- ಖಾಸಗಿ ಕಂಪನಿಯ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡ ಪೊಲೀಸರು
- ಕಳೆದ ನವೆಂಬರ್‌ನಲ್ಲಿ ಮತದಾರರ ದತ್ತಾಂಶ ಮಾರಾಟ ಮಾಡಿದ್ದ ‘ಚಿಲುಮೆ ಸಂಸ್ಥೆ’
ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಮತದಾರರ ಮಾಹಿತಿ ಸಂಗ್ರಹ ಮತ್ತು ಗುರುತಿನ ಚೀಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಚಿಲುಮೆ ಸಂಸ್ಥೆ ವಿರುದ್ಧ ಈ ಹಿಂದೆ ಆರೋಪ ಕೇಳಿಬಂದಿತ್ತು. ಇದೀಗ ಅದರಂತೆಯೇ, ಆರೂವರೆ ಲಕ್ಷಕ್ಕೂ ಹೆಚ್ಚು ಮತದಾರರ ದತ್ತಾಂಶವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೋರಮಂಗಲದ ಖಾಸಗಿ ಕಂಪನಿಯೊಂದರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಆಗ್ನೇಯ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಕಂಪನಿಯ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.
ಕಳೆದ ನವೆಂಬರ್‌ನಲ್ಲಿ ‘ಚಿಲುಮೆ ಸಂಸ್ಥೆ’ಯೂ ಮತದಾರರ ದತ್ತಾಂಶ ಮಾರಾಟ ಮಾಡಿತ್ತು. ಅದೇ ಮಾದರಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಕೋರಮಂಗಲದ ಸಂಸ್ಥೆಯೂ ಸಮೀಕ್ಷೆ ನಡೆಸಿದೆ ಎನ್ನಲಾಗಿದೆ.
ಈ ಖಾಸಗಿ ಕಂಪನಿಯೂ ಮತದಾರರ ಸಂಪೂರ್ಣ ವಿವರಗಳನ್ನು ಸಂಗ್ರಹಿಸುತ್ತಿತ್ತು. ಇದಕ್ಕಾಗಿಯೇ, ಪ್ರತ್ಯೇಕ ಆ್ಯಪ್ ಬಳಸಿ ಮತದಾರರ ಮಾಹಿತಿ, ಹೆಸರು, ವಿಳಾಸ, ಜಾತಿ, ಮತದಾರರು ಕಳೆದ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸಿದ್ದರು. ಈ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸಲಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಆ್ಯಪ್ನಲ್ಲಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
“ಸುಮಾರು ಆರು ಲಕ್ಷದಷ್ಟು ಮತದಾರರ ಮಾಹಿತಿ ಈ ಖಾಸಗಿ ಸಂಸ್ಥೆಯ ಬಳಿ ಇತ್ತು. ಇದು ನಿರ್ದಿಷ್ಟ ಕ್ಷೇತ್ರದ ಮತದಾರರ ಪಟ್ಟಿಯೇ ಎಂಬ ಬಗ್ಗೆ ತನಿಖೆಯಿಂದ ತಿಳಿಯಬೇಕಿದೆ. ಈ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಮತದಾರರ ಮೊಬೈಲ್ ಸಂಖ್ಯೆ ಹಾಕಿತ್ತು. ₹ 25 ಸಾವಿರ ನೀಡಿದರೆ ಲಾಗ್‌ಇನ್ ಐಡಿ ನೀಡುತ್ತಿತ್ತು” ಎಂದು ತಿಳಿದುಬಂದಿದೆ.
ರಾಜ್ಯ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳು ಈ ವೆಬ್‌ಸೈಟ್ ತೆಗೆದ ತಕ್ಷಣ ಸ್ವಾಗತ ಎಂಬ ಸಂದೇಶ ಬರುತ್ತಿತ್ತು. ₹25 ಸಾವಿರ ಜೊತೆಗೆ ₹500 ಸೇವಾ ಶುಲ್ಕ ನೀಡಿದರೆ ಕ್ಷೇತ್ರದ ಮತದಾರರ ಮಾಹಿತಿ ನೀಡಲಾಗುತ್ತಿತ್ತು. ಮಾಹಿತಿ ಪಡೆದು ಚುನಾವಣೆಯಲ್ಲಿ ಜಯಶಾಲಿಯಾಗಿ ಎಂದು ವೆನ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಒಂದು ವೇಳೆ ಸೋತರೆ ಹಣ ವಾಪಸ್ ಎಂಬ ಪ್ರಣಾಳಿಕೆ ಮಾಡಿಕೊಂಡಿತ್ತು. ಪಕ್ಷೇತರ ಅಭ್ಯರ್ಥಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಲೇವಾದೇವಿದಾರರ ಕಾಟಕ್ಕೆ ಬೇಸತ್ತು ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ
ಪಕ್ಷೇತರ ಅಭ್ಯರ್ಥಿಯೊಬ್ಬರು ನೀಡಿದ್ದ ಸುಳಿವು ಆಧರಿಸಿ ‘ದಿ ನ್ಯೂಸ್ ಮಿನಿಟ್’ ವೆಬ್‌ಸೈಟ್ ತನಿಖಾ ವರದಿ ಪ್ರಕಟಿಸಿತ್ತು. ಬಳಿಕ ಚುನಾವಣಾಧಿಕಾರಿಯು ಪೊಲೀಸರಿಗೆ ದೂರು ನೀಡಿದ್ದರು.
“ಖಾಸಗಿ ಕಂಪನಿಯ ವೆಬ್‌ಸೈಟ್‌ವೊಂದರಲ್ಲಿ ಹಣ ಪಡೆದು ಮತದಾರರ ಮಾಹಿತಿ ಮಾರಾಟ ಮಾಡುತ್ತಿದ್ದಾರೆಂದು ಚುನಾವಣೆ ಅಧಿಕಾರಿಗಳು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಪ್ರಸ್ತುತವಾಗಿ ತನಿಖೆ ಕೈಗೊಂಡಿರುವುದರಿಂದ ಖಾಸಗಿ ಸಂಸ್ಥೆಯ ಹೆಸರು ಬಹಿರಂಗ ಪಡಿಸುವುದಿಲ್ಲ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.