ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಹಾಗೂ ಭಾರತದ ಬೌಲರ್‌ಗಳ ಸಾಂಘಿಕ ಪ್ರಯತ್ನದಿಂದ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ ಟೀಂ ಇಂಡಿಯಾ ತನ್ನದಾಗಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ಕುಶಾಲ ಪೆರೆರಾ (53) ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್‌ನಷ್ಟಕ್ಕೆ 161 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 162 ರನ್ ಗಳ ಗುರಿ ನೀಡಿತು.
ಪಥುಮ್ ನಿಸಾಂಕ (32; 24ಎ) ಮತ್ತು ಕುಶಾಲ ಮೆಂಡಿಸ್ (10, 11ಎ) ಅವರು ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಆದರೆ ನಾಲ್ಕನೇ ಒವರ್‌ನಲ್ಲಿ ಮೆಂಡಿಸ್ ವಿಕೆಟ್ ಗಳಿಸಿದ ಆರ್ಷದೀಪ್ ಸಿಂಗ್ ಜೊತೆಯಾಟವನ್ನು ಮುರಿದರು. ಈ ಹಂತದಲ್ಲಿ ಪಥುಮ್ ಮತ್ತು ಪೆರೆರಾ ಅವರು ಜೊತೆಗೂಡಿದರು. ಎರಡನೇ ವಿಕೆಟ್‌ಗೆ ಜೊತೆಯಾಟದಲ್ಲಿ 54 ರನ್ ಸೇರಿಸಿದರು. ಹತ್ತನೇ ಓವರ್‌ನಲ್ಲಿ ಪಥುಮ್ ವಿಕೆಟ್ ಪಡೆದ ರವಿ ಬಿಷ್ಣೋಯಿ ಜೊತೆಯಾಟಕ್ಕೆ ತಡೆಯೊಡ್ಡಿದರು. ಕೊನೆಯಲ್ಲಿ 22 ರನ್‌ಗಳ ಅಂತರದಲ್ಲಿ ಶ್ರೀಲಂಕಾದ 5 ವಿಕೆಟ್‌ಗಳು ಪತನವಾದವು.
ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್ 2024: ಪಿ ವಿ ಸಿಂಧು ಸೇರಿ ಭಾರತದ ಆರು ಕ್ರೀಡಾಪಟುಗಳ ಶುಭಾರಂಭ
ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದ ಕಾರಣ ಓವರ್‌ಗಳನ್ನು ಪರಿಷ್ಕರಿಸಿ ಗೆಲುವಿಗೆ 8 ಓವರ್‌ಗಳಲ್ಲಿ 78 ರನ್‌ಗಳ ಗುರಿ ನೀಡಲಾಯಿತು. ಟೀಂ ಇಂಡಿಯಾ 6.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿ ಗೆಲುವಿನ ಗಡಿ ದಾಟಿತು. ಜೈಸ್ವಾಲ್ (30; 15ಎ), ಸೂರ್ಯಕುಮಾರ್ (26, 12ಎ) ಮತ್ತು ಹಾರ್ದಿಕ್ ಪಾಂಡ್ಯ (ಅಜೇಯ 22; 9ಎ) ರನ್ ಗಳಿಸಿ ಗೆಲುವಿನ ರೂವಾರಿಯಾದರು. ಕೊನೆಯ ಪಂದ್ಯವು ಮಂಗಳವಾರ(ಜುಲೈ 30) ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 161 (ಪಥುಮ್ ನಿಸಾಂಕ 32, ಕುಶಾಲ ಪೆರೆರಾ 53, ಕಮಿಂದು ಮೆಂಡಿಸ್ 26, ಅಸಲಂಕಾ 14, ಅರ್ಷದೀಪ್ ಸಿಂಗ್ 24/2, ಅಕ್ಷರ್ ಪಟೇಲ್ 30ಕ್ಕೆ/2, ರವಿ ಬಿಷ್ಣೋಯಿ 26/3, ಹಾರ್ದಿಕ್ ಪಾಂಡ್ಯ 23/2).
ಭಾರತ: 6.3 ಓವರ್‌ಗಳಲ್ಲಿ 81/3 (ಜೈಸ್ವಾಲ್ 30, ಸೂರ್ಯಕುಮಾರ್ 26, ಹಾರ್ದಿಕ್ ಪಾಂಡ್ಯ ಅಜೇಯ 22). ಫಲಿತಾಂಶ: ಭಾರತಕ್ಕೆ ಡಕ್ವರ್ಥ್ ಲೂಯಿಸ್ ನಿಯಮದಡಿ 7 ವಿಕೆಟ್‌ಗಳ ಜಯ