ಈ ದಿನ ವಿಶೇಷ | ಸ್ಪಿರಿಚುಯಲ್ ಟೂರಿಸಂ ಕುರಿತು ಮರು ಆಲೋಚಿಸುವ ಕಾಲ ಬಂದಿದೆ

Date:

Advertisements
ನಮ್ಮ ಭಕ್ತಿ, ಅಧ್ಯಾತ್ಮದ ತುಡಿತ ಪರಿಸರಕ್ಕೆ ಮಾರಕವಾಗುತ್ತಿರುವುದು ದುರಂತವೇ ಸರಿ. ಅಧ್ಯಾತ್ಮ ಮತ್ತು ಭಕ್ತಿಯ ಭರದಲ್ಲಿ ಗಂಗಾ, ಯಮುನ, ಕಾವೇರಿ, ಕೃಷ್ಣ, ಗೋದಾವರಿ, ತುಂಗಾ ಮತ್ತೀಗ ಸರಯೂ, ಪಂಬಾ ನದಿಗೆ ನಾವೇನು ಮಾಡಿದ್ದೇವೆ? ಈಗ ಆಗುತ್ತಿರುವ ಜಲ ಪ್ರಳಯದ ಹಿನ್ನೆಲೆಯಲ್ಲಿ ಸ್ಪಿರಿಚುಯಲ್ ಟೂರಿಸಂ ಕುರಿತು ಮರು ಆಲೋಚಿಸುವ ಕಾಲ ಬಂದಿದೆ.

ಅಭಿವೃದ್ಧಿ, ಸ್ಪಿರಿಚುಯಲ್ ಟೂರಿಸಂ ಹೆಸರಲ್ಲಿ ಪಶ್ಚಿಮ ಘಟ್ಟಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ತಿಳಿಯಬೇಕೆಂದರೆ ವಿಜು ಬಿ. ಅವರ ‘ಫ್ಲಡ್ ಅಂಡ್ ಫ್ಯೂರಿ’ ಪುಸ್ತಕ ಮರೆಯದೆ ಓದಿ. ಭೂಕುಸಿತ, ಪ್ರವಾಹ ಇದಾವುದೂ ಪ್ರಕೃತಿ ವಿಕೋಪವಲ್ಲ ಮಾನವ ಹಸ್ತಕ್ಷೇಪದಿಂದಾದ ಪ್ರಮಾದಗಳು…

ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ!

ಡಿಸೆಂಬರ್ ತಿಂಗಳು ಬಂತೆಂದರೆ ಜಿ ದೇವರಾಜನ್ ರಾಗ ಸಂಯೋಜನೆಯ, ಕೆ ಜೆ ಯೇಸುದಾಸ್ ಅವರ ಸುಮಧುರ ಕಂಠದಲ್ಲಿ ಹಾಡಿದ, “ಹರಿವರಸನಮ್ ವಿಶ್ವಮೋಹನಮ್… ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ” ಎಲ್ಲೆಡೆ ಕೆಳಸಿಗುತ್ತದೆ. ಎಲ್ಲೆಡೆ ಕಪ್ಪು ಮತ್ತು ನೀಲಿ ಧೋತಿ ಉಟ್ಟು ಬರಿಗಾಲಲ್ಲಿ ಓಡಾಡುವ ಭಕ್ತರು ಕಾಣಿಸುತ್ತಾರೆ. ಈ ನೋಟ ನಿಮಗೆ ಜನವರಿ ಅಂತ್ಯದವರೆಗೆ ನೋಡಸಿಗುತ್ತದೆ. ನಾನು ಹೈಸ್ಕೂಲ್ ಓದುವವರೆಗೂ ಅಯ್ಯಪ್ಪನೆನ್ನುವ ದೇವರಿದ್ದಾನೆಂದು ನನಗೆ ತಿಳಿದಿರಲಿಲ್ಲ. ಆ ದಿನಗಳಲ್ಲಿ ಅಯ್ಯಪ್ಪ ಸ್ವಾಮಿಯನ್ನು ನನಗೆ ಪರಿಚಯಿಸಿದ್ದು ಒಂದು ಬಹುಭಾಷಾ ಚಲನಚಿತ್ರ. ಹುಲಿಯ ಮೇಲೆ ಕುಳಿತು ಬರುವ ಹೊಸ ದೇವರನ್ನು ನೋಡಿ ನಾನು ಪುಳಕಿತನಾಗಿದ್ದೆ. ಆ ಚಿತ್ರ ಅಯ್ಯಪ್ಪ ಸ್ವಾಮಿಯನ್ನು ಮನೆ ಮನೆ ಕರೆದುಕೊಂಡು ಹೋಯಿತು ಎಂದರೆ ತಪ್ಪಾಗಲಾರದು.

