ಬಿಜೆಪಿ ಪಾದಯಾತ್ರೆಯ ಪ್ರತಿ ದಿನವೂ ಅವರ ಒಂದೊಂದು ಹಗರಣ ಬಯಲು ಮಾಡುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಜತೆ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, “ಬಿಜೆಪಿಯವರು ಪಾದಯಾತ್ರೆ ಮಾಡುವ ಮೂಲಕ ಅವರ ಅಕ್ರಮಗಳನ್ನು ಬಯಲು ಮಾಡಲು ನಮಗೆ ಸದಾವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಅವರು ಪಾದಯಾತ್ರೆ ಮಾಡುವಾಗ ಒಂದೊಂದು ದಿನವೂ ಅವರ ಅಕ್ರಮಗಳನ್ನು ನಾವು ಬಯಲು ಮಾಡುತ್ತೇವೆ. ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಪ್ರಸ್ತಾಪಿಸಿರುವ ಹಗರಣಗಳನ್ನು ನಿತ್ಯ ಒಂದರಂತೆ ಬಯಲು ಮಾಡುತ್ತೇವೆ” ಎಂದು ಹೇಳಿದರು.
“ಬಿಜೆಪಿಯವರು ಪಾದಯಾತ್ರೆ ಹೋರಾಟ ಮಾಡುವ ಮುನ್ನ, ಅವರ ಕಾಲದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಮೊದಲು ಉತ್ತರ ನೀಡಲಿ. ಅವರ ಕಾಲದ ಅಕ್ರಮಗಳಲ್ಲಿ ಸಿಎಂ ಆಗಿದ್ದ ಬೊಮ್ಮಾಯಿ ಅವರು ಭಾಗಿಯಾಗಿದ್ದಾರೋ, ಮಂತ್ರಿಗಳು ಭಾಗಿಯಾಗಿದ್ದರೋ, ಅಧಿಕಾರಿಗಳು ಭಾಗಿಯಾಗಿದ್ದಾರೋ ಎಂದು ಉತ್ತರ ನೀಡಲಿ” ಎಂದು ಆಗ್ರಹಿಸಿದರು.
“ಈಗಲೂ ಬಿಜೆಪಿಯವರು ಈ ಅಕ್ರಮಗಳ ಬಗ್ಗೆ ಚರ್ಚೆ ಮಾಡಲು ಯಾವುದೇ ಮಾಧ್ಯಮಗ ಅಥವಾ ಸಾರ್ವಜನಿಕ ವೇದಿಕೆಗಳಲ್ಲಿ ಬಹಿರಂಗ ಚರ್ಚೆಗೆ ಬರಲಿ. ಕುಮಾರಸ್ವಾಮಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಆರ್ ಅಶೋಕ್ ಯಾರಾದರೂ ಚರ್ಚೆಗೆ ಬರಲಿ ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ” ಎಂದು ಸವಾಲೆಸೆದರು.
ಮೈಸೂರು ನಗರಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಅಕ್ರಮದ ವಿರುದ್ಧ ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯ ಬಳಿಕ ಮುಡಾ ಅಕ್ರಮ ಪ್ರಕರಣ ಯಾವ ಹಂತಕ್ಕೆ ಬರಲಿದೆ ಎಂದು ನೋಡಿಕೊಂಡು ಪಾದಯಾತ್ರೆ ನಡೆಸಲು ಬಿಜೆಪಿ ರಾಜ್ಯ ನಾಯಕರು ತೀರ್ಮಾನಿಸಿದ್ದು, ಒಂದು ವೇಳೆ ಸಿಎಂ ರಾಜೀನಾಮೆ ಕೊಡದಿದ್ದರೆ ಪಾದಯಾತ್ರೆ ಮೂಲಕ ಮೈಸೂರಿಗೆ ತೆರಳಿ ಸಿಎಂ ರಾಜೀನಾಮೆಗೆ ಆಗ್ರಹಿಸಲಿದ್ದಾರೆ.