ಹಳೆಯ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ. ಬಿಜೆಪಿ ಜೊತೆ ಜೆಡಿಎಸ್ ಅದೇ ಮಾರ್ಗದಲ್ಲಿ ಪಾದಯಾತ್ರೆ ಹೋಗುವ ಮೂಲಕ ಅದರ ಕ್ರೆಡಿಟ್ ಬಿಜೆಪಿ ಖಾತೆಗೆ ಜಮೆಯಾಗುತ್ತದೆ. ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಇದನ್ನು ಮುಚ್ಚಿಟ್ಟು ಕುಂಟು ನೆಪ ಕೊಟ್ಟು ಪಾದಯಾತ್ರೆಯಿಂದ ಜೆಡಿಎಸ್ ಹಿಂದೆ ಸರಿದಿದೆ...
“ನಮ್ಮ ಕುಟುಂಬಕ್ಕೆ ವಿಷ ಇಕ್ಕಿದವರ ಜೊತೆ ವೇದಿಕೆ ಹಂಚಿಕೊಳ್ಳುವುದೇ? ಹಾಸನದ ಬೀದಿ ಬೀದಿಯಲ್ಲಿ ಪೆನ್ ಡ್ರೈವ್ ಸಿಗಲು ಕಾರಣವಾದ ಪ್ರೀತಂಗೌಡ ಭಾಗವಹಿಸುವ ಪಾದಯಾತ್ರೆಯಲ್ಲಿ ನಾನು ಭಾಗಿಯಾಗುವುದಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪಾದಯಾತ್ರೆಗೆ ಜೆಡಿಎಸ್ಸಿನ ನೈತಿಕ ಬೆಂಬಲವೂ ಇಲ್ಲ” ಎಂದಿದ್ದಾರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು.
ನಿನ್ನೆ ಮೊನ್ನೆಯವರೆಗೂ ಬಿಜೆಪಿ ನಾಯಕರೊಂದಿಗೆ ಸಿಎಂ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ, ಜಂಟಿ ಪತ್ರಿಕಾಗೋಷ್ಠಿ ನಡೆಸುವಲ್ಲಿ ಕಾಣಿಸಿಕೊಂಡಿದ್ದ ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಹಿಂದೆ ಸರಿಯಲು ‘ಪ್ರೀತಂ’ ಎಂಬ ಹೆಸರೇ ನಿಜ ಕಾರಣವೇ? ವಿಷವಿಕ್ಕಿದವರು ಎಂದು ಯಾರಿಗೆಲ್ಲ ಕುಮಾರಸ್ವಾಮಿ ಹೇಳುತ್ತಿದ್ದಾರೆ? ಇದುವೇ ಅಸಲಿ ಕಾರಣವಾ? -ಖಂಡಿತ ಅಲ್ಲ ಎನ್ನುತ್ತಿವೆ ಜೆಡಿಎಸ್ ಮೂಲಗಳು.
ಸಿಎಂ ಸಿದ್ದರಾಮಯ್ಯನವರ ಪತ್ನಿಗೆ ಮುಡಾದಿಂದ ಸೈಟ್ ಹೋಗಿದೆ ಎಂಬುದನ್ನು ಇಟ್ಟುಕೊಂಡು ಇಷ್ಟು ದೊಡ್ಡ ಮಟ್ಟದ ರಾದ್ಧಾಂತ ಮಾಡುವುದು ಜೆಡಿಎಸ್‌ನವರಿಗೂ ಇಷ್ಟವಿರಲಿಲ್ಲ ಎನ್ನುತ್ತಾರೆ ಕೆಲವರು. ಹಲವಾರು ವರ್ಷಗಳಿಂದ ಸಿದ್ದರಾಮಯ್ಯನವರನ್ನು ಹತ್ತಿರದಿಂದ ಬಲ್ಲ ಜೆಡಿಎಸ್ ಮುಖಂಡರು ಆಪ್ತ ಮಾತುಗಳಲ್ಲಿ ಹೇಳುವುದೇ ಬೇರೆ. “ಮುಡಾ ಸೈಟ್ ಬಹುಶಃ ಸಿದ್ದರಾಮಯ್ಯನವರ ಗಮನಕ್ಕೆ ಬಾರದೆ ಹೋಗಿರುವ ಸಾಧ್ಯತೆ ಇದೆ. ಅವರಿಗೆ ಮೊದಲೇ ಮಾಹಿತಿ ಹೋಗಿದ್ದರೆ, ಸಾಮಾನ್ಯವಾಗಿ ಇದಕ್ಕೆಲ್ಲ ಆಸ್ಪದ ನೀಡುತ್ತಿರಲಿಲ್ಲ. ಆಗಿದ್ದು ಆಗಿ ಹೋಗಿದೆ. ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಈಗಲೂ ಶುದ್ಧಹಸ್ತರು ಎಂಬುದು ನಮಗೂ ಗೊತ್ತಿದೆ” ಎನ್ನುವ ಉದಾರವಾದಿ ಕಟ್ಟರ್ ಜೆಡಿಎಸ್ ಮುಖಂಡರೂ ಇದ್ದಾರೆ.
