ದೇಶದ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಕೇಸರೀಕರಣಗೊಳ್ಳುತ್ತಿವೆ ಎಂದು ದೇಶಾದ್ಯಂತ ವ್ಯಾಪಕ ಚರ್ಚೆಗೊಳಗಾಗುತ್ತಿರುವ ನಡುವೆಯೇ ಕಲಬುರಗಿ ಕೇಂದ್ರೀಯ ವಿವಿಯ ನಡೆ ಸದ್ಯ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಕುಲಪತಿ, ಕುಲಸಚಿವರು, ಹಿರಿಯ ಪ್ರಾಧ್ಯಾಪಕರ ಉಪಸ್ಥಿತಿಯಲ್ಲೇ ಜುಲೈ 18ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಭೆ ನಡೆದಿದೆ. ಈ ಸಭೆಯ ಕೊನೆಯಲ್ಲಿ ಆರ್‌ಎಸ್‌ಎಸ್‌ನ ಧ್ಯೇಯಗೀತೆಯಾದ ‘ನಮಸ್ತೆ ಸದಾ ವತ್ಸಲೆ’ಯನ್ನು ಹಾಡಿದ್ದಲ್ಲದೇ, ಎಲ್ಲರೂ ಎದ್ದು ನಿಂತು ಆರ್‌ಎಸ್‌ಎಸ್ ಕಾರ್ಯಕರ್ತರಂತೆ ಕೈ ಎದೆಗೆ ಅಡ್ಡ ಹಿಡಿದು ನಿಂತಿರುವ ಹಾಗೂ ಭಗವಾಧ್ವಜಕ್ಕೆ ನಮಸ್ಕರಿಸುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇದು ಸದ್ಯ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಆರ್‌ಎಸ್‌ಎಸ್ ಗೀತೆಗೆ ಧ್ವನಿಗೂಡಿಸಿದ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಭೆಯ ಕೊನೆಯಲ್ಲಿ ಆರ್‌ಎಸ್‌ಎಸ್ ಗೀತೆಯನ್ನು ಸಾಮೂಹಿಕವಾಗಿ ಹಾಡುತ್ತಿರುವುದನ್ನು ಗಮನಿಸಿದ ಕೆಲವು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಆರ್‌ಎಸ್‌ಎಸ್‌ನ ಕೆಲ ಕಾರ್ಯಕರ್ತರು ಹಾಗೂ ಕೆಲವು ಸಂಘಪರಿವಾರದ ಹಿನ್ನೆಲೆಯುಳ್ಳ ಕೆಲ ಬೋಧಕ ಸಿಬ್ಬಂದಿ ಸಂಶೋಧನಾ ವಿದ್ಯಾರ್ಥಿಯ ಕೈಯಿಂದ ಮೊಬೈಲ್ ಕಸಿದುಕೊಂಡು, ಬೆದರಿಕೆ ಹಾಕಿ, ವಿಡಿಯೋ ಡಿಲೀಟ್ ಮಾಡಿಸಿರುವುದಾಗಿ ತಿಳಿದುಬಂದಿದೆ.
ಕಲಬುರಗಿಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿಯ ಅತಿಥಿ ಗೃಹದಲ್ಲಿ ಕುಲಪತಿ, ಕುಲಸಚಿವರು, ಹಿರಿಯ ಪ್ರಾಧ್ಯಾಪಕರ ಉಪಸ್ಥಿತಿಯಲ್ಲೇ ಜುಲೈ 18ರಂದು ಆರ್ಎಸ್ಎಸ್ ಸಭೆ ನಡೆದಿದ್ದು, ಸಭೆಯಲ್ಲ ‘ನಮಸ್ತೆ ಸದಾ ವತ್ಸಲೆ’ಯನ್ನು ಹಾಡಿದ್ದಲ್ಲದೇ, ಕಾರ್ಯಕರ್ತರಂತೆ ಕೈ ಎದೆಗೆ ಅಡ್ಡ ಹಿಡಿದು ನಿಂತಿರುವ ವಿಡಿಯೋ ವಿವಾದ ಸೃಷ್ಟಿಸಿದೆ pic.twitter.com/f8lUnlOFeB
— eedina.com ಈ ದಿನ.ಕಾಮ್ (@eedinanews) July 20, 2024
ಬೇರೆ ರಾಜ್ಯದಿಂದ ಬಂದಿದ್ದ ಐದಾರು ಜನ ಆರ್‌ಎಸ್ಎಸ್ ಪ್ರಮುಖರು ಗುರುವಾರ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಸಭೆ ನಡೆಸಿದ್ದಾರೆ. ಆರ್‌ಎಸ್‌ಎಸ್ ಈ ದೇಶದಲ್ಲಿ ಸ್ಥಾಪನೆಗೊಂಡು 2025ಕ್ಕೆ 100 ವರ್ಷಗಳು ತುಂಬಲಿದೆ. ಅದಕ್ಕೆ ಪೂರ್ವಭಾವಿಯಾಗಿ ಕಲಬುರಗಿ ಭಾಗದಲ್ಲಿ ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆದಿದೆ. ಬಂದಿದ್ದವರೆಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವು ಸಂಶೋಧನಾ ವಿದ್ಯಾರ್ಥಿಗಳು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.
“ಉತ್ತರ ಭಾರತದಲ್ಲಿ ಆರ್‌ಎಸ್‌ಎಸ್ ಭದ್ರವಾಗಿ ನೆಲೆಯೂರಿದೆ. ಅದನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸುವ ಅವಶ್ಯಕತೆ ಇದೆ. ಕಲಬುರಗಿ ವಿಮಾನ ನಿಲ್ದಾಣದ ಬಳಿ ಮುಂದಿನ ದಿನಗಳಲ್ಲಿ ಬೃಹತ್ ಸಮಾವೇಶ ನಡೆಸುವ ಅವಶ್ಯಕತೆ ಇದೆ. ಯಾವ ಸರ್ಕಾರಕ್ಕೂ, ಸಚಿವರಿಗೂ ಹೆದರುವ ಅವಶ್ಯಕತೆ ಇಲ್ಲ. ಕಲಬುರಗಿ ಕೇಂದ್ರೀಯ ವಿ.ವಿ.ಯಿಂದಲೇ ಇದನ್ನು ಪ್ರಾರಂಭಿಸಬೇಕಿದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಭಾಗವಹಿಸಿದ್ದ ಆರ್‌ಎಸ್‌ಎಸ್ ಮುಖಂಡರ ಕಾಲಿಗೆ ಕುಲಸಚಿವ ಆರ್ ಆರ್ ಬಿರಾದಾರ ಸೇರಿದಂತೆ ಅಲ್ಲಿದ್ದವರು ನಮಸ್ಕರಿಸಿದ್ದಾರೆ. ಇದನ್ನು ನಾವು ನೋಡಿದ್ದೇವೆ” ಎಂದು ಸಂಶೋಧನಾ ವಿದ್ಯಾರ್ಥಿಗಳು ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.
ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಾದ ವಿವಿಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳು ಈ ಹಿಂದೆಯೂ ನಡೆದಿದ್ದ ಆರೋಪಗಳು ಕೇಳಿ ಬಂದಿದ್ದವು. ಇದನ್ನು ವಿರೋಧಿಸಿ ವಿದ್ಯಾರ್ಥಿ ಹಾಗೂ ಪ್ರಗತಿಪರ ಸಂಘಟನೆಗಳು ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ಕೂಡ ನಡೆಸಿದ್ದವು. ಆದರೂ ಕೂಡ ಯಾವ ಭಯವಿಲ್ಲದೇ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ. ಖುದ್ದು ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಹಾಗೂ ವಿವಿಯ ಬೋಧಕ ಸಿಬ್ಬಂದಿಯೇ ಕರೆಸಿ, ಕಾರ್ಯಕ್ರಮ ನಡೆಸಿದಂತಿತ್ತು ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ, ಈ ಸಭೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿರುವುದರಿಂದ ಆರೋಪಕ್ಕೆ ದಾಖಲೆ ಸಿಕ್ಕಂತಾಗಿದೆ.

