ಮಂಡ್ಯ ಜನರ ಬಲಿಗೆ ಕಾದಿದೆ ಲೀಥಿಯಂ ತೂಗುಗತ್ತಿ; ಎಚ್‌ಡಿಕೆ ಪಾತ್ರವೇನು?

Date:

Advertisements
ಮಂಡ್ಯದಲ್ಲಿ ಲೀಥಿಯಂ ಗಣಿಗಾರಿಕೆಗೆ ಅವಕಾಶ ನೀಡಿದ್ದೇ ಆದರೆ ಅದರಿಂದ ಪರಿಸರಕ್ಕೆ ಅಪಾರವಾದ ನಷ್ಟ ಉಂಟಾಗುತ್ತದೆ. ಲೀಥಿಯಂ ಗಣಿಗಾರಿಕೆಗೆ ತುಂಬಾ ಸಂಪನ್ಮೂಲಗಳು ಬೇಕಾಗುತ್ತದೆ, ಸ್ಥಳೀಯ ನಿವಾಸಿಗಳು, ಕೃಷಿ ಮತ್ತು ಜೀವವೈವಿಧ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗಣನೀಯ ವಾಯು ಮಾಲಿನ್ಯಕ್ಕೆ ಕಾರಣವಾಗಲಿದೆ

ಉತ್ತರ ಕನ್ನಡದ ಶಿರೂರು ಗುಡ್ಡ ಕುಸಿತದ ಕರಾಳ ಘಟನೆಗಳು ನಮ್ಮ ಕಣ್ಣ ಮುಂದಿವೆ. ಅಂತಹ ಅವಘಡಗಳು ಮರುಕಳಿಸದಂತೆ ತಡೆಯಬೇಕಾದ ಜವಾಬ್ದಾರಿ ಪ್ರತಿಯೊಬ್ಬರದ್ದು. ಅದರಲ್ಲಿಯೂ ಸರ್ಕಾರಗಳ ಪಾತ್ರ ಅತಿ ಮಹತ್ವದ್ದು. ಆದರೆ, ಕೇವಲ ಲಾಭ-ನಷ್ಟ, ತಮ್ಮ ಪಕ್ಷಕ್ಕೆ ಸಹಾಯ ಮಾಡಿದ ಕ್ರೋನಿ ಕ್ಯಾಪಿಟಲಿಸ್ಟ್‌ಗಳ ಹಿತ ಕಾಯುವ ಸರ್ಕಾರಗಳು ಎಷ್ಟು ಜನರನ್ನಾದರೂ ಬಲಿ ಕೊಡಲು ಹುನ್ನಾರ ನಡೆಸುತ್ತವೆ. ಅಂತಹ ಹುನ್ನಾರವೊಂದಕ್ಕೆ ಮಂಡ್ಯ ಜಿಲ್ಲೆಯ ಜನರು ಬಲಿಪಶುಗಳಾಗುವ ಅಪಾಯದ ತೂಗುಗತ್ತಿಯೊಂದು ತೂಗಾಡುತ್ತಿದೆ.

ಮಂಡ್ಯ ಜಿಲ್ಲೆ ಕೃಷಿಕರ ಬೀಡು. ಕಾವೇರಿ ನದಿ, ಕೆಆರ್‌ಎಸ್‌ ಅಣೆಕಟ್ಟು ಕಾರಣಕ್ಕೆ ಸದಾ ನೀರಾವರಿಯಿಂದ ತುಂಬಿ ತುಳುಕುವ ಜಿಲ್ಲೆ ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ, ಮಂಡ್ಯ ಜಿಲ್ಲೆಯ ಕೇವಲ 48% ಭೂಮಿ ಮಾತ್ರ ನೀರಾವರಿಯಾಗಿದ್ದು, ಅರ್ಧಕ್ಕಿಂತ ಹೆಚ್ಚು ಅಂದರೆ ಶೇ.52% ರಷ್ಟು ಇನ್ನು ಒಣಭೂಮಿಯೇ ಇದೆ. ಬರ, ಬೆಳೆದ ಬೆಲೆಗೆ ವೈಜ್ಞಾನಿಕ ಬೆಲೆ ಸಿಗದಿರುವುದು ಇತ್ಯಾದಿ ಕಾರಣಗಳಿಂದ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆಯೇ ಹೊರತು ಅವರ ಬದುಕು ಮಾತ್ರ ಬಂಗಾರವಾಗಿಲ್ಲ.

