ಒಂದು ಜಿಜ್ಞಾಸೆ | ಎರಡು ವರ್ಷ ಸೆಲ್ಲೋ ನುಡಿಸಿದ ಕಲಾವಿದ ಮತ್ತು ದುರಿತ ಕಾಲ

Date:

Advertisements
ಯುದ್ಧಗಳಿಗೆ, ದುರಂತಗಳಿಗೆ ಕಲಾವಿದರು, ಬರಹಗಾರರು, ವರ್ಣಚಿತ್ರಕಾರರು, ನಟರು, ನರ್ತಕಿಯರು ಅವರದೇ ರೀತಿಯಲ್ಲಿ ಸ್ಪಂದಿಸುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಧರ್ಮ, ರಾಷ್ಟ್ರೀಯತೆ, ವರ್ಣ, ಕಾಲವನ್ನ ಮೀರಿ ಎಲ್ಲರಲ್ಲಿ ವಿವೇಚನೆ ತರುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಕಲಾವಿದರಿಗೆ ಇರುವ ದೊಡ್ಡ ಜವಾಬ್ದಾರಿ ಅವಿವೇಕರಲ್ಲಿ ವಿವೇಚನೆ ಮೂಡಿಸುವುದೇ ಆಗಿದೆ.

ಇತಿಹಾಸ ಓದಿದವರಿಗೆಲ್ಲ ಸರಯೇವೋ ನಗರದ ಪರಿಚಯವಿರಬೇಕು. ಯುಗೊಸ್ಲಾವಿಯಾದ ಮಿಲ್ ಜಾಕ್ ನದಿ ಹರಿಯುವ ಕಣಿವೆಯಲ್ಲಿರುವ ಸುಂದರ ನಗರವಿದು. 1914ರಲ್ಲಿ ಇದೇ ನಗರದ ಬೀದಿಯಲ್ಲಿ ಆಸ್ಟ್ರಿಯಾದ ಆರ್ಚ್ ಡ್ಯೂಕ್ ಫರ್ಡಿನಾಂಡ್‌ನನ್ನು ಹತ್ಯೆ ಮಾಡಲಾಯಿತು. ಈ ಹತ್ಯೆ ಮೊದಲನೆ ಮಹಾ ಯುದ್ಧಕ್ಕೆ ನಾಂದಿಯಾಯಿತು. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಈ ನಗರವನ್ನ ಆಕ್ರಮಿಸಿತು. ನಂತರದ ದಿನಗಳಲ್ಲಿ ಈ ನಗರ ಕ್ರೊಯೆಷಿಯದ ಭಾಗವಾಯಿತು. ಶೀತಲ ಸಮರದ ಹೊತ್ತಿಗೆ ಯುಗೊಸ್ಲಾವಿಯಾದ ಸೋಶಿಯಲ್ ರಿಪಬ್ಲಿಕ್ ಆಫ್ ಬೋಸ್ನಿಯಾ ಹಾಗೂ ಹೆರ್ಜ್‌ಗೋವಿನದ ರಾಜಧಾನಿಯಾಯಿತು.

