ಮುಖ್ಯಮಂತ್ರಿ ಸಿದ್ಧರಾಮಯ್ಯರಾದಿಯಾಗಿ ಸರ್ಕಾರದ ಅಧಿಕಾರಿಗಳು, ಮಂತ್ರಿಗಳು, ಶಾಸಕರು ಎಲ್ಲರೂ ರೈತರಿಗೆ ವಿಶ್ವಾಸದ್ರೋಹ ಎಸಗಿ, ರೈತ ಹೋರಾಟ ಹತ್ತಿಕ್ಕಿದ್ದಾರೆ. ಇದೀಗ ಕೊನೆಯ ಯತ್ನವೆಂಬಂತೆ ಇದೇ ಜು. 23ರಂದು ಮುಖ್ಯಮಂತ್ರಿಗಳ ಮನೆಗೆ ಜಾಥಾ ಹೊರಟು, ಸಮಸ್ಯೆ ಬಗೆಹರಿಸಿಕೊಳ್ಳದೆ ಹಿಂದಿರುಗುವುದಿಲ್ಲ ಎಂಬ ತೀರ್ಮಾನ ಮಾಡಿದ್ದಾರೆ.
ಬೆಂಗಳೂರಿನ ಉತ್ತರಕ್ಕೆ ನಲವತ್ತು ಕಿಲೋಮೀಟರ್ ದೂರವಿರುವ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಸುತ್ತಮುತ್ತಲ ಹದಿಮೂರು ಹಳ್ಳಿಗಳ ರೈತರು ಹೊಲ ಉತ್ತು, ಬಿತ್ತು, ಅತಿವೃಷ್ಟಿ-ಅನಾವೃಷ್ಟಿಗಳನ್ನು ಅರುಗಿಸಿ, ಕೈಗೆ ಬಂದ ಬೆಳೆ ಮತ್ತು ಬೆಲೆಯಲ್ಲಿಯೇ ಸ್ವಾವಲಂಬನೆಯಿಂದ ಬದುಕುತ್ತಿದ್ದರು. ಅಂತಹ ಬಡ ರೈತರ ಕೈಗೆ ಕೆಐಎಡಿಬಿ ನೋಟಿಸ್ ನೀಡಿದೆ. ಮೂರು ವರ್ಷಗಳ ಹಿಂದೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಹರಳೂರು ಕೈಗಾರಿಕಾ ಪ್ರದೇಶಾಭಿವೃದ್ಧಿ ಯೋಜನೆಗಾಗಿ 1,777 ಎಕರೆ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.
ಈಗಾಗಲೇ ಅದೇ ಪ್ರದೇಶದಲ್ಲಿ ಮಂಡಳಿ 2,030 ಎಕರೆಗಳನ್ನು ಭೂಸ್ವಾಧೀನಪಡಿಸಿಕೊಂಡು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಿದೆ. ವಶಪಡಿಸಿಕೊಂಡ ಭೂಮಿಗೆ ಸರ್ಕಾರ ಪರಿಹಾರವನ್ನು ಕೊಟ್ಟಿದೆ. ಆದರೆ, ಆ ಪರಿಹಾರದ ಹಣ ಕೆಲವೇ ದಿನಗಳಲ್ಲಿ ಮದುವೆ, ತಿಥಿ, ಜಾತ್ರೆ, ಸಾಲ, ಹಬ್ಬಕ್ಕಾಗಿ ಖರ್ಚಾಗಿದೆ. ಭೂ ಮಾಲೀಕರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ರೈತರು ಕೇವಲ ಮೂರು ವರ್ಷಗಳ ಅಂತರದಲ್ಲಿ ದಿನಗೂಲಿ ಕಾರ್ಮಿಕರಾಗಿದ್ದಾರೆ, ನಿರ್ಗತಿಕರಾಗಿದ್ದಾರೆ, ದಿಕ್ಕೆಟ್ಟ ಬದುಕು ಬಾಳುತ್ತಿದ್ದಾರೆ.