Advertisements

ಭಕ್ತರು ಅವರವರ ಭಕ್ತಿಗೆ ಅನುಗುಣವಾಗಿ ಕಲ್ಲು ಮುಳ್ಳುಗಳ ದಾರಿ ಕ್ರಮಿಸಿ, ಪಂಬಾ ನದಿಯ ತಟದಿಂದ ನೀಲಿ ಬೆಟ್ಟಗಳನೇರಿ ಅಯ್ಯಪ್ಪ ಸನ್ನಿಧಾನಕ್ಕೆ ಹೋಗುತ್ತಾರೆ ಎಂದು ಕೇಳಿದ್ದೇನೆ. ಇತ್ತೀಚಿನ ದಿನಗಳಲ್ಲಿ ಯುವಕರು ಕೇಸರಿ ಹಣೆಪಟ್ಟಿಯನ್ನು ಕಟ್ಟಿಕೊಂಡು “ಸ್ವಾಮಿ ತಿಂದಕತೋಮ್ ತೋಮ್… ಅಯ್ಯಪ್ಪ ತಿಂದಕತೋಮ್ ತೋಮ್…” ಎಂದು ಹಾಡುವ ರಾಗದಲ್ಲಿ ಹೆಚ್ಚು ಆಕ್ರೋಶ ಕೇಳಿಸುತ್ತಿದೆಯಂತೆ.

ಶಬರಿಮಲೆಯ ದೇವಾಲಯ ಪೆರಿಯಾರ್ ಹುಲಿ ಸಂರಕ್ಷಣಾ ಕಾನನದಲ್ಲಿದೆ. ಪಶ್ಚಿಮ ಘಟ್ಟದ ಅತ್ಯಂತ ಸೂಕ್ಷ್ಮ ಪರಿಸರವಿರುವ ಪಟ್ಟಣಂತಿಟ್ಟ ಜಿಲ್ಲೆಯ ಹಿರಿಮೆ ಶಬರಿಮಲೆ. ಅಯ್ಯಪ್ಪನಿಗೆ ನೂರಾರು ಹೆಸರುಗಳಿವೆ ಆದರೆ ಕಾನನವಾಸನ್ ಎಂಬ ಹೆಸರು ಆತನಿಗೆ ಬಹಳವಾಗಿ ಒಪ್ಪುತ್ತದೆ. ಸ್ವಾಮಿ ಅಯ್ಯಪ್ಪನಿಗೆ ನೂರಾರು ಹೆಸರುಗಳಿರುವಂತೆ, ಅವನ ಕುರಿತು ನೂರಾರು ಕತೆಗಳು, ಹಾಡುಗಳು, ಜಾನಪದ ಸಾಹಿತ್ಯವಿದೆ. ಅಲ್ಲಿಂದ ರೂಪಾಂತರಗೊಂಡ ಅಯ್ಯಪ್ಪ ಇಂದು ಧರ್ಮ ಸಂರಕ್ಷಕನಾಗಿದ್ದಾನೆ, ಭೂಲೋಕನಾಥ ಎಂಬ ಬಿರುದು ಪಡೆದಿದ್ದಾನೆ.

ಮಾಲಾ ಅರಯರ್ ಬುಡಕಟ್ಟು ಜನಾಂಗದವರು ಅಯ್ಯಪ್ಪ ನಮ್ಮವ, ಆತ ನಮ್ಮ ಸಮುದಾಯದ ಅಧಿಪತಿ ಎಂದು ಇಂದಿಗೂ ವಾದಿಸುತ್ತಾರೆ. ನಿರಂತರ ಆಕ್ರಮಣ ಮಾಡುತ್ತಿದ್ದ ಚೋಳ ನಾಯಕರನ್ನು ಎದುರಿಸಲು ಬುಡಕಟ್ಟು ಜನರ ಸಮರ್ಥ ಸೈನ್ಯ ಕಟ್ಟಿದ ಮಹಾ ಯೋಗಿ ಅಯ್ಯಪ್ಪ ಎಂಬುದು ಅವರ ವಾದ. ಇತಿಹಾಸ ಪುಟಗಳಲ್ಲಿ ಕಾಣಸಿಗದ, ನಾವು ಮರೆತು ಹೋದ ವಂಶದ, ದ್ರಾವಿಡ ಪೂರ್ವ ಕಾಲದ ಧ್ರುವ ತಾರೆ ಅಯ್ಯಪ್ಪ ಎಂಬುದು ಮಾಲಾ ಅರಯರ್ ಸಮರ್ಥನೆ. ಮುಂದುವರೆದು ಅವರು ಕ್ಷತ್ರಿಯ ಬ್ರಾಹ್ಮಣ ಸಮುದಾಯದವರು ನಮ್ಮ ದೇವರ ಮೇಲೆ ಹೊಸ ಅಧಿಪತ್ಯ ಸಾಧಿಸಿದರು ಎಂದು ಆಪಾದಿಸುತ್ತಾರೆ. ಈ ಆಪಾದನೆಯಲ್ಲಿ ಎಷ್ಟು ಸತ್ಯಾಂಶವಿದೆ ಎಂದು ಸಾಬೀತು ಮಾಡುವುದು ಕಠಿಣವಾದ ಸವಾಲಾದರು, ಬ್ರಾಹ್ಮಣ ಸಮುದಾಯ ರಚಿತ ಪುರಾಣಗಳು ಹೆಚ್ಚು ವೈವಿಧ್ಯಮಯವಾಗಿಯು, ಕಾಲ್ಪನಿಕವಾಗಿಯು, ಆಕರ್ಷಕವಾಗಿಯು ಇದ್ದಿದ್ದರಿಂದ ಜನರನ್ನು ತನ್ನತ್ತ ಸೆಳೆಯಿತು ಎಂದರೆ ತಪ್ಪಾಗಲಾರದು. Brahminical myth-makers used greater imagination ಎಂಬುದು ಬರಹಗಾರ ವಿಜು ಅವರ ಅಭಿಪ್ರಾಯ.

