ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯೂ ಸೇರಿದಂತೆ ಎಲ್ಲ ನ್ಯಾಯಮೂರ್ತಿಗಳ ಹಿಂದೆ ಕೇಂದ್ರ ಸರ್ಕಾರ ಗೂಢಚಾರಿಗಳನ್ನು ಬಿಟ್ಟಿದೆ. ನ್ಯಾಯಮೂರ್ತಿಗಳನ್ನೇ ಕೇಂದ್ರ ಸರ್ಕಾರ ಬೆದರಿಸುವ ತಂತ್ರ ಅನುಸರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ, ಹೋರಾಟಗಾರ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ‘ಫೋರಂ ಫಾರ್ ಡೆಮಾಕ್ರಸಿ ಆ್ಯಂಡ್ ಕಮ್ಯುನಲ್ ಅಮಿಟಿ’ (ಎಫ್‌ಡಿಸಿಎ) ಆಯೋಜಿಸಿದ್ದ ‘ಲೋಕಸಭಾ ಚುನಾವಣೆಯ ನಂತರ ಮುಂದೇನು?’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಕಳೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲು ಸಾಧ್ಯವಾಗಿಲ್ಲ. ಇದೀಗ, ನ್ಯಾಯಾಂಗವು ತನ್ನ ನಿಲುವಿಗೆ ಗಟ್ಟಿಯಾಗಿ ನಿಲ್ಲಲು ಆರಂಭಿಸಿದೆ” ಎಂದು ಹೇಳಿದ್ದಾರೆ.
“ಬಿಜೆಪಿ ಸರ್ಕಾರವು ತನ್ನ ಹತ್ತು ವರ್ಷಗಳ ಆಡಳಿತದಲ್ಲಿ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ. ಈ ಬಾರಿ ಬಿಜೆಪಿ ಮೈತ್ರಿಪಕ್ಷಗಳ ಅಡಿಯಲ್ಲಿ ಸರ್ಕಾರ ರಚಿಸಿದ್ದು, ವಿಪಕ್ಷಗಳಿಗೆ ಬಲ ಬಂದಿದೆ. ಈಗ ಸಾಂವಿಧಾನಿಕ ಸಂಸ್ಥೆಗಳನ್ನು ಬಲಪಡಿಸುವ ಕೆಲಸ ಮಾಡಬೇಕಿದೆ” ಎಂದು ಹೇಳಿದ್ದಾರೆ.
“ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಅದನ್ನು ನಾವು ಸಂಭ್ರಮಿಸುತ್ತಿದ್ದೇವೆ. ಆದರೆ, ತೆಲಂಗಾಣ, ಆಂಧ್ರಪ್ರದೇಶ, ಕೇರಳದಲ್ಲಿ ಬಿಜೆಪಿ ಗಟ್ಟಿಯಾಗುತ್ತಿದೆ ಎಂಬುದನ್ನು ನಾವು ಮರೆಯಬಾರದು. ಬಿಜೆಪಿಯನ್ನು ಎಲ್ಲೆಡೆ ಮಣಿಸಲು ಎಚ್ಚರಿಕೆಯಿಂದ ಕೆಲಸ ಮಾಡಬೇಕು” ಎಂದು ಜಮಾತ್–ಇ–ಇಸ್ಲಾಮಿ ಹಿಂದ್‌ನ ಕಾರ್ಯದರ್ಶಿ ಡಾ.ಮೊಹಮ್ಮದ್ ತಾಹಾ ಮತೀನ್ ಹೇಳಿದ್ದಾರೆ.