ಇಂತಹ ಸ್ಥಿತಿಯಲ್ಲಿ ಎಚ್.ಡಿ ಕುಮಾರಸ್ವಾಮಿಯವರು ಈ ಬಾರಿ ಲೋಕಸಭಾ ಎಲೆಕ್ಷನ್‌ಗೆ ನಿಂತು ನನ್ನನ್ನು ಗೆಲ್ಲಿಸಿ, ಕೇಂದ್ರದಲ್ಲಿ ಕೃಷಿ ಮಂತ್ರಿಯಾಗಿ ನಿಮ್ಮೆಲ್ಲ ಕಷ್ಟಗಳನ್ನು ಪರಿಹರಿಸುತ್ತೇನೆ ಎಂದು ಭರವಸೆ ನೀಡಿದ್ದರು. ಅದನ್ನು ನಂಬಿದ ಜನ ಭಾರೀ ಅಂತರದಿಂದ ಗೆಲ್ಲಿಸಿ ಕಳಿಸಿದರು. 2018ರಲ್ಲಿಯೂ ಕುಮಾರಣ್ಣ ಮುಖ್ಯಮಂತ್ರಿ ಆಗ್ತಾರೆ ಎಂದು ಮಂಡ್ಯದ ಜನ 7ಕ್ಕೆ 7 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನೇ ಗೆಲ್ಲಿಸಿದ್ದರು. ಈ ಬಾರಿಯೂ ಕೊನೇ ಚಾನ್ಸ್ ಇರಲಿ ಎಂದು ಜನ ಆಶೀರ್ವಾದ ಮಾಡಿದರು. ಆದರೆ, ಕುಮಾರಣ್ಣನವರು ಕೃಷಿ ಮಂತ್ರಿ ಆಗುವ ಬದಲು ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿಬಿಟ್ಟರು! ಇದ್ಯಾಕೆ ಹೀಗಾಯ್ತು ಎಂದು ಡಿಕೋಡ್ ಮಾಡಲು ಹೊರಟರೆ ಬಿಜೆಪಿಯ ಗೇಮ್ ಪ್ಲಾನ್ ಬಿಚ್ಚಿಕೊಳ್ಳುತ್ತದೆ. ಮಂಡ್ಯ ಜನರ ಎದುರಿರುವ ದೊಡ್ಡ ಗಂಡಾಂತರವೊಂದು ತೆರೆದುಕೊಳ್ಳುತ್ತದೆ.

Advertisements

ಇತ್ತೀಚೆಗೆ ರಾಜ್ಯಸಭೆಯಲ್ಲಿ ಭೂ ವಿಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಚುಕ್ಕಿ ಇಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡುವಾಗ ಕರ್ನಾಟಕದ ಮಂಡ್ಯ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಲೀಥಿಯಂ ಗಣಿ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಅಣುಶಕ್ತಿ ಇಲಾಖೆಯ ಘಟಕವಾದ ಅಟಾಮಿಕ್ ಮಿನರಲ್ಸ್ ಡೈರೆಕ್ಟರೇಟ್ ಫಾರ್ ಎಕ್ಸ್‌ಪ್ಲೋರೇಶನ್ ಅಂಡ್ ರಿಸರ್ಚ್ (ಎಎಂಡಿ) ಪ್ರಾಥಮಿಕ ಸಮೀಕ್ಷೆ(ಜಿ3) ಮತ್ತು ಸೀಮಿತ ಭೂಗರ್ಭ ಪರಿಶೋಧನೆಯ(ಜಿ2) ಮೂಲಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಳಿಯ ಮರಳಗಾಲ ಪ್ರದೇಶದಲ್ಲಿ 1,600 ಟನ್ ಲೀಥಿಯಂ ಸಂಪನ್ಮೂಲಗಳನ್ನು ಗುರುತಿಸಿದೆ ಎಂದು ಅವರು ತಿಳಿಸಿದ್ದಾರೆ.

