ಬುಡಾ ಹಗರಣಕ್ಕೆ ಸಂಬಂಧಿಸಿದಂತೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಮಾಜಿ ಅಧ್ಯಕ್ಷ ಬಾಬು ವಾಲಿ, ಹಿಂದಿನ ಬುಡಾ ಆಯುಕ್ತ ಹಾಗೂ ಇತರರ ವಿರುದ್ದ ನೂತನ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ʼಸರ್ಕಾರದ ವಿವಿಧ ಕಾಮಗಾರಿಗಳಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ ಅನುದಾನ ದುರ್ಬಳಕೆ, ಕಾಮಗಾರಿಗಳು ಪ್ರಾರಂಭಿಸದೆ ಹಣ ಬಿಡುಗಡೆ ಮಾಡಿರುವುದು ಹಾಗೂ ಪ್ರಾಧಿಕಾರದ ಅಡಿಯಲ್ಲಿ ಬರುವ ನಿವೇಶನಗಳನ್ನು ನಿಯಮ ಬಾಹಿರವಾಗಿ ಹಂಚಿಕೆ ಮಾಡಿ ಪ್ರಾಧಿಕಾರಕ್ಕೆ/ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ ಕರ್ತವ್ಯ ಲೋಪ ಎಸಗಿರುವುದು ನಗರಾಭಿವೃದ್ಧಿ ಇಲಾಖೆ ನೇಮಿಸಿದ ಎರಡು ತನಿಖಾ ವರದಿಗಳಲ್ಲಿ ಉಲ್ಲೇಖಿಸಲಾಗಿದೆʼ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಬುಡಾ ಆಯುಕ್ತ ಶ್ರೀಕಾಂತ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಬಾಬು ವಾಲಿ ವಿರುದ್ಧ ಪ್ರಕರಣ ದಾಖಲಿಸಲು ಕೋರಿದರು. ಹೆಚ್ಚವರಿ ಪೊಲೀಸ್ ಅಧೀಕ್ಷಕರ ಸೂಚನೆ ಮೇರೆಗೆ ಪ್ರಕರಣ ದಾಖಲಾಗಿದೆ. ಬಾಬು ವಾಲಿ ಸೇರಿ ಇತರರ ವಿರುದ್ದ ಕಲಂ 409 ಹಾಗೂ 34 ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿದೆ.
ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದ್ ಕುಮಾರ್ ಅರಳಿ ದೂರಿನ ಮೇರೆಗೆ ನಗರಾಭಿವೃದ್ಧಿ ಇಲಾಖೆ ತನಿಖೆ ನಡೆಸಿತ್ತು. ಎರಡು ಪ್ರತ್ಯೇಕ ತನಿಖಾ ತಂಡಗಳು ತನಿಖೆ ನಡೆಸಿ ಕರ್ತವ್ಯ ಲೋಪ ಎಸಗಿರುವುದನ್ನು ಪತ್ತೆ ಹಚ್ಚಿದ್ದವು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಿನಕ್ಕೆ 14 ಗಂಟೆ ಕೆಲಸ ಅಮಾನವೀಯ ನಡೆ, ಸರ್ಕಾರ ತಿರಸ್ಕರಿಸಲಿ
ಬುಡಾ ಪ್ರಕರಣ ಕುರಿತು ಬೆಂಗಳೂರು ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ಜು.23ರಂದು ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಚುಕ್ಕೆ ಗುರುತಿನ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಉತ್ತರಿಸಿ, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆʼ ಎಂದು ತಿಳಿಸಿದರು.