ಸ್ವಾಮಿ ಅಯ್ಯಪ್ಪನಿಗೆ ಅಪಾರ ಭಕ್ತರು ಸೃಷ್ಟಿಯಾಗಿದ್ದು, ಅಯ್ಯಪ್ಪ ಹಿಂದೂ ಧರ್ಮದ ದೇವರಾದ ಮೇಲೆಯೇ. ಅಲ್ಲಿಂದ ಅಯ್ಯಪ್ಪನ ಕುರಿತು ಹಿಂದೂ ಧರ್ಮದವರಲ್ಲಿ ಅಪಾರ ಪ್ರೀತಿಯು ಬೆಳೆಯಿತು. ತಮಿಳರಿಗೆ ಅಯ್ಯಪ್ಪ, ಪಳನಿ ಆಂಡವನ್, ಅವರ ಮುದ್ದಿನ ಅಯ್ಯನರ್, ಕುಲ ಕಾಯುವವ! ಬೌದ್ಧ ಧರ್ಮದವರು ಅಯ್ಯಪ್ಪನ ಹಸ್ತ ಮುದ್ರೆ ಮತ್ತು ನಿಲುವುಗಳನ್ನು ನೋಡಿ ಅಯ್ಯಪ್ಪ ನಮ್ಮವ ಎಂದು ಹೇಳಿದ್ದು ಕೂಡ ಇದೆ.

ಅಯ್ಯಪ್ಪ ಬುಡಕಟ್ಟು ಜನಾಂಗದ ದೇವರಾಗಿಯೇ ಉಳಿದಿದ್ದರೆ ಇಂದು ಈ ಜನಜಂಗುಳಿ ಇರುತ್ತಿರಲಿಲ್ಲ, ಲಿಂಗ ತರತಮದ ವಿವಾದ ಹುಟ್ಟಿಕೊಳ್ಳುತ್ತಿರಲಿಲ್ಲ, ವರ್ಷದ ಒಂದು ಋತುವಿನಲ್ಲಿ ಐವತ್ತು ಲಕ್ಷ ಜನ ಒಮ್ಮೆಲೆ ಮುಗಿಬಿದ್ದು ಪರಿಸರ, ನದಿ ಮತ್ತು ವನ್ಯಜೀವಿಗಳ ಮೇಲೆ ಒತ್ತಡ ಹಾಕುತ್ತಿರಲಿಲ್ಲ. ಕಾಡು ನಾಶವಾಗುತ್ತಿರಲಿಲ್ಲ, ನದಿ ಕಲುಷಿತಗೊಳ್ಳುತ್ತಿರಲಿಲ್ಲ.