ಸಚಿವರು ಈ ವಿಷಯವನ್ನು ಈ ಹಿಂದೆಯೇ, ಅಂದರೆ ಫೆಬ್ರವರಿ 2021ರಲ್ಲಿ ಲೋಕಸಭೆಗೆ ಲಿಖಿತ ಉತ್ತರದಲ್ಲಿ ಮಂಡ್ಯ ಜಿಲ್ಲೆಯ ಮರಳಗಾಲ-ಅಲ್ಲಾಪಟ್ಟಣದ ಪ್ರದೇಶದಲ್ಲಿ 1,600 ಟನ್ ಲೀಥಿಯಂ ಸಂಪನ್ಮೂಲ ಪತ್ತೆಯಾಗಿದೆ ಎಂದು ತಿಳಿಸಿದ್ದರು.

ಲೀಥಿಯಂ ಒಂದು ಅತ್ಯಂತ ಹಗುರವಾದ ಲೋಹವಾಗಿದೆ. ಇದನ್ನು ಬಿಳಿಯ ಚಿನ್ನ (white gold) ಎಂದೂ ಕರೆಯಲಾಗುತ್ತದೆ. ಲಿಥಿಯಂ ಅನ್ನು ರಕ್ಷಣಾ ವಲಯ, ಪರಮಾಣು ಶಕ್ತಿ, ಬಾಹ್ಯಾಕಾಶ, ವೈದ್ಯಕೀಯ ಉಪಕರಣಗಳು, ಬ್ಯಾಟರಿ ಚಾಲಿತ ವಾಹನಗಳು, ಸೆರಾಮಿಕ್ಸ್, ಗಾಜು, ದೂರಸಂಪರ್ಕ ಮತ್ತು ಏರೋಸ್ಪೇಸ್ ಉದ್ಯಮಗಳಲ್ಲಿ, ಲೀಥಿಯಂ ಅಯಾನ್ ಬ್ಯಾಟರಿಗಳಲ್ಲಿ, ಲೂಬ್ರಿಕೇಟಿಂಗ್ ಗ್ರೀಸ್, ರಾಕೆಟ್ ಪ್ರೊಪೆಲ್ಲಂಟ್‌ಗಳಲ್ಲಿ, ಮೊಬೈಲ್ ಫೋನ್, ಕಂಪ್ಯೂಟರ್‍‌ನಂತಹ ಕ್ಷೇತ್ರಗಳ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಉಪಯೋಗಿಸಲಾಗುತ್ತದೆ. ಇಷ್ಟೆಲ್ಲಾ ಉಪಯೋಗವಿರುವ ಲೀಥಿಯಂ ಪ್ರಪಂಚದ ಎಲ್ಲಾ ದೇಶಕ್ಕೂ ಬಹು ಮುಖ್ಯವಾಗಿ ಬೇಕಾಗಿರುವ ಲೋಹಧಾತುವಾಗಿದೆ.

ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ-2022ರ ಪ್ರಕಾರ ಆಸ್ಟ್ರೇಲಿಯಾ, ಚಿಲಿ, ಚೀನಾ ಮತ್ತು ಅರ್ಜೆಂಟೀನಾ ದೇಶಗಳು ಕ್ರಮವಾಗಿ ಲೀಥಿಯಂನ ಅತಿ ದೊಡ್ಡ ಉತ್ಪಾದಕ ದೇಶಗಳಾಗಿವೆ. ಪ್ರಪಂಚದ ಒಟ್ಟು ಲೀಥಿಯಂ ನಿಕ್ಷೇಪದ ಅರ್ಧದಷ್ಟು ಭಾಗ ʼಲಿಥಿಯಂ ಟ್ರಯಾಂಗಲ್ʼ ಎಂದು ಕರೆಯುವ ಅರ್ಜೆಂಟೀನಾ, ಬೊಲಿವಿಯಾ, ಚಿಲಿ ದೇಶಗಳಲ್ಲಿವೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಕಳೆದ ಜನವರಿಯಲ್ಲಿ ಭಾರತ ಮತ್ತು ಅರ್ಜೆಂಟೀನಾ ದೇಶಗಳ ನಡುವೆ ಒಂದು ಮುಖ್ಯವಾದ ಒಪ್ಪಂದಕ್ಕೆ ಸಹಿ ಹಾಕಿವೆ. ಅದೇನೆಂದರೆ ನಮ್ಮ ದೇಶದ ‘ಖನಿಜ್ ವಿದೇಶ್ ಇಂಡಿಯಾ ಲಿಮಿಟೆಡ್’ ಸಂಸ್ಥೆ ಮೊದಲ ಬಾರಿಗೆ ಅರ್ಜೆಂಟೀನಾದಲ್ಲಿ 5 ಲೀಥಿಯಂ ಬ್ಲಾಕ್‌ಗಳಲ್ಲಿ ಗಣಿಗಾರಿಕೆ ಮಾಡುತ್ತಿದೆ.