ಮುಡಾದಿಂದ ಸಿಎಂ ಕುಟುಂಬಕ್ಕೂ ದೇವೇಗೌಡರ ಫ್ಯಾಮಿಲಿಗೂ ಬಿಜೆಪಿ – ಜೆಡಿಎಸ್ ನಾಯಕರಿಗೂ ಸೈಟ್‌ಗಳು ಹೋಗಿವೆ ಎಂಬುದನ್ನು ದಾಖಲೆಗಳು ಹೇಳುತ್ತಿವೆ. ಎಷ್ಟು ಕಾನೂನಾತ್ಮಕ, ಎಷ್ಟು ಕಾನೂನುಬಾಹಿರ ಎಂಬುದು ತನಿಖೆಯಾಗಬೇಕಾದ ಸಂಗತಿಯೇ. ರಾಜಕೀಯ ಮಟ್ಟದಲ್ಲಿ ಹೇಳುವುದಾದರೆ- ಇದೊಂದು ಕ್ಷುಲ್ಲಕ ವಿಚಾರವನ್ನು ಇಟ್ಟುಕೊಂಡು ದೊಡ್ಡ ರಾದ್ಧಾಂತ ಮಾಡಿ ಪೊಲಿಟಿಕಲ್ ಮೈಲೇಜ್ ಗಿಟ್ಟಿಸಿಕೊಳ್ಳುವ ತಂತ್ರ. ಸಿದ್ದರಾಮಯ್ಯನವರಿಗೆ ಇರುವ ಕ್ಲೀನ್ ಇಮೇಜ್ ಅಳಿಸಿ ಹಾಕುವ ರಾಜಕೀಯ ಷಡ್ಯಂತ್ರ ಎಂಬುದು ರಾಜಕಾರಣದ ಅ, ಆ, ಇ, ಈ ಬಲ್ಲ ಎಲ್ಲರಿಗೂ ಗೊತ್ತಾಗುತ್ತದೆ.
ಮುಡಾದಿಂದ ದೇವೇಗೌಡರ ಕುಟುಂಬ ಕಾನೂನುಬಾಹಿರ ನಿವೇಶನ ಪಡೆದಿದೆ ಎಂದು ಬಿಜೆಪಿ ಈ ಹಿಂದೆ ಜಾಹೀರಾತು ನೀಡಿದ್ದು ಚರ್ಚೆಯಾಗುತ್ತಿದೆ. ಹೀಗಾಗಿ ಜೆಡಿಎಸ್ ಹಿಂದೆ ಸರಿಯಿತೇ ಎಂಬುದು ಅನುಮಾನ ಹುಟ್ಟಿಸುತ್ತದೆ. ಇಂತಹ ವಾದ, ಪ್ರತಿವಾದ, ಕಾನೂನು ಗುದ್ದಾಟಗಳೆಲ್ಲ ಇದ್ದದ್ದೇ. ಇಷ್ಟಕ್ಕೇ ಜೆಡಿಎಸ್ ಪಾದಯಾತ್ರೆಯಿಂದ ಹಿಂದೆ ಸರಿಯುತ್ತದೆ ಎಂದು ಭಾವಿಸಲಾಗದು. ಒಂದು ವೇಳೆ ಪಾದಯಾತ್ರೆ ನಡೆದರೆ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದು ಇದರ ಹಿಂದಿರುವ ಸರಳ ಲೆಕ್ಕಾಚಾರ.
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಮಾತ್ರಕ್ಕೆ ತಾನೇ ಬಿಜೆಪಿಯಾಗಿಬಿಡುವುದು ಪಕ್ಷದ ಹಿತದೃಷ್ಟಿಯಿಂದ ಒಳಿತಲ್ಲ. ಅನಿವಾರ್ಯವಾಗಿ ಅವರೊಂದಿಗೆ ಹೋಗಿದ್ದರೂ ಪಕ್ಷವನ್ನು ಬಿಜೆಪಿಗಾಗಿ ಬಲಿಕೊಡಲಾಗದು. ಹೀಗಾಗಿ ಕೆಲ ದಿನಗಳಿಂದಲೇ ಜೆಡಿಎಸ್ ಒಳಗೆ ಪಾದಯಾತ್ರೆಯ ಬಗ್ಗೆ ಭಿನ್ನಾಭಿಪ್ರಾಯವಿತ್ತು ಎನ್ನುತ್ತವೆ ಮೂಲಗಳು.