ಈ ಪ್ರಾಂತ್ಯದಲ್ಲಿ ಸರ್ಬರು, ಕ್ರೋಯಾಟರು, ಬೊಸ್ನಿಯನ್ನರು ಅನ್ಯೋನ್ಯವಾಗಿ ಸೌಹಾರ್ದಯುತ ಜೀವನ ನಡೆಸಿದ್ದರು(ಕರಾವಳಿಯ ನೆನಪಾಯಿತು.) ಯುಗೊಸ್ಲಾವಿಯವನ್ನ ಒಂದು ಒಕ್ಕೂಟವಾಗಿಟ್ಟಿದ್ದ ರಾಷ್ಟ್ರಪತಿ ಜೋಸಿಪ್ ಬ್ರೋಜ್ 1980ರಲ್ಲಿ ನಿಧನನಾದ. 1992ವರೆಗೆ ಬೂದಿ ಮುಚ್ಚಿದ ಕೆಂಡದಂತಿದ್ದ ದೇಶದ ಹಲವು ಪ್ರಾಂತ್ಯಗಳ ಪ್ರತ್ಯೇಕತಾ ಚಳವಳಿಗಳು ರಷ್ಯಾದ ವಿಘಟನೆಯ ನಂತರ ಹೊಸ ಹುರುಪು ಪಡೆದುಕೊಂಡವು. ಅದರಂತೆ ಮಾರ್ಚ್ 6, 1992 ರಂದು ಬೋಸ್ನಿಯಾ ಮತ್ತು ಹೆರ್ಜ್‌ಗೋವಿನ ಯುಗೊಸ್ಲಾವಿಯದಿಂದ ಬೇರ್ಪಟ್ಟು ಸ್ವಾತಂತ್ರ್ಯ ಪಡೆಯಲು ಮುಂದಾದವು. ಈ ವಿಭಜನೆಯನ್ನ ಒಪ್ಪದ ಸರ್ಬರು ಹೊಸ ದೇಶವೊಂದನ್ನು ಸ್ಥಾಪಿಸಿದರು. ಈ ಹೊಸ ದೇಶದಲ್ಲಿ ಬೊಸ್ನಿಯಾದ ಕೆಲ ಪ್ರಾಂತ್ಯಗಳನ್ನು ಸೇರಿಸಿಕೊಳ್ಳಲಾಯಿತು. ಸೆರ್ಬಿಯಾದ ರಾಷ್ಟ್ರಪತಿ ರಾಡೊವನ್ ಕರಾಡ್ಝಿಕ್ ಬೋಸ್ನಿಯಾದ ಮೇಲೆ ಯುದ್ಧ ಸಾರಿದ. 

ಬೋಸ್ನಿಯಾ ಜನಗಳೇ (ಮುಸ್ಲಿಮರು) ಬಹುಸಂಖ್ಯೆಯಲ್ಲಿದ್ದ ಸರಯೇವೋ ಮೇಲೆ ಸೆರ್ಬಿಯಾ ಪಡೆಗಳು ನಿರಂತರ ನಾಲ್ಕು ವರ್ಷಗಳ ಕಾಲ ದಾಳಿ ನಡೆಸಿದವು. ಕಣಿವೆಯ ಸುತ್ತಲ ಬೆಟ್ಟ ಗುಡ್ಡಗಳಿಂದ ಮದ್ದುಗುಂಡುಗಳ ಸುರಿಮಳೆಯಾಯಿತು. ಬೆಟ್ಟಗಳ ಮೇಲೆ ತಮ್ಮ ಬಂಕರ್‍‌ಗಳಲ್ಲಿ ಕುಳಿತಿದ್ದ ಸ್ನೈಪರ್‍‌ಗಳು