ಕೃಷಿ ಯೋಗ್ಯ ಭೂಮಿಯನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಬಳಸುವಂತಿಲ್ಲ ಎಂಬುದನ್ನು ಸರ್ಕಾರವೇ ಕಾನೂನು ಮಾಡಿದೆ. ಆದರೆ, ಚನ್ನರಾಯಪಟ್ಟಣದ ಸುತ್ತಮುತ್ತಲಿನದು ಫಲವತ್ತಾದ ಕೃಷಿಭೂಮಿ. ಆ ಭೂಮಿಯಲ್ಲಿ ಅವರು ಹಣ್ಣು, ತರಕಾರಿ, ಸೊಪ್ಪು, ದವಸ-ಧಾನ್ಯ ಬೆಳೆದು ಬೆಂಗಳೂರಿಗೆ ನೀಡುತ್ತಿದ್ದಾರೆ. ಆದರೂ, ಅದನ್ನು ಬಂಜರು ಭೂಮಿ ಎಂದು ದಾಖಲೆಗಳಲ್ಲಿ ನಮೂದಿಸಿ, ಭೂ ಒಡೆಯರಾದ ರೈತರೊಂದಿಗೆ ಚರ್ಚಿಸದೆ ಭೂಸ್ವಾಧೀನಕ್ಕೆ ನೋಟಿಸ್ ನೀಡಲಾಗಿದೆ.
ಇದು ನಡೆದದ್ದು ಕಳೆದ ಬಿಜೆಪಿ ಸರ್ಕಾರದಲ್ಲಿ. ಆಗ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ, ಕೈಗಾರಿಕಾ ಸಚಿವರಾಗಿದ್ದವರು ಮುರುಗೇಶ್ ನಿರಾಣಿ. ಇಬ್ಬರೂ ಕೃಷಿ ಕುಟುಂಬದಿಂದ ಬಂದವರು. ಆದರೆ ಅಧಿಕಾರದ ಕುರ್ಚಿಯಲ್ಲಿ ಕೂರುತ್ತಿದ್ದಂತೆ ರೈತವಿರೋಧಿಗಳಾಗಿ ಮಾರ್ಪಟ್ಟಿದ್ದರು. ಆದರೂ ರೈತರು, ಅವರಲ್ಲಿನ್ನೂ ಕೃಷಿ ಕಳೆ ಉಳಿದಿದೆ ಎಂದು ಭಾವಿಸಿ, ಹಲವು ಸಭೆ ನಡೆಸಿ, ಅದು ಬದುಕಿಗೆ ಆಧಾರವಾದ ಕೃಷಿ ಭೂಮಿ, ಅದನ್ನು ಭೂಸ್ವಾಧೀನದಿಂದ ಕೈಬಿಡಿ ಎಂದು ಮನವಿ ಮಾಡಿಕೊಂಡಿದ್ದರು.
ಆದರೆ ರೈತರ ಮನವಿಯನ್ನು ಆಳುವ ಸರ್ಕಾರ ತಿರಸ್ಕರಿಸಿ, ಭೂಸ್ವಾಧೀನಕ್ಕೆ ಮುಂದಾದಾಗ ಜನವರಿ 28, 2022ರಂದು ನಾಡಕಚೇರಿ ಎದುರು ಸಾಂಕೇತಿಕವಾಗಿ ಒಂದು ದಿನ ಪ್ರತಿಭಟನೆ ಕೈಗೊಂಡು, ಕೆಐಎಡಿಬಿ ನೀಡಿದ್ದ ನೋಟಿಸ್‌ಗಳನ್ನು ಸಾರ್ವಜನಿಕವಾಗಿ ಸುಡಲಾಗಿತ್ತು. ಮಂಡಳಿ ತನ್ನ ಹೆಜ್ಜೆ ಹಿಂತೆಗೆಯದಿದ್ದಾಗ, ‘ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ’ ರಚಿಸಿಕೊಂಡರು. ಆನಂತರ ರೈತರು ತಮ್ಮ ಕೃಷಿ ಭೂಮಿಯನ್ನು ರಕ್ಷಿಸಲು ಏಪ್ರಿಲ್ 4, 2022ರಂದು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಅದೀಗ 845 ದಿನ (ಹತ್ತಿರ ಹತ್ತಿರ ಎರಡೂವರೆ ವರ್ಷ) ದಾಟಿ ಮುಂದುವರಿದಿದೆ. ಇತಿಹಾಸ ಸೃಷ್ಟಿಸಿದೆ.
