ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಮೂಗಿನಿಂದ ರಕ್ತಸ್ರಾವವಾದ ಘಟನೆ ನಡೆದಿದೆ. ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಭಾನುವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸಭೆ ಆಯೋಜನೆಯಾಗಿತ್ತು. ಸಭೆ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದರು.
ಆಗ ಮೊದಲಿಗೆ ಮೂಗು ಒರೆಸಿಕೊಂಡ ಕುಮಾರಸ್ವಾಮಿ, ಮತ್ತೆ ಒರೆಸಿಕೊಳ್ಳುವ ವೇಳೆ ರಕ್ತ ಸೋರಿಕೆಯಾಗಲಾರಂಭಿಸಿದೆ. ಪತ್ರಿಕಾಗೋಷ್ಠಿ ವೇಳೆ ಪಕ್ಕದಲ್ಲೇ ಅವರ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಿಂತಿದ್ದರು. “ಯಾಕೆ ಏನಾಯ್ತು?” ಎಂದು ನಿಖಿಲ್ ಕೇಳಿದಾಗ ಮೂಗು ಒರೆಸಿಕೊಳ್ಳುತ್ತಲೇ, ಓಕೆ ಎಂದು ಕುಮಾರಸ್ವಾಮಿ ಕೈಯಲ್ಲಿ ಸನ್ನೆ ಮಾಡಿ ಮಾತು ಮುಂದುವರಿಸಿದರು. ಆದರೆ ಮೂಗಿನಿಂದ ರಕ್ತಸ್ರಾವ ಹೆಚ್ಚಾದ ಹಿನ್ನೆಲೆಯಲ್ಲಿ ನಿಖಿಲ್ ಅವರು ಕುಮಾರಸ್ವಾಮಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ದಿನ ಸಂಪಾದಕೀಯ | ಇದೆಲ್ಲ ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಷಡ್ಯಂತ್ರವೇ?
ಎಚ್ ಡಿ ಕುಮಾರಸ್ವಾಮಿ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸುತ್ತಮುತ್ತ ನೆರೆದಿದ್ದರು.