ಡಿಸೆಂಬರ್, ಜನವರಿ ಸಮಯಕ್ಕೆ ಭಕ್ತಾದಿಗಳು ಪ್ರವಾಹದಂತೆ ಹರಿದು ಬರಲು ಶುರುವಾದಾಗ, ಮುತ್ತು ಕೆಲಸವೂ ಚುರುಕುಗೊಳ್ಳುತ್ತದೆ. ದಿನವಿಡೀ ಸೊಂಟದವರೆಗೆ ಹರಿವ ಕಪ್ಪು ಬಣ್ಣದ ಪಂಬಾ ನದಿಯಲ್ಲಿ ನಿಂತು ಭಕ್ತಾದಿಗಳು ಪ್ರತಿದಿನ ಎಸೆದು ಹೋಗುವ ಕಪ್ಪು ಮತ್ತು ಕೇಸರಿ ಮುಂಡು ಬಟ್ಟೆಯನ್ನು ಹೊರಕ್ಕೆ ಎಳೆದು ತರುವುದು ಆಕೆಯ ಕೆಲಸ. ಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ಬಟ್ಟೆ ಆಯುವವರ ತಂಡಕ್ಕೆ ಸೇರಿದವಳು ಮುತ್ತು. ಬಟ್ಟೆ ಆಯುವುದು ಆಯಾಸಕರ ಕೆಲಸ ಮಾತ್ರವಲ್ಲದೆ, ಅನಾರೋಗ್ಯಕರ ಕಾಯಕವು ಹೌದು. ಪಂಬಾ ನದಿಯ ಕೊಳಕು ನೀರಲ್ಲಿ ದಿನಕ್ಕೆ ಎಂಟು ಗಂಟೆ ನಿಲ್ಲುತ್ತಾಳೆ ಮುತ್ತು. ಮಕರ ಸಂಕ್ರಾಂತಿಯ ದಿನಗಳು ಹತ್ತಿರವಾದಂತೆ ಅವಳ ಕೆಲಸವೂ ಬಿರುಸಾಗುತ್ತದೆ, ಎಂಟು ಗಂಟೆ ಮೀರುತ್ತದೆ. ಒಂದು ಮುಂಡುವಿಗೆ ಒಂದು ರೂಪಾಯಿಯ ಹಾಗೆ ಆಕೆಯ ಕಮಾಯಿ. ದಿನವೊಂದಕ್ಕೆ ಎರಡು ಸಾವಿರದಿಂದ ಮೂರು ಸಾವಿರ ಮುಂಡು ಎಳೆದು ನದಿಯಿಂದ ಹೊರ ಹಾಕುವ ಆಕೆ ಡಿಸೆಂಬರ್ ಜನವರಿಯಲ್ಲಿ ಮೂವತ್ತರಿಂದ ಐವತ್ತು ಸಾವಿರ ಗಳಿಸುತ್ತಾಳೆ.

105815 traztwyrky 1542369246

ಭಕ್ತಾದಿಗಳು ಬಟ್ಟೆಯನ್ನಷ್ಟೆ ಎಸೆಯದೆ ತೊಟ್ಟ ಮಾಲೆಯನ್ನು ನದಿಗೆ ಅರ್ಪಿಸಿ ಬರಬೇಕೆಂಬುದು ಹಿರಿಯ ಸ್ವಾಮಿಗಳ ಆಜ್ಞೆಯಾದುದರಿಂದ ನದಿ, ಬಟ್ಟೆ ಮತ್ತು ಮಾಲೆಗಳಿಂದ ತುಂಬಿ ಹೋಗಿ ಉಸಿರುಗಟ್ಟುತ್ತಿದೆ. ಪವಿತ್ರ ಯಾತ್ರೆಯ ನಂತರ ನಾವು ಪರಿಶುದ್ದರು, ಮಾಡಿದ ಪಾಪಗಳನ್ನೆಲ್ಲಾ ತೊರೆವುದರ ಸೂಚಕ ನದಿಯಲ್ಲಿ ಮುಂಡು ಮತ್ತು ಮಾಲೆಯನ್ನು ಹರಿಯ ಬಿಡುವುದು ಎಂಬ ನಂಬಿಕೆಯಲ್ಲಿ ಬರುವ ಭಕ್ತಾದಿಗಳು ನದಿಯ ಮೇಲೆ ಪ್ರಹಾರವನ್ನೇ ಮಾಡುತ್ತಿದ್ದಾರೆ. ಹಲವರಿಗೆ ಇದರ ಅರಿವು ಕೂಡ ಇಲ್ಲವಾದರೆ, ಕೆಲವರಿಗೆ ಅರಿವಿದ್ದರೂ ನಂಬಿಕೆ ಬಿಡಲಾಗುವುದಿಲ್ಲ!

ಇದನ್ನು ಓದಿದ್ದೀರಾ?: ನೆಪೊಟಿಸಂ | ನಿರುದ್ಯೋಗಿ ಪ್ರತಾಪ್ ಸಿಂಹ ಮತ್ತು ರಾಜ್ಯ ನಾಯಕರ ಮಕ್ಕಳ ಪ್ರೇಮ!