ಭೂಮಿ ಕಳೆದುಕೊಳ್ಳುವವರಲ್ಲಿ ಹೆಚ್ಚಿನವರು ಅತಿಸಣ್ಣ ಮತ್ತು ಸಣ್ಣ ರೈತರು ಹಾಗೂ ಬಗರ್ ಹುಕುಂ ಸಾಗುವಳಿದಾರರು. ಅಳಿದುಳಿದ ಈ ಸಮೃದ್ಧ ಭೂಮಿಗೂ ‘ಅಭಿವೃದ್ಧಿ’ಕಾರರು ಕಣ್ಣು ಹಾಕಿದಾಗ ರೈತರು ತಿರುಗಿ ಬಿದ್ದಿದ್ದಾರೆ. ಇಡೀ ತಾಲೂಕಿನ ರೈತರು ಮತ್ತು ಜನಸಾಮಾನ್ಯರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಹಲವು ಸಲ ಕಾಲ್ನಡಿಗೆ ಜಾಥಾಗಳು, ರಸ್ತೆ ತಡೆ, ಪ್ರತಿಭಟನಾ ಸಮಾವೇಶಗಳು ಜರುಗಿವೆ. ಆ ಪ್ರತಿಭಟನೆಗಳಿಗೆ ನಾಡಿನ ರೈತ ನಾಯಕರು, ವಿವಿದ ಸಂಘಟನೆಗಳ ನಾಯಕರು, ಪತ್ರಕರ್ತರು, ಸಾಹಿತಿಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿಯ ‘ಭಗವಂತ’ನಿಗೇ ಎಚ್ಚರಿಕೆ ಕೊಟ್ಟರೆ ಭಾಗವತ್?
ಕುತೂಹಲಕರ ಸಂಗತಿ ಎಂದರೆ, ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಧರಣಿನಿರತ ಸ್ಥಳಕ್ಕೆ ಆಗಮಿಸಿ, ‘ನಾವು ಅಧಿಕಾರಕ್ಕೆ ಬಂದರೆ, ಯಾವುದೇ ಕಾರಣಕ್ಕೂ ಭೂಸ್ವಾಧೀನಕ್ಕೆ ಅವಕಾಶ ಕೊಡುವುದಿಲ್ಲ’ವೆಂದು ಆಶ್ವಾಸನೆ ಕೊಟ್ಟಿದ್ದರು. ಸ್ಥಳೀಯ ಶಾಸಕ, ಸಚಿವ ಕೆ.ಎಚ್. ಮುನಿಯಪ್ಪ, ‘ನಾನು ನಿಮ್ಮ ಜೊತೆಗಿದ್ದೇನೆ’ ಎಂದಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ರೈತರ ಪರ ನಾವಿದ್ದೇವೆ’ ಎಂದಿದ್ದರು. ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಪ್ರತಿಭಟನೆಯಲ್ಲಿ ರೈತರು ಮತ್ತು ಹೋರಾಟಗಾರರಿಗೆ ಪೊಲೀಸರು ಲಾಠಿ ಏಟು ಕೊಟ್ಟು, ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದರು. ಇದಕ್ಕೆ ಸೂಚನೆ ನೀಡಿದ್ದ ಡಾ.ಕೆ. ಸುಧಾಕರ್ ಪರ ಕುಮಾರಸ್ವಾಮಿಯವರು ಈ ಬಾರಿ ಪ್ರಚಾರ ನಡೆಸಿದ್ದರು.
