ಚೈನ್‌ಲಿಂಕ್ ಆನ್‌ಲೈನ್ ವಂಚನೆ ನಡೆದಿದ್ದು, ವ್ಯವಸ್ಥಿತ ಜಾಲವೊಂದು ಮುಗ್ದ ಜನರ ₹4 ಕೋಟಿ ದೋಖಾ ಮಾಡಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.
ವಾಟ್ಸಾಪ್ ಗ್ರೂಪ್ ಮೂಲಕ ಆ್ಯಪ್ ಅಪ್‌ಲೋಡ್ ಮಾಡಿ ಹೂಡಿದ ಹಣಕ್ಕೆ ನಿತ್ಯವೂ ದುಪ್ಪಟ್ಟು ಹಣ ನೀಡುವ ಆಮಿಷಕ್ಕೆ ಬಲಿಯಾದ ಸುಮಾರು 500 ಮಂದಿಯ 4-5 ಕೋಟಿ ರೂಪಾಯಿ ಹಣ ಲಪಾಟಿಯಿಸಿದ ಬೃಹತ್ ಅನ್‌ಲೈನ್ ವಂಚನೆ ಪ್ರಕರಣ ಗುಬ್ಬಿ ತಾಲೂಕಿನ ಸಿ ಎಸ್ ಪುರ ಪೊಲೀಸ್ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕಲ್ಲೂರು ಗ್ರಾಮದಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿದ ವಂಚಕರ ಜಾಲ ಮೊದಲು ಡಾಟಾ ಮೀರ್ ಎಐ ಎಂಬ ಆ್ಯಪ್ ಡೌನ್‌ಲೋಡ್ ಮಾಡಲು ಸೂಚಿಸಿ ಹಣದ ಹೂಡಿಕೆ ಹಾಗೆಯೇ ನಿತ್ಯ ಹಣ ಲಾಭ ಬರುವ ಬಗ್ಗೆ ಹೇಳಿದ್ದರು. 300 ರಿಂದ ಆರಂಭಿಸಿ 4 ಲಕ್ಷದ ವರೆಗೆ ವಹಿವಾಟು ಮಾಡುವ ಮುಗ್ಧ ಜನರು ತಮ್ಮ ಹೂಡಿಕೆ ಹಣಕ್ಕೆ 80 ದಿನದಲ್ಲಿ ದುಪ್ಪಟ್ಟ ಹಣ ನೀಡುವ ಆಸೆಗೆ ವಂಚಕ ಜಾಲ ಮೊದಲ ಹಂತದಲ್ಲಿ ದುಪ್ಪಟ್ಟು ಹಣ ನೀಡಿ ನಂಬಿಸಿದ್ದಾರೆ.
ಚೈನ್‌ಲಿಂಕ್ ಮೂಲಕ ವಾಟ್ಸಾಪ್ ಗ್ರೂಪ್‌ಗೆ ಸೇರಿದ ಕಲ್ಲೂರಿನ 600ಕ್ಕೂ ಅಧಿಕ ಜನ ಹಣದ ಆಸೆ ಮತ್ತು ಒಬ್ಬ ಗ್ರಾಹಕರನ್ನು ಹುಡುಕಿಕೊಟ್ಟರೆ ಶೇ.10ರಷ್ಟು ಕಮಿಷನ್ ಆಸೆಗೆ ಬಲಿಯಾಗಿದ್ದಾರೆ. ಬೆಂಗಳೂರು ವಾಸಿಯಾಗಿರುವ ಕಲ್ಲೂರು ಮೂಲದ ಮೂರು ಮಂದಿ ಈ ಚೈನ್‌ಲಿಂಕ್ ಪ್ರಚಾರ ಮಾಡಿ ನಂತರ ಕೆಲವರನ್ನು ಬೆಂಗಳೂರು ನಗರದಲ್ಲಿ ಮೀಟಿಂಗ್ ನಡೆಸಿ ದೊಡ್ಡ ವೇತನ ನೀಡುವ ಆಸೆಯನ್ನೂ ಹುಟ್ಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪುರುಷಾಧಿಪತ್ಯದ ಕ್ರೌರ್ಯ | ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು
“₹500 ಹೂಡಿಕೆ ಮಾಡಿದರೆ ಐದು ದಿನದಲ್ಲಿ ₹450 ಬರುವ ಆಸೆ, ಕೆಲವರಿಗೆ 80 ದಿನದಲ್ಲಿ ದ್ವಿಗುಣ ಹಣ ನೀಡುವ ಆಮಿಷ ಸೇರಿದಂತೆ ಹಲವು ರೀತಿಯ ಯೋಜನೆಗಳನ್ನು ವಿವರಿಸಿ ವಂಚಿಸಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹದ ಬಳಿಕ ಆ್ಯಪ್ ರದ್ದು ಮಾಡಿ ವ್ಯವಸ್ಥಿತವಾಗಿ ನಾಪತ್ತೆಯಾಗಿದ್ದಾರೆ. ವಂಚನೆಗೆ ಒಳಗಾದ ಸುಮಾರು 40 ಮಂದಿ ಸಂತ್ರಸ್ತರು ಸಿ ಎಸ್ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವ್ಯವಸ್ಥಿತ ಜಾಲ ರಾಜ್ಯದೆಲ್ಲೆಡೆ ಆನ್‌ಲೈನ್ ಮೋಸ ನಡೆಸಿರುವ ಅನುಮಾನವಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ತನಿಖೆ ನಡೆಸಲಾಗುವುದು” ಎಂದು ಡಿವೈಎಸ್‌ಪಿ ಶೇಖರ್ ತಿಳಿಸಿದ್ದಾರೆ.