ಬೋಸ್ನಿಯಾ ಜನರ ಎದೆಯಲ್ಲಿ ನಡುಕವನ್ನೇ ಹುಟ್ಟಿಸಿಬಿಟ್ಟಿದ್ದರು. ಯಾರಿಗೆ ಎಲ್ಲಿಂದ, ಯಾವ ಗಳಿಗೆಯಲ್ಲಿ ಗುಂಡು ತಗಲುತ್ತದೋ ಯಾರಿಗೂ ಊಹಿಸಲೂ ಅಸಾಧ್ಯವಾಗಿತ್ತು. ಬೆಟ್ಟದ ಮೇಲಿಂದ ಗುರಿಯಿಟ್ಟು ಸರಯೇವೋ ಬೀದಿಗಳಲ್ಲಿ ಭಯಭೀತರಾಗಿ ಓಡಾಡುವ ನಾಗರಿಕರಿಗೆ ಗುಂಡು ಹೊಡೆಯುತ್ತಿದ್ದ ಸರ್ಬಿಯನ್ ಸ್ನೈಪರ್‍‌ಗೆ(sniper) ವ್ಯಕ್ತಿಯ ಹತ್ಯೆಗಿಷ್ಟು ಹಣ ಅಂತ ಫಿಕ್ಸ್ ಮಾಡಲಾಗಿತ್ತು. ಮಕ್ಕಳನ್ನ ಕೊಂದರೆ ಅಧಿಕ ಹಣ ಸಿಗುತ್ತಿತ್ತು. ವಿದ್ಯುಚ್ಛಕ್ತಿ, ಇಂಧನ, ಶುದ್ಧ ಕುಡಿಯುವ ನೀರು, ಶಾಲೆ, ಸಂಪರ್ಕ, ಸಾರಿಗೆ ಮತ್ತು ಯಾವುದೇ ವ್ಯಾಪಾರ ವಹಿವಾಟುಗಳಿಲ್ಲದೆ ಸರಯೇವೋ ನಗರ ಹಂತ ಹಂತವಾಗಿ ಸಾಯತೊಡಗಿತು. ಇಡೀ ನಗರ ದೊಡ್ಡ ಕಾನ್ಸಂಟ್ರೇಶನ್ ಕ್ಯಾಂಪಿನಂತಾಗಿತ್ತು. ಮುಂದುವರೆದು ವಿಕ್ಟರ್ ಫ್ರಾಂಕಲ್ ಆಶ್ವಿಟ್ಜ್ ಕುರಿತು ಬರೆಯುವಾಗ “There was an unrelenting struggle for daily bread and for life itself, for one’s own sake or for that of a good friend” ಎಂಬ ಮಾತುಗಳು ಸರಯೇವೋ ನಿವಾಸಿಗಳಿಗೂ ಅನ್ವಯವಾಗುವಂತಾಗುತ್ತದೆ. ಸರಯೇವೋ ನಗರದ ಈ ಅಮಾನವೀಯ ಮುತ್ತಿಗೆ ಆಧುನಿಕ ಕಾಲದ ಅತ್ಯಂತ ಸುದೀರ್ಘ ಮುತ್ತಿಗೆ ಎಂದರೆ ತಪ್ಪಾಗಲಾರದು.

