ವಿಮಾನದಲ್ಲಿ ಮಹಿಳೆಯೊಬ್ಬರಿಗೆ ಅಶ್ಲೀಲ ವಿಡಿಯೋ ತೋರಿಸಿ, ಲೈಂಗಿಕ ಕಿರುಕುಳ ಎಸಗಿರುವ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದಿದೆ. ಜಿಂದಾಲ್ ಕಂಪನಿಯ ಅಧಿಕಾರಿಯೊಬ್ಬರ ವಿರುದ್ಧ ಕೋಲ್ಕತ್ತಾದ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಂದಾಲ್ ಕಂಪನಿಯ ಅಧಿಕಾರಿ ತಮಗೆ ಕಿರುಕುಳ ನೀಡಿರುವ ಬಗ್ಗೆ ಸಂತ್ರಸ್ತ ಮಹಿಳೆ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿ, ಪೋಸ್ಟ್ ಮಾಡಿದ್ದಾರೆ. ಕೋಲ್ಕತ್ತಾ-ಅಬುಧಾಬಿ ವಿಮಾನದಲ್ಲಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಆಕೆಯ ಪೋಷಕರು ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಆರೋಪಿಯು ಜಿಂದಾಲ್ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 74, 75 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ತಪ್ಪಿತಸ್ಥ ಆರೋಪಿಯ ವಿರುದ್ಧ ಆಂತರಿಕ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್‌ನ (ಜೆಎಸ್‌ಪಿಎಲ್) ಅಧ್ಯಕ್ಷ ನವೀನ್ ಜಿಂದಾಲ್ ಹೇಳಿದ್ದಾರೆ.