ಪಂಬಾ ನದಿಯ ದಂಡೆಯ ಮೇಲೆ ಗಂಗಾ ನದಿಯ ತೀರದ ನಾಗರಿಕತೆಯಷ್ಟೇ ಪುರಾತನವಾದ ನಾಗರಿಕತೆಯಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಪಂಬಾ ಎಂಬ ಪದಕ್ಕೆ “ಪಾಪಗಳನ್ನು ನಾಶ ಮಾಡುವ” ಎಂಬ ಅರ್ಥವಿದೆ. ಶಬರಿಗಿರಿಯಲ್ಲಿ ನೂರಾರು ಸಣ್ಣ ಹೊಳೆಗಳು ಪಂಬಾ ಸೇರಿ ನದಿಯಾಗಿ ಪಶ್ಚಿಮ ಘಟ್ಟವನ್ನು ಶ್ರೀಮಂತಗೊಳಿಸುತ್ತಾ ಹರಿಯುತ್ತದೆ. ಪಂಬಾ ಜಲಕ್ಕೆ ಅಗಾಧ ಔಷಧೀಯ ಗುಣಗಳಿದ್ದು, ಬೇರೆಲ್ಲೂ ಕಾಣ ಸಿಗದ ನೂರಾರು ಅಪರೂಪದ ಗಿಡಗಳನ್ನು ಪೋಷಿಸಿದೆ. ಪಂಬಾ ನದಿಯ ಇತಿಹಾಸ ಶಬರಿಮಲೆಯಿಂದ ಅರಣ್ಮೂಲ ದೇವಾಳವರೆಗೆ ಮಾತ್ರ ಸೀಮಿತವಾಗದೆ, ನೂರಾರು ಪುಟ್ಟ ಪುಟ್ಟ ಗುಡಿಗಳು, ಪವಿತ್ರ ತೋಪುಗಳಷ್ಟೇ ಅಲ್ಲದೆ, ಕ್ರಿ.ಶ 427ರಲ್ಲಿ ಸ್ಥಾಪಿತವಾದ ಸೇಂಟ್ ಮೇರಿಸ್ ಬೆಸಲಿಕ ಕೂಡ ಪಂಬಾ ನದಿಯ ದಂಡೆಯ ಮೇಲಿದೆ!

ಶುದ್ಧ ನದಿಯ ಜೈವಿಕ ಆಮ್ಲಜನಕ ಬೇಡಿಕೆ ಮಟ್ಟ (biological oxygen demand (BOD) ಒಂದು ಲೀಟರಿಗೆ ಒಂದು ಮಿಲಿಗ್ರಾಂ ಇರುತ್ತೆ. ಕೊಂಚ ಕಲುಷಿತಗೊಂಡ ನದಿಯ BOD ಲೀಟರಿಗೆ ಎರಡರಿಂದ ಎಂಟು ಮಿಲಿಗ್ರಾಂ ಇರುತ್ತದೆ. ಆದರೆ ಪಂಬಾ ನದಿಯ BOD ಮಟ್ಟ ಲೀಟರಿಗೆ 20.2 ಮೀಲಿಗ್ರಾಂ ಇದೆ! ಕೇರಳ ಪಲೂಶನ್ ಕಂಟ್ರೋಲ್ ಬೋರ್ಡ್ ನಡೆಸಿದ ಸಂಶೋಧನೆಯಲ್ಲಿ ಪಂಬಾ ನದಿಯ ಆರೋಗ್ಯ ಸ್ಥಿತಿಯ ಇನ್ನಷ್ಟು ಭಯಾನಕ ಸತ್ಯಗಳು ಹೊರಬಿದ್ದವು. ಶಬರಿಮಲೆಯ ಸನ್ನಿಧಾನದ ಬಳಿ BOD ಮೋರಿ ನೀರಿನಷ್ಟೇ ಅಂದರೆ ಲೀಟರಿಗೆ 159.7 ಮಿಲಿಗ್ರಾಮ್ ಇತ್ತು! ನೀರಿನ ಕೋಲೀಫಾರ್ಮ್ ಬ್ಯಾಕ್ಟೀರಿಯ ಸಂಖ್ಯೆ ಪ್ರತಿ 100 ಮಿಲಿ ಲೀಟರಿಗೆ ಮೂರು ಲಕ್ಷವಿತ್ತು!