Advertisements
120407055645 natpkg bosnian cello player remembers sarajevo 00010925

ದಿನ ನಿತ್ಯದ ಶೆಲ್ಲಿಂಗ್‌ನಿಂದ ಕಟ್ಟಡಗಳು ನೆಲಸಮವಾದವು. ಶೆಲ್ಲಿಂಗ್‌ನಿಂದ ಎಲ್ಲೆಡೆ ಸೃಷ್ಟಿಯಾದ ಕಂದಕಗಳನ್ನ ನಗರದ ಜನರು “ಸರಯೇವೋ ಗುಲಾಬಿಗಳು” ಎಂದು ಕರೆಯತೊಡಗಿದರು. ಬದುಕುವ ಆಸೆಗಳೇ ಕಮರಿ ಹೋದಾಗ ಹೇಗಾದರೂ ಬದುಕಬೇಕೆಂದು ನಿರ್ಧರಿಸಿದ ಕೆಲವರು ಕಂದಕಗಳಲ್ಲೂ ಗುಲಾಬಿ ಕಂಡರು!

ಹೀಗಿರುವಾಗ ಮೇ 27, 1992 ರಂದು ಮಾರುಕಟ್ಟೆಯಲ್ಲಿ ಬ್ರೆಡ್ ಖರೀದಿಸಲು ಸಾಲಿನಲ್ಲಿ ನಿಂತಿದ್ದ ಜನರ ಮೇಲೆ ಶೆಲ್ ಒಂದು ಬಿದ್ದು ಸ್ಪೋಟಗೊಳ್ಳುತ್ತದೆ. 22 ಮಂದಿಯ ದೇಹ ಛಿದ್ರ ಛಿದ್ರವಾಗುತ್ತದೆ. 70 ಮಂದಿ ಗಂಭೀರವಾಗಿ ಗಾಯಗೊಳ್ಳುತ್ತಾರೆ. ಸುದ್ದಿ ತಿಳಿದು ಇಡೀ ನಗರ ಭಯದ ಅಲೆಯಲ್ಲಿ ಕೊಚ್ಚಿ ಹೋಗುತ್ತದೆ. ಅವರಿಗೆ ಆಶಾವಾದ ಇಲ್ಲವಾಗುತ್ತದೆ. ಕುಗ್ಗಿ ಹೋದ ಜನರು ಭಾರವಾದ ಮನಸ್ಸುಗಳಲ್ಲಿ ಮಾರುಕಟ್ಟೆಗೆ ಬಂದು ದುರ್ಘಟನಾ ಸ್ಥಳದಲ್ಲಿ ಹೂಗಳನಿಟ್ಟು ಮನೆ ಸೇರಿಕೊಳ್ಳುತ್ತಾರೆ. ಎಲ್ಲರಿಗೂ ಸ್ನೈಪರ್‍‌ಗಳ ಭಯ.

ಸರಯೇವೋದ ಅತ್ಯುತ್ತಮ ಕಲಾವಿದರಲ್ಲಿ ಒಬ್ಬನಾದ ವೆದ್ರನ್ ಸ್ಮೈಲೋವಿಕ್ ಅಲ್ಲಿಗೆ ಬರುತ್ತಾನೆ. ಎಲ್ಲೆಡೆ ಭಯ ಭೀತ ಜನರು, ದುಃಖ ಮಡುಗಟ್ಟಿದ ಮನಸ್ಸು, ಹತಾಶೆ ಸೂತಕದ ಛಾಯೆ. ವೆದ್ರನ್ ಕೂಡ ಕ್ಷೋಭೆಗೊಳಗಾಗುತ್ತಾನೆ. ಆದರೆ ತಕ್ಷಣ ವಾತಾವರಣ ತಿಳಿಗೊಳಿಸಿ ಜನರಲ್ಲಿ ಆಶಾವಾದ ಮೂಡಿಸಲು ಯಾವುದೇ ಪೂರ್ವೋದ್ದೇಶಗಳಿಲ್ಲದೆ ವೆದ್ರನ್ ತನ್ನ ಸೆಲ್ಲೋ(ವಯೊಲಿನ್ ಕುಟುಂಬಕ್ಕೆ ಸೇರಿದ ಒಂದು ಸಂಗೀತ ವಾದ್ಯ) ನುಡಿಸಲು ಮುಂದಾಗುತ್ತಾನೆ.

ಹತರಾದ 22 ಮಂದಿ ಮುಗ್ದ ನಾಗರಿಕರ ಗೌರವಾರ್ಥವಾಗಿ ಸತತ 22 ದಿನಗಳ ಕಾಲ ತನ್ನ ಸೆಲ್ಲೋ ನುಡಿಸುತ್ತಾನೆ. ಸ್ನೈಪರ್‍‌ಗಳ ಗುಂಡು ಯಾವ ಕ್ಷಣವಾದರೂ ಅವನ ಸೀಳಬಹುದು ಎಂಬ ಅರಿವಿದ್ದರೂ ಇದಾವುದನ್ನೂ ಲೆಕ್ಕಿಸದೆ ಬಿಳಿಯ ಅಂಗಿ ತೊಟ್ಟು ಉದ್ದನೆಯ ಬಾಲವಿರುವ ಕಪ್ಪು ಕೋಟ್ ತೊಟ್ಟು ಆರ್ಕೆಸ್ಟ್ರದ ವೇದಿಕೆಯ ಮೇಲೆ ವಾದ್ಯ ನುಡಿಸುವಂತೆ ಮುಂದಿನ ಎರಡು ವರ್ಷಗಳು ಸರಯೇವೋ ನಗರದ ಕುಸಿದ ಕಟ್ಟಡಗಳ ನಡುವೆ, ಕಂದಕಗಳ ಆಳದಲ್ಲಿ, ನಾಶವಾದ ರೈಲು ನಿಲ್ದಾಣಗಳಲ್ಲಿ ತನ್ನ ಸೆಲ್ಲೋ ನುಡಿಸುತ್ತಾನೆ. 

