ಅಶ್ಲೀಲ ವಿಡಿಯೋಗಳನ್ನು ನೋಡಿ ಅಪ್ರಾಪ್ತ ಬಾಲಕನೊಬ್ಬ ತನ್ನ ತಂಗಿಯ ಮೇಲೆಯೇ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಪ್ರಕರಣವನ್ನು ಮುಚ್ಚಿಹಾಕಲು ಆತನ ತಾಯಿ ಮತ್ತು ಸಹೋದರಿಯರು ಸಹಕಾರ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಏಪ್ರಿಲ್ 24ರಂದು ನಡೆದಿದ್ದು, ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ತೀವ್ರ ವಿಚಾರಣೆ ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಭೇಸಿದಿದ್ದು, 13 ವರ್ಷದ ಆರೋಪಿ ಬಾಲಕ, ಆತನ ತಾಯಿ ಮತ್ತು ಇಬ್ಬರು ಹಿರಿಯ ಸಹೋದರಿಯರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ವಿವರಣೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್, “ಜಾವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಿದಾಗ ಬಾಲಕ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡಿದ ಬಳಿಕ ತನ್ನ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೃತ್ಯದ ಬಗ್ಗೆ ತಂದೆಗೆ ಹೇಳುವುದಾಗಿ ಸಂತ್ರಸ್ತೆ ಹೇಳಿದ್ದು, ಬಳಿಕ ಆಕೆಯನ್ನು ಕೊಲೆ ಮಾಡಿದ್ದಾನೆ” ಎಂದು ಹೇಳಿದ್ದಾರೆ.
“ಕೊಲೆ ಮಾಡಿದ ಬಳಿಕ ತನ್ನ ತಾಯಿಗೆ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾನೆ. ಸಂತ್ರಸ್ತೆಯನ್ನು ಗಮನಿಸಿದಾಗ, ಆಕೆ ಇನ್ನೂ ಜೀವಂತ ಇದ್ದುದ್ದನ್ನು ಕಂಡು, ಮತ್ತೆ ಆಕೆಯ ಕತ್ತು ಹಿಸುಕಿ ಕೊಂದಿದ್ದಾರೆ” ಎಂದು ಸಿಂಗ್ ಹೇಳಿದ್ದಾರೆ.
“ಏಪ್ರಿಲ್ 24ರಂದು ಬೆಳಗ್ಗೆ ಪೊಲೀಸರಿಗೆ ಮಾಹಿತಿ ಬಂದಿದ್ದು, ಬಾಲಕಿಯ ಮೃತದೇಹವನ್ನು ಅವರ ಮನೆಯಿಂದ ವಶಕ್ಕೆ ಪಡೆಯಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಪುರಾವೆಗಳು ಕಂಡುಬಂದಿವೆ. ತನಿಖೆಗಾಗಿ ಎಸ್‌ಐಟಿ ತಂಡವನ್ನು ರಚಿಸಲಾಗಿದೆ” ಎಂದು ಸಿಂಗ್ ಹೇಳಿದ್ದಾರೆ.
“ತನಿಖಾಧಿಕಾರಿಗಳ ದಿಕ್ಕು ತಪ್ಪಿಸುವ ಉದ್ದೇಶದಿಂದ ಬಾಲಕಿ ವಿಷಕಾರಿ ಕೀಟ ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದರು. ಮನೆಯವರನ್ನು ಹೊರತುಪಡಿಸಿ ಬೇರೆ ಯಾರೂ ಮನೆಗೆ ಬಂದಿರುವ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂಬುದು ತನಿಖೆ ವೇಳೆ ತಿಳಿದುಬಂದಿದೆ” ಎಂದು ಅವರು ತಿಳಿಸಿದ್ದಾರೆ.
“ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿ 50 ಜನರ ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಕುಟುಂಬ ಸದಸ್ಯರ ಹೇಳಿಕೆಗಳಲ್ಲಿ ಪದೇ ಪದೇ ಬದಲಾವಣೆಗಳು ಇದ್ದುದ್ದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಅನುಮಾನಗೊಂಡು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಕುಟುಂಬದವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ” ಎಂದು ಎಸ್‌ಪಿ ವಿವರಿಸಿದ್ದಾರೆ.