ಶಬರಿಮಲೆ ಸಮೀಪವೇ ಇರುವ ಅರಣ್ಮೂಲ ಪಾರ್ಥಸಾರಥಿ ದೇವಾಲಯದ ಪರಿಸರ ಅಚ್ಚ ಹಸಿರ ಕಾಡು, ಬೆಟ್ಟ ಗುಡ್ಡ, ನಿರಂತರ ಹರಿವ ಜರಿಗಳು ಮತ್ತು ಫಲವತ್ತಾದ ಒದ್ದೆ ನೆಲದ ತಾಣ. ಇಲ್ಲಿ ಸಿಗುವ ಒದ್ದೆ ಮಣ್ಣಿನಿಂದ ಇಲ್ಲಿನ ಕುಶಲ ಕರ್ಮಿಗಳು ಪ್ರಸಿದ್ಧ ಅರಣ್ಮೂಲ ಕನ್ನಡಿ ಮಾಡುತ್ತಾರೆ. ಈ ಕನ್ನಡಿ ಮಾಡುವ ಕಲೆಗೆ 400 ವರ್ಷಗಳ ಪರಂಪರೆಯಿದೆ. GI ಟ್ಯಾಗ್ ಕೂಡ ಇರುವ ಈ ವಿಶೇಷ ಕನ್ನಡಿಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಅಮೆರಿಕಾದ ಬರಾಕ್ ಒಬಾಮರಿಂದ ಹಿಡಿದು ಪ್ರಿನ್ಸ್ ಚಾರ್ಲ್ಸ್ ರವರಿಗೆ ಈ ಕನ್ನಡಿಯನ್ನು ಕೊಡುಗೆಯಾಗಿ ನೀಡಲಾಗಿದೆ. ಕನ್ನಡಿ ತಯಾರಿಕೆಯ ಮೂಲ ಅಲ್ಲಿನ ಒದ್ದೆ ಮಣ್ಣು. ಕೇರಳದ ಬೇರಾವುದೇ ಭೂಭಾಗದ ಮಣ್ಣು ತಂದರು ಕನ್ನಡಿ ತಯಾರಿಕೆಗೆ ಸೂಕ್ತವಾಗಿಲ್ಲವಂತೆ.

ಇಂತಹ ವಿಶಿಷ್ಟ ಭೂಪ್ರದೇಶದಲ್ಲಿ ವಿಮಾನ ನಿಲ್ದಾಣ ಕಟ್ಟುವ ಯೋಜನೆಯೊಂದು 2009ರಲ್ಲಿ ಜನ್ಮ ತಾಳಿತು. ಐನೂರು ಎಕರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿ ವಿದೇಶದಲ್ಲಿ ನೆಲೆಸಿರುವ ಅಯ್ಯಪ್ಪನ ಭಕ್ತರು ಶಬರಿಮಲೆಗೆ ನೇರವಾಗಿ ಬರಲು ಅನುಕೂಲ ಮಾಡುವ ಉದ್ದೇಶ ಅದಾಗಿತ್ತು. ಸುಮಾರು 2000 ಸಾವಿರ ಕೋಟಿ ಯೋಜನೆ ಅದಾಗಿತ್ತು. ಸೀಮಾ ಸುಂಕ ಇಲಾಖೆಯವರು ಯೋಜನೆಯ ಕಾರ್ಯಸಾಧ್ಯತೆ ಕುರಿತು ತಕರಾರು ತೆಗೆದ ಮೇಲೆ, ವಿಮಾನಗಳು ಸುರಕ್ಷಿತವಾಗಿ ಭೂಸ್ಪರ್ಶ ಮಾಡಬೇಕಾದರೆ 905 ಮೀಟರ್ ಎತ್ತರದ ಪಾರ್ಥಸಾರಥಿ ದೇವಾಲಯದ ಧ್ವಜ ಸ್ತಂಭ ಮತ್ತು ಸುತ್ತಲಿನ ನಾಲ್ಕು ಬೆಟ್ಟಗಳ ಎತ್ತರ ತಗ್ಗಿಸಬೇಕು ಎಂಬ ವರದಿ ಹೊರಬಿದ್ದ ಮೇಲೆ ಈ ಯೋಜನೆಗೆ ಬಾರಿ ಹಿನ್ನಡೆಯಾಯಿತು.

