ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಸ್ಪರ್ಧಿಸಿದ್ದ ಈಜಿಪ್ಟ್‌ನ ಫೆನ್ಸರ್ ನಾಡಾ ಹಫೀಜ್ ಅವರು ತಾನು 7 ತಿಂಗಳ ಗರ್ಭಿಣಿ ಎಂದು ಬಹಿರಂಗಪಡಿಸಿದ್ದಾರೆ.
ಫೆನ್ಸರ್ ಸ್ಪರ್ಧೆಯಲ್ಲಿ 16ನೇ ಸುತ್ತು ಪ್ರವೇಶಿಸಿದಾಗ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಹಫೀಜ್, “ಪುಟ್ಟ ಒಲಿಂಪಿಯನ್‌ನನ್ನು ಹೊತ್ತುಕೊಂಡಿದ್ದೇನೆ” ಎಂದು ಹೇಳಿದ್ದರು.
26 ವರ್ಷದ ಹಫೀಜ್ ಮಹಿಳೆಯರ ವಿಭಾಗದ ಫೆನ್ಸರ್ ಸುತ್ತಿನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರು. ಈ ಸಂದರ್ಭದಲ್ಲಿ ಪೋಸ್ಟ್ ಮಾಡಿದ್ದ ಅವರು, “ಸ್ಪರ್ಧಾ ಕಣಕ್ಕೆ ಇಳಿದಾಗ ನೀವು ಇಬ್ಬರು ಆಟಗಾರರು ಇರುತ್ತೀರಾ, ಆದರೆ ಇಲ್ಲಿ ಮೂವರಿದ್ದೇವೆ! ನಾನು, ನನ್ನ ಸ್ಪರ್ಧಿ ಹಾಗೂ ಪ್ರಪಂಚಕ್ಕೆ ಕಾಲಿಡಬೇಕಾದ ನನ್ನ ಪುಟ್ಟ ಕಂದ” ಎಂದು ತಿಳಿಸಿದ್ದಾರೆ.
“ನನ್ನ ಕಂದ ಹಾಗೂ ನಾನು ಸ್ಪರ್ಧೆಯಲ್ಲಿ ನ್ಯಾಯಯುತವಾದ ಸವಾಲುಗಳನ್ನು ಹೊಂದಿದ್ದು,ಇಬ್ಬರು ದೈಹಿಕ ಹಾಗೂ ಭಾವನಾತ್ಮಕವಾಗಿ ಇದ್ದೇವೆ. ಗರ್ಭಾವ್ಯಸ್ಥೆಯು ಕಠಿಣ ಹಂತವಾಗಿದೆ. ಆದರೆ ನಾನು ಜೀವನ ಹಾಗೂ ಕ್ರೀಡೆ ಎರಡರಲ್ಲೂ ಸಮತೋಲನವಾಗಿ ಹೋರಾಟ ನಡೆಸುತ್ತಿರುವುದು ಕಷ್ಟಕರ ಸನ್ನಿವೇಶವಾಗಿಲ್ಲ. ಆದಾಗ್ಯೂ ಮಾನ್ಯತೆಯುಳ್ಳದಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್ 2024: ಮತ್ತೊಂದು ಪದಕ ಗೆಲುವಿನತ್ತ ಮನು ಭಾಕರ್ !
“ನನ್ನ ಪತಿ ಹಾಗೂ ಕುಟುಂಬದವರ ನಂಬಿಕೆಯೊಂದಿಗೆ ಇಲ್ಲಿಯವರೆಗೂ ಬಂದಿರುವುದು ನನ್ನ ಅದೃಷ್ಟ. 16ರ ಹಂತಕ್ಕೆ ಬಂದಿರುವುದರಿಂದ ಪೋಸ್ಟ್ ಮೂಲಕ ಹಂಚಿಕೊಳ್ಳುತ್ತಿದ್ದೇನೆ” ಎಂದು ಹಫೀಜ್ ತಿಳಿಸಿದ್ದಾರೆ.
ಹಫೀಜ್ ಅವರು ಅರ್ಹತಾ ಸುತ್ತಿನಲ್ಲಿ ಅಮೆರಿಕದ ಎಲಿಜಬತ್ ಅವರನ್ನು 15-13 ಅಂತರದಿಂದ ಸೋಲಿಸಿದ್ದರು. ಆದರೆ 16ರ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿಯೋನ್ ವಿರುದ್ಧ 15-7 ಅಂತರದಿಂದ ಪರಾಭವಗೊಂಡರು.
ವೈದ್ಯಕೀಯ ಪದವೀಧರೆಯಾದ ಹಫೀಜ್ ಅವರದು ಇದು ಮೂರನೇ ಒಲಿಂಪಿಕ್ಸ್ ಸ್ಪರ್ಧೆಯಾಗಿದೆ. ಆಫ್ರಿಕನ್ ಕ್ರೀಡೆಗಳಲ್ಲಿ ಈಗಾಗಲೇ ಅವರು ಮೂರು ಕಂಚು ಹಾಗೂ ಒಂದು ಬೆಳ್ಳಿಯ ಪದಕ ಗೆದ್ದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನ ಐದನೇ ದಿನದಾಟ ನಡೆಯುತ್ತಿದ್ದು, ಪದಕ ಪಟ್ಟಿಯಲ್ಲಿ ಜಪಾನ್, ಫ್ರಾನ್ಸ್ ಹಾಗೂ ಚೀನಾ ಕ್ರಮವಾಗಿ ಮೂರು ಸ್ಥಾನಗಳನ್ನು ಗಳಿಸಿಕೊಂಡಿವೆ. ಜಪಾನ್ 7 ಚಿನ್ನ, 2 ಬೆಳ್ಳಿ, 4 ಕಂಚು ಗೆದ್ದಿದ್ದರೆ, ಫ್ರಾನ್ಸ್ 6 ಚಿನ್ನ, 9 ಬೆಳ್ಳಿ, 4 ಕಂಚನ್ನು ತಮ್ಮದಾಗಿಸಿಕೊಂಡಿದೆ. ಚೀನಾ ತಲಾ 6 ಚಿನ್ನ ಹಾಗೂ ಬೆಳ್ಳಿ, 2 ಕಂಚನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಭಾರತ 2 ಕಂಚನ್ನು ಗೆದ್ದಿದೆ.