ಮೊದಮೊದಲಿಗೆ ಜನ ಇವನನ್ನ ಹುಚ್ಚ ಎಂದು ಪರಿಗಣಿಸಿದರು ನಂತರದ ದಿನಗಳಲ್ಲಿ ಈತ ಇಡೀ ನಗರಕ್ಕೆ ಆಶಾವಾದದ ಸೂಚಕವಾಗುತ್ತಾನೆ. “ನಾನು ಹುಚ್ಚನಲ್ಲ ಯುದ್ಧ ಮಾಡುತ್ತಿರುವವರು ಹುಚ್ಚರು. ಇವರನ್ನ ಅವರು ಅವರನ್ನ ಇವರು ಕೊಲ್ಲುವವರು ಹುಚ್ಚರು” ಎಂದು ಸಾರುತ್ತಾನೆ. ವೆದ್ರನ್ ಖ್ಯಾತಿ ಎಲ್ಲೆಡೆ ಹರಡಿ ಕಲಾವಿದರು ಜಗತ್ತಿನ ಎಲ್ಲಾ ಮೂಲೆಗಳಿಂದ ಬೆಂಬಲ ಸೂಚಿಸುತ್ತಾರೆ. ಕೆಲ ಕಲಾವಿದರು ದುರ್ಗಮ ಹಾದಿ ಸವೆಸಿ ಸರಯೇವೋ ನಗರಕ್ಕೆ ಬರುತ್ತಾರೆ ಕೂಡ. ನಗರದ ಜನರಲ್ಲಿ ಹುರುಪು ಮರಳಿ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ವೆದ್ರನ್‌ಗೆ ಎಂದಿಗೂ ಗುಂಡು ತಾಗಲಿಲ್ಲವಾದರೂ ಒಮ್ಮೆ ಗುಂಡು ಅವನ ಸೆಲ್ಲೋವನ್ನ ಪುಡಿ ಮಾಡಿತ್ತು.

ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಸುಮಾರು ಹನ್ನೆರಡು ಸಾವಿರ ಜನ ಪ್ರಾಣ ತೆತ್ತರು. ಪ್ರತಿದಿನ ಶೆಲ್‌ಗಳ ಸುರಿಮಳೆಯೇ ಆಗುತಿತ್ತು. ಜುಲೈ 22, 1993 ರಂದು ಬರೋಬ್ಬರಿ 3,777 ಶೆಲ್‌ಗಳನ್ನು ಸರಯೇವೋ ಆಸುಪಾಸು ಹಾಕಲಾಗಿತ್ತು. ಅಂದು ವೆದ್ರನ್ ನಾಯಕನಾಗಬಯಸಲಿಲ್ಲ. ಯಾವುದೇ ರಾಜಕೀಯ ಲಾಭಕ್ಕಾಗಿ ಆತ ತನ್ನ ಸೆಲ್ಲೋವನ್ನ ನಡುಬೀದಿಯಲ್ಲಿ ನುಡಿಸಲಿಲ್ಲ. ಆತನಿಗೆ ಜನಪ್ರಿಯತೆ ಬೇಕಿರಲಿಲ್ಲ. ಆತ ಯಾರ ಸಹಾಯವಿಲ್ಲದೆ ಸ್ವತಂತ್ರವಾಗಿ ತೋರಿದ್ದು ತೀವ್ರವಾದ ಸಾಂಸ್ಕೃತಿಕ ಪ್ರತಿರೋಧವನ್ನಷ್ಟೇ. ಆಕ್ರಮಣಕಾರಿ ಶಕ್ತಿಗಳಿಗೆ ಏಕಾಂಗಿಯಾಗಿ ಸವಾಲೆಸೆದ. ಸರಳವಾಗಿ ಬದುಕಲು ಬಿಡಿ ಎಂದ. ನಿಮ್ಮ ಮದ್ದು ಗುಂಡಗಳ ಸುದ್ದಿನ ನಡುವೆಯು ಸುಮಧುರ ಸಂಗೀತ ಮೂಡಿಸುವೆ ಎಂದು ಸ್ನೈಪರ್‍‌ಗಳ ಗುಂಡಿಗೆ ಎದೆಯೊಡ್ಡಿ ನಿಲ್ಲುವ ಎದೆಗಾರಿಕೆ ತೋರಿದ. ಪ್ರತಿಯೊಬ್ಬ ಕಲಾವಿದನು ಮಾಡಬೇಕಾದ್ದು ಇದನ್ನೇ ಅಲ್ಲವೇ? 