ನಮ್ಮ ದೇಶದ ವಿಚಾರಕ್ಕೆ ಬರುವುದಾದರೆ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿ ದೊಡ್ಡ ಲೀಥಿಯಂ ನಿಕ್ಷೇಪವು ಪತ್ತೆಯಾಗಿದೆ, ಅಲ್ಲದೇ ಛತ್ತೀಸ್‌ಗಢದಲ್ಲಿ ಒಂದು ಲೀಥಿಯಂ ನಿಕ್ಷೇಪಗಳ ಬ್ಲಾಕ್‌ಗಳು ಪರವಾನಗಿಗಾಗಿ ಹರಾಜಿನಲ್ಲಿವೆ. ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಜಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಲೀಥಿಯಂ ನಿಕ್ಷೇಪಗಳ ಅನ್ವೇಷಣೆಯನ್ನು ನಡೆಸಲು ಯೋಜಿಸಲಾಗಿದೆ.

ದೇಶದ ದೊಡ್ಡ ಉದ್ಯಮಿಗಳ ಕಣ್ಣು ಮಂಡ್ಯದ ಮೇಲೆ ಬಿದ್ದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲ-ಅಲ್ಲಾಪಟ್ಟಣದಲ್ಲಿರುವ 1,600 ಟನ್ ಲೀಥಿಯಂ ಗಣಿಗಾರಿಕೆಯ ಪರವಾನಗಿ ಪಡೆಯಲು ನಾ ಮುಂದು, ತಾ ಮುಂದು ಎಂಬ ಲಾಬಿ ಜೋರಾಗಿಯೇ ನಡೆಯುತ್ತಿದೆ. ಅದರ ಭಾಗವಾಗಿಯೇ ಕುಮಾರಸ್ವಾಮಿಯವರನ್ನು ಕೃಷಿ ಮಂತ್ರಿ ಮಾಡಲು ಬದಲು ಉಕ್ಕು, ಗಣಿಗಾರಿಕೆ ಮಂತ್ರಿ ಮಾಡಿರುವುದು ಎಂಬ ಆರೋಪ ಬಹಿರಂಗವಾಗಿ ಕೇಳಿ ಬರುತ್ತಿವೆ.

ಮಂಡ್ಯದಲ್ಲಿ ಹೀಗಾಗಲೇ ಯಾವುದೇ ರೀತಿಯ ಗಣಿಗಾರಿಕೆಗಳು ನಡೆಯಬಾರದು, ಅದರಲ್ಲಿಯೂ ಕಾವೇರಿ ನದಿ, ಕೆಆರ್‌ಎಸ್‌ ಅಣೆಕಟ್ಟು ಸುತ್ತಮುತ್ತ ಗಣಿಗಾರಿಕೆ ಬಿಲ್‌ ಕುಲ್ ನಡೆಯಬಾರದು, ಇದರಿಂದ ಅಣೆಕಟ್ಟೆಗೆ ಆಪತ್ತು ಇದೆ ಎಂದು ರೈತರು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಒಂದು ವೇಳೆ ಮಂಡ್ಯದಲ್ಲಿ ಲೀಥಿಯಂ ಗಣಿಗಾರಿಕೆಗೆ ಅವಕಾಶ ನೀಡಿದ್ದೇ ಆದರೆ ಅದರಿಂದ ಪರಿಸರಕ್ಕೆ ಅಪಾರವಾದ ನಷ್ಟ ಉಂಟಾಗುತ್ತದೆ. ಲೀಥಿಯಂ ಗಣಿಗಾರಿಕೆಗೆ ತುಂಬಾ ಸಂಪನ್ಮೂಲಗಳು ಬೇಕಾಗುತ್ತದೆ, ಸ್ಥಳೀಯ ನಿವಾಸಿಗಳು, ಕೃಷಿ ಮತ್ತು ಜೀವವೈವಿಧ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗಣನೀಯ ವಾಯು ಮಾಲಿನ್ಯಕ್ಕೆ ಕಾರಣವಾಗಲಿದೆ ಎಂಬ ಆತಂಕ ಎದುರಾಗಿದೆ.