ಮುಂದುವರೆದು ಸಲೀಂ ಅಲಿ ಫೌಂಡೇಶನ್ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಕುರಿತು ಅಧ್ಯಯನ ನಡೆಸಿತು. ವಿಮಾನ ನಿಲ್ದಾಣ ನಿರ್ಮಾಣಕ್ಕೆಂದು ನಿಗದಿಯಾಗಿದ್ದ 500 ಎಕರೆ ಭೂಮಿಯಲ್ಲೇ 212 ಬಗೆಯ ಸಸ್ಯಗಳಿರುವುದು ಪತ್ತೆಯಾಯಿತು. ಅವುಗಳಲ್ಲಿ 110 ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಬೆಳೆಯುವ ಸಸ್ಯಗಳಾಗಿದ್ದವು. ಆ ಪರಿಸರದಲ್ಲಿ 60 ಬಗೆಯ ಮೀನುಗಳು, 103 ಬಗೆಯ ಪಕ್ಷಿಗಳು ಪತ್ತೆಯಾದವು. ವಿಶೇಷವೆಂದರೆ ಎಂಟು ಬಗೆಯ ಹಕ್ಕಿಗಳು ವಲಸೆ ಬಂದವು. ವಲಸೆ ಬಂದ ಹಕ್ಕಿಗಳಲ್ಲಿ ಎರಡು ಅಳಿವಿನ ಅಂಚಿನಲ್ಲಿರುವುದು ಪತ್ತೆಯಾಯಿತು. ವಿದೇಶದಲ್ಲಿ ನೆಲೆಸಿರುವ NRI ಆಯ್ಯಪ್ಪ ಭಕ್ತರನ್ನು ನೇರ ಶಬರೀ ಮಲೆಗೆ ಕರೆತರುವ ಈ ಸಾಹಸ ಪರಿಸರಕ್ಕೆ ಎಷ್ಟು ಮಾರಕವೆಂಬುದು ಎಲ್ಲರಿಗೂ ಮನದಟ್ಟಾಗಿತ್ತು. ನಂತರ ಬಂದ ಸಾರ್ವಜನಿಕ ಹಿತಾಸಕ್ತಿ ದಾವೆಗಳಿಂದ ಈ ಯೋಜನೆಗೆ ತೆರೆಬಿತ್ತು. ಕನ್ನಡಿ ತಯಾರಿಸುವ 6000 ಕರಕುಶಲ ಕಲಾವಿದರ ಜೀವ ಉಳಿಯಿತು. ನದಿ, ಬೆಟ್ಟಗಳು ಮತ್ತು ಅಮೂಲ್ಯ ಒದ್ದೆ ನೆಲ ನಿಟ್ಟುಸಿರು ಬಿಟ್ಟವು. ನಾಗರಿಕ ಸಮಾಜ ಪರಿಸರ ಉಳಿಸಿದ ದಿಟ್ಟ ಸಾಹಸಗಳಲ್ಲಿ ಈ ಹೋರಾಟದ ಹೆಸರು ನಮೂದಾಯಿತು.

ಶಬರಿಮಲೆ ಇರುವ ಪಟ್ಟಣಂತಿಟ್ಟ ಜಿಲ್ಲೆಯ ಶೇಕಡಾ 58ರಷ್ಟು ಪ್ರದೇಶವನ್ನು ಕಾಡು ಆವರಿಸಿಕೊಂಡಿದೆ. ನದಿ, ಭೂಮಿಯ ಮೇಲೆ ದಾಳಿಯಾದಂತೆ, ಕಾಡು ಕೂಡ ಅತಿಯಾದ ಒತ್ತಡಕ್ಕೆ ಸಿಲುಕಿದೆ. ಭಕ್ತರು ಶಬರಿಮಲೆಯ ಕಡೆಗೆ ಮುಖ ಮಾಡಿದಾಗ, ವನ್ಯಜೀವಿಗಳು ಕಾಡಿನ ಅಂತರಾಳವನ್ನು ಸೇರುತ್ತವೆ. ಅಲ್ಲೊಂದು ಇಲ್ಲೊಂದು ಜಿಂಕೆಯನ್ನು ಬಿಟ್ಟರೆ ಹುಲಿ, ಕರಡಿ, ಆನೆಗಳಂತಹ ಕಾಡಿನ ಬೇರಾವ ವನ್ಯಜೀವಿಯನ್ನೂ ಭಕ್ತರು ನೋಡಲಾರರು. ಆದರೂ ಹುಲಿಯ ಮೇಲೆ ಕುಳಿತ ಅಯ್ಯಪ್ಪನ ಫೋಟೋ ಮಾತ್ರ ಎಲ್ಲೆಡೆ ಕಾಣ ಸಿಗುತ್ತದೆ! ಆಗಾಗ ಪ್ಲಾಸ್ಟಿಕ್ ನುಂಗಿ ಸತ್ತು ಬಿದ್ದ ಆನೆಗಳನ್ನು ಅರಣ್ಯ ಇಲಾಖೆಯವರು ಧಪನ್ ಮಾಡುತ್ತಾರೆ.