ಈ ಬೆಳವಣಿಗೆಯ ಬಗ್ಗೆ ಈ ದಿನ.ಕಾಮ್ ವಿ.ವಿ. ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಅವರನ್ನು ಸಂಪರ್ಕಿಸಿದಾಗ, “ಆರ್‌ಎಸ್‌ಎಸ್‌ನ ಸಭೆ ನಡೆದಿದ್ದು ನಿಜ. ನಾನೂ ಸಭೆಯ ಕೊನೆಯಲ್ಲಿ ಹೋಗಿದ್ದೆ” ಎಂದು ತಿಳಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ, “ಇದರಲ್ಲಿ ಅಭಿಪ್ರಾಯ ತಿಳಿಸುವುದು ಏನಿದೆ? ಸಾಮಾನ್ಯವಾಗಿ ಶೈಕ್ಷಣಿಕ ಚಟುವಟಿಕೆಗಳಿಗೆ ಅವಕಾಶಗಳಿದೆ. ಏನು ನಡೆಯುತ್ತಿದೆ ಎಂದು ನೋಡಲು ಕೊನೆಯಲ್ಲಿ ಹೋಗಿದ್ದೆ” ಎಂದಿದ್ದಾರೆ. ಅಕಸ್ಮಾತ್ ಮುಸ್ಲಿಂ ಸಂಘಟನೆ ನಿಮ್ಮಲ್ಲಿ ಅವಕಾಶ ಕೇಳಿದರೆ ಕೊಡ್ತೀರಾ ಎಂದು ಪ್ರಶ್ನಿಸಿದಾಗ, “ಸಂಘಟನೆಗಳ ಹಿನ್ನೆಲೆ ನೋಡಿಕೊಂಡು ಶೈಕ್ಷಣಿಕ ಚಟುವಟಿಕೆಗಳಿಗಾದರೆ ಅವಕಾಶ ನೀಡುತ್ತೇವೆ. ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ” ಎಂದು ಉತ್ತರ ನೀಡಿದ್ದಾರೆ.
ಮುಸ್ಲಿಂ ಸಂಘಟನೆ, ಭಗವಾಧ್ವಜ ಎಂದೆಲ್ಲ ಪ್ರಶ್ನಿಸಿದಾಗ ತಡಬಡಾಯಿಸಿದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, “ಶಿಕ್ಷಕರಾದವರು ಭಗವಾಧ್ವಜಕ್ಕೆ ನಮಸ್ಕರಿಸುವುದು ಸರಿಯಲ್ಲ” ಎಂದುತ್ತರಿಸಿದರು.

ಈ ಬೆಳವಣಿಗೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ನಂದಕುಮಾರ್, “ಸಭೆಯಲ್ಲಿ ಭಾಗವಹಿಸಿದ್ದ ಆರ್‌ಎಸ್‌ಎಸ್‌ನ ಮುಖಂಡರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವನ್ನೇ ಆರ್‌ಎಸ್‌ಎಸ್‌ನ ದಕ್ಷಿಣ ಭಾರತದ ಕೇಂದ್ರ ಕಚೇರಿಯ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಕರೆ ಕೊಟ್ಟಿದ್ದಾರೆ. ಈ ವಿಶ್ವವಿದ್ಯಾಲಯದ ಎಲ್ಲ ಅಧ್ಯಯನಗಳ ವಿಭಾಗದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಹೊರತಾಗಿ ಬರೀ ಆರ್‌ಎಸ್‌ಎಸ್‌ನ ಅಜೆಂಡಾಗಳ ಕಾರ್ಯಚಟುವಟಿಕೆಗಳೇ ನಡೆಯುತ್ತಿವೆ” ಎಂದು ಆರೋಪಿಸಿದ್ದಾರೆ.