ಜೊತೆಗೆ ಖನಿಜ ತ್ಯಾಜ್ಯವು ನೀರು ಮತ್ತು ಮಣ್ಣನ್ನು ಕಲುಷಿತಗೊಳಿಸುತ್ತದೆ. ಇದು ತುಂಬಾ ಗಂಭೀರವಾದ ಸಮಸ್ಯೆಯಾಗಿದೆ. ಏಕೆಂದರೆ ಲೀಥಿಯಂ ನಿಕ್ಷೇಪಗಳು ಕಂಡುಬಂದಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲ ಗ್ರಾಮವು ಕಾವೇರಿ ನದಿಯಿಂದ ಕೇವಲ 1 ಕಿ.ಮೀ. ದೂರದಲ್ಲಿದೆ ಮತ್ತು ಅಲ್ಲಾಪಟ್ಟಣ ಗ್ರಾಮವು ಕಾವೇರಿ ನದಿಯಿಂದ ಕೇವಲ 2 ಕಿ.ಮೀ. ದೂರದಲ್ಲಿದೆ. ಇದು ಕಾವೇರಿ ನದಿಯನ್ನು ಮಲಿನ ಮಾಡುವುದರಲ್ಲಿ ಸಂಶಯವೇ ಇಲ್ಲ.

ಕರಿಘಟ್ಟ ಎಂದು ಕರೆಯುವ ಐತಿಹಾಸಿಕ ಗುಡ್ಡದ ತಪ್ಪಲಿನಲ್ಲಿಯೇ ಈ ಊರುಗಳಿದ್ದು ಅಲ್ಲಿಯೇ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ. ಒಂದು ವೇಳೆ ಗಣಿಗಾರಿಕೆ ಮಾಡಿದ್ದೇ ಆದರೆ ಈ ಗುಡ್ಡಕ್ಕೆ ಅಪಾಯವಿದ್ದು ಅಲ್ಲಿನ ಒಟ್ಟಾರೆ ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ ಇದಕ್ಕೆ ರೈತರು ಅವಕಾಶ ಮಾಡಿಕೊಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಈಗಾಗಲೇ ದೇಶದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಗಣಿಗಾರಿಕೆಯಿಂದ ಹವಾಮಾನ ವೈಪರೀತ್ಯ ಉಂಟಾಗಿರುವುದು, ಬರ – ಅತಿವೃಷ್ಟಿಗಳು ಪದೇ ಪದೇ ಸಂಭವಿಸುತ್ತಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿನ ಈ ಲೀಥಿಯಂ ಗಣಿಗಾರಿಕೆಯನ್ನು ಪ್ರಧಾನಿ ಮೋದಿಯವರ ಆಪ್ತ ಮಿತ್ರ, ದೊಡ್ಡ ಬಂಡವಾಳಶಾಹಿ ಗೌತಮ್ ಅದಾನಿಗೆ ಧಾರೆ ಎರೆದು ಕೊಡಲು ಮಾತುಕತೆ ನಡೆಸಲಾಗಿದೆ ಎಂಬ ಮಾಹಿತಿಗಳು ಹೊರಬೀಳುತ್ತಿವೆ. ಆದರೆ ರೈತರು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂಬುದನ್ನು ಅರಿತೇ ಕುಮಾರಸ್ವಾಮಿಯವರನ್ನು ಉಕ್ಕು ಮತ್ತು ಬೃಹತ್ ಕೈಗಾರಿಕೆ ಮಂತ್ರಿ ಮಾಡಿದ್ದಾರೆ ಎಂದು ಬಲ್ಲವರು ಆರೋಪಿಸುತ್ತಿದ್ದಾರೆ.