ಹೇಳಿ ಕೇಳಿ ಹಳೆಯ ಮೈಸೂರು ಭಾಗ ಜೆಡಿಎಸ್, ಕಾಂಗ್ರೆಸ್ಸಿನ ಭದ್ರಕೋಟೆ. ಬಿಜೆಪಿ ಜೊತೆ ಜೆಡಿಎಸ್ ಹೋಗುವ ಮೂಲಕ ಈಗಾಗಲೇ ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಚಿಗುರುತ್ತಿದೆ. ಬೆಂಗಳೂರು ಟು ಮೈಸೂರು ದಾರಿಯುದ್ದಕ್ಕೂ ಹೋಗುವ ಪಾದಯಾತ್ರೆ ಜೆಡಿಎಸ್ ಪ್ರಾಬಲ್ಯದ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಹಾದು ಮೈಸೂರು ತಲುಪುತ್ತದೆ. ಪಾದಯಾತ್ರೆಗೆ ಜೆಡಿಎಸ್ ಕಾರ್ಯಕರ್ತರನ್ನು ದೂಡಿದರೆ, ಅದರಿಂದ ಬಿಜೆಪಿ ಬಲವರ್ಧನೆಯಾಗುತ್ತದೆಯೇ ಹೊರತು, ಜೆಡಿಎಸ್ ಕಳೆದುಕೊಳ್ಳುವುದೇ ಹೆಚ್ಚು. ಮಂಡ್ಯದ ಮಾರ್ಗದಲ್ಲಿ ಕೇಸರಿ ಪತಾಕೆಯನ್ನು ಹಾರಿಸುವುದು ಬಿಜೆಪಿಗೆ ಅನುಕೂಲ. ಮಂಡ್ಯದಲ್ಲಿ ಬೇರುಬಿಡಲು ದಶಕಗಳಿಂದಲೂ ಹರಸಾಹಸಪಡುತ್ತಿರುವ ಬಿಜೆಪಿಗೆ ಪಾದಯಾತ್ರೆಯೂ ಒಂದು ನೆಪ. ಪಕ್ಷ ಉಳಿದರೆ ಮಾತ್ರ ನಮ್ಮ ಕುಟುಂಬ ಉಳಿಯುತ್ತದೆ ಎಂಬ ಸತ್ಯ ಕುಮಾರಸ್ವಾಮಿಯವರಿಗೂ ಗೊತ್ತಿದೆ. ಬಿಜೆಪಿ ತನ್ನ ಬಲವನ್ನು ಈ ಭಾಗದಲ್ಲಿ ಹೆಚ್ಚಿಸಿಕೊಂಡರೆ ಮುಂಬರುವ ಜಿಲ್ಲಾ ಪಂಚಾಯಿತಿ ಎಲೆಕ್ಷನ್‌ನಲ್ಲಿ ಹೆಚ್ಚಿನ ಸೀಟ್‌ಗಳನ್ನು ಪಡೆಯಲು ಬೇಡಿಕೆ ಇಡುತ್ತದೆ. ಇದು ಜೆಡಿಎಸ್ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ.
ಇದಲ್ಲದೆ, ಕೇಂದ್ರದಲ್ಲಿ ಕೈಗಾರಿಕಾ ಮಂತ್ರಿ ಮಾಡಿರುವ ಮೋದಿ ಮತ್ತು ಶಾಗಳು, ಕುಮಾರಸ್ವಾಮಿಯವರನ್ನು ಮುಂದಿಟ್ಟುಕೊಂಡು, ಗಣಿ ಭೂಮಿಗಳನ್ನು ಅದಾನಿಗೆ ಮಾರಲು, ಅದರ ಕೊಳಕನ್ನು ಕುಮಾರಸ್ವಾಮಿ ತಲೆಗೆ ಕಟ್ಟಲು ಈಗಾಗಲೇ ಪ್ಲಾನ್ ರೆಡಿ ಮಾಡಿದ್ದಾರೆ. ಅದರ ಮೊದಲ ಭಾಗವಾಗಿ ದೇವದಾರಿ ಗಣಿ, ನಂತರದ್ದು ಮಂಡ್ಯದಲ್ಲಿ ಸಿಗುವ ಲೀಥಿಯಂ. ಇದು ನೇರವಾಗಿ ಮಂಡ್ಯದ ಜನಕ್ಕೇ ಹೊಡೆತ ಬೀಳುತ್ತದೆ. ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಅದು ಕುಮಾರಸ್ವಾಮಿಯವರಿಗೆ ಕೆಟ್ಟ ಹೆಸರು ತರುತ್ತದೆ. ಪಕ್ಷದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನು ಓದಿದ್ದೀರಾ?: ಮಂಡ್ಯ ಜನರ ಬಲಿಗೆ ಕಾದಿದೆ ಲೀಥಿಯಂ ತೂಗುಗತ್ತಿ; ಎಚ್‌ಡಿಕೆ ಪಾತ್ರವೇನು?
