ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿನ ಮಣ್ಣು ತೆರವು ಮತ್ತು ಮೊಬೈಲ್ ಸ್ವಿಚ್ ಆನ್ ಆಗಿರುವ ಲಾರಿ ಚಾಲಕನಿಗಾಗಿ ಶೋಧ ಕಾರ್ಯಾಚರಣೆಯನ್ನು 7ನೇ ದಿನವೂ ಮುಂದುವರಿಸಲಾಗಿದೆ.
ಕಳೆದ ಏಳು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ನಿನ್ನೆಯಿಂದ ಈ ಕಾರ್ಯಾಚರಣೆಯ ನೇತೃತ್ವವನ್ನು ಭಾರತೀಯ ಸೇನೆಯ ತಂಡವು ವಹಿಸಿಕೊಂಡಿದೆ.
ಸೋಮವಾರ ಬೆಳಗ್ಗೆ ಅತ್ಯಾಧುನಿಕ ಮೆಟಲ್ ಡಿಟೆಕ್ಟರ್‌ನೊಂದಿಗೆ ನಿರ್ಣಾಯಕ ತಪಾಸಣೆಯ ವೇಳೆ ಸುಮಾರು ಎಂಟು ಮೀಟರ್ ಆಳದಲ್ಲಿ ಲೋಹದ ಸಾಧನ ಇರುವುದು ಪತ್ತೆಯಾಗಿರುವುದಾಗಿ ಘಟನೆಯ ಬಗ್ಗೆ ನಿರಂತರವಾಗಿ ವರದಿ ಮಾಡುತ್ತಿರುವ ಕೇರಳದ ಮಾಧ್ಯಮಗಳು ವರದಿ ಮಾಡಿದೆ.
ಸೇನೆಯ ಅತ್ಯಾಧುನಿಕ ರಾಡಾರ್ ಬಳಸಿ ಪರೀಕ್ಷೆ ನಡೆಸಿದಾಗ ಎರಡು ಕಡೆಯ ಮಣ್ಣಿನಡಿಯಲ್ಲಿ ಲೋಹದ ವಸ್ತು ಇರುವುದನ್ನು ಸೂಚಿಸುವ ಸಿಗ್ನಲ್ ಸಿಕ್ಕಿರುವುದಾಗಿ ವರದಿಯಾಗಿದೆ. ಹೀಗಾಗಿ ಇದು ಮೊಬೈಲ್ ಆನ್ ಆಗಿದ್ದ ಲಾರಿ ಚಾಲಕನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಲೋಹದ ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಆರು ಬೃಹತ್ ಜೆಸಿಬಿಯ ಮೂಲಕ ಮಣ್ಣನ್ನು ಸರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಸದ್ಯ ಸ್ಥಳದಲ್ಲಿ ರಸ್ತೆಯ ಮೇಲಿದ್ದ ಮಣ್ಣನ್ನು ತೆಗೆಯಲಾಗಿದೆ.
“ಸಿಗ್ನಲ್ ಪತ್ತೆಯಾಗಿರುವುದನ್ನು ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ನಿರ್ಣಾಯಕ ಭಾಗವನ್ನು ಕೇಂದ್ರೀಕರಿಸಿ ಮಣ್ಣನ್ನು ಸರಿಸುವುದನ್ನು ಮುಂದುವರಿಸಲಾಗಿದೆ. ಮಣ್ಣು ಸಾಗಣೆ ಕಷ್ಟವಿದೆ. ಹೀಗಾಗಿ, ಆರು ಜೆಸಿಬಿಗಳನ್ನು ಬಳಸಿ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ” ಅಂಕೋಲಾದಲ್ಲಿರುವ ಕೇರಳದ ಸಂಸದ ಎಂ ಕೆ ರಾಘವನ್ ಹೇಳಿಕೆ ನೀಡಿದ್ದಾರೆ.
