ವಿಜಯಪುರ ಜಿಲ್ಲೆಯ ಮರಗೂರ ಮೊರಾರ್ಜಿ ದೇಸಾಯಿ ವಸತಿಶಾಲೆಯ ಅವ್ಯವಸ್ಥೆಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಿಎಸ್‌ಎಸ್) ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಬಾಗಿ ಮಾತನಾಡಿ, “ಚಡಚಣ ತಾಲೂಕಿನ ಮರಗೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಶೌಚಾಲಯಗಳಿಗೆ ಬಾಗಿಲುಗಳಿಲ್ಲ. ಕಿಟಕಿಗಳು ಕಿತ್ತುಹೋಗಿವೆ. ಮಕ್ಕಳ ಊಟಕ್ಕೂ ಅವ್ಯವಸ್ಥೆ ಉಂಟಾಗಿದ್ದು, ಶಾಲೆಯಲ್ಲಿ ಕಲಿಕಾ ವಾತಾವರಣವೇ ಹಾಳಾಗಿ ಹೋಗಿದೆ” ಎಂದರು.
“ವಸತಿಶಾಲೆಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಆದರೆ ಯಾವೊಬ್ಬ ಅಧಿಕಾರಿ ಅಥವಾ ಶಾಲಾ ಸಿಬ್ಬಂದಿ ಈ ಕುರಿತಾಗಿ ತಲೆ ಕೆಡಿಸಿಕೊಂಡಿಲ್ಲ. ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದ್ದರೂ ಅಧಿಕಾರಿಗಳು ನೋಡಿಯೂ ನೋಡದಂತೆ ಕಣ್ಣು ಮುಚ್ಚಿಕೊಂಡು ಹೋಗುತ್ತಿದ್ದಾರೆ. ಅಂಥವರ ವಿರುದ್ಧ ಕೂಡಲೇ ಕ್ರಮ ಜರುಗಿಸಿ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಸಂಚಾಲಕ ಮುರಗೇಶ ಜೈನಾಪೂರ ಮಾತನಾಡಿ, “ರಾಜ್ಯದಲ್ಲಿ ಡೆಂಘೀ ಜ್ವರ ಹರಡುತ್ತಿರುವುದರಿಂದ ಅಲ್ಲಿರುವ ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅತಿ ಅವಶ್ಯಕವಾಗಿದೆ. ಕಾಟಚಾರಕ್ಕೆ ಅಧಿಕಾರಿಗಳು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆಯೇ ಹೊರತು ಅವರಿಗೆ ಯಾವುದೇ ಜವಾಬ್ದಾರಿಯಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡೆಂಘೀಯಂತಹ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾದರೆ ಯಾರು ಹೊಣೆ. ಸಧ್ಯ ಅಲ್ಲಿರುವ ವಿದ್ಯಾರ್ಥಿಗಳಿಗೆ ಡೆಂಘೀ ಹರಡಿದರೆ, ಯಾರು ಜವಾಬ್ದಾರಿ, ವಿದ್ಯಾರ್ಥಿಗಳು ಭಯದಿಂದ ಶಿಕ್ಷಣ ಪಡೆದುಕೊಳ್ಳುವಂತೆ ಮಾಡಿರುವ ಅಧಿಕಾರಿಗಳ ವಿರುದ್ಧ ಜರುಗಿಸಬೇಕು” ಎಂದು ಒತ್ತಾಯಿಸಿದರು.
“ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಅಲ್ಲಿನ ಸಮಸ್ಯೆಗೆ ಹೊಣೆಗಾರರನ್ನಾಗಿಸಬೇಕು. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದರೆ ಮೊರಾರ್ಜಿ ದೇಸಾಯಿ ವಸತಿಶಾಲೆಗೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಕಾರಣರಾಗುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಶಿರೂರು ಗುಡ್ಡ ಕುಸಿದ ಸ್ಥಳಕ್ಕೆ ಸಿಎಂ ಭೇಟಿ; ಕಾರ್ಯಾಚರಣೆಗೆ ಆಧುನಿಕ ತಂತ್ರಜ್ಞಾನ ಬಳಕೆಗೆ ಸೂಚನೆ
ಈ ಸಂದರ್ಭದಲ್ಲಿ ಶ್ರೀಧರ ವಾತ್ತೊರೆ, ಯಲ್ಲಪ್ಪ ಕಾಂಬಳೆ, ಚೈತನ್ಯ ತೊರವಿ, ಸವಿತಾ ವಗ್ಗರ, ನಕುಶ ಹೊಸಮನಿ, ಸಂಗಪ್ಪ ಶೇಖರ ಮಲಕನವರ, ಸಂಗಮೇಶ ಇರಸೂರ, ಫೀಮು ಉತ್ನಾಳ, ಮಾಂತೇಶ ರಾಠೋಡ, ಶ್ರೀಮಂತ ಪವಾರ, ಸದಾಶಿವ ಕಾಂಬಳೆ ಇದ್ದರು.