ಸಾಗುವಳಿ ಭೂಮಿಯಲ್ಲಿ ಬೆಳೆನಾಶ ಮಾಡಿರುವ ಅರಣ್ಯ ಇಲಾಖೆ ಸಣ್ಣ ಹಿಡುವಳಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.
ರಾಯಚೂರು ತಾಲೂಕಿನ ಬಾಪುರ ಗ್ರಾಮದ ಅರಣ್ಯ ಭೂಮಿಯಲ್ಲಿ ಅರವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತ ಸಣ್ಣನರಸಪ್ಪ ಎಂಬುವವರು ಹತ್ತಿ ಬೆಳೆಯನ್ನು ಬೆಳೆಯನ್ನು ಬೆಳೆದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಇದೀಗ ಜೆಸಿಬಿ ಮೂಲಕ ಹತ್ತಿಬೆಳೆಯನ್ನು ನಾಶಮಾಡಿದ್ದು, ಅದೇ ಜಾಗದಲ್ಲಿ ತಗ್ಗುತೋಡಿ ಸಸಿಗಳನ್ನು ನೆಟ್ಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ತಾಲೂಕಿನ ಬಾಪೂರು ತಾಂಡದ ಸರ್ವೆ ನಂಬರ್ 18ರ 3 ಎಕರೆ ವಿಸ್ತೀರ್ಣದಲ್ಲಿ ಅನೇಕ ವರ್ಷಗಳಿಂದ ಲಚ್ಚನಾಯಕ ಬಾಗೂರು ತಾಂಡ ಹಾಗೂ ಚಂದ್ರಪ್ಪ ನಾಯಕ ಬಾಗೂರ ತಾಂಡ ಅವರು ಹತ್ತಿಬೆಳೆ ಬೆಳೆದು ಕೃಷಿ ಚಟುವಟಿಕೆ ಮಾಡುತ್ತಿದ್ದು, ಜುಲೈ 21ರಿಂದ 23ರವರೆಗೆ ಮೂರುದಿನ ಅರಣ್ಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಮೂಲಕ ಬೆಳೆನಾಶ ಪಡಿಸಿದ್ದಾರೆ. ಲಚ್ಚನಾಯಕ ಹಾಗೂ ಚಂದ್ರಪ್ಪ ಅರಣ್ಯ ಇಲಾಖೆಯ ಅಧಿಕಾರಿಗಳ ಕಾಲಿಗೆ ಬಿದ್ದು ಬೆಳೆನಾಶ ಮಾಡಬೇಡಿರೆಂದು ಪರಿಪರಿಯಾಗಿ ಬೇಡಿಕೊಂಡರೂ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅರಣ್ಯ ಅಧಿಕಾರಿಗಳ ದರ್ಪವನ್ನು ಖಂಡಿಸಿ ಸಂತ್ರಸ್ಥ ರೈತರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಬೆಳೆನಾಶ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಪ್ರಾಂತ ಕೂಲಿಕಾರರ ಸಂಘ ಜಿಲ್ಲಾ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ, ಬೆಳೆನಾಶ ಮಾಡಿದ ಅರಣ್ಯ ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
ಕರಿಯಪ್ಪ ಅಚ್ಚೊಳ್ಳಿ ಮಾತನಾಡಿ, “ನಾವು ಸುಮಾರು ಅರವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ಹೊಲದಲ್ಲಿ ಹತ್ತಿಯನ್ನು ಬೆಳೆದಿದ್ದರೂ ಕೂಡ ಅರಣ್ಯ ಇಲಾಖೆಯವರು ಜೆಸಿಬಿ ಮೂಲಕ ಎಲ್ಲವನ್ನೂ ನಾಶಮಾಡಿ ತಗ್ಗು ತೋಡಿದ್ದಾರೆ. ʼನೀಲಗಿರಿ ಸಸಿಗಳನ್ನು ಹಾಕುತ್ತೇವೆ. ಇದು ಅರಣ್ಯ ಭೂಮಿಯೆಂದು ವಾದ ವಿವಾದ ಮಾಡಿದರು. ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ ಸರ್ಕಾರ ಆದೇಶ ಹೊರಡಿಸಿತ್ತು. ಮೂರು ಎಕರೆ ಒಳಗಡೆ ಸಾಗುವಳಿ ಮಾಡುವವರನ್ನು ಒಕ್ಕಲೆಬ್ಬಿಸಬಾರದೆಂದು” ಎಂದು ನೋಟಿಸ್ ನೀಡಲಾಗಿತ್ತು” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕುಂದು ಕೊರತೆ : ಜಿಲ್ಲಾಡಳಿತ ಆವರಣ ಸ್ವಚ್ಛಗೊಳಿಸಿ; ರಸ್ತೆ, ನೀರಿನ ಘಟಕ ದುರಸ್ತಿಗೆ ಮನವಿ
“ರಾಯಚೂರು ತಾಲೂಕಿನ 32 ಪ್ರದೇಶಗಳಲ್ಲಿ 10 ವರ್ಷಗಳಿಂದಲೂ ಅರಣ್ಯ ಇಲಾಖೆಯವರಿಂದ ಸಮಸ್ಯೆಯಾಗುತ್ತಿದೆ. ನಾವು ಇದರ ಬಗ್ಗೆ ಹೋರಾಟ ಮಾಡಲಾಗಿತ್ತು. ಹತ್ತಿರದಲ್ಲೇ ಇರುವ ಸರ್ಕಾರ ಭೂಮಿಯಲ್ಲಿ ನೀಲಗಿರಿ ಸಸಿಗಳನ್ನು ಹಾಕಬೇಕು ಸಾಗುವಳಿ ಮಾಡುವವರನ್ನು ತಡೆಯಬಾರದೆಂದು ಮನವಿ ಮಾಡಲಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಮನವಿ ಸಲ್ಲಿಸಲಾಗಿದೆ. ಈ ವೇಳೆ ಅವರು ಅರಣ್ಯ ಇಲಾಖೆಯವರೊಂದಿಗೆ ಮಾತನಾಡಿ ಬಗೆಹರಿಸುವುದಾಗಿ ಭರವಸೆ ನೀಡಿದ್ದರು” ಎಂದು ತಿಳಿಸಿದರು.
