ಕೋಚಿಂಗ್ ಕೇಂದ್ರದ ನೆಲಮಾಳಿಗೆಯಲ್ಲಿ ಪ್ರವಾಹದಿಂದ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ಆಕಾಂಕ್ಷಿಗಳು ಮೃತಪಟ್ಟ ನಂತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ದೆಹಲಿಯ ಓಲ್ಡ್ ರಾಜಿಂದರ್ ನಗರದಲ್ಲಿ ಕನಿಷ್ಠ 13 ಅಕ್ರಮ ಕೋಚಿಂಗ್ ಕೇಂದ್ರಗಳಿಗೆ ಬೀಗ ಜಡಿದಿದೆ.
ಶನಿವಾರ ಸಂಜೆ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಯಲ್ಲಿ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳಾದ ತಾನಿಯಾ ಸೋನಿ, ಶ್ರೇಯಾ ಯಾದವ್ ಮತ್ತು ನವೀನ್ ಡೆಲ್ವಿನ್ ಸಾವನ್ನಪ್ಪಿದ ನಂತರ ಪಾಲಿಕೆ ಮಂಡಳಿಯ ಕ್ರಮವು ಭಾನುವಾರ ತಡರಾತ್ರಿಯವರೆಗೆ ಮುಂದುವರೆಯಿತು.
ಬೀಗ ಹಾಕಲಾದ ಕೋಚಿಂಗ್ ಕೇಂದ್ರಗಳಲ್ಲಿ ಐಎಎಸ್ ಗುರುಕುಲ, ಚಾಹಲ್ ಅಕಾಡೆಮಿ, ಪ್ಲುಟಸ್ ಅಕಾಡೆಮಿ, ಸಾಯಿ ಟ್ರೇಡಿಂಗ್, ಐಎಎಸ್ ಸೇತು, ಟಾಪರ್ಸ್ ಅಕಾಡೆಮಿ, ದೈನಿಕ್ ಸಂವಾದ್, ಸಿವಿಲ್ಸ್ ಡೈಲಿ ಐಎಎಸ್, ಕೆರಿಯರ್ ಪವರ್, 99 ನೋಟ್ಸ್, ವಿದ್ಯಾ ಗುರು, ಗೈಡೆನ್ಸ್ ಐಎಎಸ್ ಕೇಂದ್ರಗಳು ಸೇರಿವೆ.
ಕೋಚಿಂಗ್ ಕೇಂದ್ರದ ನೆಲಮಹಡಿಗೆ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವುದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅಭಿಷೇಕ್ ಗುಪ್ತಾ ಮತ್ತು ಸಂಯೋಜಕ ದೇಶಪಾಲ್ ಸಿಂಗ್ ಇಬ್ಬರನ್ನು ಬಂಧಿಸಿದ್ದು, 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದೆಹಲಿ | ಕೋಚಿಂಗ್ ಸೆಂಟರ್ ಜಲಾವೃತ; ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳ ಸಾವು
ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿತ್ತು.
ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ದೆಹಲಿಯ ಓಲ್ಡ್ ರಾಜೇಂದ್ರ ನಗರ ದಲ್ಲಿರುವ ‘ರಾವ್ಸ್ ಐಎಎಸ್ ಸ್ಟಡಿ ಸರ್ಕಲ್’ ಕಟ್ಟಡದ ನೆಲಮಹಡಿಗೆ ನೀರು ನುಗ್ಗಿದೆ. ಈ ವೇಳೆ ಮೂವರು ಹೊರಬರಲಾರದೆ ಮುಳುಗಿ ಮೃತಪಟ್ಟಿದ್ದಾರೆ. ನೆಲಮಹಡಿ ಕೆಲವೇ ನಿಮಿಷ ಗಳಲ್ಲಿ ಮುಳುಗಿದ್ದರಿಂದ ಕೆಲವರಿಗೆ ಹೊರ ಬರಲು ಸಾಧ್ಯವಾಗಲಿಲ್ಲ. ಕಾರ್ಯಾಚರಣೆ ವೇಳೆ ಮೂರು ಮೃತದೇಹಗಳು ದೊರೆತವು.
ಕೋಚಿಂಗ್ ಕೇಂದ್ರದ ನೆಲಮಹಡಿಯನ್ನು ಸ್ಟೋರ್ ರೂಂ (ಉಗ್ರಾಣ) ಆಗಿ ಬಳಸಲು ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಅದನ್ನು ಗ್ರಂಥಾಲಯವಾಗಿ ಬಳಸಿ, ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೆಲಮಹಡಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಎಲ್ಲ ಕೋಚಿಂಗ್ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.
ಶನಿವಾರ ನಡೆದ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಕೇರಳದ ಎರ್ನಾಕುಳಂ ಜಿಲ್ಲೆಯ ನವೀನ್ ಡೆಲ್ವಿನ್ (29), ತೆಲಂಗಾಣದಲ್ಲಿ ನೆಲೆಸಿರುವ ಬಿಹಾರದ ಔರಂಗಾಬಾದ್‌ನ ತಾನ್ಯಾ ಸೋನಿ (21) ಮತ್ತು ಉತ್ತರ ಪ್ರದೇಶದ ಶ್ರೇಯಾ ಯಾದವ್ ಎಂದು ಗುರುತಿಸಲಾಗಿದೆ. ಈ ಮೂವರೂ ನಾಗರಿಕ ಸೇವಾ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರು.
ತಾನ್ಯಾ ಅವರು ದೆಹಲಿ ವಿಶ್ವವಿದ್ಯಾಲಯದ ಮಹಾರಾಜಾ ಅಗ್ರಸೇನ್ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದು, ಒಂದೂವರೆ ತಿಂಗಳ ಹಿಂದೆಯಷ್ಟೇ ರಾವ್ಸ್ ಕೋಚಿಂಗ್ ಕೇಂದ್ರಕ್ಕೆ ಸೇರಿಕೊಂಡಿದ್ದರು. ನವೀನ್ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾಡುತ್ತಿದ್ದು, ಕೋಚಿಂಗ್ ಕೇಂದ್ರದಲ್ಲಿ 8 ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದಾರೆ. ಬಿಎಸ್‌ಸಿ (ಕೃಷಿ) ವ್ಯಾಸಂಗ ಮಾಡಿರುವ ಶ್ರೇಯಾ, ಎರಡು ತಿಂಗಳ ಹಿಂದೆ ತರಬೇತಿ ಕೇಂದ್ರಕ್ಕೆ ಸೇರಿಕೊಂಡಿದ್ದರು.