ವಯನಾಡು 1

ಮೊದಲು ಕಾಡಿನ ವಾಸಿಯಾಗಿದ್ದ ಮನುಷ್ಯ ನಗರವಾಸಿಯಾದ ಮೇಲೆ ಒತ್ತಡಕ್ಕೆ ಸಿಲುಕಿದ. ಘರ್ಷಣೆ ಅತಿಯಾದವು, ಜವಾಬ್ದಾರಿಗಳು ಹೆಚ್ಚಿದವು, ಕಟ್ಟುಪಾಡುಗಳ ಸಂಕೋಲೆ ಹೇರಳವಾದವು. ಎಲ್ಲಾ ಬಿಟ್ಟು ಕಾಡಿಗೆ ಹೋಗಬೇಕು, ನದಿಯಲ್ಲಿ ಈಜಬೇಕು, ಸಂಕೋಲೆಗಳ ಮುರಿದು ಹಾಯಾಗಿರಬೇಕು ಎಂಬ ಇಂಗಿತ ಅವನಲ್ಲಿ ಮೂಡಿದವು. ರಜಾ ಬಂದಾಗ ನಗರವಾಸಿಗಳು ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪ್ರಕೃತಿಯ ಮಡಿಲಿಗೆ ದೌಡಾಯಿಸುವುದರ, ವರುಷಕೊಮ್ಮೆ ನಗರಗಳನ್ನು ತೊರೆದು ಕಾನನವಾಸಿ ಅಯ್ಯಪ್ಪನನ್ನು ನೋಡಲು ಹೋಗುವ ಲಕ್ಷಾಂತರ ಜನರ ಭಕ್ತಿಯ ಮೂಲ ಈ ಇಂಗಿತವೇ ಇರಬೇಕು. ಎಲ್ಲಾ ತ್ಯಜಿಸಿ ಪ್ರಕೃತಿಯ ಮಡಿಲಿಗೆ ಮರಳುವುದು ಅಧ್ಯಾತ್ಮದ ಮೂಲವು ಇರಬೇಕು. ಪ್ರಕೃತಿಯ ಆರಾಧನೆ ಕ್ರಮೇಣ ದೈವಾರಾಧನೆ ಆಗಿರಬೇಕು. ನಮಗೆ ಪ್ರಕೃತಿ ಬೇಕು ಆದರೆ ಪ್ರಕೃತಿಗೆ ನಾವಿಲ್ಲದಿರೆ ಒಳಿತು!

ನಮ್ಮ ಭಕ್ತಿ, ಅಧ್ಯಾತ್ಮದ ತುಡಿತ ಪರಿಸರಕ್ಕೆ ಮಾರಕವಾಗುತ್ತಿರುವುದು ದುರಂತವೇ ಸರಿ. ಅಧ್ಯಾತ್ಮ ಮತ್ತು ಭಕ್ತಿಯ ಭರದಲ್ಲಿ ಗಂಗಾ, ಯಮುನ, ಕಾವೇರಿ, ಕೃಷ್ಣ, ಗೋದಾವರಿ, ತುಂಗಾ ಮತ್ತೀಗ ಸರಯೂ, ಪಂಬಾ ನದಿಗೆ ನಾವೇನು ಮಾಡಿದ್ದೇವೆ? 2018ರಲ್ಲಿ ಕೇರಳದಲ್ಲಿ ಮಹಾ ಪ್ರವಾಹ. ಜಲ ಪ್ರಳಯ. ಪಂಬಾ ಉಕ್ಕಿಹರಿದು ಅಹಂಕಾರದಿಂದ ಒತ್ತುವರಿ ಮಾಡಿಕೊಂಡಿದ್ದ ಅಂಗಡಿ ಮುಂಗಟ್ಟುಗಳನ್ನು ತನ್ನ ಒಡಲಿಗೆ ಹಾಕಿಕೊಂಡಿತು. ಹತ್ತಿರವಿದ್ದ ರಾಮಮೂರ್ತಿ ಮಂಟಪವನ್ನು, ಸರ್ಕಾರಿ ಆಸ್ಪತ್ರೆಯನ್ನು, ಆಂಬುಲೆನ್ಸ್ ವ್ಯಾನುಗಳನ್ನು ಮರಳಲ್ಲಿ ಮುಚ್ಚಿಹಾಕಿತು. ಹಲವು ದಿನಗಳು ಯಾರೊಬ್ಬರೂ ಶಬರಿಮಲೆಗೆ ಕಾಲಿಡದಂತೆ ಹಿಗ್ಗಿತು. ಇಷ್ಟೆಲ್ಲಾ ಆದರೂ ಮನುಷ್ಯ ರಾಜ ಗಾಂಭೀರ್ಯದಿಂದ ಶಬರಿಗಿರಿಯಲ್ಲಿ ಕುಳಿತ ಮುದ್ದು ಅಯ್ಯಪ್ಪನಂತೆ ಸುಮ್ಮನೆ ಕೂರುವವನಲ್ಲ… spritual tourism ಕುರಿತು ಮರು ಆಲೋಚಿಸುವ ಕಾಲ ಬಂದಿದೆ.

ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X