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡದ್ದೇ ದೇವೇಗೌಡರ ಕುಟುಂಬದ ಆಸ್ತಿಗಳ ಮೇಲೆ ಇಡಿ, ಸಿಬಿಐ ದಾಳಿ ಆಗದೇ ಇರಲಿ ಎಂಬುದಾಗಿತ್ತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಈಗ ಕೇಂದ್ರದಲ್ಲಿ ಪರಿಸ್ಥಿತಿ ಬೇರೆಯಾಗಿದೆ. ಬಹುಮತ ಸಿಗದೆ ಮೋದಿಯೇ ಏದುಸಿರು ಬಿಡುತ್ತಿದ್ದಾರೆ. ಜೊತೆಗೆ ನಾವು ಕೇಳಿದ ಖಾತೆಗಳೂ ಸಿಕ್ಕಿಲ್ಲ. ಅಂದಮೇಲೆ ನಾವ್ಯಾಕೆ ಅವರ ಕೈ ಕೆಳಗೆ ಅಡಿಯಾಳಾಗಿ ಇರಬೇಕು. ನಾಯ್ಡು, ನಿತೀಶ್‌ಗಳೇ ಆಟ ಹಾಕುತ್ತಿರುವಾಗ, ನಾವು ನಮ್ಮ ತಾಖತ್ತು ತೋರಬೇಕು, ನಾವು ನಾವಾಗಿಯೇ ಉಳಿಯಬೇಕು ಎನ್ನುವುದು ಗೌಡರ ಇರಾದೆ ಎನ್ನುವ ಮಾತೂ ಇದೆ.
ಅಲ್ಲದೇ, ರಾಜ್ಯದಲ್ಲಿ ಭೀಕರ ನೆರೆ, ನೆರೆಯ ರಾಜ್ಯ ಕೇರಳದಲ್ಲಿ ಅಪಾರ ಸಾವು, ನೋವು ವರದಿಯಾಗುವಾಗ ಕ್ಷುಲ್ಲಕ ಕಾರಣಕ್ಕೆ ಪಾದಯಾತ್ರೆ ಹಮ್ಮಿಕೊಂಡರೆ ಜನಮಾನಸಕ್ಕೆ ನಕಾರಾತ್ಮಕ ಸಂದೇಶ ಹೋಗುತ್ತದೆ ಎಂಬ ಎಚ್ಚರಿಕೆಯೂ ಕುಮಾರಸ್ವಾಮಿಯವರ ಮಾತುಗಳಲ್ಲಿ ಇಣುಕಿದೆ. ಜೆಡಿಎಸ್ಸಿಗಾಗುವ ಲುಕ್ಸಾನು ಪರಿಗಣಿಸಿಯೇ ಕುಮಾರಸ್ವಾಮಿಯವರು ಒಂದು ಹೆಜ್ಜೆ ಹಿಂದೆ ಇಟ್ಟಿರುವುದು ಖಚಿತ.
ಅಂದಹಾಗೆ, ಪಾದಯಾತ್ರೆಯಿಂದ ಹಿಂದೆ ಸರಿಯಲು ಕುಮಾರಸ್ವಾಮಿಯವರು ಕೊಟ್ಟಿರುವ ಕಾರಣ ಕೂಡ ಕುಂಟು ನೆಪ ಎಂಬುದು ಮೇಲ್ನೋಟಕ್ಕೇ ಗೊತ್ತಾಗುವಂತಿದೆ. “ಪೆನ್ ಡ್ರೈವ್‌ಗಳನ್ನು ಹಾಸನದ ಹಾದಿಬೀದಿಯಲ್ಲಿ ಎಸೆದು ದೇವೇಗೌಡರ ಕುಟುಂಬಕ್ಕೆ ಧಕ್ಕೆ ತಂದವನು ಪ್ರೀತಂ ಗೌಡ” ಎಂಬ ಆರೋಪ ಮಾಡುವಾಗಲೂ ಪ್ರಜ್ವಲ್ ಮಾಡಿರುವ ಅಕ್ಷಮ್ಯ ಅಪರಾಧದ ಕುರಿತು ಕಿಂಚಿತ್ತೂ ಅಳುಕು, ಆಕ್ರೋಶ ಇಲ್ಲದೆ ಇರುವುದು ಕಾಣುತ್ತಿದೆ. ಕೊಟ್ಟ ಕಾರಣವಾದರೂ ಮಾನವೀಯ ನೆಲೆಯಲ್ಲಿ ಇದೆಯೇ ಎಂದು ಕೇಂದ್ರ ಸಚಿವರು ಚಿಂತಿಸಬೇಕಿದೆ.
-ಪಿಪೀಲಿಕ