ಮೇರು ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ, ಛಾಯಾಗ್ರಹಣ, ವರ್ಣಚಿತ್ರಗಳು ಮತ್ತು ಅವರ ವಿಚಾರಧಾರೆಯನ್ನು ಒಳಗೊಂಡ ಕೃತಿಗಳನ್ನು ಸಂಭ್ರಮಿಸಲು ‘ಸಾಂಸ್ಕೃತಿಕ ಹಬ್ಬ’ ಹಮ್ಮಿಕೊಳ್ಳಲಾಗಿದೆ ಎಂದು ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರ ತಿಳಿಸಿದೆ.
ಸಾಂಸ್ಕೃತಿಕ ಹಬ್ಬದ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ತಿಳಿಸಿದೆ.
“ಕಾರ್ಯಕ್ರಮದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಜೀವನ ಮತ್ತು ಕೃತಿಗಳ ಕುರಿತು ಬೃಹತ್ ಸಾಕ್ಷ್ಯಚಿತ್ರ ಸರಣಿ ‘ತೇಜಸ್ವಿ ಎಂಬ ವಿಸ್ಮಯ’ ಲೋಕಾರ್ಪಣೆಯಾಗಲಿದೆ. ಅದರೊಂದಿಗೆ MM ಪಬ್ಲಿಕೇಷನ್ಸ್ ಅವರು ಪ್ರಕಟಿಸಿರುವ, ಪ್ರೊ. ಕೆ.ಸಿ ಶಿವಾರೆಡ್ಡಿ ಸಂಪಾದಿಸಿರುವ ‘ಕೆ.ಪಿ ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು’ 14 ಸಂಪುಟಗಳ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು. ಈ ಆಚರಣೆಯ ಭಾಗವಾಗಿ ಅನೇಕ ಚರ್ಚೆ, ಸಂವಾದ, ಘೋಷ್ಠಿಗಳು ನಡೆಯಲಿವೆ. ಉನ್ನತ ಸಂಶೋಧನಾ ವಿದ್ವಾಂಸರು, ಪ್ರತಿಷ್ಠಿತ ಶಿಕ್ಷಣ ತಜ್ಞರು, ತೇಜಸ್ವಿ ಅವರ ಕುಟುಂಬ ಸದಸ್ಯರು ಮತ್ತು ಅವರ ಅನುಯಾಯಿಗಳು ಭಾಗವಹಿಸಲಿದ್ದಾರೆ” ಎಂದು ಕೇಂದ್ರವು ತಿಳಿಸಿದೆ.
“ತೇಜಸ್ವಿ ಹಬ್ಬದಲ್ಲಿ ‘ಮಾಧ್ಯಮ ಅನೇಕ’ ಸಂಸ್ಥೆ ನಿರ್ಮಾಣದ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆಯಾಗಲಿದೆ. 28ನೇ ಜುಲೈ 2024ರಂದು ಭಾನುವಾರ ಬೆಳಿಗ್ಗೆ 10:00 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಉಪ-ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂನ ಹಾಲಿ ಶಾಸಕ ಡಾ ಸಿ.ಎನ್ ಅಶ್ವಥ್ ನಾರಾಯಣ್ ಅವರು ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ ಮಾಡಲಿದ್ದಾರೆ” ಎಂದು ಹೇಳಿದೆ.
“ಎರಡು ದಿನಗಳ ಹಬ್ಬದಲ್ಲಿ ‘ಪೂರ್ಣಚಂದ್ರ’ ಚಿತ್ರ ಸಂಪುಟ ಬಿಡುಗಡೆ, ಅಣ್ಣನ ನೆನಪು ಸಾಕ್ಷ್ಯ ನಾಟಕ ಸೇರಿದಂತೆ ತೇಜಸ್ವಿ ಸಾಹಿತ್ಯ, ಅವರ ರಾಜಕೀಯ ಮತ್ತು ಸಾಮಾಜಿಕ ಚಿಂತನೆ ಕುರಿತಂತೆ ಗೋಷ್ಠಿಗಳು ನಡೆಯಲಿವೆ. ಇದೇ ವೇಳೆ ಪಕ್ಷಿಗಳ ಅಂಚೆಚೀಟಿ ಪ್ರದರ್ಶನ, ತೇಜಸ್ವಿ ಪುಸ್ತಕಗಳ ಪ್ರದರ್ಶನ, ತೇಜಸ್ವಿ ಅವರು ಸೆರೆಹಿಡಿದ ಫೋಟೋಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ” ಎಂದು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ;
ತೇಜಸ್ವಿ ಕಾರ್ಯಕ್ರಮದ ಮಾಹಿತಿ