ಇತ್ತೀಚೆಗೆ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಹೋರಾಟಗಾರರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ, ಆಶ್ವಾಸನೆಯನ್ನು ನೆನಪಿಸಿದರು. ಮತ್ತೊಮ್ಮೆ ಮನವಿ ಅರ್ಪಿಸಿದರು. ಭೂಸ್ವಾಧೀನ ಕೈ ಬಿಡುವಂತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರನ್ನು ಪರಿಪರಿಯಾಗಿ ಬೇಡಿಕೊಂಡರು. ಪಾಟೀಲರು ಮೊದಲು ರೈತರ ಪರವಿದ್ದವರು, ರಿಯಲ್ ಎಸ್ಟೇಟ್ ದಲ್ಲಾಳಿಗಳ, ಪುಡಿ ಪುಢಾರಿಗಳ ಮತ್ತು ಅಧಿಕಾರಿಗಳ ಪುಸಲಾವಣೆಗೊಳಗಾಗಿ, ಈಗ ರೈತರ ವಿರುದ್ಧ ಒರಟಾಗಿ, ಉಡಾಫೆಯಿಂದ ಮಾತನಾಡುತ್ತಿದ್ದಾರೆ. ಸರ್ಕಾರ ಕೂಡ ಹೋರಾಟವನ್ನು ಹತ್ತಿಕ್ಕುವ ಬಗ್ಗೆ ಯೋಚಿಸುತ್ತಿದೆಯೇ ಹೊರತು, ಕೊಟ್ಟ ಭರವಸೆ ಈಡೇರಿಸುವತ್ತ ಮನಸ್ಸು ಮಾಡುತ್ತಿಲ್ಲ.
ಇದರಿಂದ ಬೇಸತ್ತ ರೈತರು, ತಮ್ಮ ಬದುಕಿಗೆ ಆಸರೆಯಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲವೆನ್ನುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯರಾದಿಯಾಗಿ ಸರ್ಕಾರದ ಅಧಿಕಾರಿಗಳು, ಮಂತ್ರಿಗಳು, ಶಾಸಕರು ಎಲ್ಲರೂ ರೈತರಿಗೆ ವಿಶ್ವಾಸದ್ರೋಹ ಎಸಗಿದ್ದಾರೆ. ಇದೀಗ ಕೊನೆಯ ಯತ್ನವೆಂಬಂತೆ ಇದೇ ಜು. 23ರಂದು ಮುಖ್ಯಮಂತ್ರಿಗಳ ಮನೆಗೆ ಜಾಥಾ ಹೊರಟು, ಸಮಸ್ಯೆ ಬಗೆಹರಿಸಿಕೊಳ್ಳದೆ ಹಿಂದಿರುಗುವುದಿಲ್ಲ ಎಂಬ ತೀರ್ಮಾನ ಮಾಡಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಮೂರು ಕರಾಳ ಕೃಷಿ ಕಾಯಿದೆಗಳನ್ನು ಜಾರಿಗೆ ತಂದಾಗ, ದೇಶದ ರೈತರು ಒಂದಾಗಿ ಒಂದು ವರ್ಷ ಕಾಲ ನಿರಂತರವಾಗಿ ಹೋರಾಟ ಮಾಡಿ, ಸರ್ಕಾರವನ್ನು ಮಣಿಸಿದ್ದರು. ಕಾಯಿದೆಗಳನ್ನು ಹಿಂಪಡೆಯುವಂತೆ ಮಾಡಿದ್ದರು. ಇದು ನಮ್ಮ ಕಣ್ಣಮುಂದಿನ ಇತಿಹಾಸ.
ಹಾಗೆಯೇ ಇಪ್ಪತ್ತು ವರ್ಷಗಳ ಹಿಂದೆ ಇದೇ ದೇವನಹಳ್ಳಿಯ ರೈತರು ವಿಮಾನ ನಿಲ್ದಾಣಕ್ಕಾಗಿ ಭೂಮಿ ಬಿಟ್ಟುಕೊಟ್ಟಿದ್ದರು. ಇಂದು ಅವರೆಲ್ಲ ಬೆಂಗಳೂರು ನಗರದಲ್ಲಿ ನಾಲ್ಕನೇ ದರ್ಜೆ ಕೂಲಿಕಾರ್ಮಿಕರಾಗಿದ್ದಾರೆ. ಹೆಂಗಸರು ಅಪಾರ್ಟ್‌ಮೆಂಟ್‌ಗಳಲ್ಲಿ ಕಸ-ಮುಸುರೆ ತೊಳೆಯುತ್ತಿದ್ದಾರೆ.
ಈ ಕರಾಳ ಸತ್ಯ ನಮ್ಮೆದುರಿಗಿದ್ದರೂ, ರಾಜ್ಯ ಸರ್ಕಾರ ಮೊಂಡಾಟಕ್ಕೆ ಬಿದ್ದು ರೈತ ವಿರೋಧಿ ಭಾವನೆ ತಳೆದಿರುವುದು ಶೋಚನೀಯ.