ಇದನ್ನು ಓದಿದ್ದೀರಾ?: ಈ ದಿನ ವಿಶೇಷ | ಸ್ಪಿರಿಚುಯಲ್ ಟೂರಿಸಂ ಕುರಿತು ಮರು ಆಲೋಚಿಸುವ ಕಾಲ ಬಂದಿದೆ

ಸರಯೇವೋ ನಗರದ ಮುತ್ತಿಗೆಯ ಕುರಿತು ಅಷ್ಟೇನೂ ತಲೆಕೆಡಿಸಿಕೊಂಡಿರದ ವಿಶ್ವಸಮುದಾಯ ತನ್ನ ಸಂಗೀತ ಆಲಿಸುವಂತೆ ಮಾಡಿದ. ಒಬ್ಬ ಕಲಾವಿದ ವಿಮುಖವಾಗಿದ್ದ ವಿಶ್ವವೇ ಸರಯೇವೋ ಕಡೆಗೆ ಮುಖಮಾಡಿ ನೋಡುವ ಹಾಗೆ ಮಾಡಿದ. ಅವನ ಕುರಿತು ನೂರಾರು ಪುಸ್ತಕಗಳು ಪ್ರಕಟವಾದವು. ದೂರದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳು ಬಿತ್ತರವಾದವು.

ಬೋಸ್ನಿಯನ್ ಮುಸ್ಲಿಂ ಆದ ವೆದ್ರನನ್ನ “ನೀವು ಮುಸಲ್ಮಾನರ?” ಎಂದು ಯಾರೋ ಕೇಳಿದರಂತೆ. ಅದಕ್ಕೆ ಆತ “ನಾನು ಸರಯೇವೋ ನಿವಾಸಿ, ಇಲ್ಲಿನ ಪ್ರಜೆ, ನಾನೊಬ್ಬ ವಿಶ್ವಮಾನವ(ಕಾಸ್ಮೊಪಾಲಿಟನ್), ನಾನು ಶಾಂತಿಪ್ರಿಯ, ನನ್ನಲ್ಲಿ ಯಾವ ವಿಶೇಷತೆಯು ಇಲ್ಲ, ನಾನೊಬ್ಬ ಅಪ್ಪಟ ಕಲಾವಿದ” ಎಂದು ಉತ್ತರ ಕೊಟ್ಟನಂತೆ.

ಹಲವು ವರ್ಷಗಳ ನಂತರ ಇರಾಕಿನ ಸಿಂಫೊನಿ ಆರ್ಕೆಸ್ಟ್ರದ ಕಲಾವಿದ ಕರೀಂ ವಾಸಫಿ ಬಾಗ್ದಾದ್ ನಗರದಲ್ಲಿ ಬಾಂಬ್ ಸುರಿಮಳೆಗೆ ಸೃಷ್ಟಿಯಾದ ಕಂದಕಗಳಲ್ಲಿ ತನ್ನ ಸೆಲ್ಲೋ ನುಡಿಸಿದ. ದುರಂತದ ನಡುವೆಯು ಸಾಧಾರಣವಾಗಿ, ವಿವೇಕಯುತವಾಗಿ ಬದುಕುವುದು ಹೇಗೆಂಬುದನ್ನ ತೋರಿಸಿಕೊಟ್ಟ. ಹೀಗೆ ಹಲವು ಕಲಾವಿದರಿಗೆ ಸ್ಪೂರ್ತಿಯಾದ ವೆದ್ರನ್. 