“ಎಂಟು ಮೀಟರ್ ಆಳದಲ್ಲಿ ಲಾರಿಯ ಶಂಕಿತ ಲೋಹದ ಭಾಗ ಇರುವ ಬಗ್ಗೆ ಸಿಗ್ನಲ್ ಸಿಕ್ಕಿದೆ” ಎಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ.
“ಪರೀಕ್ಷೆ ನಡೆಸಲಾಗುತ್ತಿದೆ. ಹವಾಮಾನವು ಇದ್ದಕ್ಕಿದ್ದಂತೆ ಬದಲಾಗುತ್ತಲೂ ಇದೆ. ಎಲ್ಲರೂ ಅರ್ಜುನ್ ಸಿಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ” ಎಂದು ಕಾರ್ಯಾಚರಣೆ ಸ್ಥಳದಲ್ಲಿರುವ ಎಕೆಎಂ ಅಶ್ರಫ್ ತಿಳಿಸಿದ್ದಾರೆ.
ಇನ್ನೊಂದೆಡೆ, ನೌಕಾಪಡೆಯ ಸ್ಕೂಬಾ ಡೈವಿಂಗ್ ತಂಡ ಕೂಡ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದೆ. ನದಿಯೊಳಗೆ ರೂಪುಗೊಂಡಿರುವ ಸುಮಾರು 20 ಅಡಿ ಎತ್ತರಕ್ಕೆ ಬಂದಿರುವ ದಿಬ್ಬಗಳನ್ನೂ ಕೂಡ ಪರಿಶೀಲಿಸುತ್ತಿದ್ದಾರೆ.
ಲಾರಿ ಚಾಲಕ ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಝ್ ಲಾರಿಯಲ್ಲಿ ಮರದ ದಿಮ್ಮಿಗಳಿದ್ದವು. ನದಿಯಲ್ಲಿ ಎಲ್ಲಿಯೂ ನಮಗೆ ಮರದ ದಿಮ್ಮಿಗಳು ಕಂಡಿಲ್ಲ. ಹೀಗಾಗಿ ಮಣ್ಣಿನ ಅಡಿಯಲ್ಲೇ ಲಾರಿ ಸಿಲುಕಿರುವ ಸಾಧ್ಯತೆ ಇದೆ ಎಂದು ಲಾರಿ ಕಂಪನಿಯ ಮಾಲೀಕ ಅಬ್ದುಲ್ ಮುನಾಫ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಲಾರಿ ಇನ್ನೂ ಮಣ್ಣಿನಡಿಯಲ್ಲಿ ಇರುವ ಶಂಕೆ ಇದೆ. ಮಣ್ಣನ್ನು ಸರಿಸುವುದೇ ದೊಡ್ಡ ಸವಾಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಗೆ ಕೇರಳದಿಂದ ಬಂದಿರುವ ಕಾರ್ಯಕರ್ತ ರಂಜಿತ್ ಇಸ್ರೇಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಕನ್ನಡ | ಶಿರೂರು ಗುಡ್ಡ ಕುಸಿದ ಸ್ಥಳಕ್ಕೆ ಸಿಎಂ ಭೇಟಿ; ಕಾರ್ಯಾಚರಣೆಗೆ ಆಧುನಿಕ ತಂತ್ರಜ್ಞಾನ ಬಳಕೆಗೆ ಸೂಚನೆ
ಘಟನೆ ನಡೆದ ಆರಂಭದ ದಿನಗಳಿಂದಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ಲೋಪವಾಗಿತ್ತು. ಆರಂಭದಲ್ಲಿ ಆದ ಪ್ರಮಾದಗಳಿಂದ ರಕ್ಷಣಾ ಕಾರ್ಯ ಜಟಿಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್, ಅಗ್ನಿಶಾಮಕದಳ, ಪೊಲೀಸರು ಮತ್ತು ಕೇರಳದಿಂದ ಇತರ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ಇಂದಿನಿಂದ ಶಿರೂರಿನಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ಭೂ ಕುಸಿತದ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.