆಲಸವನ್ನು ವಿರೋಧ ಪಕ್ಷದ ನಾಯಕ ಮೇಲ್ವಿಚಾರಣೆ ಮಾಡಬೇಕು. ನಿರ್ದಿಷ್ಟ ವಿಷಯಗಳ ಬಗ್ಗೆ ಮಾತನಾಡಲು ಜನರನ್ನು ಪ್ರೇರೇಪಿಸಬೇಕು. ಜನರ ಗಮನ ಸೆಳೆಯಬೇಕು.
ಇಲ್ಲಿ ಪ್ರಮುಖ ಅಂಶವೆಂದರೆ, ಕಾಂಗ್ರೆಸ್ ಮೋದಿಯವರನ್ನು ತೆಗಳುತ್ತಾ, ಅಪಹಾಸ್ಯ ಮಾಡುವುದರಲ್ಲೇ ಸಂತೃಪ್ತಿ ಪಡೆಯಲು ಹೊರಟರೆ, ಅದು ಮೋದಿಯನ್ನು ವ್ಯಂಗ್ಯವಾಡುವ ಪಕ್ಷವಾಗಿಯೇ ಉಳಿಯುತ್ತದೆ. ಬಿಜೆಪಿಯೇ ಮಾಡುವ ತಪ್ಪುಗಳು ಕಾಂಗ್ರೆಸ್‌ಗೆ ಮತ ತಂದುಕೊಡುತ್ತದೆ. ಕಾಂಗ್ರೆಸ್‌ನತ್ತ ಮತದಾರರು ವಾಲುವಂತೆ ಮಾಡುತ್ತದೆ ಎಂದು ಕಾಂಗ್ರೆಸ್ ಭಾವಿಸಿದ್ದರೆ, ಅದು ನಿಷ್ಕ್ರಿಯ ತಂತ್ರವಾಗುತ್ತದೆ. ಕಾಂಗ್ರೆಸ್ ಮೋದಿಯನ್ನು ಅಪಹಾಸ್ಯ ಮಾಡುವುದರ ಆಚೆಗೆ ಜನರ ಅಗತ್ಯಗಳ ಬಗ್ಗೆ, ಜನರ ವಿಚಾರಗಳ ಬಗ್ಗೆ ನಿರಂತರವಾಗಿ ಮಾತನಾಡಬೇಕು.
ಇದೆಲ್ಲದರ ನಡುವೆ, ನಗರ ಪ್ರದೇಶದ ಮತದಾರರ ಬಗೆಗೆ ಕುರುಡುತನವೊಂದಿದೆ. ನಗರ ಭಾಗದ ಮತದಾರರು ಮೋದಿ ಕುರಿತ ವ್ಯಾಮೋಹ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದ ರಾಜಕೀಯದಲ್ಲಿ ಮೋದಿ ಪ್ರಾಬಲ್ಯ ಹೊಂದಿದ್ದರೂ, ವಿಪಕ್ಷಗಳ ಹಿಂಜರಿಕೆಯೂ ಮುಖ್ಯವಾಗಿದೆ. ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬ ಕೂಡ ನಗರ ಮಧ್ಯಮ ವರ್ಗದವರೊಂದಿಗೆ ಬೆರೆಯುವಲ್ಲಿ ಹಿಂದಿನಿಂದಲೂ ಹಿಂಜರಿಕೆ ಹೊಂದಿದೆ. ಇಂದಿರಾ ಗಾಂಧಿಯವರು ನಗರ ಪ್ರದೇಶದ ಜನರನ್ನು ಹಾಗೂ ಮಧ್ಯಮ ವರ್ಗದವರನ್ನು ಕಡೆಗಣಿಸಿ, ಬಡವರ ಜೊತೆ ನೇರವಾಗಿ ಮಾತನಾಡುತ್ತಿದ್ದರು. ಅದಕ್ಕಾಗಿಯೇ ಬಡಜನರು ಈಗಲೂ ಇಂದಿರಾ ಗಾಂಧಿಯನ್ನು ಪ್ರೀತಿಸುತ್ತಿದ್ದಾರೆ. ಮಾತ್ರವಲ್ಲದೆ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಡಜನರು ಇಂದಿರಾ ಅವರನ್ನು ಹೆಚ್ಚು ವಿರೋಧಿಸಿರಲಿಲ್ಲ.
ಈ ವರದಿ ಓದಿದ್ದೀರಾ?:ಈ ದಿನ ವಿಶೇಷ | ಭಾರತೀಯ ಸಮಾಜವು ಮೂಢನಂಬಿಕೆಯತ್ತ, ಬಾಬಾಗಳತ್ತ ವಾಲುತ್ತಿರುವುದೇಕೆ?