“ಈ ರೀತಿಯ ಶೈಕ್ಷಣಿಕ ವಿರೋಧಿ ಸಂಗತಿಗಳನ್ನು ಕಾನೂನಾತ್ಮಕವಾಗಿ ಪ್ರಶ್ನೆ ಮಾಡುವಂತಹ ವಿದ್ಯಾರ್ಥಿಗಳ ಮೇಲೆ ನೇರವಾಗಿ ಸುಳ್ಳು ಪೊಲೀಸ್ ಪ್ರಕರಣ ದಾಖಲಿಸಲಾಗುತ್ತದೆ. ಈ ಹಿಂದೆ ಇಂತಹ ಕಾರ್ಯಕ್ರಮವನ್ನು ಪ್ರಶ್ನಿಸಿದಾಗ ಪ್ರಕರಣ ದಾಖಲಿಸಲಾಗಿದೆ ಕೂಡ. ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ವಿಡಿಯೋ ಚಿತ್ರೀಕರಣ ಮಾಡಿದರೆ ಆರ್ ಎಸ್ ಎಸ್ ಗೂಂಡಾಗಳು ಹಲ್ಲೆಗೆ ಮುಂದಾಗುತ್ತಾರೆ” ಎಂದು ತಿಳಿಸಿದ್ದಾರೆ.
“ಜುಲೈ 18ರಂದು ಕೇಂದ್ರೀಯ ವಿಶ್ವವಿದ್ಯಾಲಯದ ಗೆಸ್ಟ್ ಹೌಸ್‌ನಲ್ಲಿ ನಡೆದ ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸಂಶೋಧನಾ ವಿದ್ಯಾರ್ಥಿಗಳ ಮೇಲೆ ಪ್ರೊ. ಬಸವರಾಜ ಡೋಣೂರ ಅವರ ಶಿಷ್ಯರಿಬ್ಬರು ಹಲ್ಲೆಗೆ ಮುಂದಾಗಿದ್ದಲ್ಲದೇ, ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ಲದೇ, ವಿಡಿಯೋ ಡಿಲೀಟ್ ಮಾಡು ಇಲ್ಲವಾದರೆ ಪರಿಣಾಮ ಸರಿ ಇರುವುದಿಲ್ಲವೆಂದು ಬೆದರಿಕೆ ಒಡ್ಡಿದ್ದಾರೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮ ಕಾನೂನಾತ್ಮಕವಾಗಿದ್ದರೆ ಇಷ್ಟೊಂದು ಭಯದಿಂದ ಕಾರ್ಯಕ್ರಮ ಆಯೋಜನೆ ಮಾಡುವ ಅವಶ್ಯಕತೆ ಇರಲಿಲ್ಲ” ಎಂದು ನಂದಕುಮಾರ್ ಅಭಿಪ್ರಾಯಿಸಿದ್ದಾರೆ.
“ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುಲಸಚಿವ ಆರ್ ಆರ್ ಬಿರಾದಾರ, ಶೈಕ್ಷಣಿಕ ನಿರ್ದೇಶಕ ಪ್ರೊ. ಬಸವರಾಜ ಡೋಣೂರ, ವಿಶ್ವವಿದ್ಯಾಲಯದ ಅಭಿವೃದ್ಧಿ ಅಧಿಕಾರಿ ಪ್ರೊ. ಚನ್ನವೀರಯ್ಯ, ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಕುಬೂಕಡ್ಡಿ, ಚೀಫ್ ವಾರ್ಡನ್ ಆದ ಡಾ. ಬಸವರಾಜ್ ಸೋಮನಮರಡಿ, ವಿಶ್ವವಿದ್ಯಾಲಯದ ಶಿಸ್ತುಪಾಲನಾ ಅಧಿಕಾರಿ ವೆಂಕಟರಮಣ ದೊಡ್ಡಿ ಹಾಗೂ ಪರೀಕ್ಷಾ ಮುಖ್ಯ ಅಧಿಕಾರಿಗಳು, ಇನ್ನು ಮುಂತಾದ ಪ್ರಾಧ್ಯಾಪಕರು ಭಗವಾನ್ ಧ್ವಜಕ್ಕೆ ನಮಿಸಿ ಹಣ ಸುರಿದು, ನಮಿಸಿದ್ದಾರೆ. ವಿಶ್ವವಿದ್ಯಾಲಯದ ಎಲ್ಲ ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡು ಅಧಿಕಾರದಲ್ಲಿರುವ ಆರ್‌ಎಸ್‌ಎಸ್‌ನ ಮತಾಂಧರೇ ತುಂಬಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ. ವಿಶ್ವವಿದ್ಯಾಲಯದಲ್ಲಿ ಶರಣರ, ಸೂಫಿ ಸಂತರ, ತತ್ವಪದಕಾರರ ಸೌಹಾರ್ದ ಪರಂಪರೆಯ ನಮ್ಮ ಈ ಭಾಗದ ವಿದ್ಯಾರ್ಥಿಗಳು ಇಂತಹ ಪ್ರಾಧ್ಯಾಪಕರಿಂದ ಏನನ್ನು ಕಲಿಯಬಹುದು ಎಂಬುದನ್ನು ಊಹಿಸಿದರೇನೇ ಆತಂಕವಾಗುತ್ತದೆ” ಎಂದು ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ನಂದಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
DELETE ಮಾಡಿಸಿದ್ದ ವಿಡಿಯೋ ಹೊರಗೆ ಬಂದಿದ್ದು ಹೇಗೆ?
ಸಂಶೋಧನಾ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿರುವುದನ್ನು ಗಮನಿಸಿದ್ದ ಸಂಘಪರಿವಾರದ ಕಾರ್ಯಕರ್ತರು ಕೂಡಲೇ ಮೊಬೈಲ್ ಅನ್ನು ಕಸಿದುಕೊಂಡು ಸೆರೆ ಹಿಡಿದಿದ್ದ ವಿಡಿಯೋ ಹಾಗೂ ಫೋಟೋಗಳನ್ನು ಕೂಡಲೇ ಡಿಲೀಟ್ ಮಾಡಿಸಿದ್ದಾರೆ. ಆ ಬಳಿಕ ಬೆದರಿಕೆ ಕೂಡ ಹಾಕಿರುವ ಆರೋಪ ಕೇಳಿಬಂದಿದೆ.
ಈ ಘಟನೆಯನ್ನು ಪ್ರಶ್ನಿಸಿದ್ದ ವಿದ್ಯಾರ್ಥಿಗಳು ಬಳಿಕ ವಿಷಯವನ್ನು ಕೆಲವು ವಿದ್ಯಾರ್ಥಿ ಮುಖಂಡರಿಗೆ ತಿಳಿಸಿದ್ದಾರೆ. ಈ ವೇಳೆ ಮೊಬೈಲ್ ಪರಿಣಿತರರು ಹಾಗೂ ಗೂಗಲ್‌ನ ನೆರವಿನೊಂದಿಗೆ ಡಿಲೀಟ್ ಮಾಡಿಸಿದ್ದ ವಿಡಿಯೋವನ್ನು ‘VIDEO RESTORE’ ಟೂಲ್ ಹಾಗೂ ವಿಶೇಷ ಮೊಬೈಲ್ Appನ ನೆರವಿನಿಂದ DELETE ಮಾಡಿಸಿದ್ದ ವಿಡಿಯೋವನ್ನು ಮರುಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
