ಮಂಡ್ಯದ ಕಬ್ಬು ಬೆಳೆಗಾರರು, ರೈತ ಮುಖಂಡರು ಹಾಗೂ ಮದ್ದೂರು ತಾಲೂಕು ಕೊಪ್ಪ ಎನ್‌ಎಸ್‌ಎಲ್ ಶುಗರ್ಸ್ ಸಕ್ಕರೆ ಕಾರ್ಖಾನೆ ಅಧಿಕಾರಿಗಳು 2024-25 ಸಾಲಿನ ಕಬ್ಬು ಅರೆಯುವಿಕೆ ವಿಚಾರದಲ್ಲಿ ಸಭೆ ಸೇರಿದ್ದರು.
ಈ ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಸೊ ಸಿ ಪ್ರಕಾಶ್, ಈ ಬಾರಿ ಕಬ್ಬು ಬೆಳೆಗಾರರು ತುಂಬಾ ಸಂಕಷ್ಟದಲ್ಲಿದ್ದು ಕಾರ್ಖಾನೆ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಲು ಒತ್ತಾಯಿಸಿದರು.
ಕಬ್ಬು ಅರೆಯುವಿಕೆಯ 15 ದಿನಗಳ ಒಳಗಾಗಿ ಕಬ್ಬು ಹಣವನ್ನು ಪಾವತಿ ಮಾಡಬೇಕು, ಎಫ್‌ಆರ್‌ಪಿ ದರ 3151 ರೂ ಜೊತೆಗೆ ಪ್ರೋತ್ಸಾಹ ಧನ 250 ಕೊಡಬೇಕು, ಬಿತ್ತನೆ ಕಬ್ಬನ್ನು ಈ ಬಾರಿ ರೈತರಿಗೆ ಉಚಿತವಾಗಿ ಹಂಚಿಕೆ ಮಾಡಬೇಕು ಮತ್ತು ರಸಗೊಬ್ಬರ ಮತ್ತು ವ್ಯವಸಾಯದ ಖರ್ಚಿಗೆ ಮುಂಗಡ ಹಣ ಎಕರೆಗೆ 40,000 ರೂ.ಗಳನ್ನು ಪಾವತಿಸಬೇಕು. ಕಬ್ಬು ಕಟಾವು ನಂತರ ಅವಧಿ ಸಾಲದ ರೂಪದಲ್ಲಿ ಕಬ್ಬು ಸರಬರಾಜು ಮಾಡಿದ ನಂತರ ಹಣ ಹಿಡಿದುಕೊಳ್ಳುವಂತೆ ಆಗ್ರಹಿಸಿದರು.

ಕಬ್ಬು ಕಟಾವು ಮಾಡುವ ಹಂತದಲ್ಲಿ ಕಾರ್ಖಾನೆ ಸಿಬ್ಬಂದಿ ನಿಗಾ ವಹಿಸಬೇಕು, ಒಂದು ಟನ್ ಕಬ್ಬಿಗೆ ನಾನೂರು ರೂಪಾಯಿ ಕಟಾವು ದರ ನಿಗದಿಪಡಿಸಬೇಕು, ಪ್ರೆಸ್‌ಮಡ್ ಮತ್ತು ಬೂದಿಯನ್ನು ಕಬ್ಬು ಬೆಳೆಗಾರರಿಗೆ ಉಚಿತವಾಗಿ ಕೊಡಬೇಕು, ರೈತರ ಜಮೀನುಗಳಿಗೆ ಹೋಗಲು ಬಂಡಿ ದಾರಿ ಅಭಿವೃದ್ಧಿ ಮಾಡಿಸಲು ಒತ್ತು ಕೊಡಬೇಕು ಎಂಬುದು ರೈತರ ಹಕ್ಕೊತ್ತಾಯವಾಗಿತ್ತು.
ಕಬ್ಬು ಬೆಳೆಗಾರರಿಗೆ ಉಚಿತವಾಗಿ ಅರ್ಧ ಕೆಜಿ ಸಕ್ಕರೆ ಕೊಡಬೇಕು ಹಾಗೂ ತಿಂಗಳಲ್ಲಿ ಎರಡು ಬಾರಿ ಸಕ್ಕರೆ ವಿತರಿಸಬೇಕು, ಆಸಕ್ತ ರೈತರಿಗೆ ಅಂತಾರಾಜ್ಯ ಅಧ್ಯಯನದ ಪ್ರವಾಸ ಮಾಡಿಸಬೇಕು. ಹೀಗೆ ರೈತರು ಹಾಗೂ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ನಡುವೆ ಅನೇಕ ವಿಷಯಗಳ ಚರ್ಚೆ ಆಗಿದ್ದು, ಆಡಳಿತ ಮಂಡಳಿಯ ಮುಂದೆ ರೈತರ ಬೇಡಿಕೆ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಲು ಬಗ್ಗೆ ಅಧಿಕಾರಿಗಳಲ್ಲಿ ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಶಸ್ತ್ರಚಿಕಿತ್ಸೆಗಾಗಿ 4 ಸಾವಿರ ಲಂಚ ಪಡೆದಿದ್ದ ಸರ್ಜನ್ ಡಾ. ಸಾಲಿ ಮಂಜಪ್ಪ ಅಮಾನತು
ಸಭೆಯಲ್ಲಿ ರೈತ ಮುಖಂಡರಾದ ಪ್ರಭುಲಿಂಗ ರಾಮಲಿಂಗೇಗೌಡ, ಪಣ್ಣೆದೊಡ್ಡಿ ವೆಂಕಟೇಶ್, ಶಿವಲಿಂಗಯ್ಯ, ನಂಜುಂಡಯ್ಯ ನಾಗರಾಜ್, ಲಿಂಗರಾಜ್, ಕೊಪ್ಪ ಯೋಗಾನಂದ, ತಮ್ಮಯ್ಯ, ದೇಶಹಳಿ ಮಹೇಶ್, ಸತೀಶ್, ರಾಮಕೃಷ್ಣ, ರಾಮಸ್ವಾಮಿ, ಜಗದೀಶ್ ಮುದ್ದುಂಗೆರೆ, ಕೆ.ಜಿ. ಉಮೇಶ್, ಕಾರ್ಖಾನೆಯ ಡಿಜಿಎಂ ರಾಮಚಂದ್ರರಾವ್, ಪರಿಮಳ ರಂಗನ್, ಗೌರಿ ಪ್ರಕಾಶ್, ಸೋಮಶೇಖರ್, ತಮ್ಮಯ್ಯ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