ರಾಜೀವ್ ಗಾಂಧಿಯವರು ಕಂಪ್ಯೂಟರ್ ಮತ್ತು ಟೆಲಿಕಾಂಗಳ ಬಗ್ಗೆ ಮಾತನಾಡುತ್ತಿದ್ದರು. ಮಧ್ಯಮ ವರ್ಗದವರೊಂದಿಗೆ ಬೆಸೆದುಕೊಳ್ಳುವ ಪ್ರಯತ್ನದಲ್ಲಿದ್ದರು. ಆದರೆ, ಭ್ರಷ್ಟಾಚಾರದ ಆರೋಪ ಬಂದಾಗ ಅವರ ಮಧ್ಯಮ ವರ್ಗದೊಂದಿಗೆ ಒಡನಾಟವು ಕೊನೆಗಂಡಿತು. 1991ರಲ್ಲಿ ಮನಮೋಹನ್ ಸಿಂಗ್ ಅವರ ಮೊದಲ ಬಜೆಟ್ ಮಧ್ಯಮ ವರ್ಗದ ಜನರನ್ನು ಸಂತೋಷಪಡಿಸಿತ್ತು. ಆದರೆ, ರಾಮಮಂದಿರದ ಆಂದೋಲನದ ಬಳಿಕ, ಕಾಂಗ್ರೆಸ್ ಎಂಟು ವರ್ಷಗಳ ಕಾಲ ಅಧಿಕಾರದಿಂದ ದೂರ ಉಳಿಯಿತು. ಬಳಿಕ, ಸೋನಿಯಾ ಗಾಂಧಿ ಅವರು ಸಿಂಗ್ ಅವರ ಸರ್ಕಾರ ಬಡವರ ವಿಶ್ವಾಸ ಕಳೆದುಕೊಳ್ಳದಂತೆ ನೋಡಿಕೊಂಡರು.
ಇದೇ ಸಂಪ್ರದಾಯವನ್ನು ರಾಹುಲ್ ಕೂಡ ಅನುಸರಿಸುತ್ತಿದ್ದಾರೆ. ಚುನಾವಣೆಗಳಲ್ಲಿ ಅಂಕಿಅಂಶಗಳು ಹೆಚ್ಚಾಗಿ ಬರುವುದು ನಗರಗಳಿಂದಲ್ಲ – ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಿಂದ ಹಾಗೂ ದೇಶದ ಆಡಳಿತದಲ್ಲಿ ತಮಗೆ ಧ್ವನಿಯಿಲ್ಲ ಎಂದು ಭಾವಿಸುವ ಜನರಿಂದ ಎಂಬುದನ್ನು ಅವರು ತಿಳಿದಿದ್ದಾರೆ. ಮೋದಿಯವರ ವ್ಯಕ್ತಿತ್ವ ಮತ್ತು ಭಾರೀ ನಗರ ಕೇಂದ್ರಿತ ನೀತಿಗಳು ದೇಶದ ಯುವಕರನ್ನು ಭಾರತದ ಅಭಿವೃದ್ಧಿ ಪಥದಿಂದ ದೂರವಿಟ್ಟಿದೆ ಎಂಬುದೂ ರಾಹುಲ್ ಅರಿವಿನಲ್ಲಿದೆ. ಇದೆಲ್ಲದರ ಜೊತೆಗೆ, ರಾಹುಲ್ ಗಾಂಧಿ ಅವರು ತಮ್ಮ ಸೂಕ್ಷ್ಮತೆ ಮತ್ತು ಸಹಾನುಭೂತಿಯ ವ್ಯಕ್ತಿತ್ವದಿಂದ ಬೆಂಬಲಿಗರನ್ನು ಗೆಲ್ಲುತ್ತಿದ್ದಾರೆ.
ಏನೇ ಆಗಿಲಿ, 50 ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ತಂತ್ರಜ್ಞಾನವು ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ಸಣ್ಣ ಪಟ್ಟಣಗಳಲ್ಲಿಯೂ ಸ್ಟಾರ್ಟ್‌ಅಪ್‌ಗಳು ಹುಟ್ಟಿಕೊಳ್ಳುತ್ತಿವೆ. ವಿದ್ಯಾವಂತ ಯುವಜನತೆ ಈಗ ದೇಶವ್ಯಾಪಿ ವಿದ್ಯಮಾನವಾಗಿದ್ದಾರೆ. ತಾಳ್ಮೆ ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ. ಅವರನ್ನು ತಲುಪಲು ರಾಹುಲ್ ಗಾಂಧಿಗೆ ಅವಕಾಶವಿದೆ. ಯುವಜನರಿಗೆ ನಾಯಕತ್ವ ನೀಡುವ ಮೂಲಕ ಪಕ್ಷ ಮತ್ತು ನಗರ ಪ್ರದೇಶದ ನಡುವಿನ ಅಂತರವನ್ನು ರಾಹುಲ್ ಕಡಿಮೆ ಮಾಡಬಹುದು. ಅದಕ್ಕಾಗಿ ರಾಹುಲ್ ತಮ್ಮ ದೃಷ್ಟಿಯ ದಿಕ್ಕನ್ನು ಮತ್ತಷ್ಟು ವಿಸ್ತರಿಸಬೇಕಿದೆ. ತಮ್ಮ ಮಾತುಗಳಲ್ಲಿ ಮೋದಿಯನ್ನು ಬದಿಗೊತ್ತಿ, ಜನರ ಬಗ್ಗೆ ಹೆಚ್ಚು ಮಾತನಾಡಬೇಕಿದೆ.
ವರದಿ ಮೂಲ: ದಿ ವೈರ್