ಕುಮಾರಸ್ವಾಮಿಯವರಿಗೆ ಮಂಡ್ಯದಲ್ಲಿ ಹಿಡಿತ ಇದೆ. ಅವರ ಹಿಂಬಾಲಕರು ಇದ್ದಾರೆ. ಹಾಗಾಗಿ ಅವರು ರೈತರನ್ನು ಒಪ್ಪಿಸಿ ಇಲ್ಲಿ ಅದಾನಿ ಗಣಿಗಾರಿಕೆ ಮಾಡಲು ಸಹಾಯ ಮಾಡುತ್ತಾರೆ ಎಂಬ ಉದ್ದೇಶದಿಂದಲೇ ಅವರನ್ನು ಆ ಖಾತೆಯ ಸಚಿವರನ್ನಾಗಿ ಮಾಡಲಾಗಿದೆ. ಒಟ್ಟಿನಲ್ಲಿ ಜನರ ವಿರೋಧ ಬಂದಾಗ ಅದನ್ನು ನಿಭಾಯಿಸುವ ಹೊಣೆ ಕುಮಾರಣ್ಣನವರದು. ಲಾಭ ಮಾತ್ರ ಅದಾನಿಯದು. ಸಾಯುವವರು ರೈತರು, ಜನರು. ಹೇಗಿದೆ ನೋಡಿ ಮೋದಿಯವರ ಪ್ಲಾನ್.

ಇದಕ್ಕೆ ಪೂರಕವೆಂಬಂತೆ ಹೊಸದಾಗಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ತಕ್ಷಣವೇ ಎಚ್.ಡಿ ಕುಮಾರಸ್ವಾಮಿಯವರು ತಾವು ಮುಖ್ಯಮಂತ್ರಿಯಾಗಿದ್ದಾಗ ವಿರೋಧ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಯ ಸಂಡೂರಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರೋ, ಸಚಿವರಾದ ನಂತರ ಮಾಡಿದ ಮೊದಲ ಕೆಲಸ ಅದೇ ದೇವದಾರಿಯಲ್ಲಿ ಗಣಿಗಾರಿಕೆ ಮಾಡಲು ಕುದುರೆಮುಖ ಕಬ್ಬಿಣ ಅದಿರು ಕಂಪನಿ (KIOCL)ಗೆ ಒಪ್ಪಿಗೆ ನೀಡಿ ಅದಕ್ಕೆ ಸಂಬಂಧಿಸಿದ ಕಡತಕ್ಕೆ ಸಹಿ ಮಾಡಿದ್ದು. ಆ ಮೂಲಕ ತಾನು ಮೋದಿಯವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿಯವರು ಸಾಬೀತು ಮಾಡಿದ್ದಾರೆ.

ಹಾಗಾಗಿ ಮುಂದೊಂದು ದಿನ ಅವರು ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟದ ತಪ್ಪಲಿನಲ್ಲಿ, ಕಾವೇರಿ ನದಿ ದಡದಲ್ಲಿ ಈ ಅನಾಹುತಕಾರಿ ಗಣಿಗಾರಿಕೆಗೆ ಅವಕಾಶ ಕೊಡುವುದಿಲ್ಲ ಎಂದು ನಂಬಿ ಕೂರುವುದರಲ್ಲಿ ಅರ್ಥವಿಲ್ಲ. ಮಂಡ್ಯದ ರೈತರು ಮತ್ತು ಪ್ರಜ್ಞಾವಂತರು ಹೀಗಿನಿಂದಲೇ ಹೋರಾಟ ರೂಪಿಸಿ ಮುಂಬರಲಿರುವ ಆಪತ್ತನ್ನು ಎದುರಿಸಿ ಹೊರದೂಡುವುದು ಒಳಿತು. ಈ ಕುರಿತು ತಜ್ಞರು, ಪರಿಸರವಾದಿಗಳು ಅಭಿಪ್ರಾಯ ವ್ಯಕ್ತಪಡಿಸಬೇಕು. ಆ ಮೂಲಕ ರೈತರು ಮತ್ತು ಮಂಡ್ಯ ಜನರ ಹಿತ ಕಾಯಬೇಕು ಎಂಬುದು ನಮ್ಮ ಆಶಯ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X