ಪ್ಯಾರಿಸ್ ಒಲಿಂಪಿಕ್ಸ್ 2024ರ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಪ್ರೀ ಕ್ವಾರ್ಟರ್‌ಫೈನಲ್ ಹಂತಕ್ಕೇರಿದ ಭಾರತದ ಟೆಬಲ್ ಟೆನಿಸ್ ಆಟಗಾರ್ತಿ 29 ವರ್ಷದ ಮಣಿಕಾ ಬಾತ್ರಾ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಇತಿಹಾಸ ಸೃಷ್ಟಿಸಿದ್ದಾರೆ.
ಮಣಿಕಾ ಬಾತ್ರಾ ಅವರು 37 ನಿಮಿಷಗಳಲ್ಲಿ ಫ್ರಾನ್ಸ್‌ನ ಎದುರಾಳಿ ಪ್ರಿತಿಕಾ ಪವಾಡೆ ಅವರನ್ನು 11-9, 11-6, 11-9, 11-7 ಅಂತರದಲ್ಲಿ ಪರಾಭವಗೊಳಿಸಿದರು.
ಮಣಿಕಾ ಬಾತ್ರಾ ತನ್ನ ಮುಂದಿನ ಪಂದ್ಯದಲ್ಲಿ ಹಾಂಕಾಂಗ್‌ನ ಝು ಚೆಂಗ್ಜು ಮತ್ತು ಜಪಾನ್‌ನ ಮಿಯು ಹಿರಾನೊ ಸ್ಪರ್ಧಿಗಳನ್ನು ಎದುರಿಸಲಿದ್ದಾರೆ. ಮಣಿಕಾ ಬಾತ್ರಾ ಅವರು ಒಲಿಂಪಿಕ್ಸ್‌ನಲ್ಲಿ ಟೇಬಲ್ ಟೆನಿಸ್ ಸ್ಪರ್ಧೆಯ ಪ್ರೀ ಕ್ವಾರ್ಟರ್‌ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಕ್ರೀಡಾಪಟುವಾಗುವ (ಪುರುಷ ಅಥವಾ ಮಹಿಳೆ) ಮೂಲಕ ಇತಿಹಾಸ ಬರೆದಿದ್ದಾರೆ.
ಪಂದ್ಯದ ಎರಡನೇ ಆಟ ನಿಕಟ ಸ್ಪರ್ಧೆಯಿದ್ದರೂ ಬಾತ್ರಾ ಅವರು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಾಬಲ್ಯ ಸಾಧಿಸಿದರು ನಾಲ್ಕು ಗೇಮ್‌ಗಳಲ್ಲಿಯೂ ಮುನ್ನಡೆ ಸಾಧಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ಬರ, ಈಗ ನೆರೆ- ಸಂತ್ರಸ್ತರತ್ತ ಧಾವಿಸಲಿ ಸರ್ಕಾರ
ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದಿರುವ ಮಣಿಕಾ ಬಾತ್ರಾ, ಫ್ರಾನ್ಸ್ ಎದುರಾಳಿ ಪ್ರಿತಿಕಾ ಪವಾಡೆ ಅವರಿಗೆ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಿಡಲಿಲ್ಲ ಪ್ರತಿ ಗೇಮ್‌ನಲ್ಲಿ ಉತ್ತಮವಾಗಿ ಆಟವಾಡಿ ಅಂತಿಮವಾಗಿ ಗೆಲುವನ್ನು ತಮ್ಮದಾಗಿಸಿಕೊಂಡರು.
ಮಣಿಕಾ ಬಾತ್ರಾ ವಿರುದ್ಧ ಸ್ಪರ್ಧೆಯಲ್ಲಿ ಸೋತ ಫ್ರಾನ್ಸ್‌ನ ಎಡಗೈ ಆಟಗಾರ್ತಿ 19 ವರ್ಷದ ಪ್ರಿತಿಕಾ ಪವಾಡೆ ಮೂಲತಃ ಭಾರತದ ಪಾಂಡಿಚರಿ ಮೂಲದವರು. ಇವರ ಪೋಷಕರು 2003ರಲ್ಲಿ ಉದ್ಯೋಗದ ನಿಮಿತ್ತ ಫ್ರಾನ್ಸ್‌ಗೆ ತೆರಳಿದ್ದರು. ಪ್ಯಾರಿಸ್‌ನಲ್ಲಿ ಜನಿಸಿದ ಪ್ರಿತಿಕಾ ಟೇಬಲ್ ಟೆನಿಸ್‌ನಲ್ಲಿ ಆಸಕ್ತಿ ಬೆಳಸಿಕೊಂಡು ಕಳೆದ 2 ಒಲಿಂಪಿಕ್ಸ್‌ಗಳಿಂದ ಫ್ರಾನ್ಸ್ ಪರವಾಗಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ಮಣಿಕಾ ಬಾತ್ರಾ ಆಟದ ನಂತರ, ಭಾರತದ ಅಗ್ರ ಶ್ರೇಯಾಂಕದ ಟೇಬಲ್ ಟೆನಿಸ್ ಆಟಗಾರ್ತಿ ಶ್ರೀಜಾ ಅಕುಲಾ ಅವರು ಬುಧವಾರ(ಜುಲೈ 31) ಸಿಂಗಾಪುರದ ಜೆಂಗ್ ಜಿಯಾನ್ ವಿರುದ್ಧ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯವನ್ನಾಡಲಿದ್ದಾರೆ.
