ಜನಪ್ರಿಯ ಸಾಮಾಜಿಕ ಮಾಧ್ಯಮ ಟೆಲಿಗ್ರಾಂ ಸಿಇಒ ಪಾವೆಲ್ ದುರೋವ್ ಅವರು ಕುತೂಹಲಕಾರಿ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. ತಾನು ಮದುವೆಯಾಗದೆಯೇ ನೂರು ಮಕ್ಕಳ ತಂದೆಯಾಗಿದ್ದೇನೆ ಎಂದು ತಮ್ಮ ಆ್ಯಪ್‌ನಲ್ಲಿಯೇ ಹೇಳಿಕೊಂಡಿದ್ದಾರೆ. ವೀರ್ಯ ದಾನದ ಮೂಲಕ 39 ವರ್ಷದ ಪಾವೆಲ್ ದುರೋವ್ ಅವರು 100 ಮಕ್ಕಳ ಜನನಕ್ಕೆ ಕಾರಣರಾಗಿದ್ದಾರಂತೆ.
ಒಮ್ಮೆಯೂ ಮದುವೆಯಾಗದೆ, ಏಕಾಂಗಿಯಾಗಿಯೇ ಬದುಕಲು ಇಚ್ಛಿಸಿರುವ ನನಗೆ ಇದು ಹೇಗೆ ಸಾಧ್ಯ ಎಂದು ತಮಗೆ ತಾವೆ ಪ್ರಶ್ನೆ ಹಾಕಿಕೊಂಡಿರುವ ಅವರು, ನಂತರ ಇದು ಹೇಗೆ ಸಾಧ್ಯವೆಂಬುದನ್ನು ತಿಳಿಸಿದ್ದಾರೆ.
“15 ವರ್ಷದ ಹಿಂದೆ ನನ್ನ ಗೆಳೆಯನೊಬ್ಬ ವಿಚಿತ್ರ ಮನವಿಯೊಂದಿಗೆ ನನ್ನ ಬಳಿ ಬಂದ. ಫಲವತ್ತತೆ ಸಮಸ್ಯೆಯಿಂದ ಬಳಲುತ್ತಿದ್ದು, ನನ್ನ ಹೆಂಡತಿ ಮಕ್ಕಳನ್ನು ಪಡೆಯಲು ನೀನು ವೀರ್ಯ ದಾನ ಮಾಡಬೇಕು ಎಂದು ಕೇಳಿದ. ಇದೆಲ್ಲ ತಮಾಷೆ ಎಂಬುದಾಗಿ ನಾನು ನಕ್ಕಿದ್ದೆ. ಆದರೆ, ಆತ ಗಂಭೀರವಾಗಿದ್ದ” ಎಂಬುದಾಗಿ ಪಾವೆಲ್ ದುರೋವ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಚಂದ್ರ’ ಉಪಗ್ರಹದಲ್ಲಿ ಮೊದಲ ರೈಲ್ವೆ ನಿಲ್ದಾಣ ಸ್ಥಾಪಿಸಲು ‘ನಾಸಾ’ ಯೋಜನೆ
“ಮಕ್ಕಳ ಜನನಕ್ಕೆ ಕಾರಣವಾಗುವ ಸಾಮರ್ಥ್ಯ ಇರುವ ವ್ಯಕ್ತಿಯಿಂದ ವೀರ್ಯ ಪಡೆಯಬೇಕು ಎಂಬುದಾಗಿ ವೈದ್ಯರು ಹೇಳಿದ್ದಾರೆ ಎಂದು ಗೆಳೆಯ ನನಗೆ ತಿಳಿಸಿದ. ವೈದ್ಯರು ಕೂಡ ವೀರ್ಯ ದಾನ ಮಾಡುವುದು ನಾಗರಿಕ ಕರ್ತವ್ಯವಾಗಿದೆ ಎಂಬುದಾಗಿ ನನ್ನನ್ನು ಒಪ್ಪಿಸಿದ. ವೈದ್ಯರು ಮನವರಿಕೆ ಮಾಡಿದ ಬಳಿಕ ನಾನು ವೀರ್ಯ ದಾನ ಮಾಡುತ್ತಲೇ ಬಂದೆ. ಈಗ ನಾನು 100 ಮಕ್ಕಳ ಜನನಕ್ಕೆ ಕಾರಣನಾಗಿದ್ದೇನೆ” ಎಂಬುದಾಗಿ ಪಾವೆಲ್ ದುರೋವ್ ಹೇಳಿಕೊಂಡಿದ್ದಾರೆ.
“ನಿಯಮಿತವಾಗಿ ನಾನು ವೀರ್ಯವನ್ನು ದಾನ ಮಾಡುತ್ತಲೇ ಬಂದೆ. ಸುಮಾರು 12 ದೇಶಗಳಲ್ಲಿ 100ಕ್ಕೂ ಅಧಿಕ ಮಕ್ಕಳು ನನ್ನಿಂದಾಗಿ ಜನಿಸಿದ್ದಾರೆ ಎಂಬ ಸಂಗತಿ ಗೊತ್ತಾಯಿತು. ಕೆಲ ವರ್ಷಗಳ ಹಿಂದೆ ನಾನು ವೀರ್ಯವನ್ನು ದಾನ ಮಾಡುವುದನ್ನು ನಿಲ್ಲಿಸಿದೆ. ಆದರೆ, ಐವಿಎಫ್ ಕ್ಲಿನಿಕ್‌ಗಳಲ್ಲಿ ಈಗಲೂ ನನ್ನ ವೀರ್ಯವನ್ನು ಸಂಗ್ರಹಿಸಿಟ್ಟಿದ್ದಾರೆ. ನನ್ನ ವೀರ್ಯದಿಂದ ಮಕ್ಕಳು ಜನಿಸುವ ಚಟುವಟಿಕೆಯು ನಡೆಯುತ್ತಲೇ ಇದೆ. ನಾನು ಮಾಡಿದ ಕೆಲಸಕ್ಕೆ ನನಗೆ ಹೆಮ್ಮೆಯಿದೆ. ಬೇರೆಯವರು ಕೂಡ ಈ ರೀತಿಯ ಕಾರ್ಯವನ್ನು ಮಾಡಬೇಕು ಎಂಬುದಾಗಿ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.

