ಇತಿಹಾಸದಲ್ಲಿ ಇದೇ ಮೊದಲಿಗೆ ಮಹಿಳೆಯರು ದೇವರನ್ನು ಹೊತ್ತು ಸಾಗಿದ ವಿಶಿಷ್ಟ ಪ್ರಸಂಗ ಚಿಕ್ಕಬಳ್ಳಾಪುರ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದಿದ್ದು, ಗ್ರಾಮದೇವತೆ ಹೊತ್ತ ಮಹಿಳೆಯರು ಸ್ತ್ರೀಶಕ್ತಿ ಪ್ರದರ್ಶನ ಮಾಡಿದ್ದಾರೆ.
ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಮಹೇಶ್ವರಮ್ಮ, ಗಂಗಮ್ಮ, ಸಪ್ಲಮ್ಮ, ಕಾಳಮ್ಮ ಎಂಬ ಹೆಸರಿನ ಗ್ರಾಮದೇವತೆಗಳ ಮೆರವಣಿಗೆ ನಡೆದುಕೊಂಡು ಬರುತ್ತಿದ್ದು, ಎಂದಿನಂತೆ ಪುರುಷರೇ ದೇವರನ್ನು ಹೊರುವುದು ವಾಡಿಕೆ. ಆದರೆ, ಈ ಬಾರಿ ಗ್ರಾಮದ ಮಹಿಳೆಯರು ತಾವೇ ದೇವರು ಹೋರುತ್ತೇವೆಂದು ಉತ್ಸಾಹ ತೋರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ದೇವರನ್ನು ಹೊರಲು ಅವಕಾಶ ಕೊಟ್ಟಿದ್ದಾರೆ.
ಮಣಬಾರದ ದೇವರುಗಳನ್ನು ಹೊರಲು ಪುರುಷರು ಹಿಂದೇಟು ಹಾಕುವ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳೇ ದೇವರನ್ನು ಹೊತ್ತಿರುವುದು ಇದೇ ಮೊದಲು ಎಂಬಂತಾಗಿದೆ. ಮುಷ್ಟೂರು ಗ್ರಾಮದ ಗೃಹಿಣಿ ತ್ರಿವೇಣಿ ಮತ್ತು ಯುವತಿ ಮಾನಸ ದೇವರನ್ನು ಹೊತ್ತ ಹೆಂಗಳೆಯರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜಿಲ್ಲಾಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯ; ಆತಂಕದ ಬದುಕು ದೂಡುತ್ತಿರುವ ಸಾವಾಯಿಪಾಳ್ಯ ನಿವಾಸಿಗಳು
ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ದೇವರು ಹೊರಲು ಅವಕಾಶ ಕೊಟ್ಟಿರುವುದು ಸ್ತ್ರೀ ಸಮಾನತೆಗೊಂದು ಹೊಸ ಉದಾಹರಣೆಯಾಗಿದೆ. ಇತಿಹಾಸದಲ್ಲಿ ಇದೇ ಮೊದಲಿಗೆ ಮಹಿಳೆಯರು ದೇವರನ್ನು ಹೊತ್ತು ಮೆರವಣಿಗೆ ಮಾಡಿದ್ದಕ್ಕೆ ಗ್ರಾಮಸ್ಥರೂ ಸೇರಿದಂತೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.