ಯುದ್ಧಗಳಿಗೆ, ದುರಂತಗಳಿಗೆ ಕಲಾವಿದರು, ಬರಹಗಾರರು, ವರ್ಣಚಿತ್ರಕಾರರು, ನಟರು, ನರ್ತಕಿಯರು ಅವರದೇ ರೀತಿಯಲ್ಲಿ ಸ್ಪಂದಿಸುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಧರ್ಮ, ರಾಷ್ಟ್ರೀಯತೆ, ವರ್ಣ, ಕಾಲವನ್ನ ಮೀರಿ ಎಲ್ಲರಲ್ಲಿ ವಿವೇಚನೆ ತರುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಕಲಾವಿದರಿಗೆ ಇರುವ ದೊಡ್ಡ ಜವಾಬ್ದಾರಿ ಅವಿವೇಕರಲ್ಲಿ ವಿವೇಚನೆ ಮೂಡಿಸುವುದೇ ಆಗಿದೆ. ಅವನು ಎದಿರುಗೊಳ್ಳುವ ಶಕ್ತಿ ಪ್ರಬಲವಾಗಿದ್ದರು ತನ್ನ ಲೇಖನಿ, ನಟನೆ ಅಥವಾ ವಾದ್ಯದಿಂದ ಈ ಸೆಣಸಾಟವನ್ನು ಗೆಲ್ಲಬಲ್ಲ ಶಕ್ತಿ ಅವನಿಗಿರುತ್ತದೆ ಅಲ್ಲವೇ?

Evstafiev bosnia cello

ಯುದ್ಧದ ನಂತರ ಯಾವುದೇ ಪ್ರಚಾರ ಬಯಸದೆ ವೆದ್ರನ್ ಉತ್ತರ ಐರ್ಲೆಂಡಿಗೆ ಹೋಗಿ ನೆಲೆಸಿದ. 1940ರಲ್ಲಿ ತೆರೆಕಂಡ “ದ ಗ್ರೇಟ್ ಡಿಕ್ಟೇಟರ್” ಚಿತ್ರದಲ್ಲಿನ ಚಾರ್ಲಿ ಚಾಪ್ಲಿನ್ ಮಾತುಗಳನ್ನ ನಾನು ಹೇಗೆ ಮರೆಯಲು ಸಾಧ್ಯವಿಲ್ಲವೋ ಹಾಗೆ ವೆದ್ರನ್ ಸರಯೇವೋ ನಗರದಲ್ಲಿ ಸತತ ಎರಡು ವರ್ಷಗಳ ಕಾಲ ನುಡಿಸಿದ Albinoni’s Adagio in G minor ರಾಗವನ್ನು ಮರೆಯಲು ಸಾಧ್ಯವಿಲ್ಲ. ಅದು ನನ್ನ ಕಿವಿಯಲ್ಲಿ ಗುಯ್ಗುಟ್ಟುತ್ತಲೇ ಇದೆ. 

(ಇಷ್ಟೆಲ್ಲಾ ಪ್ರಾಣಹಾನಿಗೆ, ಕಂಡು ಕೇಳರಿಯದ ಕ್ರೌರ್ಯಕ್ಕೆ, ನರಮೇಧಕ್ಕೆ ಕಾರಣನಾದ ಸರ್ಬಿಯನ್ ನಾಯಕ ರಾಡೊವಾನ್ ಕರಡ್ಝಿಕ್‌ನಿಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ತಪ್ಪಿತಸ್ಥ ಅಂತ ತೀರ್ಮಾನಿಸಿ ಶಿಕ್ಷೆ ವಿಧಿಸಿತು. ರಾಡೊವಾನ್ ರಾಜಕಾರಣಿಗಿಂತ ಉತ್ತಮ ಕವಿ, ಮನಶಾಸ್ತ್ರಜ್ಞನಾಗಿದ್ದ ಎಂಬುದು ವಿಪರ್ಯಾಸ)

ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X